ಆಕರ್ಷಕ ವೃತ್ತಿಗಳಾಚೆಗಿನ ಅವಕಾಶ

7

ಆಕರ್ಷಕ ವೃತ್ತಿಗಳಾಚೆಗಿನ ಅವಕಾಶ

Published:
Updated:

ಪಿಯುಸಿ ಪರೀಕ್ಷೆಗಳು ಮುಗಿದು ಮೌಲ್ಯಮಾಪನವೂ ಆಗಿದೆ. ಫಲಿತಾಂಶ ಘೋಷಣೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಎಸ್ಎಸ್ಎಲ್‌ಸಿ ಮೌಲ್ಯಮಾಪನ ಕಾರ್ಯ ಈಗಷ್ಟೇ ಆರಂಭವಾಗಿದೆ. ಜೀವನದಲ್ಲಿ ಮಹತ್ವದ ತಿರುವುಗಳೆಂದೇ ಪರಿಗಣಿಸಲಾಗುವ ಈ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಲು ಪಾಲಕರು ನಡೆಸುವ ಕಸರತ್ತು ಅಷ್ಟಿಷ್ಟಲ್ಲ. ಈಗ ಅವೆಲ್ಲವನ್ನೂ ಮರೆತಿರುವ ಪೋಷಕ ಮತ್ತು ಶಿಕ್ಷಕ ವರ್ಗವು ಫಲಿತಾಂಶದ ನಿರೀಕ್ಷೆಯಲ್ಲಿದೆ.

ಫಲಿತಾಂಶದ ನಂತರದ ವಿದ್ಯಮಾನಗಳಲ್ಲಿ ಹೆಚ್ಚಿನ ಕುತೂಹಲ ಇರುವುದಿಲ್ಲ. ಅನೇಕ ವರ್ಷಗಳಿಂದ ಸಾಮಾನ್ಯವಾಗಿ ನಡೆಯುತ್ತಿರುವ ಪ್ರಕ್ರಿಯೆಯನ್ನು ನಾವೆಲ್ಲಾ ಗಮನಿದ್ದೇವೆ. ಎಸ್ಎಸ್ಎಲ್‌ಸಿಯಲ್ಲಿ ಅಧಿಕ ಅಂಕ ಪಡೆದವರಲ್ಲಿ ಬಹುಪಾಲು ಪಿಯುಸಿಯಲ್ಲಿ ವಿಜ್ಞಾನ ಅಥವಾ ವಾಣಿಜ್ಯದ ಸಂಯೋಜನೆಯನ್ನು ಆಯ್ದುಕೊಂಡರೆ, ಉಳಿದವರು ಕಲಾ ಸಂಯೋಜನೆಯ ಮೊರೆ ಹೋಗುತ್ತಾರೆ. ಪಿಯುಸಿಯ ವಿಜ್ಞಾನ ಸಂಯೋಜನೆಯಲ್ಲಿ ಹೆಚ್ಚಿನ ಅಂಕ ಗಳಿಸಿದವರಲ್ಲಿ ಬಹುಪಾಲು ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಶಿಕ್ಷಣದತ್ತ ಮುಖ ಮಾಡಿದರೆ, ಉಳಿದವರು ಬಿ.ಎಸ್‍ಸಿ ಕಡೆಗೆ ವಾಲುತ್ತಾರೆ. ಕಲಾ ಹಾಗೂ ವಾಣಿಜ್ಯದ ಸಂಯೋಜನೆಯಲ್ಲಿ ಪಿಯುಸಿ ಮುಗಿಸಿದವರು ಕ್ರಮವಾಗಿ ಬಿ.ಎ. ಮತ್ತು ಬಿ.ಕಾಂ. ಪದವಿ ವ್ಯಾಸಂಗಕ್ಕೆ ಸೇರುತ್ತಾರೆ. ಹೀಗೆ ತಾವು ಗಳಿಸಿದ

ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಶಿಕ್ಷಣವನ್ನು ಆರಿಸಿಕೊಳ್ಳುತ್ತಾರೆ.

ಇಲ್ಲಿ ಗಮನಿಸಬೇಕಾದ ಒಂದು ಅಂಶವಿದೆ. ಅದೆಂದರೆ, ಹೆಚ್ಚಿನ ಮಕ್ಕಳು ತಮ್ಮ ಪೋಷಕರು ಮತ್ತು ಸಮುದಾಯದ ಜನರ ಆಸೆ, ನಿರೀಕ್ಷೆ ಹಾಗೂ

ಒತ್ತಡಗಳನ್ನು ಪೂರೈಸುವ ಉದ್ದೇಶವಿಟ್ಟುಕೊಂಡೇ ಶಿಕ್ಷಣದ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು. ಇಲ್ಲಿ ಮಕ್ಕಳ ಆಸಕ್ತಿ, ಸಾಮರ್ಥ್ಯಗಳೇನು ಎಂಬುದನ್ನು ಶಿಕ್ಷಕರಾಗಲೀ, ಪೋಷಕರಾಗಲೀ ಕಂಡುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಪೋಷಕರ ಇಚ್ಛೆಯನ್ನು ಬದಿಗಿರಿಸಿ, ತಮ್ಮ ಆಸಕ್ತಿಯ ಕ್ಷೇತ್ರ ಇಂತಹದು ಎಂದು ತಿಳಿಸುವ ಧೈರ್ಯವನ್ನು ಹೆಚ್ಚಿನ ಮಕ್ಕಳು ಮಾಡಲಾರರು. ಇನ್ನೂ ಕೆಲವೊಮ್ಮೆ ಮಕ್ಕಳಿಗೆ ತಮ್ಮ ಆಸಕ್ತಿಯ ಕ್ಷೇತ್ರವನ್ನು ಕಂಡುಕೊಳ್ಳಲು ತಜ್ಞರ ನೆರವು ಬೇಕಾಗಬಹುದು. ಪೋಷಕರಿಗಾದರೂ ಎಂಜಿನಿಯರಿಂಗ್, ವೈದ್ಯ, ದಂತ ವೈದ್ಯ, ಕೃಷಿ ಪದವಿಗಳಂತಹ ಕೆಲವು ಆಯ್ಕೆಗಳನ್ನು ಹೊರತುಪಡಿಸಿ, ಇತರೆ ಆಯ್ಕೆಗಳ ಕುರಿತಂತೆ ಹೆಚ್ಚಿನ ಮಾಹಿತಿ ಎಲ್ಲಿರುತ್ತದೆ? ಪೋಷಕರು ಮತ್ತು ಮಕ್ಕಳಿಗೆ ವೃತ್ತಿ ಅಥವಾ ಶಿಕ್ಷಣದ ಆಯ್ಕೆ ಮಾಡಿಕೊಳ್ಳುವಲ್ಲಿ ನೆರವು ಅಥವಾ ಮಾರ್ಗದರ್ಶನ ಮಾಡುವ ಶಿಕ್ಷಣ ವ್ಯವಸ್ಥೆಯನ್ನು ನಾವಿನ್ನೂ ಹೊಂದಿಲ್ಲ.

ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನ ಜಗತ್ತು ವಿಪುಲ ಮತ್ತು ವಿಸ್ತಾರವಾದ ವೃತ್ತಿಗಳ ಆಯ್ಕೆಯನ್ನು ವಿದ್ಯಾರ್ಥಿಗಳ ಮುಂದೆ ತೆರೆದಿಟ್ಟಿದೆ. ಆದರೆ

ಈ ಕುರಿತ ತಿಳಿವಳಿಕೆಯ ಕೊರತೆ ಎಲ್ಲರನ್ನೂ ಬಾಧಿಸುತ್ತಿದೆ. ಮಕ್ಕಳ ಭವಿಷ್ಯದ ವೃತ್ತಿ ಅಥವಾ ಶಿಕ್ಷಣದ ಆಯ್ಕೆಯ ಕುರಿತು ಮಾರ್ಗದರ್ಶನ ನೀಡುವಷ್ಟು ಜಾಣ್ಮೆ ಅಥವಾ ಪ್ರಬುದ್ಧತೆ ಅನಕ್ಷರಸ್ಥ ಅಥವಾ ಅರೆಸಾಕ್ಷರ ಪೋಷಕರಲ್ಲಿ ಇರುವುದಿಲ್ಲ. ವಿದ್ಯಾವಂತ, ಜಾಣ, ಪ್ರೌಢ ಪೋಷಕರೂ ತಮ್ಮ ಮಕ್ಕಳಿಗೆ ಕೆಲವೇ ವೃತ್ತಿ ಅಥವಾ ಶಿಕ್ಷಣದ ಆಯ್ಕೆಗಳನ್ನು ನೀಡಬಲ್ಲರು. ತಮ್ಮಿಚ್ಛೆಯ ವೃತ್ತಿ ಅಥವಾ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳಲು ಹೆಚ್ಚಿನ ಪೋಷಕರು ಮಕ್ಕಳಿಗೆ ಅವಕಾಶ ನೀಡುವುದಿಲ್ಲ.

ಪ್ರತಿ ಮಗುವಿನಲ್ಲೂ ಒಂದು ಪ್ರತಿಭೆ ಅಡಗಿರುತ್ತದೆ. ಚಿತ್ರ ಕಲಾವಿದ, ಸಂಗೀತಗಾರ, ಸಾಹಿತಿ, ಕ್ರೀಡಾಪಟು, ನೃತ್ಯಗಾರ... ಹೀಗೆ ಏನಾದರೂ ಆಗುವ ಆಸಕ್ತಿ, ಸಾಮರ್ಥ್ಯ ಪ್ರತಿ ಮಗುವಿನಲ್ಲಿ ಇರುತ್ತದೆ. ಅವರ ಆಸಕ್ತಿಯ ಕ್ಷೇತ್ರ ಯಾವುದು ಹಾಗೂ ಅವರಿಗೆ ಯಾವ ವೃತ್ತಿಯೆಡೆಗೆ ಸೆಳೆತವಿದೆ ಎಂಬುದನ್ನು ಕಂಡುಕೊಳ್ಳುವುದರತ್ತ ನಾವು ಗಮನ ಹರಿಸಿದಂತೆ ಕಾಣುವುದಿಲ್ಲ. ಮಕ್ಕಳಲ್ಲಿರುವ ಸ್ವಂತಿಕೆ, ಸೃಜನಶೀಲತೆಗಳನ್ನು ಗುರುತಿಸಿ, ಅವರಿಗಿಷ್ಟವಾದ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿದರೆ ಮಕ್ಕಳ ಪ್ರತಿಭೆ ಅರಳುವುದರಲ್ಲಿ ಸಂಶಯವಿಲ್ಲ. ತಮ್ಮಿಚ್ಛೆಯ ಶಿಕ್ಷಣವನ್ನು ಪಡೆದು, ಆಸಕ್ತಿಯ ವೃತ್ತಿಯಲ್ಲಿ ತೊಡಗಿಕೊಂಡರೆ ಮಕ್ಕಳು ಅದ್ಭುತ ಯಶಸ್ಸು ಪಡೆಯುತ್ತಾರೆ. ಯಾರೇ ಆಗಲಿ ತಮ್ಮಿಚ್ಛೆಯ ವೃತ್ತಿಯಲ್ಲಿದ್ದರೆ ಕೆಲಸವನ್ನು ಸಂತೋಷದಿಂದ ಆಸ್ವಾದಿಸುತ್ತಾರೆ. ಶಿಕ್ಷಣ ತಜ್ಞ ಎ.ಎಸ್. ನೀಲ್‍ ಅವರು ತಮ್ಮ ಸಮರ್ ಹಿಲ್ ಕೃತಿಯಲ್ಲಿ, ‘ಧನಾತ್ಮಕ ಚಿಂತನೆ ಮತ್ತು ಸಂತಸದ ದುಡಿಮೆಗಳೇ ಯಶಸ್ವಿ ಬದುಕಿನ ಗುಣಲಕ್ಷಣಗಳು’ ಎಂದಿರುವುದು ಸೂಕ್ತವಾಗಿಯೇ ಇದೆ.

ಸಮಾಜಕ್ಕೆ ಎಂಜಿನಿಯರ್ ಅಥವಾ ವೈದ್ಯ ಎಷ್ಟು ಅಗತ್ಯವೋ, ಇತರ ವೃತ್ತಿಗಳ ಅಗತ್ಯವೂ ಅಷ್ಟೇ ಇದೆ. ತಮಗಿಷ್ಟವಿಲ್ಲದ ಎಂಜಿನಿಯರ್ ಅಥವಾ ಇನ್ಯಾವುದೋ ವೃತ್ತಿ ಆಯ್ಕೆ ಮಾಡಿಕೊಳ್ಳುವ ಬದಲು ಅವರ ಪ್ರತಿಭೆಗೆ ತಕ್ಕಂತೆ ಕಲಾವಿದನಾಗಲು ಅಥವಾ ಕ್ರೀಡಾಪಟುವಾಗಲು ಅವಕಾಶ ನೀಡಿದಲ್ಲಿ ಮಕ್ಕಳು ಮುಂದೆ ಸಂತಸದಿಂದ ಜೀವನ ನಡೆಸುತ್ತಾರೆ. ಜೊತೆಗೆ ಎಲ್ಲ ವೃತ್ತಿಗಳ ತಜ್ಞರನ್ನು ಹೊಂದಿದ ಸಂತುಲಿತ ಸಮಾಜವೂ ನಿರ್ಮಾಣವಾಗುತ್ತದೆ.

ಕೆಲವು ಶಾಲೆ–ಕಾಲೇಜುಗಳಲ್ಲಿ ಎಸ್ಎಸ್ಎಲ್‌ಸಿ ಅಥವಾ ಪಿಯುಸಿ ಹಂತದಲ್ಲಿ ವೃತ್ತಿ ಶಿಕ್ಷಣ ಕುರಿತಂತೆ ಮಕ್ಕಳಿಗೆ ತಜ್ಞರಿಂದ ಮಾಹಿತಿ ಕೊಡಿಸಲಾಗುತ್ತದೆ. ಆದರೆ ಫಲಿತಾಂಶದ ಬಳಿಕ ‘ಮುಂದೇನು ಮಾಡಬೇಕು’ ಎಂಬ ಬಗ್ಗೆ ಮಾಹಿತಿ ಕೊಡುವುದಿಲ್ಲ. ಶಾಲಾ ಕಾಲೇಜುಗಳು ಮಕ್ಕಳು ಮತ್ತು ಪೋಷಕರನ್ನು ಜೊತೆಯಾಗಿ ಕೂರಿಸಿ, ಆಪ್ತ ಸಮಾಲೋಚನೆ ನಡೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಈ ರೀತಿಯ ಕಾರ್ಯಕ್ರಮಗಳು ಕಡಿಮೆ ಅಂಕ ಪಡೆದ ಅಥವಾ ಅನುತ್ತೀರ್ಣರಾದ ಮಕ್ಕಳಿಗೆ ಮುಂದಿನ ದಾರಿ ಕಂಡುಕೊಳ್ಳಲು ನೆರವಾಗುತ್ತವೆ. ಎಸ್ಎಸ್ಎಲ್‌ಸಿ ಅಥವಾ ಪಿಯುಸಿ ಪರೀಕ್ಷೆಗಳಲ್ಲಿ ಮಕ್ಕಳು ಎಷ್ಟೇ ಅಂಕಗಳನ್ನು ಗಳಿಸಿರಲಿ, ಕೆಲವೇ ಕೆಲವು ಆಕರ್ಷಕ ವೃತ್ತಿಗಳಾಚೆ ಇರುವ ಅಗಣಿತ ಅವಕಾಶಗಳೆಡೆಗೆ ಕೈಚಾಚಲು ಅವರನ್ನು ಸಜ್ಜುಗೊಳಿಸಲು ಶಿಕ್ಷಣ ಸಂಸ್ಥೆಗಳು ಮನಸ್ಸು ಮಾಡಬೇಕು. ಈ ನಿಟ್ಟಿನಲ್ಲಿ ಶಿಕ್ಷಣಾಸಕ್ತ ಸರ್ಕಾರೇತರ ಸಂಘ ಸಂಸ್ಥೆಗಳು, ಉದ್ದಿಮೆಗಳು ಮತ್ತು ತಜ್ಞರು ಶಾಲಾ ಕಾಲೇಜುಗಳೊಂದಿಗೆ ಕೈಜೋಡಿಸುವ ಅಗತ್ಯವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry