ಬುಡಮೇಲಾದ ರಾಜಕೀಯ ಲೆಕ್ಕಾಚಾರ

7
ಕಾಂಗ್ರೆಸ್‌ ಟಿಕೆಟ್‌: ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ನಿರೀಕ್ಷಿತ ಅಭ್ಯರ್ಥಿ, ಔರಾದ್‌ನಲ್ಲಿ ಅಚ್ಚರಿ

ಬುಡಮೇಲಾದ ರಾಜಕೀಯ ಲೆಕ್ಕಾಚಾರ

Published:
Updated:

ಬೀದರ್‌: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳ ಕಾಂಗ್ರೆಸ್‌ ಟಿಕೆಟ್‌ ನಿರೀಕ್ಷೆಯಂತೆ ಪ್ರಕಟವಾಗಿದೆ. ಔರಾದ್‌ ಮೀಸಲು ಕ್ಷೇತ್ರದ ಟಿಕೆಟ್‌ ಮಾತ್ರ ಅಚ್ಚರಿ ಮೂಡಿಸಿ ರಾಜಕೀಯ ಲೆಕ್ಕಾಚಾರವೇ ತಲೆ ಕೆಳಗಾಗುವಂತೆ ಮಾಡಿದೆ.

ಇದರಿಂದಾಗಿ ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಆಗಿದ್ದ ಭೀಮಸೇನರಾವ್‌ ಶಿಂಧೆ ಅವರಿಗೆ ಆಘಾತವಾಗಿದೆ. ಸಿದ್ದರಾಮಯ್ಯ ಟಿಕೆಟ್‌ ಕೊಡುವ ಭರವಸೆ ನೀಡಿದ ನಂತರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಆಗಲೇ ಪ್ರಚಾರ ಆರಂಭಿಸಿದ್ದರು. ಭಾನುವಾರ ಮಧ್ಯಾಹ್ನದ ವರೆಗೂ ಭೀಮಸೇನರಾವ್‌ ಶಿಂಧೆ ಅವರ ಹೆಸರೇ ಕೇಳಿ ಬರುತ್ತಿತ್ತು. ಪಟ್ಟಿ ಪ್ರಕಟವಾದಾಗ ಅಚ್ಚರಿ ಕಾದಿತ್ತು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸಂತೋಷಮ್ಮ ಕೌಡಾಳೆ ಅವರ ಪುತ್ರ ವಿಜಯಕುಮಾರ್‌ ಅವರಿಗೆ ಟಿಕೆಟ್‌ ದೊರೆತಿದೆ.

ದೆಹಲಿಯಲ್ಲಿ ನಡೆದ ಕಾಂಗ್ರೆಸ್‌ ವರಿಷ್ಠರ ಸಭೆಯಲ್ಲಿ ಬೀದರ್‌ ದಕ್ಷಿಣ ಹಾಗೂ ಔರಾದ್‌ ಟಿಕೆಟ್‌ ಬಗೆಗೇ ಹೆಚ್ಚು ಚರ್ಚೆ ನಡೆಯಿತು. ಕೆ.ಎಚ್.ಮುನಿಯಪ್ಪ ಅವರು ಪರಿಶಿಷ್ಟರ ಎಡಗೈ ಬಣಕ್ಕೆ ಪ್ರಾತಿನಿಧ್ಯ ನೀಡುವಂತೆ ಒತ್ತಡ ಹಾಕಿದ್ದರಿಂದ ಭೀಮಸೇನರಾವ್‌ ಶಿಂಧೆ ಹೆಸರನ್ನು ಕೈಬಿಡಲಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಖೇಣಿ ನಿರಾಳ: ಬೀದರ್‌ ದಕ್ಷಿಣ ಕ್ಷೇತ್ರದ ಟಿಕೆಟ್ ಬಗೆಗೆ ಶಾಸಕ ಅಶೋಕ ಖೇಣಿ ಅವರು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಪಟ್ಟಿ ಪ್ರಕಟವಾಗುವವರೆಗೂ ನಿರಾಳವಾಗಿಯೇ ಇದ್ದರು.

‘ಬಿಜೆಪಿ ವರಿಷ್ಠರೂ ನನಗೆ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಆದರೆ ನನಗೆ ಆ ಪಕ್ಷಕ್ಕೆ ಹೋಗುವುದು ಇಷ್ಟ ಇರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್‌ ಸೇರಿದ್ದೆ. ನಾನು ಯಾವುದೇ ರೀತಿಯ ಲಾಬಿ ಮಾಡಿರಲಿಲ್ಲ. ನಿರೀಕ್ಷೆಯಂತೆ ಟಿಕೆಟ್‌ ದೊರೆತಿದೆ’ ಎಂದು ಅಶೋಕ ಖೇಣಿ ಪ್ರತಿಕ್ರಿಯೆ ನೀಡಿದರು.

ಧರ್ಮಸಿಂಗ್‌ ಅಳಿಯ ಚಂದ್ರಾಸಿಂಗ್‌ ಅವರಿಗೆ ಟಿಕೆಟ್‌ ಕೊಡಿಸಲು ಲೋಕಸಭೆಯ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೊನೆಯ ಹಂತದ ವರೆಗೂ ನಡೆಸಿದ ಪ್ರಯತ್ನ ಫಲ ನೀಡಿಲ್ಲ. ಚಂದ್ರಾಸಿಂಗ್‌ ಮಾನಸಿಕವಾಗಿ ಕುಗ್ಗಿದ್ದು, ಅವರ ಬೆಂಬಲಿಗರು ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

ರಾಜಕೀಯ ಹೋರಾಟದ ಆರಂಭದಲ್ಲೇ ಹಿನ್ನಡೆ ಉಂಟಾದರೆ ಭವಿಷ್ಯದಲ್ಲಿ ಇನ್ನಷ್ಟು ತೊಂದರೆ ಎದುರಾಗುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಈಗಲೇ ದಿಟ್ಟ ನಿರ್ಧಾರ ಕೈಗೊಳ್ಳುವಂತೆ ಬೆಂಬಲಿಗರು ಚಂದ್ರಾಸಿಂಗ್ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

‘ಮಂಗಳವಾರ ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸುವೆ. ಅಂದು ಸಂಜೆ ಅಥವಾ ಬುಧವಾರ ನಿರ್ಧಾರ ಪ್ರಕಟಿಸುವೆ. ಅಲ್ಲಿಯವರೆಗೆ  ಕಾದುನೋಡಿ’ ಎಂದು ಚಂದ್ರಾಸಿಂಗ್‌ ಮಾರ್ಮಿಕವಾಗಿ ಹೇಳಿದರು.

ಬಸವಕಲ್ಯಾಣದಲ್ಲಿ ಸಿದ್ದರಾಮಯ್ಯ ಆಪ್ತ ಬಿ.ನಾರಾಯಣರಾವ್‌ ಅವರಿಗೆ ಟಿಕೆಟ್‌ ಕೊಡಲಾಗಿದೆ. ಟಿಕೆಟ್‌ ಖಾತರಿ ಇದ್ದ ಕಾರಣ ನಾರಾಯಣರಾವ್‌ ಒಂದು ವರ್ಷದಿಂದ ತಯಾರಿ ನಡೆಸಿದ್ದರು. ಅಶೋಕ ಖೇಣಿ ಪಕ್ಷ ಪ್ರವೇಶದಿಂದ ಸ್ವಲ್ಪಮಟ್ಟಿಗೆ ಆತಂಕ ಎದುರಾಗಿತ್ತು. ಈಗ ಬಿ.ನಾರಾಯಣರಾವ್‌ ಅವರೂ ನಿರಾಳವಾಗಿದ್ದಾರೆ. ಭಾಲ್ಕಿಯಲ್ಲಿ ಈಶ್ವರ ಖಂಡ್ರೆ ಹಾಗೂ ಹುಮನಾಬಾದ್‌ನಲ್ಲಿ ರಾಜಶೇಖರ ಪಾಟೀಲ ಬಿಟ್ಟು ಬೇರೆ ಹೆಸರುಗಳು ಇರಲಿಲ್ಲ. ಹೀಗಾಗಿ ಸಹಜವಾಗಿ ಅವರಿಗೆ ಟಿಕೆಟ್‌ ದಕ್ಕಿದೆ. ಇನ್ನು ಬೀದರ್ ಕ್ಷೇತ್ರದ ಟಿಕೆಟ್‌ ನಿರೀಕ್ಷೆಯಂತೆಯೇ ರಹೀಂಖಾನ್ ಅವರಿಗೆ ಲಭಿಸಿದೆ.

ಯಾರು ವಿಜಯಕುಮಾರ ಕೌಡಾಳೆ ?

ವಿಜಯಕುಮಾರ ಪುಂಡಲೀಕರಾವ್‌ ಕೌಡಾಳೆ ಅವರು ಬಸವಕಲ್ಯಾಣ ತಾಲ್ಲೂಕಿನ ಯರಬಾಗ ಗ್ರಾಮದ ಕೃಷಿ ಕುಟುಂಬಕ್ಕೆ ಸೇರಿದರು. ವಿಜಯಕುಮಾರ ಅವರು ಯರಬಾಗದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಹುಮನಾಬಾದ್‌ನಲ್ಲಿ ಪ್ರೌಢ, ಪದವಿ ಪೂರ್ವ ಶಿಕ್ಷಣ ಹಾಗೂ ಬಿಎಸ್‌ಸಿಯಲ್ಲಿ ಪದವಿ ಪಡೆದಿದ್ದಾರೆ.

ಕಲಬುರ್ಗಿಯಲ್ಲಿ ಭೂಮಾಪನ ಇಲಾಖೆಯಲ್ಲಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ್ದಾರೆ. 2012ರಲ್ಲಿ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಔರಾದ್‌ನಲ್ಲಿ ಅವರ ಮನೆಯೂ ಇದೆ. ತೆರೆಮರೆಯಲ್ಲಿ ಓಡಾಡಿ ಕ್ಷೇತ್ರದ ಜನರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಭೀಮಸೇನ್‌ರಾವ್‌ ಶಿಂಧೆ ಅವರಿಗೆ ಹೋಲಿಕೆ ಮಾಡಿದರೆ ಆರ್ಥಿಕವಾಗಿಯೂ ಸಬಲರಾಗಿದ್ದಾರೆ. ಈ ಎಲ್ಲ ಪ್ರಮುಖ ಅಂಶಗಳನ್ನು ಪರಿಗಣಿಸಿ ವಿಜಯಕುಮಾರಗೆ ಟಿಕೆಟ್‌ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry