ತಿಮ್ಮಾಪುರಗೆ ಕೈ ತಪ್ಪಿದ ಟಿಕೆಟ್: ಪ್ರತಿಭಟನೆ

7
ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ ಕುತಂತ್ರ: ಸಚಿವರ ಬೆಂಬಲಿಗರ ಆರೋಪ

ತಿಮ್ಮಾಪುರಗೆ ಕೈ ತಪ್ಪಿದ ಟಿಕೆಟ್: ಪ್ರತಿಭಟನೆ

Published:
Updated:

ಬಾಗಲಕೋಟೆ/ ಮುಧೋಳ: ಸಚಿವ ಆರ್.ಬಿ. ತಿಮ್ಮಾಪುರಗೆ ಮುಧೋಳ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಸೋಮವಾರ ಅವರ ಬೆಂಬಲಿಗರು ಬಾಗಲಕೋಟೆ ಹಾಗೂ ಮುಧೋಳದಲ್ಲಿ ಪ್ರತಿಭಟನೆ ನಡೆಸಿದರು.

ಟಿಕೆಟ್‌ ತಪ್ಪಲು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌.ಪಾಟೀಲ ಕಾರಣ ಎಂದು ಆರೋಪಿಸಿ ಬಾಗಲಕೋಟೆಯಲ್ಲಿನ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು.

ಕಾಂಗ್ರೆಸ್ ಮುಖಂಡ ಕಾಶೀನಾಥ ಹುಡೇದ ಮಾತನಾಡಿ, ಎಸ್.ಆರ್.ಪಾಟೀಲ ಅವರು ಶಿಷ್ಯನಿಗೆ ಟಿಕೆಟ್ ಕೊಡಿಸಿದ್ದಾರೆ. ಈ ಹಿಂದೆ ಬಂಡಿವಡ್ಡರ್ ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಬೇರೆ ಪಕ್ಷದವರಿಗೆ ಬೆಂಬಲ ಸೂಚಿಸುತ್ತಿದ್ದರು ಎಂದು ಆರೋಪಿಸಿದರು.

ಕೆಲವೇ ತಿಂಗಳುಗಳ ಕಾಲ ಸಚಿವರಾಗಿದ್ದರೂ ಕೂಡ ತಿಮ್ಮಾಪುರ, ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಟಿಕೆಟ್ ಕೊಡದಿದ್ದರೆ ಕೇವಲ ಮುಧೋಳ ಮಾತ್ರವಲ್ಲದೇ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಕೂಡಲೇ ಹೈಕಮಾಂಡ್ ತಮ್ಮ ಲೋಪದೋಷಗಳನ್ನು ಸರಿಪಡಿಸಿಕೊಂಡು ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.

ಮುಧೋಳ ವರದಿ:

ಸತೀಶ ಬಂಡಿವಡ್ಡರ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವ ಹಿನ್ನಲೆಯಲ್ಲಿ ಸಚಿವ ಆರ್‌.ಬಿ.ತಿಮ್ಮಾಪುರ ಬೆಂಬಲಿ ಗರು ಸೋಮವಾರ ನಗರದ ಯಾದವಾಡ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಈ ಹಿಂದೆ ಮೂರು ಬಾರಿ ತಿಮ್ಮಾಪುರ ಸೋಲಿಗೆ ಕಾರಣರಾದವರಿಗೆ ಪಕ್ಷದ ಟಿಕೆಟ್ ನೀಡಲಾಗಿದೆ. ಇದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಅವರೇ ಕಾರಣ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಗಣೇಶ ಮೇತ್ರಿ, ಮುಂಬೈ ಕರ್ನಾಟಕ ಭಾಗದಲ್ಲಿ ತಿಮ್ಮಾಪುರ ಮಾತ್ರ ಎಡಗೈ ಸಮುದಾಯದಿಂದ ಟಿಕೆಟ್ ಪಡೆಯುತ್ತಿದ್ದರು. ಈ ಬಾರಿ ತಪ್ಪಿಸಲಾಗಿದೆ. ಕಾಲ ಮಿಂಚಿಲ್ಲ ಪಕ್ಷ ತಿಮ್ಮಾಪುರ ಅವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.

ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜೀವ ನಾಯಿಕ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲೋಕಣ್ಣ ಕೊಪ್ಪದ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾನೇಶ ತಡಸಲೂರ ಮಾತನಾಡಿ, ‘ಅಧಿಕಾರ ಇಲ್ಲದಿದ್ದರೂ ತಿಮ್ಮಾಪುರ ಕ್ಷೇತ್ರದಲ್ಲಿ 15 ವರ್ಷಗಳಿಂದ ಪಕ್ಷವನ್ನು ಜೀವಂತವಾಗಿಟ್ಟಿದ್ದಾರೆ. ಕಾರ್ಯಕರ್ತರ ನೋವು–ನಲಿವಿಗೆ ತಿಮ್ಮಾಪುರ ಸ್ಪಂದಿಸಿದ್ದಾರೆ. ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಪುರಸಭೆಗಳಲ್ಲಿ ಪಕ್ಷಕ್ಕೆ ಅಧಿಕಾರ ಸಿಗುವಂತೆ ನೋಡಿಕೊಂಡಿದ್ದಾರೆ. ಅಂಥವರಿಗೆ ಟಿಕೆಟ್‌ ನೀಡದೇ ಸಂಚು ಮಾಡಲಾಗಿದೆ. ಈ ಅನ್ಯಾಯ ಸಹಿಸಲು ಸಾಧ್ಯವಿಲ್ಲ’ ಎಂದರು.

ಹಿರಿಯ ಕಾಂಗ್ರೆಸ್ ಮುಖಂಡ ಉದಯಸಿಂಹ ಪಡತಾರೆ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ, ಸದಸ್ಯರಾದ ರಫೀಕ್ ಬೈರಕದಾರ, ಸಂಗಪ್ಪ ಇಮ್ಮಣ್ಣವರ ಹೈಕಮಾಂಡ್ ವಿರುದ್ಧ ಹರಿಹಾಯ್ದರು.

ಪಕ್ಷದ ಮುಖಂಡರಾದ ಎಂ.ಎಂ.ಖಾಜಿ, ಎಂ.ಎಸ್.ನಾಯಿಕವಾಡಿ, ಜಿಲ್ಲಾ ಪಂಚಾಯ್ತಿ ಸದಸ್ಯ ಮಹಾಂತೇಶ ಉದಪುಡಿ, ಮಾಜಿ ಸದಸ್ಯ ಭೀಮಶಿ ಹಲಕಿ, ಕಾಶಿನಾಥ ಹುಡೇದ, ಸಿದ್ದು ಸೂರ್ಯವಂಶಿ, ಗೋವಿಂದ ಗುಜ್ಜನ್ನವರ, ಮಾಹಾದೇವ ಮಾದರ, ನಿಂಗಪ್ಪ ಹುಗ್ಗಿ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಶಿವಕುಮಾರ ಮಲಘಾಣ, ಲಕ್ಷ್ಮಣ ಕೊಳೂರ, ಭೀಮಸಿ ಐನಾಪುರ, ಸಿದ್ದು ಸೊನ್ನದ, ಮುದಕಪ್ಪ ಅಂಬಿಗೇರ, ಭೀಮಶಿ ತಳವಾರ, ರಾಜು ಲಮಾಣಿ

ಇದ್ದರು.

ಪ್ರಯಾಣಿಕರ ಪರದಾಟ: ಮೂರೂವರೆ ತಾಸು ರಸ್ತೆ ತಡೆಯಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ಬಿಸಿಲಿನ ಬೇಗೆಗೆ ವಾಹನದಲ್ಲಿ

ಕೂಡಲು ಸಾಧ್ಯವಾಗದೆ ಹೊರಗಡೆ ನಿಲ್ಲಲು ಸಾಧ್ಯವಾಗದೇ ಚಡಪಡಿಸಿದರು.

ಶಾಸಕ ಮೇಟಿ ವಿರುದ್ಧ ಆಕ್ರೋಶ

ಮಾಜಿ ಶಾಸಕ ಪಿ.ಎಚ್.ಪೂಜಾರ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಬೆಂಬಲಿಗರು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಮನೆ ಎದುರು ಟೈರ್‌ ಸುಟ್ಟು, ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಮಾತು ತಪ್ಪಿದ ಮೇಟಿ: ಮುಂದಿನ ಬಾರಿ ನಿಮಗೆ ಟಿಕೆಟ್ ಕೊಡುವುದಾಗಿ ಹೇಳಿ ಪೂಜಾರ ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು. ಅವರ ಶ್ರಮದ ಫಲವಾಗಿಯೇ ಮೇಟಿ ಕಳೆದ ಬಾರಿ ಆಯ್ಕೆಯಾಗಿದ್ದರು. ಮಾತಿನಂತೆ ನಡೆದುಕೊಳ್ಳದೇ ಮೇಟಿ ವಚನಭ್ರಷ್ಟರಾಗಿದ್ದಾರೆ. ಕಳಂಕಿತರಿಗೆ ಟಿಕೆಟ್ ನೀಡುವುದು ಸಲ್ಲ. ಪೂಜಾರಗೆ ಟಿಕೆಟ್ ಕೈ ತಪ್ಪಲು ಮೇಟಿ ಕುತಂತ್ರವೇ ಕಾರಣ. ಕೂಡಲೇ ಆಗಿರುವ ಅನ್ಯಾಯ ಸರಿಪಡಿಸಲು ಹೈಕಮಾಂಡ್ ಮುಂದಾಗಬೇಕು. ಪೂಜಾರ ಅವರಿಗೆ ಟಿಕೆಟ್ ನೀಡಲಿ ಎಂದು ಆಗ್ರಹಿಸಿದರು. ಶಾಸಕ ಮೇಟಿ ವಿರುದ್ಧ ದಿಕ್ಕಾರ ಕೂಗಿದರು. ರಸ್ತೆ ತಡೆಯಿಂದಾಗಿ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಪ್ರತಿಭಟನೆಯಲ್ಲಿ ಸಂಗನಗೌಡ ಗೌಡರ, ಶಾಂತಾಬಾಯಿ ಗೋಣಿ, ಮುದುಕಪ್ಪ ಕೊಣ್ಣೂರ, ರಾಮಚಂದ್ರಪ್ಪ ಹಡಗಲಿ, ವಿಠ್ಠಲ ಶಿಂತ್ರೆ, ಸಂಜೀವ ಡಿಗ್ಗಿ, ನಿಂಗಪ್ಪ ಕೊಳಚಿ, ತಿಮ್ಮನಗೌಡ ಗೌಡರ, ಸುನಿಲ್ ಜಾಧವ,ರಾಜು ನಾಯ್ಕರ, ಮಂಜು ಹೆಬ್ಬಾಳ, ನಾಗೇಶ ನೀಲನಾಯಕ, ಗೋಪಾಲ ಹಂದ್ರಾಳ, ಪ್ರಭಾಕರ ಲಾತೂರಕರ, ಶೇಖರಪ್ಪ ಬೊಮ್ಮಣಗಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry