ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ತನಿಖೆ ಬೇಕಿಲ್ಲ: ಸಂತ್ರಸ್ತೆಯ ಕುಟುಂಬಕ್ಕೆ ರಕ್ಷಣೆ ಕೊಡಿ

Last Updated 17 ಏಪ್ರಿಲ್ 2018, 5:06 IST
ಅಕ್ಷರ ಗಾತ್ರ

ನವದೆಹಲಿ: ಕಠುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ತನಿಖಾ ಸಂಸ್ಥೆಯನ್ನು ಬದಲಿಸುವ ಅಗತ್ಯ ಈಗ ಇಲ್ಲ. ಬದಲಿಗೆ, ಸಂತ್ರಸ್ತೆಯ ಕುಟುಂಬದ ಸದಸ್ಯರು ಮತ್ತು ವಕೀಲರಿಗೆ ಭದ್ರತೆ ನೀಡುವ ಅಗತ್ಯ ಇದೆ ಎಂದು ಹೇಳಿದೆ.

‘ಇಂತಹ ಪ್ರಕರಣಗಳ ತನಿಖೆ ನಡೆಸುವ ಅಧಿಕಾರ ಪೊಲೀಸರಿಗೆ ಇದೆ. ತನಿಖೆ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎಂದಾದರೆ ಮಾತ್ರ ನ್ಯಾಯಾಲಯ ಮಧ್ಯಪ್ರವೇಶಿಸಬಹುದು. ಈ ಹಂತದಲ್ಲಿಯೇ ತನಿಖೆ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎಂದು ಯಾಕೆ ಭಾವಿಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಹೇಳಿದೆ.

ಕಠುವಾ ‍ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಒತ್ತಾಯಿಸಿ ದೆಹಲಿಯ ವಕೀಲರಾದ ಅನುಜಾ ಕಪೂರ್‌ ಅವರು ಅರ್ಜಿ ಸಲ್ಲಿಸಿದ್ದರು.

ಆದರೆ, ಸಂತ್ರಸ್ತೆಯ ತಂದೆಯ ಪರವಾಗಿ ವಾದಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರು ‘ರಾಜ್ಯದ ವಾತಾವರಣ ತೀವ್ರವಾಗಿ ಧ್ರುವೀಕರಣಗೊಂಡಿದೆ. ಇಂತಹ ವಾತಾವರಣದಲ್ಲಿ ನ್ಯಾಯಯುತ ವಿಚಾರಣೆ ಸಾಧ್ಯವಿಲ್ಲ. ಪೊಲೀಸರು ಈಗಾಗಲೇ ಆರೋಪಪಟ್ಟಿ ಸಲ್ಲಿಸಿದ್ದಾರೆ. ಇಂತಹ ಅತ್ಯುತ್ತಮವಾದ ತನಿಖೆಯನ್ನು ನನ್ನ ವೃತ್ತಿಜೀವನದಲ್ಲಿ ಕಂಡೇ ಇಲ್ಲ’ ಎಂದು ಹೇಳಿದರು.

ಸಂತ್ರಸ್ತೆಯ ತಂದೆಗೆ ನೀಡಿದ ಭದ್ರತೆಯನ್ನು ಮುಂದುವರಿಸಬೇಕು. ಅವರ ಪರ ವಕೀಲೆ ದೀಪಿಕಾ ಸಿಂಗ್‌ ರಜಾವತ್‌ ಮತ್ತು ಅವರ ಸಹಾಯಕರಿಗೂ ಭದ್ರತೆ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ನಿರ್ದಿಷ್ಟ ಸಮುದಾಯವೊದನ್ನು ಗುರಿಯಾಗಿಸಿ ಪ್ರಕರಣ ದಾಖಲಿ ಸಲಾಗಿದೆ ಎಂದು ಆರೋಪಿಸಿ ಜಮ್ಮು ವಕೀಲರ ಸಂಘ ಇತ್ತೀಚೆಗೆ ಪ್ರತಿಭಟನೆ ನಡೆಸಿತ್ತು. ದೀಪಿಕಾ ಅವರಿಗೆ ಬೆದರಿಕೆ ಒಡ್ಡಲಾಗಿತ್ತು.

ಕಠುವಾ ಜಿಲ್ಲೆಯ ರಸಾನಾ ಎಂಬ ಗ್ರಾಮದಲ್ಲಿ ಅಲೆಮಾರಿ ಜನಾಂಗದ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ ಏಳು ದಿನ ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಲಾಗಿತ್ತು. ಜನವರಿ ತಿಂಗಳಲ್ಲಿ ಇದು ನಡೆದಿತ್ತು. ಅಲೆಮಾರಿ ಜನಾಂಗವನ್ನು ಗ್ರಾಮದಿಂದ ಓಡಿಸುವುದಕ್ಕಾಗಿ ಬಾಲಕಿಯ ಮೇಲೆ ಅತ್ಯಾಚಾರ ಎಸಗುವ ಷಡ್ಯಂತ್ರ ಮಾಡಲಾಗಿತ್ತು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

ಮಂಪರು ಪರೀಕ್ಷೆ ಮಾಡಿಸಿ: ಆರೋಪಿಗಳ ಒತ್ತಾಯ
ಕಠುವಾ (ಪಿಟಿಐ):
ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ ಕಠುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಸೋಮವಾರ ಆರಂಭವಾಯಿತು.

ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಪ್ರಕರಣದಲ್ಲಿ ತಾವು ನಿರಪರಾಧಿಗಳು ಎಂದು ಎಂಟು ಆರೋ‍ಪಿಗಳು ಹೇಳಿದ್ದಾರೆ. ತಮ್ಮನ್ನು ಮಂಪರು ಪರೀಕ್ಷೆಗೆ ಒಳಪಡಿಸುವಂತೆ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಸಂಜಯ್‌ ಗುಪ್ತಾ ಅವರನ್ನು ಆರೋಪಿಗಳು ಕೋರಿದ್ದಾರೆ.

ಎಂಟು ಆರೋಪಿಗಳ ಪೈಕಿ ಏಳು ಮಂದಿಯನ್ನು ನ್ಯಾಯಾಧೀಶರ ಮುಂದೆ ಸೋಮವಾರ ಹಾಜರುಪಡಿಸಲಾಯಿತು. ಆರೋಪಪಟ್ಟಿಯ ಪ್ರತಿಗಳನ್ನು ಅವರಿಗೆ ನೀಡುವಂತೆ ಅಪರಾಧ ವಿಭಾಗದ ಪೊಲೀಸರಿಗೆ ನ್ಯಾಯಾಧೀಶರು ಸೂಚಿಸಿದರು. ವಿಚಾರಣೆಯನ್ನು 28ಕ್ಕೆ ಮುಂದೂಡಲಾಗಿದೆ. ಎಂಟನೇ ಆರೋಪಿ ಬಾಲಕನಾಗಿದ್ದು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾನೆ. ಇದರ ವಿಚಾರಣೆ 26ರಂದು ನಡೆಯಲಿದೆ. ಬಾಲಾರೋಪಿಯ ವಿರುದ್ಧ ಪ್ರತ್ಯೇಕ ಆರೋಪಪಟ್ಟಿ ದಾಖಲಿಸಲಾಗಿದೆ.

ಸಿಬಿಐ ತನಿಖೆಗೆ ಒತ್ತಾಯ: ಪ್ರಮುಖ ಆರೋಪಿ ಸಾಂಜಿ ರಾಮ್‌ನ ಮಗಳು ಮಧು ಶರ್ಮಾ, ನ್ಯಾಯಾಲಯದ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದರು.

ಬಾಲಕಿಯ ಮೇಲೆ ಸತತವಾಗಿ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ವಿಶೇಷ ಪೊಲೀಸ್‌ ಅಧಿಕಾರಿ ದೀಪಕ್‌ ಖಜುರಿಯ ಕೂಡ ಸಿಬಿಐಯಿಂದಲೇ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾನೆ. ನ್ಯಾಯಾಲಯಕ್ಕೆ ಕರೆತಂದ ಪೊಲೀಸ್‌ ವ್ಯಾನ್‌ನೊಳಗಿನಿಂದ ಆತ ಹೀಗೆ ಕೂಗಿ ಹೇಳಿದ್ದಾನೆ.

ಬಂದೋಬಸ್ತ್‌ ಬಿಗಿ: ವಿಚಾರಣೆಗೆ ಅಡ್ಡಿ ಎದುರಾಗಬಹುದು ಎಂಬ ಕಾರಣಕ್ಕೆ ಕಠುವಾ ನ್ಯಾಯಾಲಯ ಸಂಕೀರ್ಣಕ್ಕೆ ಭಾರಿ ಬಂದೋಬಸ್ತ್‌ ಒದಗಿಸಲಾಗಿತ್ತು. ಅಪರಾಧ ವಿಭಾಗದ ಪೊಲೀಸರು ಇದೇ 9ರಂದು ಪ್ರಕರಣದ ಆರೋಪಪಟ್ಟಿ ಸಲ್ಲಿಸುವಾಗ ಸ್ಥಳೀಯ ವಕೀಲರ ಸಂಘದ ಸದಸ್ಯರು ಅಡ್ಡಿಪಡಿಸಿದ್ದರು. ಇದು ಸಂಘರ್ಷಮಯ ಪರಿಸ್ಥಿತಿಗೆ ಕಾರಣವಾಗಿತ್ತು. ಹಾಗಾಗಿ ಸೋಮವಾರ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.

ಸಾಮಾಜಿಕ ಜಾಲತಾಣ ಚಮತ್ಕಾರ ಕೇರಳದಲ್ಲಿ ‘ಹುಸಿ ಬಂದ್’
(ತಿರುವನಂತಪುರ ವರದಿ): ಕಠುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಬಂದ್‌ ನಡೆಸಲಾಗುವುದು ಎಂಬ ಹುಸಿ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಕೇರಳದ ವಿವಿಧ ಭಾಗಗಳಲ್ಲಿ ಗೊಂದಲಕ್ಕೆ ಕಾರಣವಾಯಿತು.

‘ಕಠುವಾ ಪ್ರಕರಣ ಖಂಡಿಸಿ ಸೋಮವಾರ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು. ಎಲ್ಲರೂ ಕೈಜೋಡಿಸಬೇಕು’ ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಭಾನುವಾರದಿಂದಲೇ ಹರಿದಾಡುತ್ತಿತ್ತು.

ಇದರಿಂದ ಪ್ರೇರಿತರಾದ ಕೆಲವು ಜನರು ಕೆಲವು ಸ್ಥಳಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದರು. ವಾಹನಗಳಿಗೆ ಕಲ್ಲೆಸೆದ ಪ್ರಸಂಗಗಳೂ ವರದಿಯಾಗಿವೆ. ನೂರಾರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಣ್ಣೂರ್‌ನಲ್ಲಿ ‘ಪ್ರತಿಭಟನಕಾರರು’ ಪೊಲೀಸ್‌ ಠಾಣೆಗೆ ನುಗ್ಗಲು ಯತ್ನಿಸಿದ್ದಾರೆ. ಅವರನ್ನು ತಡೆಯಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು. ಡೆಪ್ಯುಟಿ ಎಸ್‌ಪಿ ಸೇರಿ ಹಲವು ಪೊಲೀಸರು ಗಾಯಗೊಂಡಿದ್ದಾರೆ. ಇಲ್ಲಿ 40 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಸಂತ್ರಸ್ತ ಬಾಲಕಿಯ ಚಿತ್ರವನ್ನು ಹಿಡಿದುಕೊಂಡು ಹಲವು ಸ್ಥಳಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆದಿದೆ. ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆ ಬಂದ್‌ ಕರೆ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕಿಡಿಗೇಡಿಗಳು ಕಳುಹಿಸಿದ ಬಂದ್‌ ಕರೆಯ ಹುಸಿ ಸಂದೇಶವನ್ನು ಸಾಮಾಜಿಕ ಜಾಲ ತಾಣ ಬಳಕೆದಾರರು ಇತರರ ಜತೆ ಹಂಚಿಕೊಂಡಿದ್ದಾರೆ. ಹಾಗಾಗಿ ಇದಕ್ಕೆ ವ್ಯಾಪಕ ಪ್ರಚಾರ ಸಿಕ್ಕಿತ್ತು. ಯಾವುದಾದರೂ ಪಕ್ಷ ಅಥವಾ ಸಂಘಟನೆ ಬಂದ್‌ ಕರೆ ನೀಡಿದೆಯೇ ಎಂಬುದನ್ನು ಯಾರೂ ಪರಿಶೀಲಿಸುವ ಗೋಜಿಗೆ ಹೋಗಿಲ್ಲ.

ಅತ್ಯಾಚಾರಿಗಳ ಗಲ್ಲಿಗೇರಿಸಲು ಸಿದ್ಧ: ಆನಂದ್‌ ಮಹೀಂದ್ರಾ ಆಕ್ರೋಶ
ಕಠುವಾ ಮತ್ತು ಉನ್ನಾವ್‌ ಅತ್ಯಾಚಾರ ಪ್ರಕರಣಗಳಿಗೆ ಉದ್ಯಮಿ ಆನಂದ್‌ ಮಹೀಂದ್ರಾ ಅವರು ಕಟುವಾದ ಪ್ರತಿಕ್ರಿಯೆ ನೀಡಿದ್ದಾರೆ.

‘ಗಲ್ಲಿಗೇರಿಸುವ ಕೆಲಸವನ್ನು ಯಾರೂ ಬಯಸುವುದಿಲ್ಲ. ಆದರೆ, ಸಣ್ಣ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿದವರನ್ನು ಗಲ್ಲಿಗೇರಿಸುವ ಕೆಲಸ ನಿರ್ವಹಿಸಲು ನನಗೆ ಹಿಂಜರಿಕೆಯೇ ಇಲ್ಲ. ಶಾಂತವಾಗಿರಲು ನಾನು ಬಹಳ ಪ್ರಯತ್ನಿಸುತ್ತಿದ್ದೇನೆ. ಆದರೆ ದೇಶದಲ್ಲಿ ಆಗುತ್ತಿರುವುದನ್ನು ಕಂಡಾಗ ನನ್ನ ರಕ್ತ ಕುದಿಯುತ್ತದೆ’ ಎಂದು ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್‌ ಟ್ವೀಟ್‌ ಮಾಡಿದ್ದಾರೆ.

ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿರುವ ಆನಂದ್‌ ಅವರು ತಮ್ಮ ಟ್ವೀಟ್‌ ಜತೆಗೆ ಸೂರತ್‌ನಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಾಲಕಿಯ ಬಗೆಗಿನ ವರದಿಯನ್ನು ಲಗತ್ತಿಸಿದ್ದಾರೆ.

‘ಉನ್ನಾವ್‌ ಸಂತ್ರಸ್ತೆ ಬಾಲಕಿ ಅಲ್ಲ’
ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣ ಹೊಸ ತಿರುವು ಪಡೆದಿದ್ದು, ಸಂತ್ರಸ್ತೆಯು ಬಾಲಕಿ ಅಲ್ಲ, ಅವರಿಗೆ 19 ವರ್ಷ ವಯಸ್ಸಾಗಿದೆ ಎಂದು ಉನ್ನಾವ್‌ ಸರ್ಕಾರಿ ಆಸ್ಪತ್ರೆಯ ಮೂಲಗಳು ಹೇಳಿವೆ.

ಸಂತ್ರಸ್ತೆಯು ಬಾಲಕಿ ಎಂದೇ ಕುಟುಂಬ ಪ್ರತಿಪಾದಿಸುತ್ತಿದೆ. ಆದರೆ ಕಳೆದ ವರ್ಷ ದೂರು ದಾಖಲಿಸುವ ಹೊತ್ತಿಗೇ ಸಂತ್ರಸ್ತೆಗೆ 19 ವರ್ಷ ವಯಸ್ಸಾಗಿತ್ತು ಎಂದು ಮೂಲಗಳು ತಿಳಿಸಿವೆ.

ದೂರು ದಾಖಲಾದ ಸಂದರ್ಭದಲ್ಲಿ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಿದ್ದ ವೈದ್ಯರು ಮಾತನಾಡಿದ ವಿಡಿಯೊ ಆಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿತ್ತು. ಸಂತ್ರಸ್ತೆಯ ವಯಸ್ಸು 19 ವರ್ಷ ಎಂದು ಆ ವಿಡಿಯೊದಲ್ಲಿ ವೈದ್ಯ ಹೇಳಿದ್ದರು.

ಸಂತ್ರಸ್ತೆಗೆ 19 ವರ್ಷ ತುಂಬಿದೆ ಎಂಬುದು ಖಚಿತವಾದರೆ ಅತ್ಯಾಚಾರ ಆರೋಪಿ, ಬಿಜೆಪಿ ಶಾಸಕ ಕುಲದೀಪ್‌ ಸಿಂಗ್‌ ಸೆಂಗರ್‌ ವಿರುದ್ಧದ ಪೋಕ್ಸೊ ಪ್ರಕರಣಗಳನ್ನು ಸಿಬಿಐ ಕೈಬಿಡಬಹುದು ಎನ್ನಲಾಗಿದೆ.

ಕೆಲಸ ಕೊಡಿಸುವಂತೆ ಕೇಳಿಕೊಳ್ಳುವುದಕ್ಕಾಗಿ ಶಾಸಕ ಸೆಂಗರ್ ಅವರನ್ನು ಭೇಟಿಯಾದಾಗ, ಸೆಂಗರ್‌, ಅವರ ಸಹೋದರ ಮತ್ತು ಕೆಲವು ಬೆಂಬಲಿಗರು ತಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರು ದಾಖಲಿಸಿದ್ದಾರೆ.

**

ನ್ಯಾಯಯುತ ವಿಚಾರಣೆ, ಸಂತ್ರಸ್ತರ ರಕ್ಷಣೆಯ ತತ್ವ ಅನುಸರಿಸಲೇಬೇಕು. ಸಂತ್ರಸ್ತೆಯ ಕುಟುಂಬದ ಬಗ್ಗೆ ಅನುಕಂಪ ಇದೆ. ತನಿಖೆ ಯಾರು ಮಾಡಬೇಕು ಎಂಬ ಚರ್ಚೆ ಈ ಹಂತದಲ್ಲಿ ಬೇಕಿಲ್ಲ
– ಸುಪ್ರೀಂ ಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT