ಶುಕ್ರವಾರ, ಡಿಸೆಂಬರ್ 6, 2019
26 °C

ವಲಸಿಗ – ಮೂಲ ಕಾಂಗ್ರೆಸ್ಸಿಗರ ಸಮರದಲ್ಲಿ ಗೆದ್ದ ಸಿದ್ದರಾಮಯ್ಯ

Published:
Updated:
ವಲಸಿಗ – ಮೂಲ ಕಾಂಗ್ರೆಸ್ಸಿಗರ ಸಮರದಲ್ಲಿ ಗೆದ್ದ ಸಿದ್ದರಾಮಯ್ಯ

ಬೆಂಗಳೂರು: ವಿಧಾನಸಭೆ ಚುನಾವಣೆಯ ಟಿಕೆಟ್‌ ಹಂಚಿಕೆ ವಿಷಯದಲ್ಲಿ ವಲಸಿಗರು– ಮೂಲ ಕಾಂಗ್ರೆಸ್ಸಿಗರ ನಡುವಿನ ಸಮರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ.

ಹೈಕಮಾಂಡ್‌ ಮೇಲೆ ಒತ್ತಡ ಹೇರಿ ತಮ್ಮ ಬಹುತೇಕ ಆಪ್ತರಿಗೆ ಟಿಕೆಟ್‌ ಕೊಡಿಸಲು ಮುಖ್ಯಮಂತ್ರಿ ಯಶಸ್ಸು ಕಂಡಿದ್ದಾರೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಜೆಡಿಎಸ್‌ ತ್ಯಜಿಸಿ ಕಾಂಗ್ರೆಸ್‌ ಸೇರಿದ ಎಲ್ಲ ಶಾಸಕರಿಗೆ ಟಿಕೆಟ್‌ ನೀಡದಂತೆ ಮೂಲ ಕಾಂಗ್ರೆಸ್ಸಿಗರು ಬಲವಾದ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಆ ವಿರೋಧದ ನಡುವೆಯೂ ಸಿದ್ದರಾಮಯ್ಯ ಅವರೆಲ್ಲರಿಗೂ ಟಿಕೆಟ್‌ ಸಿಗುವಂತೆ ಮಾಡಿದ್ದಾರೆ. ಅಲ್ಲದೆ, ತಮ್ಮ ಆಪ್ತರಾದ ಎಚ್‌.ಎಂ. ರೇವಣ್ಣ (ಚನ್ನಪಟ್ಟಣ) ಮತ್ತು ಬೈರತಿ ಸುರೇಶ್‌ (ಹೆಬ್ಬಾಳ) ಅವರಿಗೂ ಟಿಕೆಟ್‌ ಕೊಡಿಸಿದ್ದಾರೆ.

ಟಿಕೆಟ್‌ ಘೋಷಣೆ ಬೆನ್ನಲ್ಲೇ ಅಸಮಾಧಾನದ ಹೊಗೆ ಕಾಣಿಸಿಕೊಳ್ಳಲು ವಲಸಿಗರು ಮತ್ತು ಮೂಲ ಕಾಂಗ್ರೆಸ್ಸಿಗರ ನಡುವಿನ ಕಂದಕವೂ ಕಾರಣವಾಗಿದೆ. ಇದು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವ ಆತಂಕ ಕೂಡ ಎದುರಾಗಿದೆ. ಈ ಬಗ್ಗೆ ಹಿರಿಯ ನಾಯಕರಾದ ರೆಹಮಾನ್‌ ಖಾನ್‌, ಎಐಸಿಸಿ ವಕ್ತಾರ ಬ್ರಿಜೇಶ್‌ ಕಾಳಪ್ಪ ಈಗಾಗಲೇ ಧ್ವನಿ ಎತ್ತಿದ್ದಾರೆ.

ಉದ್ಯಮಿ ಅಶೋಕ ಖೇಣಿ ಸೇರಿ ಕೆಲವರಿಗೆ ಟಿಕೆಟ್‌ ನೀಡುವಂತೆ ಸಿದ್ದರಾಮಯ್ಯ ಹೈಕಮಾಂಡ್‌ ಮೇಲೆ ಪ್ರಭಾವ ಬೀರಿದ್ದರು. ಅದಕ್ಕೆ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತಪಡಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಮತ್ತು ಎಂ. ವೀರಪ್ಪ ಮೊಯಲಿ ಕೂಡ ಖರ್ಗೆ ಅವರೊಂದಿಗೆ ಧ್ವನಿಗೂಡಿಸಿದ್ದರು.

ಆದರೆ, ಸಿದ್ದರಾಮಯ್ಯ ಸೂಚಿಸಿದ ಬಹುತೇಕರಿಗೆ ಹೈಕಮಾಂಡ್‌ ಮಣೆ ಹಾಕಿದೆ.ಈ ಬಗ್ಗೆ ಪ್ರತಿಕ್ರಿಯಿಸಲು ಖರ್ಗೆ ನಿರಾಕರಿಸಿದ್ದಾರೆ. ತಮ್ಮ ಎಲ್ಲ ಆಪ್ತರಿಗೆ ಟಿಕೆಟ್‌ ನೀಡಲು ಸಾಧ್ಯವಾಗದ ಕಾರಣಕ್ಕೆ ರೆಹಮಾನ್‌ ಖಾನ್‌, ಜಾಫರ್‌ ಷರೀಫ್‌, ಮೊಯಿಲಿ ಅಸಮಾಧಾನಗೊಂಡಿದ್ದಾರೆ.

ಪ್ರತಿಕ್ರಿಯಿಸಿ (+)