ಪ್ರಕಾಶ ಖಂಡ್ರೆ ಬೆಂಬಲಿಗರ ಅಸಮಾಧಾನ ಸ್ಫೋಟ

7
ನಿರೀಕ್ಷೆಯಂತೆ ಸೂರ್ಯಕಾಂತ, ಡಿ.ಕೆ.ಸಿದ್ರಾಮಗೆ ಟಿಕೆಟ್‌

ಪ್ರಕಾಶ ಖಂಡ್ರೆ ಬೆಂಬಲಿಗರ ಅಸಮಾಧಾನ ಸ್ಫೋಟ

Published:
Updated:

ಬೀದರ್‌: ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾದ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖೂಬಾಗೆ ಬಸವಕಲ್ಯಾಣದ ಟಿಕೆಟ್‌ ನೀಡಿದ್ದಕ್ಕೆ ಅಲ್ಲಿನ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಎರಡನೇ ಪಟ್ಟಿಯಲ್ಲಿ ಡಿ.ಕೆ.ಸಿದ್ರಾಮ ಅವರಿಗೆ ಭಾಲ್ಕಿ ಕ್ಷೇತ್ರದ ಟಿಕೆಟ್‌ ಪ್ರಕಟಿಸಿದ ನಂತರ ಪ್ರಕಾಶ ಖಂಡ್ರೆ ಬೆಂಬಲಿಗರ ಅಸಮಾಧಾನ ಸ್ಫೋಟಗೊಂಡಿದೆ.

ಬಿಜೆಪಿ ಮೊದಲ ಪಟ್ಟಿಯಲ್ಲಿ ಬಸವಕಲ್ಯಾಣದ ಟಿಕೆಟ್‌ ಶಾಸಕ ಮಲ್ಲಿಕಾರ್ಜುನ ಖೂಬಾ ಹಾಗೂ ಔರಾದ್‌ ಟಿಕೆಟ್‌ ಶಾಸಕ ಪ್ರಭು ಚವಾಣ್‌ ಅವರಿಗೆ ದೊರೆತಿದೆ. ಈಗ ಎರಡನೇ ಪಟ್ಟಿಯಲ್ಲಿ ಬೀದರ್‌ ಟಿಕೆಟ್‌ ಸೂರ್ಯಕಾಂತ ನಾಗಮಾರಪಳ್ಳಿ ಹಾಗೂ ಭಾಲ್ಕಿ ಟಿಕೆಟ್‌ ಡಿ.ಕೆ.ಸಿದ್ರಾಮ ಅವರಿಗೆ ದಕ್ಕಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಡಿಸೆಂಬರ್‌ನಲ್ಲಿ ಭಾಲ್ಕಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದ ಸಂದರ್ಭದಲ್ಲಿ ‘ಪ್ರಕಾಶ ಖಂಡ್ರೆ ಅವರೇ ಮುಂದಿನ ಶಾಸಕ, ಪಕ್ಷದ ಟಿಕೆಟ್‌ ಅವರಿಗೇ ಕೊಡಲಾಗುವುದು’ ಎಂದು ಬಹಿರಂಗವಾಗಿಯೇ ಘೋಷಣೆ ಮಾಡಿದ್ದರು. ಪ್ರಕಾಶ ಕೂಡ ಚುನಾವಣೆಯ ತಯಾರಿಯಲ್ಲಿ ಇದ್ದರು. ಎರಡನೇ ಪಟ್ಟಿ ಬಿಡುಗಡೆ ನಂತರ ಪ್ರಕಾಶ ಖಂಡ್ರೆ ಆಘಾತಗೊಂಡಿದ್ದಾರೆ.

ಎರಡು ಬಾರಿ ಭಾಲ್ಕಿಯಿಂದ ಚುನಾಯಿತರಾಗಿದ್ದ ಪ್ರಕಾಶ ಖಂಡ್ರೆ 2013ರ ವಿಧಾನಸಭಾ ಚುನಾವಣೆಯಲ್ಲಿ ಈಶ್ವರ ಖಂಡ್ರೆ ವಿರುದ್ಧ ಪರಾಭವಗೊಂಡಿದ್ದರು. ಗುರುಪಾದಪ್ಪ ನಾಗಮಾರಪಳ್ಳಿ ಅವರ ಅಕಾಲಿಕ ನಿಧನದಿಂದಾಗಿ ಬೀದರ್‌ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿಯೂ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಬೀದರ್‌ ಉಪ ಚುನಾವಣೆಯಲ್ಲಿ ಪ್ರಕಾಶ ತಮ್ಮ ಕ್ಷೇತ್ರ ಬದಲಿಸಿರುವ ಕಾರಣ ಭಾಲ್ಕಿ ಟಿಕೆಟ್‌ ನನಗೆ ಕೊಡುವಂತೆ ಡಿ.ಕೆ.ಸಿದ್ರಾಮ ಪಕ್ಷದ ವರಿಷ್ಠರ ಮೇಲೆ ಒತ್ತಡ ಹಾಕಿದ್ದರು. 2013ರ ಚುನಾವಣೆಯಲ್ಲಿ ಈಶ್ವರ ಖಂಡ್ರೆ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದರು. ಕಾಂಗ್ರೆಸ್‌ ಮುಕ್ತ ಭಾರತಕ್ಕೆ ಇದೇ ಅಂಶವನ್ನು ಪರಿಗಣಿಸಿ ಡಿ.ಕೆ.ಸಿದ್ರಾಮ ಅವರಿಗೆ ಟಿಕೆಟ್‌ ನೀಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾಗಿ ನೇಮಕಗೊಳ್ಳುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದ ಡಿ.ಕೆ.ಸಿದ್ರಾಮ ಅವರು 2005ರಲ್ಲಿ ಭಾಲ್ಕಿ ತಾಲ್ಲೂಕಿನ ಸಾಯಿಗಾಂವ್‌ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು.

2010ರಲ್ಲಿ ಇದೇ ಕ್ಷೇತ್ರದಿಂದ ತಮ್ಮ ಪತ್ನಿ ಪ್ರಜಾದೇವಿ ಅವರನ್ನು ಬಿಜೆಪಿಯಿಂದ ಕಣಕ್ಕೆ ಇಳಿಸಿ ಗೆಲ್ಲಿಸಿದ್ದರು. ನಂತರ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದರು. 2013ರಲ್ಲಿ ಕೆಜೆಪಿಯಿಂದ ಈಶ್ವರ ಖಂಡ್ರೆ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿಯೂ ಡಿ.ಕೆ.ಸಿದ್ರಾಮ ಕಾಂಗ್ರೆಸ್‌ಗೆ ಪ್ರಬಲ ಎದುರಾಳಿ ಆಗಲಿದ್ದಾರೆ ಎನ್ನುತ್ತಾರೆ ಕಾರ್ಯಕರ್ತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry