7
ಇದೇ 21ರ ಒಳಗೆ ವಿಲೇವಾರಿ: ಹೊಸ ಮತದಾರರಿಗೆ 30ರೊಳಗೆ ಗುರುತಿನ ಚೀಟಿ ವಿತರಣೆ

ಮತದಾರರ ಪಟ್ಟಿ: 3.50 ಲಕ್ಷ ಅರ್ಜಿ ಸಲ್ಲಿಕೆ

Published:
Updated:
ಮತದಾರರ ಪಟ್ಟಿ: 3.50 ಲಕ್ಷ ಅರ್ಜಿ ಸಲ್ಲಿಕೆ

ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಗೆ 2018ರ ಫೆಬ್ರುವರಿ 28ರಿಂದ ಏಪ್ರಿಲ್‌ 14ರವರೆಗೆ ಹೊಸದಾಗಿ ಒಟ್ಟು 3.50 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುನಾಥ ಪ್ರಸಾದ್‌, ‘ಕರಡು ಮತದಾರರ ಪಟ್ಟಿಗೆ 87.98 ಲಕ್ಷ ಮತದಾರರು ಸೇರ್ಪಡೆಯಾಗಿದ್ದರು. ಅದರ ಬಳಿಕವೂ ಪರಿಷ್ಕರಣೆ ಕಾರ್ಯ ಮುಂದುವರಿದಿದ್ದು, ಮಿಂಚಿನ ನೋಂದಣಿ ದಿನ ಹಾಗೂ ಉಳಿದ ದಿನಗಳಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಇಆರ್‌ಎಂಎಸ್ ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಅವುಗಳನ್ನು ಇದೇ 21ರೊಳಗೆ ವಿಲೇವಾರಿ ಮಾಡಲಾಗುತ್ತದೆ. ಹೊಸದಾಗಿ ನೋಂದಾಯಿಸಿದವರಿಗೆ ಮತದಾರರ ಗುರುತಿನ ಚೀಟಿಯನ್ನು ಇದೇ 30ರೊಳಗೆ ಮತಗಟ್ಟೆ ಅಧಿಕಾರಿಗಳ ಮೂಲಕ ವಿತರಿಸಲಾಗುತ್ತದೆ’ ಎಂದರು.

ಮತದಾರರು ಮತಗಟ್ಟೆ ಬಗ್ಗೆ ತಿಳಿದುಕೊಳ್ಳಲು 9731979899 ಸಂಖ್ಯೆಗೆ ‘ಕೆಎ ಇಪಿಐಸಿ’ ಅಂತ ಟೈಪ್‌ ಮಾಡಿ ಸ್ಪೇಸ್‌ ಕೊಟ್ಟು ಮತದಾರರ ಗುರುತಿನ ಚೀಟಿಯ ಸಂಖ್ಯೆ ನಮೂದಿಸಿ ಎಸ್‌ಎಂಎಸ್‌ ಮಾಡಬಹುದು. ಚುನಾವಣಾ ಆಯೋಗದ ವೆಬ್‌ಸೈಟ್‌ ಮೂಲಕವೂ ನೋಡಬಹುದು ಎಂದು ತಿಳಿಸಿದರು.

ಅಭ್ಯರ್ಥಿಗಳ ಖರ್ಚು–ವೆಚ್ಚದ ಮೇಲೆ ನಿಗಾವಹಿಸಲು 19 ವೀಕ್ಷಕರು (ಎಕ್ಸ್‌ಪೆಂಡಿಚರ್‌ ಅಬ್‌ಸರ್ವರ್‌), ಪೊಲೀಸ್‌ ವೀಕ್ಷಕರಾಗಿ ಮೂವರು ಮಂಗಳವಾರ ಬರಲಿದ್ದಾರೆ. ಸೂಕ್ಷ್ಮ ಕ್ಷೇತ್ರಗಳಾದ (ವೆಚ್ಚ ಮಾಡುವುದರಲ್ಲಿ) ಆರ್‌.ಆರ್‌.ನಗರ, ಶಿವಾಜಿನಗರ, ಚಿಕ್ಕಪೇಟೆ, ಪದ್ಮನಾಭನಗರ, ಚಾಮರಾಜಪೇಟೆ, ಬಿಟಿಎಂ ಬಡಾವಣೆ, ಸರ್ವಜ್ಞನಗರ, ಮಹದೇವಪುರ, ಕೆ.ಆರ್‌.ಪುರ ಹಾಗೂ ಯಶವಂತಪುರ ಕ್ಷೇತ್ರಕ್ಕೆ ತಲಾ ಒಬ್ಬರನ್ನು ನಿಯೋಜಿಸಲಾಗುತ್ತದೆ. ಉಳಿದಂತೆ ಎರಡು ಕ್ಷೇತ್ರಗಳಿಗೆ ತಲಾ ಒಬ್ಬರನ್ನು ನಿಯೋಜಿಸಲಾಗುತ್ತದೆ ಎಂದು ಹೇಳಿದರು.

ಸಾಮಾನ್ಯ ವೀಕ್ಷಕರಾಗಿ 14 ಐಎಎಸ್‌ ಅಧಿಕಾರಿಗಳು ಇದೇ 23ರಂದು ಬರಲಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಈ ವೀಕ್ಷಕರಿಗೆ ಹೋಟೆಲ್‌ನಲ್ಲಿ ವಸತಿ–ಊಟದ ವ್ಯವಸ್ಥೆ ಮಾಡಲಾಗಿತ್ತು. ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ಈ ಬಾರಿ ಗಾಲ್ಫ್‌ ಕ್ಲಬ್‌, ಇಂದಿರಾನಗರ ಕ್ಲಬ್‌, ಬೌರಿಂಗ್‌ ಕ್ಲಬ್‌ ಹಾಗೂ ಕಾಸ್ಮೊಪಾಲಿಟನ್‌ ಕ್ಲಬ್‌ನಲ್ಲಿ ವಸತಿ–ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಮತಗಟ್ಟೆ ಅಧಿಕಾರಿಗಳು ಮತದಾನದ ಹಿಂದಿನ ದಿನ ಮಸ್ಟರಿಂಗ್‌ ಕೇಂದ್ರದಿಂದ (ಮತದಾನದ ಹಿಂದಿನ ದಿನ ಮತಯಂತ್ರಗಳನ್ನು ಇಡುವ ಕೇಂದ್ರ) ಮತಯಂತ್ರಗಳನ್ನು ತೆಗೆದುಕೊಂಡು ಮತಗಟ್ಟೆಗೆ ಹೋಗುತ್ತಾರೆ. ಅವರಿಗೆ ರಾತ್ರಿ ಊಟವನ್ನು ಪಾಲಿಕೆ ವತಿಯಿಂದಲೇ ವಿತರಿಸಲಾಗುತ್ತದೆ. ಮರುದಿನ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟವನ್ನೂ ನೀಡಲಾಗುತ್ತದೆ. ನೀರು, ಶೌಚಾಲಯ, ವಿದ್ಯುತ್‌ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಎಲ್ಲರ ಬ್ಯಾಂಕ್‌ ಖಾತೆಗಳಿಗೆ ಗೌರವಧನವನ್ನು ನೇರವಾಗಿ ಜಮೆ ಮಾಡಲಾಗುತ್ತದೆ ಎಂದರು.

ಮತದಾನದ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಚುನಾವಣೆ ದಿನ ಮಾಲ್‌ಗಳನ್ನು ಬಂದ್‌ ಮಾಡುವ ಕುರಿತು ಚುನಾವಣಾ ಆಯೋಗ ಯಾವುದೇ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

‘ಎಲ್ಲ ಪಕ್ಷಗಳ ಪ್ರತಿನಿಧಿಗಳ ಸಭೆಯನ್ನು ಸೋಮವಾರ ನಡೆಸಲಾಯಿತು. ಮತದಾರರ ಹೆಸರು, ಮತಗಟ್ಟೆ ಸಂಖ್ಯೆ, ಮತದಾನದ ಸಮಯವನ್ನು ಒಳಗೊಂಡ ಮತದಾರರ ಚೀಟಿ (ವೋಟರ್‌ ಸ್ಲಿಪ್‌) ನೀಡಲು ಅವಕಾಶವಿದೆಯೇ ಎಂದು ಪ್ರತಿನಿಧಿಗಳು ಕೇಳಿದರು. ಈ ಚೀಟಿಗಳನ್ನು ಪಾಲಿಕೆ ವತಿಯಿಂದಲೇ ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಆದಾಗ್ಯೂ ಅಭ್ಯರ್ಥಿಗಳೇ ಮತದಾರರ ಚೀಟಿಯನ್ನು ವಿತರಿಸಲು ಆಸಕ್ತಿ ಹೊಂದಿದ್ದರೆ ಅದಕ್ಕೆ ಅಭ್ಯಂತರವಿಲ್ಲ. ಆದರೆ, ಆ ಚೀಟಿಗಳಲ್ಲಿ ಪಕ್ಷದ ಚಿಹ್ನೆ, ಅಭ್ಯರ್ಥಿಯ ಹೆಸರನ್ನು ಹಾಕಬಾರದು ಎಂಬ ಷರತ್ತು ವಿಧಿಸಲಾಗಿದೆ’ ಎಂದರು.

28 ಕ್ಷೇತ್ರಗಳ ವ್ಯಾಪ್ತಿಯ ಚುನಾವಣಾ ವೆಚ್ಚದ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರಚಾರದಲ್ಲಿ ಬಳಸುವ ಸಾಮಗ್ರಿಗಳ ದರಪಟ್ಟಿಯನ್ನು ತಯಾರಿಸಲಾಗಿದೆ. ಈ ದರಪಟ್ಟಿ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಮಾರ್ಕ್‌ 3 ಮತಯಂತ್ರಗಳ ಬಳಕೆ

ಮೇಲ್ದರ್ಜೆಗೇರಿಸಿದ ಮಾರ್ಕ್‌–3 ಸರಣಿಯ 5 ಸಾವಿರ ಮತಯಂತ್ರಗಳನ್ನು (ಇವಿಎಂ) ನೀಡುವುದಾಗಿ ಚುನಾವಣಾ ಆಯೋಗವು ತಿಳಿಸಿದೆ. ಸದ್ಯ ಮಾರ್ಕ್‌ 1, 2 ಸರಣಿಯ ಮತಯಂತ್ರಗಳನ್ನು ಬಳಸಲಾಗುತ್ತಿದೆ. ಈಗಿರುವ ಇವಿಎಂನಲ್ಲಿ 64 ಅಭ್ಯರ್ಥಿಗಳನ್ನು ಸೇರಿಸಲು ಅವಕಾಶವಿದ್ದರೆ, ಹೊಸ ಯಂತ್ರದಲ್ಲಿ 324 ಅಭ್ಯರ್ಥಿಗಳನ್ನು ಸೇರಿಸಬಹುದು. ಇವುಗಳನ್ನು ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ತಯಾರಿಸಿದೆ. ಈ ಯಂತ್ರಗಳನ್ನು ದೇಶದಲ್ಲೇ ಮೊದಲ ಬಾರಿಗೆ ಬಳಸುತ್ತಿದೆ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

₹6.19 ಕೋಟಿ ಮೌಲ್ಯದ ಹಣ, ವಸ್ತು ವಶ

‘ಅಬಕಾರಿ ಇಲಾಖೆಯಿಂದ 903 ದಾಳಿಗಳು ನಡೆದಿದ್ದು, 622 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 238 ಆರೋಪಿಗಳನ್ನು ಬಂಧಿಸಲಾಗಿದೆ. 7,630 ಲೀಟರ್‌ ಮದ್ಯ (ಲಿಕ್ಕರ್‌), 3,687 ಲೀಟರ್‌ ಬಿಯರ್‌, 179 ಲೀಟರ್‌ ವೈನ್‌ ಹಾಗೂ ₹83,900 ನಗದು ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ ₹62.30 ಲಕ್ಷ’ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

‘ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಪೊಲೀಸ್‌ ಇಲಾಖೆಯು 42 ಎಫ್‌ಐಆರ್‌ಗಳನ್ನು ದಾಖಲಿಸಿದೆ. ₹2.49 ಕೋಟಿ ನಗದನ್ನು ವಶಪಡಿಸಿಕೊಂಡಿದೆ. ಮಾದರಿ ನೀತಿ ಸಂಹಿತೆ ತಂಡಗಳು ಇದುವರೆಗೂ ಒಟ್ಟು 15,623 ಬಂಟಿಂಗ್‌, ಬ್ಯಾನರ್‌ ಹಾಗೂ ಫ್ಲೆಕ್ಸ್‌ಗಳನ್ನು ತೆರವುಗೊಳಿವೆ. ಈ ಸಂಬಂಧ 21 ಪ್ರಕರಣಗಳನ್ನು ದಾಖಲಿಸಲಾಗಿದೆ. ₹2.66 ಕೋಟಿ ನಗದು ಹಾಗೂ ₹41 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದರು.

ಅಕ್ರಮ ತಡೆಗೆ ಜನರ ನಿರಾಸಕ್ತಿ

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸುವ ಉದ್ದೇಶದಿಂದ ಪಾಲಿಕೆಯು ಮೂರು ಆ್ಯಪ್‌ಗಳನ್ನು ಬಿಡುಗಡೆ ಮಾಡಿತ್ತು. ಆದರೆ, ಇವುಗಳ ಬಗ್ಗೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈವರೆಗೆ 400 ಮಂದಿ ಈ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆ ಸಂಬಂಧ 6 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

140 ಪಿಂಕ್‌ ಮತಗಟ್ಟೆ

ಮಹಿಳಾ ಮತದಾರರು ಹೆಚ್ಚಾಗಿರುವ ಕಡೆಗಳಲ್ಲಿ ಪಿಂಕ್‌ ಮತಗಟ್ಟೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಪ್ರತಿ ಕ್ಷೇತ್ರಕ್ಕೆ 5ರಂತೆ ಒಟ್ಟು 140 ಪಿಂಕ್‌ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಇಲ್ಲಿಗೆ ಮಹಿಳಾ ಸಿಬ್ಬಂದಿಯನ್ನೇ ನಿಯೋಜಿಸಲಾಗುತ್ತದೆ. ಇಲ್ಲಿ ಪುರುಷರು ಹಾಗೂ ಮಹಿಳೆಯರು ಮತ ಚಲಾಯಿಸಬಹುದು.

ಅಂಕಿ–ಅಂಶ

* 54,558 –ಚುನಾವಣಾ ಕರ್ತವ್ಯಕ್ಕೆ ಅಗತ್ಯವಿರುವ ಮತಗಟ್ಟೆ ಅಧಿಕಾರಿಗಳು

*
10,927 –ಡಿ ಗ್ರೂಪ್‌ ನೌಕರರು, ಅಂಗನವಾಡಿ, ಆಶಾ ಕಾರ್ಯಕರ್ತೆಯರ ನಿಯೋಜನೆಗೆ ನಿರ್ಧಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry