ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಪ್ಯಾರಿಸ್‌ ಸೇಂಟ್‌ ತಂಡಕ್ಕೆ ಪ್ರಶಸ್ತಿ

Last Updated 16 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮೊನಾಕೊ: ಪ್ಯಾರಿಸ್‌ ಸೇಂಟ್‌ ಜರ್ಮೈನ್ (ಪಿಎಸ್‌ಜಿ) ತಂಡ ಫ್ರೆಂಚ್‌ ಲೀಗ್ ಫುಟ್‌ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಪ್ಯಾರಿಸ್‌ ಸೇಂಟ್‌ ತಂಡ 7–1 ಗೋಲುಗಳಿಂದ ಹಾಲಿ ಚಾಂಪಿಯನ್‌ ಮೊನಾಕೊ ತಂಡವನ್ನು ಸೋಲಿಸಿತು.

ಈ ಜಯದೊಂದಿಗೆ ಪಿಎಸ್‌ಜಿ ತಂಡ ಒಟ್ಟು ಪಾಯಿಂಟ್ಸ್‌ ಅನ್ನು 87ಕ್ಕೆ ಹೆಚ್ಚಿಸಿಕೊಂಡು ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿತು. ಈ ತಂಡ 33 ಪಂದ್ಯಗಳನ್ನು ಆಡಿದ್ದು 28ರಲ್ಲಿ ಗೆದ್ದಿದೆ. ಮೊನಾಕೊ ತಂಡ 33 ಪಂದ್ಯಗಳಿಂದ 70 ಪಾಯಿಂಟ್ಸ್‌ ಗಳಿಸಿ ಎರಡನೆ ಸ್ಥಾನ ತನ್ನದಾಗಿಸಿಕೊಂಡಿದೆ.

ಪಿಎಸ್‌ಜಿ ತಂಡ ಫ್ರೆಂಚ್‌ ಲೀಗ್‌ನಲ್ಲಿ ಜಯಿಸಿದ ಒಟ್ಟಾರೆ ಏಳನೆ ಪ್ರಶಸ್ತಿ ಇದಾಗಿದೆ.

ಪಂದ್ಯದ ಆರಂಭದಿಂದಲೇ ಚುರುಕಿನ ಆಟ ಆಡಿದ ಪಿಎಸ್‌ಜಿ ತಂಡ 14ನೆ ನಿಮಿಷದಲ್ಲಿ ಖಾತೆ ತೆರೆಯಿತು. ಜಿಯೊವಾನಿ ಲೊ ಸೆಲ್ಸೊ ಗೋಲು ದಾಖಲಿಸಿ ಮಿಂಚಿದರು.

17ನೆ ನಿಮಿಷದಲ್ಲಿ ಎಡಿನ್‌ಸನ್‌ ಕ್ಯಾವನಿ, ಗೋಲು ಗಳಿಸಿ 2–0ರ ಮುನ್ನಡೆಗೆ ಕಾರಣರಾದರು. 20ನೆ ನಿಮಿಷದಲ್ಲಿ ಏಂಜಲ್‌ ಡಿ ಮರಿಯಾ ಚೆಂಡನ್ನು ಗುರಿ ಮುಟ್ಟಿಸಿದರು. 27ನೆ ನಿಮಿಷದಲ್ಲಿ ಸೆಲ್ಸೊ ವೈಯಕ್ತಿಕ ಎರಡನೆ ಗೋಲು ದಾಖಲಿಸಿದರು. ಹೀಗಾಗಿ ಪಿಎಸ್‌ಜಿ 4–0ರ ಮುನ್ನಡೆ ಗಳಿಸಿತು. 38ನೆ ನಿಮಿಷದಲ್ಲಿ ಮೊನಾಕೊ ತಂಡದ ರೊನಿ ಲೊಪೆಸ್‌ ಗೋಲು ಬಾರಿಸಿ ಹಿನ್ನಡೆಯನ್ನು 1–4ಕ್ಕೆ ತಗ್ಗಿಸಿದರು. ಇಷ್ಟಾದರೂ ಪಿಎಸ್‌ಜಿ ತಂಡದ ಆಟಗಾರರ ಗೋಲಿನ ದಾಹ ನೀಗಿದಂತೆ ಕಾಣಲಿಲ್ಲ. ದ್ವಿತೀಯಾರ್ಧದಲ್ಲೂ ಈ ತಂಡ ಮೋಡಿ ಮಾಡಿತು.

58ನೆ ನಿಮಿಷದಲ್ಲಿ ಮರಿಯಾ ಎರಡನೆ ಗೋಲು ಬಾರಿಸಿ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳನ್ನು ರಂಜಿಸಿದರು. 76ನೆ ನಿಮಿಷದಲ್ಲಿ ಮೊನಾಕೊ ತಂಡದ ರ‍್ಯಾಡಮೆಲ್‌ ಫಾಲ್‌ಕಾಸೊ ತಮ್ಮದೇ ಗೋಲುಪೆಟ್ಟಿಗೆಯೊಳಗೆ ಚೆಂಡನ್ನು ತೂರಿಸಿದರು. ಹೀಗಾಗಿ ಪಿಎಸ್‌ಜಿ ಖಾತೆಗೆ ‘ಉಡುಗೊರೆ’ ರೂಪದಲ್ಲಿ ಗೋಲು ಸೇರ್ಪಡೆಯಾಯಿತು.

86ನೆ ನಿಮಿಷದಲ್ಲಿ ಜೂಲಿಯನ್‌ ಡ್ರ್ಯಾಕ್ಸಿಯರ್‌ ಗೋಲು ದಾಖಲಿಸಿ ಪಿಎಸ್‌ಜಿ ತಂಡದ ಸಂಭ್ರಮ ಹೆಚ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT