ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿ ಕೇಂದ್ರದ ಎದುರು ಬೆಂಬಲಿಗರ ಬಲ ಪ್ರದರ್ಶನ

ಟೈರ್‌ ಸುಟ್ಟು, ಭಿತ್ತಿಪತ್ರ ಪ್ರದರ್ಶಿಸಿ ಪಕ್ಷದ ನಾಯಕರ ವಿರುದ್ಧ ಧಿಕ್ಕಾರ
Last Updated 16 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲೂ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟಿದೆ. ಟಿಕೆಟ್ ಕೈತಪ್ಪಿದ್ದರಿಂದ ಆಕ್ರೋಶಗೊಂಡಿರುವ ಕೆಲವರು ಬೆಂಬಲಿಗರೊಂದಿಗೆ ಪಕ್ಷದ ಶಕ್ತಿ ಕೇಂದ್ರವಾದ ಕೆಪಿಸಿಸಿ ಕಚೇರಿ ಮುಂದೆಯೇ ಸೋಮವಾರ  ಬಲ ಪ್ರದರ್ಶನ ನಡೆಸಿದರು.

ಪಕ್ಷದ ಕಚೇರಿ ದಿನವಿಡೀ ಸರಣಿ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. ಕೆಲವರಂತೂ ಟೈರ್‌ ಸುಟ್ಟು, ಭಿತ್ತಿಪತ್ರ ಪ್ರದರ್ಶಿಸಿ ಪಕ್ಷದ ನಾಯಕರ ವಿರುದ್ಧ ಧಿಕ್ಕಾರ ಕೂಗಿದರು.

ಜೆಡಿಎಸ್‌ನಿಂದ ವಲಸೆ ಬಂದ ಅಖಂಡ ಶ್ರೀನಿವಾಸ ಮೂರ್ತಿಗೆ ಪುಲಕೇಶಿನಗರದ ಟಿಕೆಟ್‌ ನೀಡಿರುವುದು ಪಕ್ಷದ ಹಿರಿಯ ಮುಖಂಡ ಪ್ರಸನ್ನ ಕುಮಾರ್‌ ಆಕ್ರೋಶಕ್ಕೆ ಕಾರಣವಾಗಿದೆ. ಅವರು ನಾಯಕರ ವಿರುದ್ಧ ತಿರುಗಿ ಬಿದ್ದಿದ್ದಾರೆ.

‘ಟಿಕೆಟ್ ಕೈ ತಪ್ಪಿದ್ದಕ್ಕೆ ನನಗೆ ನೋವಾಗಿದೆ. ಇದಕ್ಕೆ ಸಿದ್ದರಾಮಯ್ಯ ಅವರೇ ಹೊಣೆ. ಇನ್ನು ಸುಮ್ಮನಿರಲು ಸಾಧ್ಯವಿಲ್ಲ. ಹಲವು ವರ್ಷಗಳಿಂದ ಈ ಭಾಗದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೆ. ಕಾಂಗ್ರೆಸ್ ಕಟ್ಟಿದವರು ಈಗ ಮೂಲೆಗುಂಪಾಗಿದ್ದಾರೆ. ಕಾಂಗ್ರೆಸ್ ಈಗ ಮೂಲರೂಪದಲ್ಲಿ ಉಳಿದಿಲ್ಲ. ಪಕ್ಷವು ಈಗ ‘ಕಾಂಗ್ರೆಸ್ ಎಸ್‌ (ಸಿದ್ದರಾಮಯ್ಯ)’ ಎಂಬ ಮಟ್ಟಕ್ಕೆ ತಲುಪಿದೆ’ ಎಂದು ದೂರಿದರು.

2013ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪ್ರಸನ್ನ ಕುಮಾರ್‌, ಜೆಡಿಎಸ್ ಅಭ್ಯರ್ಥಿ ಅಖಂಡ ಶ್ರೀನಿವಾಸ ಮೂರ್ತಿ ವಿರುದ್ಧ ಸೋತಿದ್ದರು.

ಈ ಬೆಳವಣಿಗೆಯ ಮಧ್ಯೆ ಪ್ರಸನ್ನ ಕುಮಾರ್ ಅವರನ್ನು ಸೆಳೆದು ದೇವನಹಳ್ಳಿಯಿಂದ ಕಣಕ್ಕಿಳಿಸಲು ಬಿಜೆಪಿ ಉದ್ದೇಶಿಸಿತ್ತು. ಆದರೆ, ಬಿಜೆಪಿ ಆಹ್ವಾನವನ್ನು ಅವರು ತಿರಸ್ಕರಿಸಿದ್ದಾರೆ.

‘ಪುಲಕೇಶಿನಗರ ಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧಿಸಲು ಅವಕಾಶವಿದೆ. ಆದರೆ, ನಾನು ಇನ್ನೂ ತೀರ್ಮಾನ ಮಾಡಿಲ್ಲ. ಬೆಂಬಲಿಗರು ಒಪ್ಪಿದರೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ನಾಯ್ಡು ಗುಟುರು: ರಾಜಾಜಿನಗರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಮಂಜುಳಾ ನಾಯ್ಡು ತಮ್ಮ ಬೆಂಬಲಿಗರ ಜೊತೆ ಕೆಪಿಸಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಮಾಜಿ ಮೇಯರ್‌ ಜಿ. ಪದ್ಮಾವತಿ ಅವರಿಗೆ ಕಾಂಗ್ರೆಸ್‌ ಇಲ್ಲಿ ಟಿಕೆಟ್‌ ನೀಡಿರುವುದು ಅವರ ಸಿಟ್ಟಿಗೆ ಕಾರಣವಾಗಿದೆ.

‘ನಾನು 25 ವರ್ಷಗಳಿಂದ ಪಕ್ಕಕ್ಕಾಗಿ ದುಡಿದಿದ್ದೇನೆ. ಯಾವ ಅಧಿಕಾರವನ್ನೂ ಅನುಭವಿಸಿಲ್ಲ. ಮೇಯರ್‌ ಆಗಿ ಅಧಿಕಾರ ಅನುಭವಿಸಿದವರಿಗೆ ಟಿಕೆಟ್‌ ನೀಡಿದ್ದು ಬೇಸರ ತಂದಿದೆ. ಇದರಿಂದ ಪಕ್ಷದ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆ ಆಗಲಿದೆ’ ಎಂದು ಅವರು ಕಿಡಿಕಾರಿದರು.

ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್ ಕೈ ತಪ್ಪಿದ ಗಿರೀಶ್ ಕೆ. ನಾಶಿ, ತಮ್ಮ ಬೆಂಬಲಿಗರ ಜೊತೆ ಸೋಮವಾರ ಬೆಳಿಗ್ಗೆಯೇ ಕಚೇರಿಗೆ ದಾಂಗುಡಿ ಇಟ್ಟರು. ‘ತಲೆಹಿಡುಕ ನಾಯಕರಿಗೆ ಧಿಕ್ಕಾರ’ ಎಂದು ಅವರ ಬೆಂಬಲಿಗರು ಘೋಷಣೆಗೆ ಕೂಗಿದರು. ಈ ಕ್ಷೇತ್ರದಲ್ಲಿ ಎನ್‌ಎಸ್‌ಯುಐ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಎಸ್‌. ಮಂಜುನಾಥ್‌ಗೆ ಟಿಕೆಟ್ ನೀಡಲಾಗಿದೆ.

ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಟಿಕೆಟ್‌ ವಂಚಿತರಾಗಿರುವ ಕವಿತಾ ರೆಡ್ಡಿ ಅವರು ಟ್ವೀಟ್‌ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

‘ಪ್ರಿಯ ರಾಹುಲ್‌ ಗಾಂಧಿ ಅವರೇ. ಅಭ್ಯರ್ಥಿಗಳನ್ನು ಹೊರಗಿನಿಂದ ಕರೆತಂದು ಕಣಕ್ಕಿಳಿಸುವುದಿಲ್ಲ, ನಿಮ್ಮ ಬಳಿ ಹಣವಿದೆಯೇ ಎಂದೂ ಕೇಳುವುದಿಲ್ಲ ಎಂದು ನೀವು ಹೇಳಿದ್ದೀರಿ. ನನ್ನ ಹಿನ್ನೆಲೆಯನ್ನು ಒಮ್ಮೆ ನೋಡಿ. ನಾನು ಟಿಕೆಟ್‌ ಪಡೆಯಲು ಅರ್ಹಳೇ, ಅಲ್ಲವೇ ಎಂಬುದನ್ನು ನೀವೇ ನಿರ್ಧರಿಸಿ. ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ. ಪಕ್ಷಾಂತರಿಗಳು, ನಾಯಕರು ಮಕ್ಕಳು ಟಿಕೆಟ್‌ ಗಿಟ್ಟಿಸಿದ್ದಾರೆ’ ಎಂದು ‘ಮೈ ಡ್ಯಾಡ್‌ ವಾಸ್‌ ನಾಟ್‌ ಮಿನಿಸ್ಟರ್‌’ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವಿಟ್‌ ಮಾಡಿದ್ದಾರೆ.

ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಸುಷ್ಮಾ ರಾಜಗೋಪಾಲ ರೆಡ್ಡಿ ಅವರಿಗೆ ಬೊಮ್ಮನಹಳ್ಳಿಯಲ್ಲಿ ಕಾಂಗ್ರೆಸ್‌ ಟಿಕೆಟ್‌ ನೀಡಿದೆ.

ಪದ್ಮನಾಭನಗರದಲ್ಲೂ ಅಸಮಾಧಾನ:
ಬಿಜೆಪಿಯಿಂದ ವಲಸೆ ಬಂದಿರುವ, ರಾಯಣ್ಣ ಬ್ರಿಗೇಡ್‌ನ ಪ್ರಧಾನ ಕಾರ್ಯದರ್ಶಿ ಕೆ. ವೆಂಕಟೇಶಮೂರ್ತಿ ಹಾಗೂ ಎಂ.ಶ್ರೀನಿವಾಸ್‌ ಅವರು ಪದ್ಮನಾಭನಗರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ವೆಂಕಟೇಶಮೂರ್ತಿ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ರಾಹುಲ್‌ ಗಾಂಧಿ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಇಲ್ಲಿ ಸ್ಥಳಿಯ ಮುಖಂಡ ಗುರಪ್ಪ ನಾಯ್ಡು ಅವರಿಗೆ ಟಿಕೆಟ್ ನೀಡಲಾಗಿದೆ.

‘ವೆಂಕಟೇಶಮೂರ್ತಿ ಅಥವಾ ಶ್ರೀನಿವಾಸ ಅವರ ಪೈಕಿ ಒಬ್ಬರಿಗೆ ಟಿಕೆಟ್‌ ನೀಡಿದರೆ ಮಾತ್ರ ಇಲ್ಲಿನ ಬಿಜೆಪಿ ಅಭ್ಯರ್ಥಿ ಆರ್‌. ಅಶೋಕ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಬಹುದು. ಹಾಗಾಗಿ ನಾಯ್ಡು ಬದಲು ಇವರಿಬ್ಬರಲ್ಲಿ ಒಬ್ಬರಿಗೆ ಟಿಕೆಟ್‌ ನೀಡಬೇಕು’ ಎಂದು ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಲು ಸ್ಥಳೀಯ ಮುಖಂಡರು ತೀರ್ಮಾನಿಸಿದ್ದಾರೆ.

‘ಗೆಲ್ಲುವ ಮಾನದಂಡ ಆಧರಿಸಿ ಟಿಕೆಟ್‌’
‘ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ನಮ್ಮ ಗುರಿ. ಈ ಕಾರಣಕ್ಕೆ ಗೆಲುವು ಒಂದನ್ನೇ ಮಾನದಂಡವಾಗಿಟ್ಟು, ಸಮಗ್ರವಾಗಿ ಚರ್ಚಿಸಿ ಚುನಾವಣಾ ಪರಿಶೀಲನಾ ಸಮಿತಿ ಟಿಕೆಟ್‌ ಹಂಚಿಕೆ ಮಾಡಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಸ್ಪಷ್ಟಪಡಿಸಿದರು.

‘ಟಿಕೆಟ್ ಸಿಗದವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಲಾಗುವುದು. ಅಸಮಾಧಾನಗೊಂಡಿರುವವರ ಜತೆ ಮಾತುಕತೆ ನಡೆಸುತ್ತೇವೆ. ಸದ್ಯದಲ್ಲೇ ವಾತಾವರಣ ತಿಳಿಯಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಪ್ರತಿಭಟನೆ ಕೈಬಿಡಿ, ಒಗ್ಗಟ್ಟಾಗಿ ಶ್ರಮಿಸಿ’
‘ಬಿಜೆಪಿ ಅಧಿಕಾರದಿಂದ ದೂರ ಉಳಿಯಬೇಕು. ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಯಾರೂ ಪ್ರತಿಭಟನೆಗೆ ಮುಂದಾಗದೆ ಗೆಲುವಿಗೆ ಒಟ್ಟಾಗಿ ಶ್ರಮಿಸಬೇಕು’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

‘ಚುನಾವಣೆಯಲ್ಲಿ ಅವಕಾಶ ಸಿಗುವುದು ಅಥವಾ ಕೈ ತಪ್ಪುವುದು ಸಾಮಾನ್ಯ. ಅದನ್ನೇ ನೆಪ ಮಾಡಿ ಪ್ರತಿಭಟನೆ, ಭಿನ್ನಮತ ನಡೆಸುವುದು ಬೇಡ’ ಎಂದೂ ಹಿತವಚನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT