ಮೆಹುಲ್‌ ಚೋಕ್ಸಿ ವಕೀಲರಿಗೆ ಟಿಕೆಟ್–ಎಐಸಿಸಿ ವಕ್ತಾರ ಟೀಕೆ

7
ಕೊಡಗಿನ ಕಾಂಗ್ರೆಸ್‌ನಲ್ಲಿ ಭಿನ್ನಮತದ ಕಾವು

ಮೆಹುಲ್‌ ಚೋಕ್ಸಿ ವಕೀಲರಿಗೆ ಟಿಕೆಟ್–ಎಐಸಿಸಿ ವಕ್ತಾರ ಟೀಕೆ

Published:
Updated:

ಬೆಂಗಳೂರು: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ವಂಚನೆ ಹಗರಣದ ಆರೋಪಿ ಮೆಹುಲ್‌ ಚೋಕ್ಸಿ ಪರ ವಕಾಲತ್ತು ವಹಿಸಿದ್ದ ವಕೀಲ ಎಚ್‌.ಎಸ್‌.ಚಂದ್ರಮೌಳಿ ಅವರಿಗೆ ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ನೀಡಿರುವುದಕ್ಕೆ ಟೀಕೆ ವ್ಯಕ್ತವಾಗಿದೆ.

ಕಾಂಗ್ರೆಸ್‌ ಸರ್ಕಾರವು ಈ ಹಗರಣ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ, ‘ದೇಶದ ಚೌಕಿದಾರ ಈಗ ಎಲ್ಲಿದ್ದಾರೆ’ ಎಂದು ಪ್ರಶ್ನಿಸಿದ್ದರು. ಈಗ ಚೋಕ್ಸಿ ವಕೀಲರಿಗೆ ಟಿಕೆಟ್‌ ನೀಡಿದ ಪಕ್ಷದ ನಿಲುವನ್ನು ಸ್ವತಃ ಎಐಸಿಸಿ ವಕ್ತಾರ ಬ್ರಿಜೇಶ್‌ ಕಾಳಪ್ಪ ಅವರೇ ಪ್ರಶ್ನಿಸಿದ್ದಾರೆ.

ಚೋಕ್ಸಿ ಅಧ್ಯಕ್ಷರಾಗಿರುವ ಮುಂಬೈನ ಗೀತಾಂಜಲಿ ಜೆಮ್ಸ್ ಲಿಮಿಟೆಡ್‌ ಕಂಪನಿ ವಿರುದ್ಧ ಜೆ.ಪಿ. ನಗರ ನಿವಾಸಿ ಎಸ್‌.ವಿ.ಹರಿಪ್ರಸಾದ್‌ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಚಂದ್ರಮೌಳಿ, ಕಂಪನಿ ಪರ ವಾದಿಸಿದ್ದರು. ಈ ದೂರಿನ ತನಿಖೆ ನಡೆಸಿದ್ದ ಪೊಲೀಸರು ನಗರದ 4ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯಕ್ಕೆ 2015ರ ಮಾರ್ಚ್‌ನಲ್ಲಿ ಬಿ.ರಿಪೋರ್ಟ್‌ ಸಲ್ಲಿಸಿದ್ದರು. ‘ಇದೊಂದು ಸಿವಿಲ್‌ ಸ್ವರೂಪದ ಪ್ರಕರಣ. ಇದರಲ್ಲಿ ವಂಚನೆಯ ಆರೋಪ ಸಾಬೀತು ಮಾಡುವ ಲಕ್ಷಣಗಳಿಲ್ಲ’ ಎಂದು ತಿಳಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಬ್ರಿಜೇಶ್‌, ‘ಈ ಹುಚ್ಚು ನಿರ್ಧಾರಗಳ ಹಿಂದಿನ ತರ್ಕ ಏನು ಎಂದು ತಿಳಿಯುವ ಪ್ರಯತ್ನ ಮಾಡುತ್ತಿದ್ದೇನೆ. ಚೋಕ್ಸಿ ಜೊತೆಗೆ ಚಂದ್ರಮೌಳಿ ನಂಟು ಹೊಂದಿರುವುದರಿಂದ ಖಂಡಿತಾ ಪಕ್ಷಕ್ಕೆ ಹಾನಿ ಉಂಟಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಬ್ರಿಜೇಶ್‌ ತಮ್ಮ ಫೇಸ್‌ಬುಕ್‌ ಪುಟದಲ್ಲಿ, ‘ನಾನು 2009 ಹಾಗೂ 2014ರಲ್ಲಿ ಲೋಕಸಭಾ ಟಿಕೆಟ್‌ ಹಾಗೂ 2014, 2016 ಮತ್ತು 2018ರಲ್ಲಿ ರಾಜ್ಯಸಭಾ ಟಿಕೆಟ್‌ ವಂಚಿತನಾಗಿದ್ದೆ. ಈ ಬಾರಿ ವಿಧಾನಸಭಾ ಟಿಕೆಟ್‌ ಕೂಡಾ ಕೈತಪ್ಪಿದೆ. ಈ ಅಪಮಾನವನ್ನು ನಾನು ಸಹಿಸಿಕೊಳ್ಳುತ್ತೇನೆ. 2016ರಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿ, ಅದೇ ವರ್ಷ ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ವ್ಯಕ್ತಿ ಈ ಬಾರಿ ಮತ್ತೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ. ಇಂತಹ ವ್ಯಕ್ತಿಗೆ ಇಷ್ಟೊಂದು ಅವಕಾಶಗಳನ್ನು ಪಕ್ಷವು ನೀಡುವುದಾದರೆ, ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ವಿಧಾನ ಪರಿಷತ್‌ ಟಿಕೆಟ್‌ ಕೇಳಿದ್ದ ಜಯಪ್ರಕಾಶ್‌ ಹೆಗ್ಡೆ ಅವರಂತಹ ಮೇಧಾವಿಯನ್ನು ಬಿಟ್ಟುಕೊಟ್ಟಿದ್ದೇಕೆ ಎಂಬುದು ನನ್ನ ಪ್ರಶ್ನೆ’ ಎಂದು ಬರೆದುಕೊಂಡಿದ್ದಾರೆ. ‘ಮುಂದಿನ ಬಾರಿ ನಾನು ಗ್ರಾಮ ಪಂಚಾಯಿತಿ ಟಿಕೆಟ್‌ಗೆ ಪ್ರಯತ್ನಿಸುತ್ತೇನೆ’ ಎಂದೂ ವ್ಯಂಗ್ಯವಾಡಿದ್ದಾರೆ.

‘ಚೋಕ್ಸಿ ಅವರ ಕಂಪನಿ ವಿರುದ್ಧ ಸಿವಿಲ್‌ ಪ್ರಕರಣದ ದಾಖಲಿಸುವ ಬದಲು ಕ್ರಿಮಿನಲ್‌ ದಾವೆ ದಾಖಲಿಸಿದ್ದ ಪ್ರಕರಣದಲ್ಲಿ ನಾನು ವಕಾಲತ್ತು ನಡೆಸಿದ್ದು ನಿಜ. ಆಗ ನಾನು ರಾಜಕೀಯದಲ್ಲಿ ಇರಲಿಲ್ಲ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣದಲ್ಲಿ ಚೋಕ್ಸಿ ಹೆಸರು ಪ್ರಸ್ತಾಪವಾದ ಬಳಿಕ ಆ ಸಂಸ್ಥೆಯಿಂದ ಅಂತರ ಕಾಯ್ದುಕೊಂಡಿದ್ದೇನೆ’ ಎಂದು ಚಂದ್ರಮೌಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಟಿಕೆಟ್‌ ವಂಚಿತರಿಂದ ಬಂಡಾಯ ಮಾಮೂಲಿ. ಅಸಮಾಧಾನಗೊಂಡಿರುವವರ ಮನವೊಲಿಸುವ ಕೆಲಸವನ್ನು ಪಕ್ಷದ ವರಿಷ್ಠರು ಮಾಡಲಿದ್ದಾರೆ. ನಾನು ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ’ ಎಂದರು.

ನಾಪಂಡ ಮುತ್ತಪ್ಪ ಪಕ್ಷೇತರರಾಗಿ ಕಣಕ್ಕೆ?

ಮಡಿಕೇರಿಯ ಟಿಕೆಟ್ ಆಕಾಂಕ್ಷಿಯಾಗಿದ್ದ ನಾಪಂಡ ಮುತ್ತಪ್ಪ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

‘ಕ್ಷೇತ್ರದಲ್ಲಿ ಪಕ್ಷವನ್ನು ಕಟ್ಟಿಬೆಳೆಸಲು ನಾಲ್ಕು ವರ್ಷಗಳಿಂದ ಶ್ರಮಿಸಿದ್ದೇನೆ. ಮನೆ ಮನೆಗೆ ಕಾಂಗ್ರೆಸ್‌ ಅಭಿಯಾನದ ಮೂಲಕ 36 ಸಾವಿರ ಮನೆಗಳಿಗೆ ಖುದ್ದಾಗಿ ಬೇಟಿ ನೀಡಿದ್ದೇನೆ. ಆದರೂ ವರಿಷ್ಠರು ನನ್ನ ಪರಿಶ್ರಮವನ್ನು ಗುರುತಿಸದಿರುವುದು ಬೇಸರ ತಂದಿದೆ. ಇದೇ 20ರಂದು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಟಿಕೆಟ್‌ಗಾಗಿ ಕೋಟಿ–ವಿಡಿಯೊ ಬಿಡುಗಡೆ?

‘ಕೊಡಗಿನ ಉಸ್ತುವಾರಿ ಸಚಿವರು ತಾವೇ ತೋಡಿದ ಹಳ್ಳಕ್ಕೆ ತಾವೇ ಬಿದ್ದಿದ್ದಾರೆ. ಟಿಕೆಟ್‌ಗಾಗಿ ಕೋಟಿ ಕೋಟಿ ಕೇಳಿದ ಗ್ರೇಟ್ ನಾಯಕರ ಜಾತಕ ವಿಡಿಯೊ ಮತ್ತು ಆಡಿಯೊ ಸದ್ಯದಲ್ಲೇ ಬಿಡುಗಡೆಯಾಗಲಿದೆ’ ಎಂದು ನಾಪಂಡ ಮುತ್ತಪ್ಪ ಅವರ ಸಹೋದರ ನಾಪಂಡ ಮುದ್ದಪ್ಪ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.

‘ಮಾನ್ಯ ಚಂದ್ರಮೌಳಿಯವರೇ, ಠೇವಣಿ ಉಳಿಯದು ಅಂತ ಗೊತ್ತಿದ್ದರೂ ಚುನಾವಣೆಗೆ ನಿಲ್ಲುವ ತೆವಲೇಕೆ? ಕೊಡಗು ಕಾಂಗ್ರೆಸನ್ನು ಬಲಿ ಕೊಡುವುದರ ಹಿಂದಿನ ಹುನ್ನಾರವೇನು? ಕಮಲ ಕಾಂಗ್ರೆಸ್ಸಿಗರ ಕೈ ಮೇಲಾಗಿದೆ. ಕೆ.ಜೆ.ಜಾರ್ಜ್ ಅವರು ಕೊಡಗಿನ ಕಾಂಗ್ರೆಸ್ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಕೊಡಗಿನ ಜನ ನಿಮ್ಮ ದುರಹಂಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂಬ ಬರಹವೂ ಅವರ ಫೇಸ್‌ಬುಕ್‌ ಖಾತೆಯಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry