ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಸ್ಥಾನಮಾನ: ಆಂಧ್ರ ಬಂದ್‌ ಯಶಸ್ವಿ

ತೆಲುಗುದೇಶಂ ಹೊರತುಪಡಿಸಿ ಎಲ್ಲ ಪಕ್ಷಗಳು ಬಂದ್‌ಗೆ ಬೆಂಬಲ
Last Updated 16 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಹೈದರಾಬಾದ್‌: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ವಿವಿಧ ಪಕ್ಷಗಳು ಸೋಮವಾರ ಬಂದ್‌ಗೆ ಕರೆ ನೀಡಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ನಡೆಸುತ್ತಿರುವ ಐದನೇ ಬಂದ್‌ ಇದಾಗಿದ್ದು, ಎಲ್ಲೆಡೆ ಯಶಸ್ವಿಯಾಗಿದೆ. 

ಆಡಳಿತಾರೂಢ ತೆಲುಗುದೇಶಂ ಪಕ್ಷ ಹೊರತುಪಡಿಸಿ ಇನ್ನುಳಿದ ಎಲ್ಲ ಪಕ್ಷಗಳು ಬಂದ್‌ಗೆ ಬೆಂಬಲ ಸೂಚಿಸಿದ್ದವು. ಎಸ್‌ಸಿಎಸ್‌ ಸಾಧನಾ ಸಮಿತಿ, ವೈಎಸ್‌ಆರ್‌ ಕಾಂಗ್ರೆಸ್, ಸಿಪಿಐ, ಸಿಪಿಎಂ ಮತ್ತು ಕಾಂಗ್ರೆಸ್‌ ಪಕ್ಷಗಳ ಕಾರ್ಯಕರ್ತರು ಬೃಹತ್‌ ರ‍್ಯಾಲಿಗಳನ್ನು ಆಯೋಜಿಸಿದ್ದರು.

ಪ್ರತಿಭಟನಾಕಾರರು ವಾಹನಗಳನ್ನು ತಡೆದಿದ್ದರಿಂದಾಗಿ ವಿವಿಧೆಡೆ ಸಂಚಾರಕ್ಕೆ ತೊಂದರೆ ಉಂಟಾಯಿತು. ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರಕ್ಕೆ ತೊಂದರೆಯಾಗಿತ್ತು.

ತಿರುಪತಿಯಲ್ಲಿ ಒಂದು ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಲಾಗಿತ್ತು. ಪ್ರತಿಭಟನಾಕಾರರು ಬಸ್‌ ಡಿಪೊ ಮುಂಭಾಗದಲ್ಲಿ ಕುಳಿತು ಬಸ್‌ಗಳನ್ನು ತಡೆದರು. ತಿರುಮಲಕ್ಕೆ ತೆರಳುವ ಬಸ್‌ಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ವಿಶಾಖಪಟ್ಟಣ ಮತ್ತು ವಿಜಯವಾಡಗಳಲ್ಲಿ ಚಿತ್ರಮಂದಿರಗಳ ಮಾಲೀಕರು ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸಿದ್ದರು.  ಶಾಲಾ– ಕಾಲೇಜುಗಳು, ವಾಣಿಜ್ಯ ವಹಿವಾಟು ಸ್ಥಗಿತಗೊಂಡಿತ್ತು.

’ಬಂದ್‌ನಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಂಡ ಜನರನ್ನು ಅಭಿನಂದಿಸುತ್ತೇವೆ. ಪ್ರಧಾನಿ ಮೋದಿ ಅವರು ಈ ಹಿಂದೆ ನೀಡಿದ್ದ ಭರವಸೆಯಂತೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕು’ ಎಂದು ಎಸ್‌ಸಿಎಸ್‌ ಸಾಧನಾ ಸಮಿತಿಯ ಮುಖ್ಯಸ್ಥ ಚಲಸಾನಿ ಶ್ರೀನಿವಾಸ್‌ ಆಗ್ರಹಿಸಿದ್ದಾರೆ.

‘ವಿಶೇಷ ಪ್ಯಾಕೇಜ್‌ ಹೆಸರಿನಲ್ಲಿ ಬಿಜೆಪಿ ಮತ್ತು ಟಿಡಿಪಿ ಪಕ್ಷಗಳು ರಾಜ್ಯದ ಜನರನ್ನು ವಂಚಿಸಿವೆ. ಹಾಗಾಗಿ ಈ ಬಂದ್‌ ಅನಿವಾರ್ಯವಾಗಿತ್ತು’ ಎಂದು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಭೂಮನ ಕರುಣಾಕರ ರೆಡ್ಡಿ ತಿಳಿಸಿದರು.

₹11.28 ಲಕ್ಷ ನಷ್ಟ
ಬೆಂಗಳೂರು:
ವಿಶೇಷ ಸ್ಥಾನಮಾನಕ್ಕೆ ಒತ್ತಾಯಿಸಿ ಆಂಧ್ರಪ್ರದೇಶದಲ್ಲಿ ಸೋಮವಾರ ಬಂದ್‌ ಆಚರಿಸಿದ್ದರಿಂದ, ರಾಜ್ಯದಿಂದ ಹೊರಡಬೇಕಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

‘ರಾಜ್ಯದಿಂದ ಆಂಧ್ರಪ್ರದೇಶಕ್ಕೆ ಹೋಗುತ್ತಿದ್ದ 91 ಬಸ್‌ಗಳ ಸಂಚಾರವನ್ನು ಭಾನುವಾರ ರಾತ್ರಿಯಿಂದಲೇ ಸ್ಥಗಿತಗೊಳಿಸಲಾಗಿತ್ತು. 34,490 ಕಿ.ಮೀ ಸಂಚರಿಸಬೇಕಿದ್ದ ಬಸ್‌ಗಳನ್ನು ಡಿಪೊದಲ್ಲಿ ನಿಲ್ಲಿಸಲಾಗಿತ್ತು. ಒಂದೇ ದಿನದಲ್ಲಿ ₹11.28 ಲಕ್ಷ ನಷ್ಟ ಉಂಟಾಗಿದೆ’ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

‘ಬಂದ್‌ ಪರಿಸ್ಥಿತಿ ಬಗ್ಗೆ ತಿಳಿದುಕೊಂಡು, ಸೋಮವಾರ ಮಧ್ಯಾಹ್ನ 3 ಗಂಟೆಯಿಂದ ಬಸ್‌ಗಳ ಸಂಚಾರ ಪುನಃ ಆರಂಭಿಸಲಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT