ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಓಟೂ ಬೇಡ; ಸೌಕರ್ಯವೂ ಕೊಡಲ್ಲ

ಆಸ್ಪತ್ರೆಗೆ 22 ಕಿ.ಮೀ, ಶಾಲೆಗೆ 15 ಕಿ.ಮೀ ಕ್ರಮಿಸಬೇಕಾದ ಸ್ಥಿತಿಯಲ್ಲಿ ಚಂಗಡಿ ಗ್ರಾಮಸ್ಥರು
Last Updated 17 ಏಪ್ರಿಲ್ 2018, 6:41 IST
ಅಕ್ಷರ ಗಾತ್ರ

ಹನೂರು: ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂಗಡಿ ಗ್ರಾಮಸ್ಥರು ವಿಧಾನಸಭಾ ಚುನಾವಣೆ ಬಹಿಷ್ಕರಿಸಲು ಮುಂದಾಗಿದ್ದಾರೆ.

ಹಿಂದೆ ನಡೆದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನೂ ಇದೇ ಕಾರಣಕ್ಕೆ ಬಹಿಷ್ಕರಿಸಿದ್ದರು. ಆದರೂ ಮೂಲ ಸೌಕರ್ಯ ಮಾತ್ರ ಸಿಕ್ಕಿಲ್ಲ. ನಿಮ್ಮ ಓಟೂ ಬೇಡ, ಸೌಕರ್ಯವನ್ನೂ ಕೊಡುವುದಿಲ್ಲ ಎಂಬ ಭಾವನೆ ಜನಪ್ರತಿನಿಧಿಗಳಲ್ಲಿ ಮೂಡಿದಂತಿದೆ ಎಂದು ಗ್ರಾಮದ ಜನತೆ ಆರೋಪಿಸುತ್ತಾರೆ.

ಮಲೆಮಹದೇಶ್ವರ ವನ್ಯಧಾಮದೊ ಳಗಿರುವ ಚಂಗಡಿ ಗ್ರಾಮದಲ್ಲಿ ಸುಮಾರು 100 ಮನೆಗಳಿದ್ದು 450 ಮತದಾರರಿದ್ದಾರೆ. ಗ್ರಾಮಕ್ಕೆ ಕುಡಿಯುವ ನೀರು, ಸಮರ್ಪಕ ವಿದ್ಯುತ್ ಸಂಪರ್ಕ, ರಸ್ತೆ ನಿರ್ಮಿಸುವಂತೆ ಜಿಲ್ಲಾಡಳಿತಕ್ಕೆ ಸತತವಾಗಿ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಇಡೀ ಗ್ರಾಮದ ಜನರೇ ಬಂದು ಹನೂರು ಪಟ್ಟಣದಲ್ಲಿ ರೈತ ಸಂಘದ ಜತೆಗೂಡಿ ರಸ್ತೆ, ಪ್ರತಿಭಟನೆ ನಡೆಸಿದ್ದರೂ ಪ್ರತಿಫಲ ಸಿಗದ ಪರಿಣಾಮ ಈ ತೀರ್ಮಾನ ಕೈಗೊಂಡಿದ್ದೇವೆ ಎನ್ನುತ್ತಾರೆ.

ಆರೋಗ್ಯ ಸೌಲಭ್ಯ ಮರೀಚಿಕೆ: ‘ದಟ್ಟಾರಣ್ಯದ ಮಧ್ಯಭಾಗದಲ್ಲಿರುವ ನಮಗೆ ಆರೋಗ್ಯ ಸೌಲಭ್ಯ ಕನಸಿನ ಮಾತಾಗಿದೆ. ಮಕ್ಕಳು, ವೃದ್ಧರು ಅನಾರೋಗ್ಯಕ್ಕೆ ತುತ್ತಾದರೆ 22 ಕಿ.ಮೀ ದೂರದ ಕೌದಳ್ಳಿಗೆ ತೆರಳಬೇಕು. ಗರ್ಭಿಣಿಯರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆದಲ್ಲೇ ಹೆರಿಗೆಯಾಗಿರುವ ಪ್ರಕರಣಗಳು ಸಾಕಷ್ಟು ಜರುಗಿವೆ. ಆದ್ದರಿಂದ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಹನೂರಿನಲ್ಲಿ ಪ್ರತಿಭಟನೆ ಮಾಡಿದ್ದೇವೆ. ಚುನಾವಣಾ ಸಂದರ್ಭದಲ್ಲಿ ಬರುವ ಜನಪ್ರತಿನಿಧಿಗಳು ನಂತರ ಇತ್ತ ಸುಳಿಯುವುದಿಲ್ಲ. ನಮ್ಮ ಹಿತ ಕಾಯುವ ಬದ್ಧತೆ ಇಲ್ಲದವರಿಗೆ ನಾವ್ಯಾಕೆ ಮತ ಹಾಕಿ ಗೆಲ್ಲಿಸಬೇಕು’ ಎಂದು ಗ್ರಾಮದ ಜಯಮ್ಮ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕಲುಷಿತ ನೀರು: ಗ್ರಾಮದ ಹೊರವಲಯದಲ್ಲಿರುವ ತೆರೆದ ಬಾವಿಯೇ ಇಡೀ ಗ್ರಾಮದ ಜನತೆಗೆ ಕುಡಿಯುವ ನೀರಿನ ಮೂಲ. ಬಾವಿಯೊಳಗಿರುವ ನೀರಿನಲ್ಲಿ ಪಾಚಿ ತುಂಬಿ ದುರ್ನಾತ ಬೀರುತ್ತಿದ್ದರೂ ವಿಧಿಯಿಲ್ಲದೇ ಜನರು ಅದೇ ನೀರು ಕುಡಿಯುತ್ತಿದ್ದಾರೆ.

4ನೇ ತರಗತಿಗೆ ವಿದ್ಯಾಭ್ಯಾಸ ಕಡಿತ: ಗ್ರಾಮದಲ್ಲಿ 4ನೇ ತರಗತಿವರೆಗೆ ಮಾತ್ರ ಶಾಲೆ ಇದೆ. 5ನೇ ತರಗತಿಗೆ 15 ಕಿ.ಮೀ ದೂರದ ಕುರಟ್ಟಿ ಹೊಸೂರು ಗ್ರಾಮಕ್ಕೆ ತೆರಳಬೇಕು. ಆದರೆ, ಈ ಅಭಯಾರಣ್ಯದೊಳಗೆ ಮಕ್ಕಳನ್ನು ಒಬ್ಬಂಟಿಯಾಗಿ ಕಳುಹಿಸುವುದು ದುಸ್ತರವಾಗಿದೆ. ಹಾಗಾಗಿ ಮಕ್ಕಳು ವಿದ್ಯಾಭ್ಯಾಸವನ್ನೇ ಮೊಟಕುಗೊಳಿಸಿ ಕೂಲಿಕೆಲಸಕ್ಕೆ ತೆರಳುತ್ತಿದ್ದಾರೆ.

‘ನಮ್ಮಿಂದ ಮತ ಹಾಕಿಸಿಕೊಂಡು ಗೆದ್ದು ಹೋದ ಜನಪ್ರತಿನಿಧಿಗಳಿಗೆ ನಮ್ಮ ಹಿತ ಕಾಯುವ ಬದ್ಧತೆ ಇಲ್ಲ. ಅಧಿಕಾರಿಗಳಂತೂ ಇತ್ತ ಬರುವುದೇ ಇಲ್ಲ. ಮನವಿ ಸಲ್ಲಿಸಿ ಬೇಸತ್ತು ಕೊನೆಗೆ ಈ ನಿರ್ಧಾರ ತೆಗೆದುಕೊಂಡಿದ್ದೇವೆ’ ಎನ್ನುತ್ತಾರೆ ಗ್ರಾಮದ ಮುಖಂಡರಾದ ಮುನಿಗೌಡ, ಬಸವರಾಜು, ಮುನಿಸ್ವಾಮಿ, ಮರಿಸ್ವಾಮಿ.

ಹಿಂದೆಯೂ ಬಹಿಷ್ಕಾರ

ಗ್ರಾಮಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸದಿದ್ದರೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಬಹಿಷ್ಕರಿಸುವುದಾಗಿ ಅಂದಿನ ಉಪವಿಭಾಗಾಧಿಕಾರಿ ಕವಿತಾರಾಜಾರಂ ಅವರಿಗೆ ಇದೇ ಗ್ರಾಮಸ್ಥರು ಅರ್ಜಿ ಸಲ್ಲಿಸಿದ್ದರು. ಅಂದು ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು, ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ, ಗ್ರಾಮಸ್ಥರು ತಮ್ಮ ಪಟ್ಟು ಬಿಡದೆ ಮತದಾನ ಬಹಿಷ್ಕರಿಸಿದ್ದರು. ಆದರೂ, ಸೌಕರ್ಯ ಸಿಕ್ಕಿಲ್ಲ.

ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ

ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ದೊಡ್ಡಣೆ, ತೋಕೆರೆ ಗ್ರಾಮಸ್ಥರು ಸಹ ವಿಧಾನಸಭೆ ಚುನಾವಣೆ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ. ಗ್ರಾಮಗಳು ಸಮಸ್ಯೆಗಳ ಆಗರವಾಗಿದ್ದು, ಪ್ರತಿ ಕುಟುಂಬ ದಿನಬಳಕೆಯ ವಸ್ತುಗಳನ್ನು ತರಲು ಕಾಡಿನಲ್ಲಿ 10 ಕಿ.ಮೀ ನಡೆದುಕೊಂಡು ಹೋಗಿ ತರಬೇಕಾಗಿದೆ. ಗ್ರಾಮ ಪಂಚಾಯಿತಿಯಿಂದ ಯಾವುದೇ ಸೌಕರ್ಯ ಒದಗಿಸಿಲ್ಲ. ಸರ್ಕಾರದ ಯೋಜನೆಗಳೂ ತಲುಪಿಲ್ಲ. ಆದ್ದರಿಂದ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

**

ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿ ಚುನಾವಣೆಯೊಳಗೆ ಒದಗಿಸಬೇಕಾದ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡಲು ಕ್ರಮ ವಹಿಸಲಾಗುವುದು – ಮೋಹನ್, ಸಹಾಯಕ ಚುನಾವಣಾಧಿಕಾರಿ.

**

ಗ್ರಾಮಕ್ಕೆ ಮೂಲಸೌಕರ್ಯ ಒದಗಿಸಿಕೊಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ 3 ಮನವಿ ಸಲ್ಲಿಸಿದ್ದೇವೆ. ಆದರೆ, ಈವರೆಗೆ ಯಾವ ಸೌಲಭ್ಯ ಒದಗಿಸಿಲ್ಲ. ಇದರಿಂದ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದೇವೆ – ಕರಿಯಪ್ಪ, ಮುಖಂಡ, ಚಂಗಡಿ ಗ್ರಾಮ.

**

ಬಿ.ಬಸವರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT