ವೀರಶೈವರ ಮನವೊಲಿಕೆಗೆ ಸಲಹೆ

7

ವೀರಶೈವರ ಮನವೊಲಿಕೆಗೆ ಸಲಹೆ

Published:
Updated:

ಬೆಳಗಾವಿ: ‘ವೀರಶೈವ ಮಠಾಧೀಶರ ಮನವೊಲಿಸುವ ಮೂಲಕ ಲಿಂಗಾಯತ ಧರ್ಮವನ್ನು ಸಂಘಟಿಸುವುದು ಅಗತ್ಯವಾಗಿದೆ’ ಎಂದು ಧಾರವಾಡ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಶಂಭು ಹೆಗಡಾಳ ಅಭಿಪ್ರಾಯಪಟ್ಟರು.

ಬಸವ ಜಯಂತಿ ಅಂಗವಾಗಿ ಜಾಗತಿಕ ಲಿಂಗಾಯತ ಮಹಾಸಭೆ ವತಿಯಿಂದ ಇಲ್ಲಿನ ಮಹಾಂತ ಭವನದಲ್ಲಿ ನಡೆದಿರುವ ಕಾರ್ಯಕ್ರಮದಲ್ಲಿ ಸೋಮವಾರ ನಡೆದ ‘ಲಿಂಗಾಯತ ಧರ್ಮ ಸಂಘಟನೆ’ ಕುರಿತ ಚಿಂತನ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

‘ಬಸವಣ್ಣನ ಬಗ್ಗೆ ಅಧ್ಯಯನ ಗೈದಂತೆ ಲಿಂಗಾಯತ ಸಿದ್ದಾಂತಕ್ಕೆ ಹೆಚ್ಚಿನ ವೈಜ್ಞಾನಿಕ ಸತ್ಯದ ದರ್ಶನವಾಗಿದೆ. ಅದಕ್ಕಾಗಿ ಇಂದು ಲಿಂಗಾಯತಕ್ಕೆ ಹೆಚ್ಚಿನ ಆಧ್ಯತೆ ದೊರಕಿದೆ. ಆದರೆ ಇದರ ಜತೆಯಲ್ಲಿಯೇ ಇದ್ದ ಇನ್ನೂ ಅನೇಕ ವೀರಶೈವ ಮಠಾಧೀಶರಲ್ಲಿ ಅಭಿಪ್ರಾಯ ಭಿನ್ನತೆ ಇರಬಹುದು, ಆದರೆ ಆಚರಣೆ ಮಾತ್ರ ಒಂದೇ ಆಗಿರುವುದರಿಂದ ಅವರನ್ನೂ ಕೂಡಿಸಿಕೊಂಡು ಹೋಗುವುದು ಭವಿಷ್ಯದ ದೃಷ್ಠಿಯಿಂದ ಹಾಗೂ ಧರ್ಮದ ವಿಶಾಲ ತಳಹದಿಗೆ ಉತ್ತಮ ಬೆಳವಣಿಗೆಯಾಗಬಲ್ಲದು’ ಎಂದು ಸಲಹೆ ಮಾಡಿದರು.

‘ಧರ್ಮದ ವಿಷಯದಲ್ಲಿ ವೈರತ್ವ ಬೆಳೆಸುವುದಕ್ಕಿಂತ ಸಾಮರಸ್ಯದ ಚಿಂತನೆ ಮಾಡುವ ಮೂಲಕ ಲಿಂಗಾಯತ ಧರ್ಮವನ್ನು ಜಗದಗಲವಾಗಿ ಬೆಳೆಸುವ ಅಗತ್ಯ ಇದೆ’ ಎಂದರು.

ಅಮೆರಿಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕ ಡಾ. ಚಂದ್ರು ಅಕ್ಕಿಹಾಳ ಮಾತನಾಡಿ ’ಬಸವಣ್ಣ ಹೊಸ ಧರ್ಮವನ್ನು 12ನೇ ಶತಮಾನದಲ್ಲಿಯೇ ಮಾಡಿದ್ದಾರೆ, ಬಸವ ತತ್ವಗಳೇ ಧರ್ಮ ಮೂಲಾಧಾರವಾಗಿವೆ. ಈಗ ಧರ್ಮಕ್ಕೆ ಹೊಸ ರೂಪ ಸಿಕ್ಕಿರುವುದು ಒಳ್ಳೆಯ ಬೆಳವಣಿಗೆಯಾಗಿದೆ’ ಎಂದರು.

‘ಭಾರತದಲ್ಲಿ ಇರುವವರೆಲ್ಲರೂ ಹಿಂದೂಗಳೇ. ಹಿಂದೂ ಎನ್ನುವುದು ಒಂದು ಸಂಸ್ಕಾರ. ಅದರಲ್ಲಿ ಅನೇಕ ಚಿಂತನೆಗಳು, ಆಚರಣೆಗಳು ಅಡಗಿವೆ. ಬೌದ್ದ, ಜೈನ್‌, ಪಾರ್ಸಿಗಳಂತೆ ಲಿಂಗಾಯತ ಆಚರಣೆಯೂ ಕೂಡ ಪ್ರತ್ಯೇಕ ಎನ್ನುವುದನ್ನು ಬಸವಣ್ಣ ಆಗಲೇ ತೋರಿಸಿಕೊಟ್ಟಿದ್ದಾರೆ. ಇಂಥ ಆಲೋಚನೆಗಳಿಂದಲೇ ಬಸವಣ್ಣ ಜನಿವಾರ ತೆಗೆದು, ಲಿಂಗ ಧರಿಸಿದ್ದರು’ ಎಂದು ಅವರು ಹೇಳಿದರು.

‘ಜಾಗತಿಕ ಮಟ್ಟದಲ್ಲಿ ಲಿಂಗಾಯತ ಧರ್ಮ ಸಂಘಟನೆ ಆಗಬೇಕಾಗಿದೆ. ಈಗ ನೆಟ್ಟ ಸಸಿ ಮರವಾಗಿ ಬೆಳೆದು ಜಗತ್ತಿಗೆಲ್ಲ ಹರಡುವಂತೆ ಆಗಬೇಕು’ ಎಂದರು.

ಹಂದಿಗುಂದ ಸಿದ್ಧೇಶ್ವರಮಠ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ‘ಲಿಂಗಾಯತ ಧರ್ಮ ವಿರೋಧಿಸುವ ವೀರಶೈವ ಮಠಾಧೀಶರಿಗೆ ಒಂದು ದಿನ ಬುದ್ದಿ ಬರುತ್ತದೆ, ಅವರೇ ಪರಿವರ್ತನೆಯಾಗುತ್ತಾರೆ’ ಎಂದು ಹೇಳಿದರು.

ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ ಮಾತನಾಡಿ , ‘ಧರ್ಮ ಒಡೆಯಲು ತಮಗೆ ಒಂದು ಕೋಟಿ ರೂಪಾಯಿ ಕೊಡಲಾಗಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ’ ಎಂಬ ನೋವು ವ್ಯಕ್ತಪಡಿಸಿದರು.

ವೀರಶೈವ ಲಿಂಗಾಯತ ಸಮಾಜದವರು ಬಸವ ಜಯಂತಿ ಆಚರಣೆಗೆ ತಮ್ಮನ್ನು ಆಹ್ವಾನಿಸಿದ್ದಕ್ಕೆ ತಮ್ಮ ಆಕ್ಷೇಪ ಇರುವುದನ್ನು ಅವರಿಗೆ ತಿಳಿಸಿದ್ದಾಗಿ ಸ್ವಾಮೀಜಿ ಹೇಳಿದರು. ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಶೇಗುಣಸಿ ಮಹಾಂತ ದೇವರು ಸಾನಿಧ್ಯ ವಹಿಸಿದ್ದರು.

ಎಂಜಿನಿಯರ್‌ ಬೆಂಡಿಗೇರಿ ಸ್ವಾಗತಿಸಿದರು. ಜಾಗತಿಕ ಲಿಂಗಾಯತ ಮಹಾಸಭೆಯ ಶಂಕರ ಗುಡಸ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry