ಮಂಗಳವಾರ, ಡಿಸೆಂಬರ್ 10, 2019
26 °C
ಹರ್ಬಲ್ ಸೀಡ್ಸ್‌ ವ್ಯಾಪಾರದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ವ್ಯಾಪಿಸಿರುವ ಜಾಲ

ಸಿನಿಮಾ ನಿರ್ದೇಶಕನ ಪುತ್ರ ಸೇರಿ ಇಬ್ಬರ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿನಿಮಾ ನಿರ್ದೇಶಕನ ಪುತ್ರ ಸೇರಿ ಇಬ್ಬರ ಸೆರೆ

ಬೆಂಗಳೂರು: ಹರ್ಬಲ್ ಸೀಡ್ಸ್‌ ವ್ಯಾಪಾರದ ಹೆಸರಿನಲ್ಲಿ ಸಾರ್ವಜನಿಕರಿಂದಕೋಟ್ಯಂತರ ರೂಪಾಯಿ ಪಡೆದುಕೊಂಡು ವಂಚಿಸಿದ್ದ ಆರೋಪದಡಿ ಸಿನಿಮಾ ನಿರ್ದೇಶಕರೊಬ್ಬರ ಪುತ್ರ ಸೇರಿದಂತೆ ಇಬ್ಬರನ್ನು ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಮುಂಬೈನ ಆಕಾಶ್ ಗೋಣಿ (39) ಹಾಗೂ ಸುರೇಂದ್ರ ರಂಗದ್ ಪೂರ್ಣ (42) ಬಂಧಿತರು. ಅವರಿಂದ ಒಂದು ಕರೋಲಾ ಕಾರು, 4 ಮೊಬೈಲ್, 6 ಎಟಿಎಂ ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ.

ವಂಚನೆ ಬಗ್ಗೆ ಸೈಬರ್‌ ಕ್ರೈಂ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ತನಿಖೆ ಕೈಗೊಂಡಿದ್ದ ಪೊಲೀಸರು, ಒಡಿಶಾದ ಚೇತನ್‌ ಶರ್ಮಾ, ಉತ್ತರ ಪ್ರದೇಶದ ಶಮೀಮ್ ಅಹಮದ್, ನೈಜೀರಿಯಾದ ಫಿಲ್ಲಿಪ್ ಒಪೆಯೆಮಿ ಅಫುಲೊಬಿ ಹಾಗೂ ಕಾಂಗೊದ ತುಬುಡಿ ಮುಕಾಡಿ ಜಿನ್ ಎಂಬುವರನ್ನು ಕಳೆದ ತಿಂಗಳಷ್ಟೇ ಬಂಧಿಸಿದ್ದರು. ಅವರು ನೀಡಿದ್ದ ಮಾಹಿತಿ ಆಧರಿಸಿ ಇದೀಗ ಆಕಾಶ್ ಹಾಗೂ ಸುರೇಂದ್ರನನ್ನು ಸೆರೆ ಹಿಡಿಯಲಾಗಿದೆ.

‘ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಹಾಗೂ ನಕಲಿ ಇ–ಮೇಲ್‌ ತೆರೆಯುತ್ತಿದ್ದ ಆರೋಪಿಗಳು, ಸಾಮೂಹಿಕವಾಗಿ ಸಾರ್ವಜನಿಕರಿಗೆ ಸಂದೇಶಗಳನ್ನು ಕಳುಹಿಸುತ್ತಿದ್ದರು. ಆ ಸಂದೇಶಗಳಿಗೆ ಪ್ರತಿಕ್ರಿಯಿಸುತ್ತಿದ್ದ ಸಾರ್ವಜನಿಕರ ಜತೆ ಸ್ನೇಹ ಬೆಳೆಸುತ್ತಿದ್ದರು. ನಂತರ, ಹರ್ಬಲ್ ಸೀಡ್ಸ್‌ ವ್ಯಾಪಾರ ಪ್ರಸ್ತಾಪಿಸುತ್ತಿದ್ದ ಆರೋಪಿಗಳು, ತಾವು ‘ಅಟ್ಲೊವೆಟ್ ವೆಟನರಿ ಹೆಲ್ತ್‌ಕೇರ್’ ಹಾಗೂ ‘ಅನಿಮಲ್ ವ್ಯಾಕ್ಸಿನ್ ಪ್ರೊಡಕ್ಷನ್’ ಕಂಪನಿ ವ್ಯವಸ್ಥಾಪಕರೆಂದು ಹೇಳುತ್ತಿದ್ದರು. ‘ಅಮೆರಿಕದಲ್ಲಿ ಸೀಡ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಭಾರತದಲ್ಲೂ ವ್ಯಾಪಾರ ಮಾಡಲು ತೀರ್ಮಾನಿಸಿದ್ದೇವೆ. ನೀವು ಹಣ ಹೂಡಿಡಿದರೆ ಕೋಟ್ಯಂತರ ರೂಪಾಯಿ ದುಡಿಯಬಹುದು’ ಎನ್ನುತ್ತಿದ್ದರೆಂದು ಪೊಲೀಸರು ತಿಳಿಸಿದರು.

ಅದನ್ನು ನಂಬಿದ್ದ ಸಾರ್ವಜನಿಕರು, ಆರೋಪಿಗಳ ಬ್ಯಾಂಕ್‌ ಖಾತೆಗಳಿಗೆ ಹಣ ಜಮಾ ಮಾಡುತ್ತಿದ್ದರು. ನಂತರ, ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡು ಆರೋಪಿಗಳು ನಾಪತ್ತೆಯಾಗುತ್ತಿದ್ದರು ಎಂದರು.

ನಕಲಿ ವೈದ್ಯರನ್ನು ಕಳುಹಿಸುತ್ತಿದ್ದರು: ಅಮೆರಿಕ ಪ್ರಜೆಗಳ ಹೆಸರುಗಳಿಂದ ಆರೋಪಿಗಳು ಸಾರ್ವಜನಿಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ‘ಸೀಡ್ಸ್‌ ವ್ಯಾಪಾರದಲ್ಲಿ ಹಣ ಗಳಿಸಿದ್ದೇವೆ. ನಮ್ಮ ಸ್ನೇಹಿತರಾದ ನೀವೂ ಸೀಡ್ಸ್‌ ಹಣ ಗಳಿಸಲಿ ಎಂಬುದು ನಮ್ಮ ಆಸೆ’ ಎಂದು ಆರೋಪಿಗಳು ಹೇಳುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

‘ಹರ್ಬಲ್ ಸೀಡ್ಸ್‌ಗಳ ಸ್ಯಾಂಪಲ್‌ ಕಳುಹಿಸುತ್ತೇವೆ’ ಎನ್ನುತ್ತಿದ್ದ ಆರೋಪಿಗಳು, ನಕಲಿ ವೈದ್ಯರೊಬ್ಬರನ್ನು ಸಾರ್ವಜನಿಕರ ಬಳಿ ಕಳುಹಿಸುತ್ತಿದ್ದರು. 'ಸೀಡ್ಸ್‌ ವ್ಯಾಪಾರದಿಂದ ಕೋಟ್ಯಂತರ ರೂಪಾಯಿ ಗಳಿಸಬಹುದು' ಎಂದು ನಕಲಿ ವೈದ್ಯ ಸಹ ನಂಬಿಸುತ್ತಿದ್ದ. ಅದಾದ ನಂತರವೇ ಸಾರ್ವಜನಿಕರು, ಕನಿಷ್ಠ ₹1 ಲಕ್ಷ ಹಾಗೂ ಗರಿಷ್ಠ ₹1 ಕೋಟಿವರೆಗೂ ಹಣ ನೀಡಿದ್ದರು ಎಂದು ಹೇಳಿದರು.

ನಕಲಿ ಸಿಮ್‌ ಕಾರ್ಡ್‌ ಬಳಕೆ: ‘ಆರೋಪಿಗಳು ಸಂಘಟಿತ ಗುಂಪು ಕಟ್ಟಿಕೊಂಡು ಕೃತ್ಯ ಎಸಗುತ್ತಿದ್ದರು. ಅದಕ್ಕಾಗಿ ನಕಲಿ ಸಿಮ್‌ ಕಾರ್ಡ್‌ ಹಾಗೂ ನಕಲಿ ದಾಖಲೆಗಳನ್ನು ಬಳಸಿ ಸಾರ್ವಜನಿಕರನ್ನು ಸಂಪರ್ಕಿಸುತ್ತಿದ್ದರು. ಮೊಬೈಲ್ ನಂಬರ್ ಆಧರಿಸಿತನಿಖೆ ಕೈಗೊಂಡರೂ ಆರೋಪಿಗಳ ಸುಳಿವು ಸಿಗುತ್ತಿರಲಿಲ್ಲ’ ಎಂದು ಪೊಲೀಸರು ತಿಳಿಸಿದರು.

ವಂಚಿಸಿ ಸಂಗ್ರಹಿಸಿದ್ದ ಹಣವನ್ನು ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಬ್ಯಾಂಕ್‌ ಖಾತೆಗೆ ತ್ವರಿತವಾಗಿ ಬದಲಾಯಿಸುತ್ತಿದ್ದರು. ಈ ಜಾಲದ ಇನ್ನು ಹಲವು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದರು.

ದಾಖಲಾಗಿದ್ದ ಪ್ರಕರಣಗಳು

* 2017ರ ಸೆಪ್ಟೆಂಬರ್ 11ರಂದು ನಗರದ ನಿವಾಸಿಯೊಬ್ಬರನ್ನು ಸಂಪರ್ಕಿಸಿದ್ದ ಆರೋಪಿಗಳು, ₹30 ಲಕ್ಷ ಪಡೆದು ವಂಚಿಸಿದ್ದರು

* 2018ರ ಜ. 3ರಂದು ಅಮೆರಿಕದ ಪ್ರಜೆ ಎಂದು ಪರಿಚಯಿಸಿಕೊಂಡಿದ್ದ ಆರೋಪಿಗಳು, ಸ್ಥಳೀಯ ನಿವಾಸಿಯೊಬ್ಬರಿಂದ ₹1.49 ಲಕ್ಷ ಪಡೆದಿದ್ದರು

* 2018ರ ಫೆ. 9ರಂದು ‘ಜೀವನ್‌ ಸಾತಿ ಡಾಟ್‌ ಕಾಮ್‌’ ಜಾಲತಾಣದ ಮೂಲಕ ನಿವಾಸಿಯೊಬ್ಬರನ್ನು ಸಂಪರ್ಕಿಸಿದ್ದ ಆರೋಪಿಗಳು, ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದರು

ಬಂಧಿತ ಬಿ.ಎಸ್ಸಿ ಪದವೀಧರ

‘ಬಂಧಿತ ಆರೋಪಿ ಸುರೇಂದ್ರ ಬಿ.ಎಸ್ಸಿ ಪದವೀಧರ. ಆಕಾಶ್‌ 9ನೇ ತರಗತಿವರೆಗೆ ಓದಿದ್ದಾನೆ. ಇವರಿಬ್ಬರು ನೈಜೀರಿಯಾ ಪ್ರಜೆಗಳ ಜತೆ ಸೇರಿಕೊಂಡು ತಂಡ ಕಟ್ಟಿಕೊಂಡಿದ್ದರು.

ಮುಂಬೈ ಹಾಗೂ ಬೆಂಗಳೂರಿನಲ್ಲಿದ್ದುಕೊಂಡು ಕೃತ್ಯ ಎಸಗುತ್ತಿದ್ದರು. 15 ದಿನಕ್ಕೊಮ್ಮೆ ಸಿಮ್‌ ಕಾರ್ಡ್‌ ಹಾಗೂ ವಾಸ್ತವ್ಯ ಸಹ ಬದಲಾಯಿಸುತ್ತಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)