ಶನಿವಾರ, ಡಿಸೆಂಬರ್ 7, 2019
25 °C
ಚುನಾವಣೆ ಘೋಷಣೆಗೂ ಮುನ್ನವೇ ಪ್ರಚಾರಕ್ಕಿಳಿದಿದ್ದ ‘ತಾರೆಯರು’

ಚಿತ್ರನಟರಿಗೆ ‘ಕೈ’ ಕೊಟ್ಟ ಕಾಂಗ್ರೆಸ್!

Published:
Updated:
ಚಿತ್ರನಟರಿಗೆ ‘ಕೈ’ ಕೊಟ್ಟ ಕಾಂಗ್ರೆಸ್!

ಚಿತ್ರದುರ್ಗ: ಕಾಂಗ್ರೆಸ್‌ನಿಂದ ಟಿಕೆಟ್ ಬಯಸಿ, ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಬಿರುಸಿನ ಪ್ರಚಾರ ಕೈಗೊಂಡು ಸುದ್ದಿಯಾಗಿದ್ದ ಚಿತ್ರನಟರಾದ ಭಾವನಾ ಮತ್ತು ಶಶಿಕುಮಾರ್ ಅವರಿಗೆ ಟಿಕೆಟ್ ಕೈತಪ್ಪಿದೆ.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಭಾವನಾ ಹಾಗೂ ಮೊಳಕಾಲ್ಮುರು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಶಶಿಕುಮಾರ್ ಕಣಕ್ಕಿಳಿಯಲು ಬಯಸಿದ್ದರು. ಮುಖ್ಯಮಂತ್ರಿ ಸೂಚನೆ ಮೇರೆಗೆ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿರುವುದಾಗಿಯೂ ಅವರು ಹೇಳಿಕೊಂಡಿದ್ದರು.

ಭಾವನಾ 2 ತಿಂಗಳ ಹಿಂದೆಯೇ ನಗರದಲ್ಲಿ ಮನೆ ಮಾಡಿದ್ದರು. ‘ಚಿತ್ರದುರ್ಗ ನನ್ನ ತಾಯಿಯ ತವರು. ನಾನು ಇಲ್ಲಿಯವಳೇ. ಹಾಗಾಗಿ ಟಿಕೆಟ್

ಆಕಾಂಕ್ಷಿಯಾಗಿದ್ದೇನೆ’ ಎಂದಿದ್ದರು.

ನಗರದಲ್ಲಿ ಹಲವು ಸಮಾರಂಭಗಳಲ್ಲಿ ಭಾಗಿಯಾಗಿದ್ದರು. ಕಾಂಗ್ರೆಸ್ ಸಮಿತಿಯ ಸಮಾವೇಶಗಳಲ್ಲೂ ಸಕ್ರಿಯರಾಗಿದ್ದರು. ಅಷ್ಟೇ ಅಲ್ಲದೆ, ತಾಲ್ಲೂಕಿನ ಗ್ರಾಮಗಳಲ್ಲಿ ಸಂಘಟನೆಯೊಂದರ ಸಹಯೋಗದೊಂದಿಗೆ ಆರೋಗ್ಯ ಶಿಬಿರಗಳನ್ನೂ ನಡೆಸಿದ್ದರು. ರಂಗೋಲಿ ಸ್ಪರ್ಧೆ ಹಾಗೂ ಹಲವು ಚಟುವಟಿಕೆ ನಡೆಸುತ್ತಾ ಸದಾ ಸುದ್ದಿಯಲ್ಲಿದ್ದರು.

ಇದೇ ಕ್ಷೇತ್ರದಲ್ಲಿ ಸಂಸದರಾಗಿದ್ದ ಶಶಿಕುಮಾರ್ ಆಗ ತಾವು ಮಾಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಡುತ್ತಿದ್ದರು. ವಿ.ಎಸ್. ಉಗ್ರಪ್ಪ, ಎನ್.ವೈ. ಗೋಪಾಲಕೃಷ್ಣ ,ಯೋಗೀಶ್ ಬಾಬು ಅವರ ಪೈಪೋಟಿಯ ನಡುವೆಯೂ ಪ್ರಚಾರದಿಂದ ಹಿಂದೆ ಸರಿದಿರಲಿಲ್ಲ.

ಹಿಂದಿನ ಚುನಾವಣೆಗಳಲ್ಲಿ ಪಕ್ಷಕ್ಕೆ ನಾನು ಬೇಕಿತ್ತು. ಈಗ ನಂಬಿಸಿ, ಕತ್ತು ಕುಯ್ಯುವ ಕೆಲಸ ಮಾಡಿದ್ದಾರೆ. ಇನ್ನೊಂದೆರಡು ದಿನಗಳಲ್ಲಿ ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡುತ್ತೇನೆ.

– ಶಶಿಕುಮಾರ್‌, ನಟ

ಟಿಕೆಟ್ ಕೈ ತಪ್ಪಿದರೇನಂತೆ, ನಾನು ಪಕ್ಷದ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತೇನೆ. ಚಿತ್ರದುರ್ಗ ಕ್ಷೇತ್ರದಲ್ಲೇ ಕೆಲಸ ಮಾಡುತ್ತೇನೆ. ಈ ಚುನಾವಣೆ ಹಲವು ಅನುಭವಗಳನ್ನು ಕೊಟ್ಟಿದೆ.

– ಭಾವನಾ, ನಟಿ

ಪ್ರತಿಕ್ರಿಯಿಸಿ (+)