ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ ಕನಸಿನಲ್ಲಿ ಬಿಎಫ್‌ಸಿ

ಇಂದು ಮೋಹನ್‌ ಬಾಗನ್‌ ಎದುರು ಸೆಮಿಫೈನಲ್‌ ಹೋರಾಟ
Last Updated 16 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಭುವನೇಶ್ವರ: ಈ ಬಾರಿಯ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಸಾಧನೆ ಮಾಡಿದ್ದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ), ಚೊಚ್ಚಲ ಸೂಪರ್‌ ಕಪ್‌ನಲ್ಲಿ ಫೈನಲ್‌ ಪ್ರವೇಶಿಸುವ ಕನಸು ಕಾಣುತ್ತಿದೆ.

ಮಂಗಳವಾರ ನಡೆಯುವ ಸೆಮಿಫೈನಲ್‌ ಹೋರಾಟದಲ್ಲಿ ಸುನಿಲ್‌ ಚೆಟ್ರಿ ಸಾರಥ್ಯದ ಬಿಎಫ್‌ಸಿ ತಂಡ ಮೋಹನ್‌ ಬಾಗನ್‌ ವಿರುದ್ಧ ಸೆಣಸಲಿದೆ. ಈ ಹೋರಾಟಕ್ಕೆ ಕಳಿಂಗ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ಧವಾಗಿದೆ.

ಅಲ್ಬರ್ಟ್‌ ರೋಕಾ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ ಚೆಟ್ರಿ ಪಡೆ, ಈ ಪಂದ್ಯದಲ್ಲಿ ಸುಲಭವಾಗಿ ಎದುರಾಳಿಗಳ ಸವಾಲು ಮೀರಿನಿಲ್ಲುವ ಹುಮ್ಮಸ್ಸಿನಲ್ಲಿದೆ.

ನಾಯಕ ಚೆಟ್ರಿ, ಮುಂಚೂಣಿ ವಿಭಾಗದಲ್ಲಿ ಬೆಂಗಳೂರಿನ ತಂಡದ ಆಧಾರಸ್ತಂಭವಾಗಿದ್ದಾರೆ. ಐಎಸ್‌ಎಲ್‌ನಲ್ಲಿ ಮೋಡಿ ಮಾಡಿದ್ದ ಚೆಟ್ರಿ, ಸೂಪರ್‌ ಕಪ್‌ನಲ್ಲೂ ಮಿಂಚುತ್ತಿದ್ದಾರೆ. ಐಎಸ್‌ಎಲ್‌ನಲ್ಲಿ 21 ಪಂದ್ಯಗಳನ್ನು ಆಡಿದ್ದ ಅವರು 14 ಗೋಲು ದಾಖಲಿಸಿದ್ದರು. ಸೂಪರ್‌ ಕಪ್‌ನಲ್ಲಿ ಮೂರು ಗೋಲು ಗಳಿಸಿದ್ದಾರೆ.

ನೆರೋಕಾ ಎಫ್‌ಸಿ ವಿರುದ್ಧದ ಕ್ವಾರ್ಟರ್‌ ಫೈನಲ್‌ನಲ್ಲಿ ‘ಹ್ಯಾಟ್ರಿಕ್‌’ ಗೋಲಿನ ಸಾಧನೆ ಮಾಡಿದ್ದ ಸುನಿಲ್‌, ಬಾಗನ್‌ ವಿರುದ್ಧವೂ ಗರ್ಜಿಸುವ ವಿಶ್ವಾಸ ಹೊಂದಿದ್ದಾರೆ.

ವೆನಿಜುವೆಲಾದ ಆಟಗಾರ ಮಿಕು, ಉದಾಂತ್‌ ಸಿಂಗ್‌ ಕುಮಾಮ ಅವರೂ ತಂಡದ ಶಕ್ತಿಯಾಗಿದ್ದಾರೆ. ಮುಂಚೂಣಿ ವಿಭಾಗದ ಆಟಗಾರ ಮಿಕು ಈ ಬಾರಿಯ ಐಎಸ್‌ಎಲ್‌ನಲ್ಲಿ 15 ಗೋಲು ದಾಖಲಿಸಿದ್ದರು. ಉದಾಂತ್‌ ಕೂಡ ಕಾಲ್ಚಳಕ ತೋರಿ ಗಮನ ಸೆಳೆದಿದ್ದರು.

ಡೇನಿಯಲ್‌ ಸೆಗೊವಿಯಾ, ಡೇನಿಯಲ್‌ ಲಾಲಿಂ‍‍ಪುಯಿಯಾ, ಹಾವೊಕಿಪ್‌ ಥಾಂಗ್‌ಕೊಶಿಯೆಮ್‌ ಅವರೂ ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು ಭೇದಿಸುವ ಸಾಮರ್ಥ್ಯ ಹೊಂದಿದ್ದಾರೆ.

ವಿಕ್ಟರ್‌ ಪೆರೆಜ್‌, ಆ್ಯಂಟೊನಿಯೊ ಡೊವ್ಯಾಲ್‌, ಎರಿಕ್‌ ಪಾರ್ಟಲು, ದಿಮಾಸ್‌ ಡೆಲ್‌ಗಾಡೊ, ಅಲ್ವಿನ್‌ ಜಾರ್ಜ್‌ ಮತ್ತು ಲೆನ್ನಿ ರಾಡ್ರಿಗಸ್‌ ಅವರು ಮಿಡ್‌ಫೀಲ್ಡ್‌ ವಿಭಾಗದಲ್ಲಿ ಬಿಎಫ್‌ಸಿಯ ಬೆನ್ನೆಲುಬಾಗಿದ್ದಾರೆ.

ರಕ್ಷಣಾ ವಿಭಾಗದ ಆಟಗಾರರಾದ ಲಾಯನರ್‌ ಲೌರೆನ್ಸೊ, ಜುನಾನ್‌, ಜೊಹಮಿಂಗ್ಲಿಯಾನ ರಾಲ್ಟೆ, ಸುಭಾಶಿಶ್‌ ಬೋಸ್‌, ನಿಶು ಕುಮಾರ್‌, ಜಾನ್‌ ಜಾನ್ಸನ್‌ ಮತ್ತು ಹರ್ಮನ್‌ಜ್ಯೋತ್‌ ಸಿಂಗ್‌ ಖಾಬ್ರಾ ಅವರು ದಿಟ್ಟ ಆಟ ಆಡಿ ಎದುರಾಳಿಗಳ ‍ಪ್ರಯತ್ನಗಳನ್ನು ವಿಫಲಗೊಳಿಸುವ ವಿಶ್ವಾಸ ಹೊಂದಿದ್ದಾರೆ. ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ಮೇಲೂ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

‘ಮೋಹನ್‌ ಬಾಗನ್‌ ತಂಡದಲ್ಲಿ ಪ್ರತಿಭಾನ್ವಿತ ಆಟಗಾರರಿದ್ದಾರೆ. ಎದುರಾಳಿಗಳನ್ನು ಕಟ್ಟಿಹಾಕಲು ನಾವು ಸೂಕ್ತ ಯೋಜನೆ ಹೆಣೆದಿದ್ದೇವೆ. ಫೈನಲ್‌ ಪ್ರವೇಶಿಸುವುದು ನಮ್ಮ ಗುರಿ. ಇದಕ್ಕಾಗಿ ಆಟಗಾರರು ಶಕ್ತಿಮೀರಿ ಪ್ರಯತ್ನಿಸಲಿದ್ದಾರೆ’ ಎಂದು ಬಿಎಫ್‌ಸಿ ಕೋಚ್‌ ಅಲ್ಬರ್ಟ್‌ ರೋಕಾ ಹೇಳಿದ್ದಾರೆ.

‘ರಾಹುಲ್‌ ಬೆಕೆ ಗಾಯದಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಈ ಪಂದ್ಯದಲ್ಲಿ ಆಡುತ್ತಿಲ್ಲ. ಚೆಟ್ರಿ ಮುಂದಾಳತ್ವದಲ್ಲಿ ತಂಡದಿಂದ ಉತ್ತಮ ಸಾಮರ್ಥ್ಯ ಮೂಡಿಬರುತ್ತಿದೆ. ಇದನ್ನು ಮುಂದುವರಿಸಿಕೊಂಡು ಹೋಗುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಯದ ಕನಸಲ್ಲಿ ಬಾಗನ್‌: ಮೋಹನ್‌ ಬಾಗನ್‌ ಕೂಡ ಜಯದ ಮಂತ್ರ ಜಪಿಸುತ್ತಿದೆ.

ಕಳಿಂಗ ಕ್ರೀಡಾಂಗಣದಲ್ಲಿ ಹೋದ ವಾರ ನಡೆದಿದ್ದ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಬಾಗನ್‌ 3–1 ಗೋಲುಗಳಿಂದ ಶಿಲ್ಲಾಂಗ್‌ ಲಜಾಂಗ್‌ ತಂಡವನ್ನು ಮಣಿಸಿತ್ತು.

ಶಿಲ್ಲಾಂಗ್‌ ವಿರುದ್ಧ ಗೋಲು ಗಳಿಸಿದ್ದ ಶೇಖ್‌ ಫಯಾಜ್‌, ನಿಖಿಲ್‌ ಕದಂ ಮತ್ತು ಅಕ್ರಂ ಮೋಗ್ರಾಬಿ ಅವರು ಬಿಎಫ್‌ಸಿಯ ಬಲಿಷ್ಠ ರಕ್ಷಣಾ ಕೋಟೆಯನ್ನು ಭೇದಿಸಲು ಕಾತರರಾಗಿದ್ದಾರೆ.

ಈ ಬಾರಿಯ ಐ ಲೀಗ್‌ ಟೂರ್ನಿಯಲ್ಲಿ ಮೂರನೆ ಸ್ಥಾನ ಗಳಿಸಿದ್ದ ಬಾಗನ್‌, ಮುಂಚೂಣಿ ಮತ್ತು ಮಿಡ್‌ಫೀಲ್ಡ್‌ ವಿಭಾಗಗಳಲ್ಲಿ ಶಕ್ತಿಯುತವಾಗಿದೆ.

ಹೋದ ವರ್ಷ ನಡೆದಿದ್ದ ಫೆಡರೇಷನ್‌ ಕಪ್‌ ಫೈನಲ್‌ನಲ್ಲಿ ಬಿಎಫ್‌ಸಿ ಮತ್ತು ಬಾಗನ್‌ ಪೈಪೋಟಿ ನಡೆಸಿದ್ದವು. ಆ ಪಂದ್ಯದಲ್ಲಿ ಬೆಂಗಳೂರಿನ ತಂಡ 2–0 ಗೋಲುಗಳಿಂದ ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು.
ಆರಂಭ: ಸಂಜೆ 4.

*
ಸುನಿಲ್‌ ಚೆಟ್ರಿ ಶ್ರೇಷ್ಠ ಆಟಗಾರ. ನಾಯಕ ಮತ್ತು ಆಟಗಾರನಾಗಿ ಅವರು ಈಗ ಸಾಕಷ್ಟು ಪರಿಪಕ್ವತೆ ಗಳಿಸಿದ್ದಾರೆ. ಅವರು ತಂಡದಲ್ಲಿರುವುದು ಖುಷಿಯ ವಿಷಯ.
–ಅಲ್ಬರ್ಟ್‌ ರೋಕಾ, ಬಿಎಫ್‌ಸಿ ಕೋಚ್‌

*
ಹೋದ ವರ್ಷ ನಡೆದಿದ್ದ ಫೆಡರೇಷನ್‌ ಕಪ್‌ ಫೈನಲ್‌ನಲ್ಲಿ ಬಿಎಫ್‌ಸಿ ಎದುರು ನಿರಾಸೆ ಕಂಡಿದ್ದೆವು. ಹಿಂದಿನ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ಕಾಯುತ್ತಿದ್ದೇವೆ.
–ಶಂಕರಲಾಲ್‌ ಚಕ್ರವರ್ತಿ, ಮೋಹನ್‌ ಬಾಗನ್‌ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT