ಗುರುವಾರ , ಡಿಸೆಂಬರ್ 12, 2019
20 °C

ಅಕ್ಷಯ ತೃತೀಯ: ಮಾರಾಟ ಹೆಚ್ಚಳ ನಿರೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

ಅಕ್ಷಯ ತೃತೀಯ: ಮಾರಾಟ ಹೆಚ್ಚಳ ನಿರೀಕ್ಷೆ

ಮುಂಬೈ: ಅಕ್ಷಯ ತೃತೀಯ ಸಂದರ್ಭದಲ್ಲಿ ಚಿನ್ನಾಭರಣ ಮಾರಾಟವು ಶೇ 15 ರಿಂದ ಶೇ 20 ರಷ್ಟು ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಚಿನ್ನಾಭರಣ ವರ್ತಕರು ಹೇಳಿದ್ದಾರೆ.

‘ಮಾರುಕಟ್ಟೆ ಸಕಾರಾತ್ಮಕ ಮಟ್ಟದಲ್ಲಿ ಇರುವುದರಿಂದ, ಬೆಲೆಯು ಸ್ಥಿರವಾಗುತ್ತಿದೆ. ಹೀಗಾಗಿ ಮದುವೆ ಸಮಾರಂಭಗಳಲ್ಲಿ ಚಿನ್ನಾಭರಣದ ಮಾರಾಟದಲ್ಲಿ ಏರಿಕೆ ಕಂಡುಬರುವ ಅಂದಾಜು ಮಾಡಲಾಗಿದೆ’ ಎಂದು ಅಖಿಲ ಭಾರತ ವಜ್ರ ಮತ್ತು ಚಿನ್ನಾಭರಣದ ದೇಶಿ ಮಂಡಳಿ (ಜಿಜೆಸಿ) ಅಧ್ಯಕ್ಷ ನಿತಿನ್‌ ಖಂಡೇಲ್‌ವಾಲ್‌ ತಿಳಿಸಿದ್ದಾರೆ.

‘ಕಳೆದ ವರ್ಷ ಒಟ್ಟಾರೆಯಾಗಿ ಮುಂಗಾರು ಉತ್ತಮವಾಗಿತ್ತಾದರೂ ಬೇಡಿಕೆ ತಗ್ಗಿತ್ತು. ಹೀಗಾಗಿ ಹೆಚ್ಚಿನ ಖರೀದಿ ವಹಿವಾಟು ನಡೆದಿರಲಿಲ್ಲ. ಈ ವರ್ಷ ನೀರವ್ ಮೋದಿ ಬ್ಯಾಂಕ್‌ ವಂಚನೆ ಪ್ರಕರಣದಿಂದ ಎದುರಾಗಿದ್ದ ಸಮಸ್ಯೆಯಿಂದ ಉದ್ಯಮ ಚೇತರಿಕೆ ಕಂಡುಕೊಳ್ಳುತ್ತಿದೆ. ಹದಿಹರೆಯದವರು ಚಿನ್ನಾಭರಣ ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ. ಇಂತಹ ವಹಿವಾಟು ಶೇ 5 ರಿಂದ ಶೇ 10 ರಷ್ಟು ಏರಿಕೆಯಾಗಲಿದೆ’ ಎಂದು ಭಾರತೀಯ ಚಿನ್ನಾಭರಣ ವರ್ತಕರ ಸಂಘದ (ಐಬಿಜೆಎ) ಉಪಾಧ್ಯಕ್ಷ ಸೌರಭ್‌ ಗಾಡ್ಗಿಲ್‌ ಹೇಳಿದ್ದಾರೆ.

‘ಅಕ್ಷಯ ತೃತೀಯದ ಸಂದರ್ಭ ದಲ್ಲಿನ ಚಿನ್ನದ ಖರೀದಿಯು ಗ್ರಾಹಕರ ಪಾಲಿಗೆ ಶಾಶ್ವತವಾಗಿ ಸಂಪತ್ತು ವೃದ್ಧಿಸಲಿದೆ’ ಎಂದು ಕಲ್ಯಾಣ್‌ ಜುವೆಲ್ಲರ್ಸ್‌ನ ಅಧ್ಯಕ್ಷ ಟಿ.ಎಸ್‌. ಕಲ್ಯಾಣರಾಮನ್‌ ಹೇಳಿದ್ದಾರೆ.

‘ಗ್ರಾಹಕರು ಅಸಂಘಟಿತ ವಲಯ ದಿಂದ ಸಂಘಟಿತ ವಲಯದತ್ತ ಆಕರ್ಷಿತರಾಗುತ್ತಿರುವುದರಿಂದ ಮಾರಾಟಕ್ಕೆ ಇನ್ನಷ್ಟು ಉತ್ತೇಜನ ಸಿಗಲಿದೆ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

‘ಈ ವಾರ ಬೆಲೆ ಏರಿಕೆ ಆಗಿರುವುದನ್ನು ಗಮನಿಸಿದರೆ ಚಿನ್ನವು ಗ್ರಾಹಕರ ವಿಶ್ವಾಸವನ್ನು ಮತ್ತೆ ಗಳಿಸಿಕೊಳ್ಳುತ್ತಿದೆ ಎನ್ನುವ ಭಾವನೆ ಮೂಡುತ್ತಿದೆ’ ಎಂದು ಡಬ್ಲ್ಯುಎಚ್‌ಪಿ ಜುವೆಲರ್ಸ್‌ನ ನಿರ್ದೇಶಕ ಆದಿತ್ಯಾ ಪೇಠೆ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)