ಸೋಮವಾರ, ಆಗಸ್ಟ್ 10, 2020
26 °C

ತಪ್ಪೊಪ್ಪಿಕೊಂಡ ಬಳಿಕ ಹೇಳಿಕೆ ಬದಲು

ಪಿಟಿಐ Updated:

ಅಕ್ಷರ ಗಾತ್ರ : | |

ತಪ್ಪೊಪ್ಪಿಕೊಂಡ ಬಳಿಕ ಹೇಳಿಕೆ ಬದಲು

ಹೈದರಾಬಾದ್‌: ಮೆಕ್ಕಾ ಮಸೀದಿ ಸ್ಫೋಟದ ಸಂಚನ್ನು ತಾನೇ ರೂಪಿಸಿದ್ದಾಗಿ ಪ್ರಮುಖ ಆರೋಪಿ ಸ್ವಾಮಿ ಅಸೀಮಾನಂದ 2010ರಲ್ಲಿ ದೆಹಲಿಯ ಮೆಟ್ರೊಪಾಲಿಟನ್‌ ನ್ಯಾಯಾಧೀಶರ ಎದುರು ತಪ್ಪೊಪ್ಪಿಕೊಂಡಿದ್ದರು.

ನಂತರ ತಾವು ನೀಡಿದ್ದ ಹೇಳಿಕೆಯಿಂದ ಹಿಂದೆ ಸರಿದಿದ್ದರು. ಪ್ರಕರಣದಲ್ಲಿ ಸಾಕ್ಷ್ಯ ನುಡಿದಿದ್ದ ಜಾರ್ಖಂಡ್‌ನ ಮಾಜಿ ಸಚಿವ ಸೇರಿದಂತೆ 66 ಸಾಕ್ಷಿಗಳು ತಿರುಗಿಬಿದ್ದರು.

ಅಸೀಮಾನಂದ ಅವರ ಹೇಳಿಕೆ ದಾಖಲಾಗಿದ್ದ ಕಡತ ಇದೇ ಮಾರ್ಚ್ 13ರಂದು ಎನ್‌ಐಎ ನ್ಯಾಯಾಲಯದಿಂದ ಏಕಾಏಕಿ ನಾಪತ್ತೆಯಾಗಿತ್ತು. ಆಶ್ಚರ್ಯಕರ ರೀತಿಯಲ್ಲಿ ಮರುದಿನವೇ ಪತ್ತೆಯಾಗಿತ್ತು.

ಹರಿದ್ವಾರದಲ್ಲಿ ಬಂಧನ: 2010ರ ನವೆಂಬರ್‌ 19ರಂದು ಹರಿದ್ವಾರದಲ್ಲಿ ಸ್ವಾಮಿ ಅಸೀಮಾನಂದ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಅಜ್ಮೀರ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಜೈಪುರ ನ್ಯಾಯಾಲಯ ಅವರನ್ನು ಬಿಡುಗಡೆ ಮಾಡಿತ್ತು. ನಂತರ ಅವರನ್ನು ಹೈದರಾಬಾದ್‌ಗೆ ಕರೆತಂದು ಜೈಲಿನಲ್ಲಿ ಇರಿಸಲಾಗಿತ್ತು.

ಸ್ವಾಮಿ ಅಸೀಮಾನಂದ ಮತ್ತು ಭರತ್‌ ಮೋಹನ್‌ಲಾಲ್‌ 2017ರ ಮಾರ್ಚ್‌ನಲ್ಲಿ ಷರತ್ತುಬದ್ಧ ಜಾಮೀನು ಪಡೆದು ಹೊರ ಬಂದಿದ್ದರು. ಉಳಿದ ಮೂವರು ಆರೋಪಿಗಳು ಜೈಲಿನಲ್ಲಿಯೇ ಇದ್ದರು.

ತಲೆಮರೆಸಿಕೊಂಡಿರುವ ಆರೋಪಿಗಳು: ಮೆಕ್ಕಾ ಮಸೀದಿ ಸ್ಫೋಟದ ಪ್ರಕರಣದ ಸಂಬಂಧ ಹತ್ತು ಆರೋಪಿಗಳ ಪೈಕಿ ಐವರನ್ನು ಮಾತ್ರ ಬಂಧಿಸಲಾಗಿತ್ತು. ಎಲೆಕ್ಟ್ರೀಷಿಯನ್‌ ರಾಮಚಂದ್ರ ಕಲಸಾಂಗರಾ, ಸಂದೀಪ್‌ ಡಾಂಗೆ, ಅಮಿತ್‌ ಚೌಹಾಣ್‌ ಅಲಿಯಾಸ್‌ ಪ್ರಿನ್ಸ್‌ ಎಂಬ ಮೂವರು ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ. ರಾಮಚಂದ್ರ ಮತ್ತು ಸಂದೀಪ್‌, ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿದ್ದರು.

ತೇಜಾರಾಮ್‌ ಎಂಬ ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಆರ್‌ಎಸ್‌ಎಸ್‌ ವಕ್ತಾರನಾಗಿದ್ದ ಸುನಿಲ್‌ ಜೋಷಿ ಎಂಬ ಆರೋಪಿಯನ್ನು 2007ರಲ್ಲಿ ಮಧ್ಯಪ್ರದೇಶದ ದೆವಾಸ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ತಲೆಮರೆಸಿಕೊಂಡಿರುವ ಮೂವರು ಆರೋಪಿಗಳು ಮತ್ತು ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಒಬ್ಬ ಆರೋಪಿಯ ವಿರುದ್ಧ ವಿಚಾರಣೆ ಮುಂದುವರಿಯಲಿದೆ.

ಅಜ್ಮೀರ್‌ ದರ್ಗಾ ಸ್ಫೋಟ ಪ್ರಕರಣದಲ್ಲಿ ದೇವೇಂದರ್‌ ಗುಪ್ತಾನಿಗೆ ರಾಜಸ್ಥಾನದ ನ್ಯಾಯಾಲಯ ಇದೇ ಮಾರ್ಚ್‌ನಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ.

11 ವರ್ಷಗಳ ಹಿಂದೆ ಏನು ನಡೆದಿತ್ತು?

2007ರಲ್ಲಿ ಬಾಂಬ್‌ ಸ್ಫೋಟಿಸಿದ ಹೈದರಾಬಾದ್‌ನ ಮಸೀದಿಯ ಆವರಣದಲ್ಲಿ ಇನ್ನೂ ಎರಡು ಸಜೀವ ಬಾಂಬ್‌ಗಳನ್ನು ಪೊಲೀಸರು ಪತ್ತೆಹಚ್ಚಿದ್ದರು. ಬಾಂಬ್‌ ನಿಷ್ಕ್ರಿಯ ಪಡೆಯ ಸಿಬ್ಬಂದಿ ಅವುಗಳನ್ನು ನಿಷ್ಕ್ರಿಯಗೊಳಿಸಿದ್ದರು.

ಈ ಘಟನೆಯ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ ತಡೆಯಲು ಪೊಲೀಸರು ಹಾರಿಸಿದ ಗುಂಡಿಗೆ ಐವರು ಬಲಿಯಾಗಿದ್ದರು.

ಪ್ರಕರಣದ ತನಿಖೆ ಆರಂಭಿಸಿದ ಹೈದರಾಬಾದ್‌ ಪೊಲೀಸರು ಹರಕತ್‌ ಉಲ್‌ ಜಿಹಾದ್‌ ಇಸ್ಲಾಮಿ ಸಂಘಟನೆ ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಿದ್ದರು. ನೂರಕ್ಕೂ ಹೆಚ್ಚು ಮುಸ್ಲಿಂ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಈ ನಡುವೆ 2010ರಲ್ಲಿ ಪ್ರಕರಣದ ತನಿಖೆ ವಹಿಸಿಕೊಂಡ ಸಿಬಿಐ, ವಿಧ್ವಂಸಕ ಕೃತ್ಯದ ಹಿಂದೆ ‘ಅಭಿನವ ಭಾರತ’ ಹಿಂದೂ ಸಂಘಟನೆಯ ಕಾರ್ಯಕರ್ತರ ಕೈವಾಡವಿರುವುದನ್ನು ಪತ್ತೆ ಹಚ್ಚಿತು.

ಮುಸ್ಲಿಂ ಯುವಕರನ್ನು ಅಕ್ರಮವಾಗಿ ಬಂಧಿಸಿ ಹಿಂಸೆ ನೀಡಲಾಗುತ್ತಿದೆ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸತ್ಯ ಶೋಧನಾ ಸಮಿತಿ ಆರೋಪಿಸಿತ್ತು.

ಪೊಲೀಸರ ವಶದಲ್ಲಿದ್ದ ಮುಸ್ಲಿಂ ಯುವಕರನ್ನು ಬಿಡುಗಡೆ ಮಾಡಲಾಯಿತು. 2012ರಲ್ಲಿ ಅಂದಿನ ಆಂಧ್ರ ಸರ್ಕಾರ 76 ಮುಸ್ಲಿಂ ಯುವಕರಿಗೆ ಪರಿಹಾರವನ್ನೂ ನೀಡಿತ್ತು.

2011ರ ಏಪ್ರಿಲ್‌ನಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐ, ಎನ್‌ಐಎಗೆ ಹಸ್ತಾಂತರಿಸಿತ್ತು.

ಅಭಿನವ ಭಾರತ ಆರ್‌ಎಸ್‌ಎಸ್‌ ನಂಟು

ಸ್ವಾಮಿ ಅಸೀಮಾನಂದ ಅಲಿಯಾಸ್ ನಾಬಾ ಕುಮಾರ್‌ ಸರ್ಕಾರ್‌, ಆರ್‌ಎಸ್‌ಎಸ್‌ನ ಮಾಜಿ ಕಾರ್ಯಕರ್ತ ಮತ್ತು ಅಭಿನವ ಭಾರತ ಸಂಘಟನೆಯ ಸದಸ್ಯ.

ಮಾಲೇಗಾಂವ್‌ ಮತ್ತು ಅಜ್ಮೀರ್‌ ಬಾಂಬ್‌ ಸ್ಫೋಟ ಪ್ರಕರಣಗಳಲ್ಲಿಯೂ ಅಭಿನವ ಭಾರತ ಸಂಘಟನೆಯ ಕೈವಾಡವಿದೆ ಎಂದು ಶಂಕಿಸಲಾಗಿದೆ.

ಅಜ್ಮೀರ್‌ ದರ್ಗಾ ಬಾಂಬ್‌ ಸ್ಫೋಟ ಪ್ರಕರಣದಿಂದಲೂ ಅಸೀಮಾನಂದ ಖುಲಾಸೆಗೊಂಡಿದ್ದು, ಸಂಜೋತಾ ಎಕ್ಸ್‌ಪ್ರೆಸ್‌ ರೈಲು ಸ್ಫೋಟ ಪ್ರಕರಣದಲ್ಲಿ ಜಾಮೀನು ಪಡೆದಿದ್ದಾರೆ.

ಜತಿನ್‌ ಚಟರ್ಜಿ, ಓಂಕಾರನಾಥ್‌ ಎಂಬ ಹೆಸರುಗಳನ್ನೂ ಹೊಂದಿರುವ 66 ವರ್ಷದ ಸ್ವಾಮಿ ಅಸೀಮಾನಂದ ಪಶ್ಚಿಮ ಬಂಗಾಳ ಮೂಲದವರು. ವಿಜ್ಞಾನ ಪದವೀಧರ. ಹಿಂದೂ ಸಂಘಟನೆಗಳ ಜತೆ ಗುರುತಿಸಿಕೊಂಡ ಅವರು, 1990ರಲ್ಲಿ ಗುಜರಾತ್‌ನಲ್ಲಿ ನೆಲೆ ನಿಂತರು.

ನ್ಯಾಯ ಎಲ್ಲಿದೆ: ಒವೈಸಿ ಆಕ್ರೋಶ

ಪ್ರಕರಣದ ಪ್ರಮುಖ ಆರೋಪಿಗಳ ಬಿಡುಗಡೆಯಿಂದಾಗಿ ನ್ಯಾಯ ಸಿಕ್ಕಿಲ್ಲ ಎಂದು ಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಒವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ರಾಜಕೀಯ ಪ್ರಭಾವಕ್ಕೆ ಒಳಗಾದ ಎನ್‌ಐಎ ಈ ಪ್ರಕರಣದ ಬಗ್ಗೆ ಆಸಕ್ತಿ ವಹಿಸಲಿಲ್ಲ. ಎನ್‌ಐಎ ಪಕ್ಷಪಾತ ಧೋರಣೆ ಅನುಸರಿಸಿ ಸಮರ್ಪಕವಾಗಿ ಪ್ರಕರಣ ನಿರ್ವಹಿಸದ ಕಾರಣ ನ್ಯಾಯ ದೊರೆತಿಲ್ಲ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್‌ ಬಣ್ಣ ಬಯಲು– ಬಿಜೆಪಿ: ಕಾಂಗ್ರೆಸ್ಸಿನ ‘ಹಿಂದೂಗಳ ಅವಹೇಳನ ಮತ್ತು ಅಲ್ಪಸಂಖ್ಯಾತರ ತುಷ್ಟೀಕರಣ’ ರಾಜಕಾರಣದ ಬಣ್ಣವನ್ನು ಈ ತೀರ್ಪು ಬಯಲು ಮಾಡಿದೆ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.

ಕೇಸರಿ ಭಯೋತ್ಪಾದನೆ ಮತ್ತು ಹಿಂದೂ ಭಯೋತ್ಪಾದನೆ ಎಂಬ ಪದಗಳನ್ನು ಹುಟ್ಟು ಹಾಕಿದ ತಪ್ಪಿಗಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಈಗಲಾದರೂ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಒತ್ತಾಯಿಸಿದ್ದಾರೆ.

ಇದನ್ನು ನಾನು ನಿರೀಕ್ಷಿಸಿದ್ದೆ ಎಂದು ಕೇಂದ್ರ ಗೃಹ ಇಲಾಖೆಯ ಮಾಜಿ ಅಧೀನ ಕಾರ್ಯದರ್ಶಿ ಆರ್‌ವಿಎಸ್‌ ಮಣಿ ಟ್ವೀಟ್‌ ಮಾಡಿದ್ದಾರೆ.

ಕಾಂಗ್ರೆಸ್‌ ಸ್ಪಷ್ಟನೆ: ಭಯೋತ್ಪಾದನೆಯನ್ನು ಯಾವುದೇ ಧರ್ಮ ಅಥವಾ ಸಮುದಾಯದೊಂದಿಗೆ ತಳಕು ಹಾಕಬಾರದು ಎಂಬ ತತ್ವವನ್ನು ಕಾಂಗ್ರೆಸ್‌ ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿದೆ. ಹಾಗಾಗಿ ‘ಕೇಸರಿ ಭಯೋತ್ಪಾದನೆ’ ಎಂಬ ಶಬ್ದವನ್ನು ಬಳಸುವ ಪ್ರವೇಯವೇ ಉದ್ಬಸುವುದಿಲ್ಲ ಎಂದು ಕಾಂಗ್ರೆಸ್‌ ಸ್ಪಷ್ಟಪಡಿಸಿದೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯಾಗಲಿ ಇಲ್ಲವೇ ಪಕ್ಷವಾಗಲಿ ಇಂತಹ ಪದಗಳನ್ನು ಎಂದಿಗೂ ಬಳಕೆ ಮಾಡಿಲ್ಲ ಎಂದು ವಕ್ತಾರ ಪಿ.ಎಲ್‌. ಪುನಿಯಾ ಹೇಳಿದ್ದಾರೆ.

ಅಮೇಠಿಗೆ ಭೇಟಿ ನೀಡಿರುವ ರಾಹುಲ್‌ ಗಾಂಧಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಕೇಸರಿ ಭಯೋತ್ಪಾದನೆ ಪದ ಬಳಸಿಲ್ಲ: ಕಾಂಗ್ರೆಸ್‌ ಸ್ಪಷ್ಟನೆ

ನವದೆಹಲಿ:
ಭಯೋತ್ಪಾದನೆಯನ್ನು ಯಾವುದೇ ಧರ್ಮ ಅಥವಾ ಸಮುದಾಯದೊಂದಿಗೆ ತಳಕು ಹಾಕಬಾರದು ಎಂಬ ತತ್ವವನ್ನು ಕಾಂಗ್ರೆಸ್‌ ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿದೆ. ಹಾಗಾಗಿ ‘ಕೇಸರಿ ಭಯೋತ್ಪಾದನೆ’ ಎಂಬ ಶಬ್ದವನ್ನು ಬಳಸುವ ಪ್ರವೇಯವೇ ಉದ್ಬಸುವುದಿಲ್ಲ ಎಂದು ಕಾಂಗ್ರೆಸ್‌ ಸ್ಪಷ್ಟಪಡಿಸಿದೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯಾಗಲಿ ಇಲ್ಲವೇ ಪಕ್ಷವಾಗಲಿ ಇಂತಹ ಪದಗಳನ್ನು ಎಂದಿಗೂ ಬಳಕೆ ಮಾಡಿಲ್ಲ ಎಂದು ವಕ್ತಾರ ಪಿ.ಎಲ್‌. ಪುನಿಯಾ ಹೇಳಿದ್ದಾರೆ.

ಅಮೇಠಿಗೆ ಭೇಟಿ ನೀಡಿರುವ ರಾಹುಲ್‌ ಗಾಂಧಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

**

ವಿಚಾರಣೆ ಸುತ್ತಮುತ್ತ

* ಒಟ್ಟು 226 ಸಾಕ್ಷಿಗಳ ವಿಚಾರಣೆ

* ಜಾರ್ಖಂಡ್‌ ಸಚಿವ ಸೇರಿದಂತೆ 66 ಸಾಕ್ಷಿಗಳಿಂದ ಪ್ರತಿಕೂಲ ಹೇಳಿಕೆ

* 411 ದಾಖಲೆಗಳ ಸಂಗ್ರಹ

* ಹೈದರಾಬಾದ್‌ನಲ್ಲಿ ಕಟ್ಟೆಚ್ಚರ

* ನ್ಯಾಯಾಲಯ, ಮಸೀದಿಗೆ ಭದ್ರತೆ

* ಭದ್ರತೆಗೆ 3000ಕ್ಕೂ ಹೆಚ್ಚು ಪೊಲೀಸರು, ಅರೆಸೇನಾಪಡೆ,

ಕ್ಷಿಪ್ರ ಕಾರ್ಯಾಚರಣೆ ಪಡೆ ಸಿಬ್ಬಂದಿ ನಿಯೋಜನೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.