ನ್ಯಾಷನಲ್‌ ಮಾರುಕಟ್ಟೆ ಮೇಲೆ ದಾಳಿ

7

ನ್ಯಾಷನಲ್‌ ಮಾರುಕಟ್ಟೆ ಮೇಲೆ ದಾಳಿ

Published:
Updated:

ಬೆಂಗಳೂರು: ಗಾಂಧಿನಗರದಲ್ಲಿರುವ ನ್ಯಾಷನಲ್‌ ಮಾರುಕಟ್ಟೆ ಹಾಗೂ ಬ್ಯಾಂಕಾಕ್ ಬಜಾರ್‌ಗಳ ಮೇಲೆ ಉಪ್ಪಾರಪೇಟೆ ಪೊಲೀಸರು ಸೋಮವಾರ ದಿಢೀರ್ ದಾಳಿ ಮಾಡಿದರು.

ಪಶ್ಚಿಮ ಉಪವಿಭಾಗ ವ್ಯಾಪ್ತಿಯಲ್ಲಿ ಮೊಬೈಲ್‌ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಕದ್ದ ಮೊಬೈಲ್‌ಗಳನ್ನು ಈ ಎರಡೂ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಅದೇ ಕಾರಣಕ್ಕೆ 25 ಪೊಲೀಸರು, ಮಾರುಕಟ್ಟೆ ಮೇಲೆ ದಾಳಿ ಮಾಡಿ ಮಳಿಗೆಗಳಲ್ಲಿ ಪರಿಶೀಲನೆ ನಡೆಸಿದರು.

ದಾಖಲೆ ಇರದ 50ಕ್ಕೂ ಹೆಚ್ಚು ಬೆಲೆಬಾಳುವ ಮೊಬೈಲ್‌ಗಳು ಮಾರುಕಟ್ಟೆಯಲ್ಲಿ ಸಿಕ್ಕಿವೆ. ಅವುಗಳನ್ನು ಜಪ್ತಿ ಮಾಡಿರುವ ಪೊಲೀಸರು, ಪರಿಶೀಲನೆ ನಡೆಸುತ್ತಿದ್ದಾರೆ.

‘ಮೆಜೆಸ್ಟಿಕ್ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಮೊಬೈಲ್‌ ಕಳವು ಮಾಡಲಾಗುತ್ತಿದೆ. ಆರೋಪಿಗಳು, ನ್ಯಾಷನಲ್‌ ಮಾರುಕಟ್ಟೆ, ಬ್ಯಾಂಕಾಕ್ ಬಜಾರ್‌ನ  ವ್ಯಾಪಾರಿಗಳಿಗೆ ಮೊಬೈಲ್‌ ಮಾರಾಟ ಮಾಡುತ್ತಿದ್ದಾರೆ. ಅಂಥ ವ್ಯಾಪಾರಿಗಳು, ನಕಲಿ ಬಿಲ್ ಸೃಷ್ಟಿಸಿ ಬೇರೆಯವರಿಗೆ ಮೊಬೈಲ್ ಮಾರುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಮೊಬೈಲ್ ಕಳುವಾದ ಬಗ್ಗೆ ಸಾರ್ವಜನಿಕರು, ಬಿಲ್ ಸಮೇತ ದೂರು ಸಲ್ಲಿಸಿದ್ದರು. ಅದರನ್ವಯ ಎಫ್‌ಐಆರ್‌ ದಾಖಲಿಸಿಕೊಂಡು, ಈ ದಾಳಿ ನಡೆಸಿದೆವು. ಅಲ್ಲಿಯ ಕೆಲ ಮೊಬೈಲ್ ಪರಿಶೀಲಿಸಿದಾಗ, ಅವು ಕಳವು ಮಾಡಿದ್ದು ಎಂಬುದು ಗೊತ್ತಾಗಿದೆ. ಈ ಸಂಬಂಧ ಕೆಲ ವ್ಯಾಪಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ’ ಎಂದರು.

ವ್ಯಾಪಾರಿಗಳಿಗೆ ಪೊಲೀಸರ ಸಹಕಾರ

‘ಕೆಲ ಪೊಲೀಸರ ಸಹಕಾರದಿಂದಲೇ ಈ ಎರಡೂ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ರಾಜಾರೋಷವಾಗಿ ಮೊಬೈಲ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ’ ಎಂದು ಸ್ಥಳೀಯರು ದೂರಿದರು.

‘ಪ್ರತಿಯೊಬ್ಬ ವ್ಯಾಪಾರಿಯಿಂದಲೂ ಉಪ್ಪಾರಪೇಟೆ ಠಾಣೆಯ ಕೆಲ ಪೊಲೀಸರು ಪ್ರತಿ ತಿಂಗಳು ಹಣ ವಸೂಲಿ ಮಾಡುತ್ತಿದ್ದಾರೆ. ಕದ್ದ ಮೊಬೈಲ್‌ ಎಂಬುದು ಗೊತ್ತಿದ್ದರೂ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಈಗ ದಾಳಿ ಹೆಸರಿನಲ್ಲಿ ನಾಟಕ ಮಾಡುತ್ತಿದ್ದಾರೆ. ಇಂಥ ಮಾರುಕಟ್ಟೆಯ ಅಕ್ರಮಗಳಿಗೆ ಶಾಶ್ವತವಾಗಿ ಕಡಿವಾಣ ಹಾಕಬೇಕಿದೆ’ ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry