ಸೋಮವಾರ, ಡಿಸೆಂಬರ್ 9, 2019
21 °C

ಗುಡುಗು–ಸಿಡಿಲು ಅಬ್ಬರ; ಧರೆಗುರುಳಿದ ಮರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಡುಗು–ಸಿಡಿಲು ಅಬ್ಬರ; ಧರೆಗುರುಳಿದ ಮರ

ಬೆಂಗಳೂರು: ನಗರದಲ್ಲಿ ಸೋಮವಾರ ಗುಡುಗು –ಸಿಡಿಲು ಸಹಿತ ಜೋರಾಗಿ ಮಳೆ ಸುರಿಯಿತು. ಅದೇ ವೇಳೆ ಬೀಸಿದ ಗಾಳಿಯಿಂದಾಗಿ ಆರು ಕಡೆಗಳಲ್ಲಿ ಮರಗಳು ನೆಲಕ್ಕುರುಳಿದವು.

ಕೆಲ ದಿನಗಳಿಂದ ನಗರದಲ್ಲಿ ಬಿಸಿಲಿನ ತಾಪ ಹೆಚ್ಚಿತ್ತು. ಇದರಿಂದ ಬೇಸತ್ತಿದ್ದ ಜನರಿಗೆ ಮಳೆಯು ತಂಪಿನ ಅನುಭವ ನೀಡಿತು. ಸೋಮವಾರ ಸಂಜೆಯಿಂದ ಮೋಡ ಕವಿದ ವಾತಾವರಣ ನಗರದಲ್ಲಿ ಕಂಡುಬಂದಿತ್ತು.

ಸಂಜೆ 6.50 ಗಂಟೆಯಿಂದ ಹಲವೆಡೆ ಗಾಳಿ ಬೀಸಲಾರಂಭಿಸಿತ್ತು. ಸಂಜೆ 7.30ಕ್ಕೆ ಮಳೆ ಸುರಿಯಲಾರಂಭಿಸಿತ್ತು. ಅರ್ಧ ಗಂಟೆ ಸುರಿದ ಮಳೆಯಿಂದಾಗಿ ಹಲವು ರಸ್ತೆಗಳಲ್ಲಿ ನೀರು ಹರಿಯಿತು. ಅದರಿಂದ ವಾಹನಗಳ ದಟ್ಟಣೆ ಉಂಟಾಯಿತು.

‘ಮಲ್ಲೇಶ್ವರ‌, ಕಮ್ಮನಹಳ್ಳಿ, ಬೆನ್ಸನ್‌ ಟೌನ್, ಗೊರಗುಂಟೆಪಾಳ್ಯ, ಜಾಲಹಳ್ಳಿ ಹಾಗೂ ನಂದಿನಿ ಲೇಔಟ್‌ನಲ್ಲಿ ತಲಾ ಒಂದು ಮರ ಬಿದ್ದ ಬಗ್ಗೆ ದೂರುಗಳು ಬಂದಿದ್ದವು. ಸ್ಥಳಕ್ಕೆ ತೆರಳಿದ್ದ ಸಿಬ್ಬಂದಿ, ಮರಗಳನ್ನು ತೆರವು ಮಾಡಿದ್ದಾರೆ’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸಹಾಯವಾಣಿ ಅಧಿಕಾರಿಯೊಬ್ಬರು ತಿಳಿಸಿದರು.

ಮೆಜೆಸ್ಟಿಕ್, ಶ್ರೀರಾಮಪುರ, ಮಲ್ಲೇಶ್ವರ, ರಾಜಾಜಿನಗರ, ಯಶವಂತಪುರ, ಪೀಣ್ಯ, ಗೊರಗುಂಟೆಪಾಳ್ಯ, ಸಂಜಯ ನಗರ, ವಿಜಯನಗರ, ಮೈಸೂರು ರಸ್ತೆ ಹಾಗೂ ತುಮಕೂರು ರಸ್ತೆಯ ಪ್ರದೇಶಗಳಲ್ಲಿ ಮಳೆಯಾಗಿದೆ. ಇದರಿಂದ ಕಾಲುವೆಗಳು ತುಂಬಿ ಹರಿದವು. ಹೆಚ್ಚಾದ ನೀರು ರಸ್ತೆ ಮೇಲೆಯೇ ಹರಿಯಿತು.

ಸಂಜೆ 4 ಗಂಟೆ ಸುಮಾರಿಗೆ ಪೀಣ್ಯ, ಪೀಣ್ಯ ಕೈಗಾರಿಕಾ ಪ್ರದೇಶ, ಜಾಲಹಳ್ಳಿ, ದಾಸರಹಳ್ಳಿ, ನಾಗಸಂದ್ರ ಸುತ್ತಮುತ್ತ ಬಿಸಿಲು ಮಳೆಯೂ ಸುರಿಯಿತು.

ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ವಾಹನಗಳು ನಿಧಾನವಾಗಿ ಚಲಿಸಿದ್ದರಿಂದ ದಟ್ಟಣೆಯೂ ಕಂಡುಬಂತು.

‘ನಗರದಲ್ಲಿ ಸರಾಸರಿ 3.24 ಮಿ.ಮೀ ಮಳೆಯಾಗಿದೆ’ ಎಂದು ರಾಜ್ಯ ಪ್ರಕೃತಿ ವಿಕೋಪ ಮತ್ತು ಉಸ್ತುವಾರಿ ಕೇಂದ್ರ ತಿಳಿಸಿದೆ.

ವಿದ್ಯುತ್‌ ವ್ಯತ್ಯಯ: ಮಳೆಯ ವೇಳೆ ಗಾಳಿ ಜೋರಾಗಿದ್ದರಿಂದ ರಾತ್ರಿ 7.30 ಗಂಟೆಯಿಂದ ಜಯನಗರ, ವೈಟ್‌ಫೀಲ್ಡ್‌, ಸಂಜಯನಗರ, ಬನಶಂಕರಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜು ಕಡಿತಗೊಳಿಸಲಾಗಿತ್ತು.

ಪ್ರತಿಕ್ರಿಯಿಸಿ (+)