ಶುಕ್ರವಾರ, ಡಿಸೆಂಬರ್ 6, 2019
25 °C

‘ಇ–ವಾಹನ ಚಾರ್ಜಿಂಗ್ ಕೇಂದ್ರಕ್ಕೆ ಪರವಾನಗಿ ಅನಗತ್ಯ’

ಪಿಟಿಐ Updated:

ಅಕ್ಷರ ಗಾತ್ರ : | |

‘ಇ–ವಾಹನ ಚಾರ್ಜಿಂಗ್ ಕೇಂದ್ರಕ್ಕೆ ಪರವಾನಗಿ ಅನಗತ್ಯ’

ನವದೆಹಲಿ: ಬ್ಯಾಟರಿ ಚಾಲಿತ ವಾಹನಗಳ (ಇ–ವಾಹನ) ಚಾರ್ಜಿಂಗ್ ಕೇಂದ್ರಗಳಿಗೆ ಪರವಾನಗಿ ಪಡೆಯುವ ಅವಶ್ಯಕತೆ ಇಲ್ಲ ಎಂದು ಇಂಧನ ಸಚಿವಾಲಯ ಹೇಳಿದೆ. ಈ ಕ್ರಮದಿಂದಾಗಿ ಇ–ವಾಹನಗಳ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ದೊರಕಲಿದೆ.

‘ವಿದ್ಯುಚ್ಛಕ್ತಿ ಕಾಯ್ದೆ ಅಡಿಯಲ್ಲಿ ವಿದ್ಯುತ್ ಪ್ರಸರಣ, ಸರಬರಾಜು, ಮಾರಾಟ ಇವುಗಳಿಗೆ ಪರವಾನಗಿ ಅವಶ್ಯ. ಆದರೆ ಇ–ವಾಹನಗಳ ಚಾರ್ಜಿಂಗ್ ಕೇಂದ್ರದಲ್ಲಿ ಇಂತಹ ಚಟುವಟಿಕೆ ನಡೆಯುವುದಿಲ್ಲ. ಆದ್ದರಿಂದ ವಿದ್ಯುಚ್ಛಕ್ತಿ ಕಾಯ್ದೆ 2003ರ ಅಡಿಯಲ್ಲಿ ಇ–ವಾಹನಗಳ ಬ್ಯಾಟರಿ ಚಾರ್ಜ್ ಮಾಡುವ ಕೇಂದ್ರಗಳು ಪರವಾನಗಿ ಪಡೆಯುವ ಅವಶ್ಯವಿಲ್ಲ’ ಎಂದು ಸಚಿವಾಲಯದ ಸ್ಪಷ್ಟನೆಯಲ್ಲಿ ಉಲ್ಲೇಖಿಸಲಾಗಿದೆ. ಇ–ವಾಹನಗಳ ಚಾರ್ಜಿಂಗ್‌ ಅನ್ನು ಸೇವೆ ಎಂದು ಪರಿಗಣಿಸಲು ನಿರ್ಧರಿಸಿರುವುದರಿಂದ ಪರವಾನಗಿಯಿಂದ ವಿನಾಯಿತಿ ನೀಡುವುದು ಸಾಧ್ಯವಾಗಿದೆ.

ಆದರೆ ವಿದ್ಯುತ್ ಸರಬರಾಜಿನ ಸರಾಸರಿ ವೆಚ್ಚ ಎಷ್ಟಾಗುತ್ತದೆ ಎನ್ನುವ ರೀತಿಯ ಹೆಚ್ಚಿನ ಮಾಹಿತಿ ಈ ಸ್ಪಷ್ಟನೆಯಲ್ಲಿ ಇಲ್ಲ.

ದೇಶದಲ್ಲಿ ಪರಿಸರಸ್ನೇಹಿ ಚಾರ್ಜಿಂಗ್ ವ್ಯವಸ್ಥೆ ರೂಪಿಸಲು ಇದ್ದ ದೊಡ್ಡ ಅಡ್ಡಿ, ಸರ್ಕಾರದ ಕ್ರಮದಿಂದ ನಿವಾರಣೆಯಾದಂತಾಗಿದೆ ಎಂದು ಇ–ವಾಹನಗಳ ಉತ್ಪಾದಕರ ಸಂಘದ ಕಾರ್ಪೊರೇಟ್ ವ್ಯವಹಾರಗಳ ನಿರ್ದೇಶಕ ಸೊಹಿಂದರ್ ಗಿಲ್ ತಿಳಿಸಿದ್ದಾರೆ.

‘ಇ–ವಾಹನಗಳಿಗೆ ಸಂಬಂಧಿಸಿ ನಿರ್ದಿಷ್ಟ ಕಾರ್ಯಸೂಚಿ ಹಾಗೂ ತಾಂತ್ರಿಕ ಗುಣಮಟ್ಟಗಳ ನಿಯಮವೊಂದನ್ನು ರೂಪಿಸಲಿದ್ದೇವೆ.  ನಿರ್ದಿಷ್ಟ ಕಾರಿಡಾರ್‌ಗಳಲ್ಲಿ ಮುಂದಿನ 15–20 ದಿನಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು, ಇ–ವಾಹನಗಳ ಸೌಕರ್ಯ ಕುರಿತು ಯೋಜನೆ ಹೊಂದಿದ್ದೇವೆ’ ಎಂದು ಇಂಧನ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ. ಸಿಂಗ್ ಅವರು ಕಳೆದ ತಿಂಗಳು ಹೇಳಿದ್ದರು.

ವಿದ್ಯುತ್ ಸರಬರಾಜು ಆಧರಿಸಿ ಮಿತಿ ನಿಗದಿ: ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರ ಅಂತಿಮಗೊಳಿಸಿರುವ ಕರಡು ಪ್ರಕಾರ, ರಾಜ್ಯಗಳ ವಿದ್ಯುತ್ ಸರಬರಾಜಿನ ಸರಾಸರಿ ವೆಚ್ಚ ಆಧರಿಸಿ ಇ–ವಾಹನಗಳ ಚಾರ್ಜಿಂಗ್ ಬೆಲೆಗೆ ಮಿತಿ ನಿಗದಿಗೊಳಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ನಿಯಮದಿಂದಾಗಿ ಪ್ರತಿ ಯೂನಿಟ್‌ ವಿದ್ಯುತ್‌ ದರ ₹6ಕ್ಕಿಂತ ಕಡಿಮೆಯೇ ಇರುವ ಸಾಧ್ಯತೆ ಇದೆ.

ಪ್ರಸ್ತುತ, ಇ–ವಾಹನಗಳಿಗೆ  ಪ್ರತಿ ಕಿ.ಮೀ.ಗೆ ತಗಲುವ ವೆಚ್ಚ ₹1ಕ್ಕಿಂತ ಕಡಿಮೆ ಇದೆ. ಆದರೆ ಪೆಟ್ರೋಲ್‌ ಅಥವಾ ಡೀಸೆಲ್ ವಾಹನಗಳಿಗೆ ಪ್ರತಿ ಕಿ.ಮೀ.ಗೆ ಆಗುವ  ವೆಚ್ಚ ₹6.50.

**

ದೇಶದಲ್ಲಿ ಇ–ವಾಹನ ಚಾರ್ಜಿಂಗ್ ವ್ಯವಸ್ಥೆ ರೂಪಿಸುವಲ್ಲಿ, ಈಗ ಕೈಗೊಂಡಿರುವ ನಿರ್ಣಯ ಪ್ರಗತಿಯ ಕ್ರಮ

– ಸೊಹಿಂದರ್ ಗಿಲ್, ಇ–ವಾಹನಗಳ ಉತ್ಪಾದಕರ ಸಂಘದ ಕಾರ್ಪೊರೇಟ್ ವ್ಯವಹಾರಗಳ ನಿರ್ದೇಶಕ

ಪ್ರತಿಕ್ರಿಯಿಸಿ (+)