ನಾಮಪತ್ರ ಸಲ್ಲಿಕೆ ಇಂದಿನಿಂದ ಆರಂಭ

7

ನಾಮಪತ್ರ ಸಲ್ಲಿಕೆ ಇಂದಿನಿಂದ ಆರಂಭ

Published:
Updated:

ಬೆಂಗಳೂರು: ಮುಂದಿನ ಐದು ವರ್ಷ ರಾಜ್ಯವನ್ನು ಆಳುವವರ ಹಣೆ ಬರಹ ಬರೆಯುವ ವಿಧಾನಸಭಾ ಚುನಾವಣೆಯ ಅಧಿಕೃತ ಪ್ರಕ್ರಿಯೆಗೆ ಮಂಗಳವಾರ ರಾಜ್ಯದಾದ್ಯಂತ ಚಾಲನೆ ಸಿಗಲಿದೆ.

ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.

224 ಕ್ಷೇತ್ರಗಳಲ್ಲಿ ಐದನ್ನು ಬಿಟ್ಟು ಉಳಿದ ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿಗಳು ಯಾರೆಂಬುದು ಈಗಾಗಲೇ ಸ್ಪಷ್ಟವಾಗಿದೆ. ಬಿಜೆಪಿ ಇನ್ನು 70 ಕ್ಷೇತ್ರಗಳಲ್ಲಿನ ಹುರಿಯಾಳುಗಳನ್ನು ಮಾತ್ರ ಆಯ್ಕೆ ಮಾಡಲು ಬಾಕಿ ಇದೆ. ಜೆಡಿಎಸ್‌ ಇನ್ನೂ 98 ಕಡೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕಿದೆ. ಹಾಗಾಗಿ, ರಾಜ್ಯದ ಬಹುಪಾಲು ಕ್ಷೇತ್ರಗಳಲ್ಲಿನ ಯಾರು ಯಾರ ವಿರುದ್ಧ ಸೆಣಸಲಿದ್ದಾರೆ ಎಂಬುದು ಬಹುತೇಕ ನಿರ್ಧಾರವಾಗಿದೆ. ಚುನಾವಣಾ ಪ್ರಕ್ರಿಯೆಯ ಆರಂಭದಿಂದಲೇ ರಾಜಕೀಯ ಕಣ ಮತ್ತಷ್ಟು ರಂಗೇರಲಿದೆ.

ಅಭ್ಯರ್ಥಿಯು ಬೇರೆ ಕ್ಷೇತ್ರದ ಮತದಾರರಾಗಿದ್ದರೆ, ಆ ಕ್ಷೇತ್ರದ ಚುನಾವಣಾಧಿಕಾರಿಯಿಂದ ದೃಢೀಕರಿಸಿದ ಪತ್ರವನ್ನು ಸಲ್ಲಿಸುವುದು ಕಡ್ಡಾಯ.

ನಾಮಪತ್ರದ ಜತೆಗೆ ಎರಡು ಅಫಿಡವಿಟ್‌ಗಳನ್ನು ಸಲ್ಲಿಸಬೇಕು. ಅಭ್ಯರ್ಥಿ, ಅವರ ಪತ್ನಿ ಹಾಗೂ ಅವಲಂಬಿತರ ಸ್ಥಿರಾಸ್ತಿ, ಚರಾಸ್ತಿ, ಬ್ಯಾಂಕ್‌ಗಳಲ್ಲಿರುವ ಹಣ, ದೂರು ದಾಖಲಾಗಿರುವ ಕುರಿತ ಮಾಹಿತಿಯನ್ನು ಮೊದಲ ಅಫಿಡವಿಟ್‌ನಲ್ಲಿ ಘೋಷಿಸಬೇಕು.

ನಾಮಪತ್ರದ ಎಲ್ಲ ಕಾಲಂಗಳನ್ನು ಭರ್ತಿ ಮಾಡಬೇಕು. ಖಾಲಿ ಬಿಟ್ಟರೆ, ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಚುನಾವಣಾಧಿಕಾರಿ ಸಮ್ಮುಖದಲ್ಲಿ ಅಭ್ಯರ್ಥಿ ಪ್ರತಿಜ್ಞಾ ವಿಧಿ ಸ್ವೀಕರಿಸಿ, ಆ ಪತ್ರಕ್ಕೆ ಸಹಿ ಮಾಡಬೇಕು. ಇಲ್ಲದಿದ್ದರೆ ನಾಮಪತ್ರ ತಿರಸ್ಕರಿಸಲಾಗುತ್ತದೆ.

ಅಭ್ಯರ್ಥಿಯು ಸರ್ಕಾರಿ ಸೌಲಭ್ಯ ಪಡೆದಿದ್ದರೆ, ಸರ್ಕಾರಿ ವಸತಿಗೃಹ ಬಳಸಿಕೊಂಡು ಅದರ ಬಾಡಿಗೆ ಬಾಕಿ ಇರಿಸಿಕೊಂಡಿದ್ದರೆ, ವಿದ್ಯುತ್‌, ನೀರಿನ ಬಿಲ್‌ ಬಾಕಿ ಇದ್ದರೆ, ಈ ಕುರಿತ ವಿವರಗಳನ್ನು ಎರಡನೇ ಅಫಿಡವಿಟ್‌ನಲ್ಲಿ ಘೋಷಿಸಿಕೊಳ್ಳಬೇಕು.

ಫಾರಂ– ಎ (ಅಭ್ಯರ್ಥಿಗೆ ಫಾರಂ ಬಿ ನೀಡಲು ಪಕ್ಷದ ಮುಖಂಡರು ದೃಢೀಕರಿಸುವ ಪತ್ರ), ಫಾರಂ– ಬಿ (ಕ್ಷೇತ್ರದ ಅಭ್ಯರ್ಥಿಯನ್ನು ಪಕ್ಷವು ದೃಢೀಕರಿಸುವ ಪತ್ರ) ಸಲ್ಲಿಸಬೇಕು. ಇವುಗಳ ಮೂಲ ಪ್ರತಿಗಳನ್ನೇ ಸಲ್ಲಿಸಬೇಕು. ನಕಲು ಅಥವಾ ಫ್ಯಾಕ್ಸ್‌ ಪ್ರತಿಯಾದರೆ ಅವುಗಳನ್ನು ತಿರಸ್ಕರಿಸಲಾಗುತ್ತದೆ.

ನಿರ್ಬಂಧಗಳೇನು?

ಚುನಾವಣಾಧಿಕಾರಿ ಕಚೇರಿಗೆ ಅಭ್ಯರ್ಥಿ ಸೇರಿದಂತೆ ಐವರಿಗಿಂತ ಹೆಚ್ಚು ಮಂದಿ ಒಟ್ಟಿಗೆ ಭೇಟಿ ನೀಡುವಂತಿಲ್ಲ.

ಚುನಾವಣಾಧಿಕಾರಿ ಕಚೇರಿಯ 100 ಮೀಟರ್‌ ವ್ಯಾಪ್ತಿಯಲ್ಲಿ 3ಕ್ಕಿಂತ ಹೆಚ್ಚಿನ ವಾಹನಗಳು ಒಟ್ಟಿಗೆ ಬರುವಂತಿಲ್ಲ.

ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿದ್ದು, ಪ್ರತಿಯೊಂದು ಚಲನವಲನಗಳೂ ದಾಖಲಾಗುತ್ತದೆ.

ಠೇವಣಿ ಎಷ್ಟು?

ಸಾಮಾನ್ಯ ಅಭ್ಯರ್ಥಿಗೆ; ₹10 ಸಾವಿರ

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರಿಗೆ; ₹5 ಸಾವಿರ

ನಾಮಪತ್ರ  ಸ್ವೀಕರಿಸುವ ಸಮಯ

ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ

ಭಾನುವಾರ ಹಾಗೂ ಸಾರ್ವಜನಿಕ ರಜಾ ದಿನಗಳಂದು ಸ್ವೀಕರಿಸುವುದಿಲ್ಲ.

ಪ್ರತ್ಯೇಕ ಬ್ಯಾಂಕ್‌ ಖಾತೆ ಕಡ್ಡಾಯ

ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುವ ಮುನ್ನ ಹೊಸ ಬ್ಯಾಂಕ್‌ ಖಾತೆ ತೆರೆಯುವುದು ಕಡ್ಡಾಯ.

ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ₹ 28 ಲಕ್ಷ ವೆಚ್ಚದ ಮಿತಿ ನಿಗದಿಪಡಿಸಲಾಗಿದೆ. ಠೇವಣಿ ಇಡುವುದು ಸೇರಿದಂತೆ ಚುನಾವಣಾ ಖರ್ಚು, ವೆಚ್ಚಗಳನ್ನು ಈ ಖಾತೆ ಮೂಲಕವೇ ನಿರ್ವಹಣೆ ಮಾಡಬೇಕು. ಅನ್ಯ ಬ್ಯಾಂಕ್‌ ಖಾತೆಗಳಲ್ಲಿರುವ ಹಣವನ್ನು ಚುನಾವಣೆಗೆ ವೆಚ್ಚ ಮಾಡುವಂತಿಲ್ಲ.

ಪಕ್ಷವಾರು ಘೋಷಿತ ಹುರಿಯಾಳುಗಳ ಸಂಖ್ಯೆ

ಕಾಂಗ್ರೆಸ್‌; 218

ಬಿಜೆಪಿ; 154

ಜೆಡಿಎಸ್‌; 124

ಜೆಡಿಯು; 15

ಆರ್‌ಪಿಐ; 70

ಎಎಪಿ; 18

ಸ್ವರಾಜ್‌ ಇಂಡಿಯಾ; 11

ಎಂಇಪಿ–149

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry