‘ಕೈ’ ಬಳಗಕ್ಕೆ ಸುಡಲಿದೆ ‘ಬಂಡಾಯ’ದ ಬಿಸಿ

7
ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಒಕ್ಕಲಿಗರಿಗೆ ಮಣೆ, ಸ್ವಪಕ್ಷದ ವಿರುದ್ಧವೇ ಆಕಾಂಕ್ಷಿಗಳು ತೊಡೆ ತಟ್ಟುವ ಸಾಧ್ಯತೆ

‘ಕೈ’ ಬಳಗಕ್ಕೆ ಸುಡಲಿದೆ ‘ಬಂಡಾಯ’ದ ಬಿಸಿ

Published:
Updated:

ಚಿಕ್ಕಬಳ್ಳಾಪುರ: ಕಾಂಗ್ರೆಸ್ ವರಿಷ್ಠರ ಹಗ್ಗ ಜಗ್ಗಾಟ, ತೀವ್ರ ತಿಕ್ಕಾಟಗಳ ಮಧ್ಯೆ ಕೊನೆಗೂ ಬಿಡುಗಡೆಯಾದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧೆಯ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೆ ಟಿಕೆಟ್‌ ಕೈತಪ್ಪಿದ್ದು, ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ರೊಚ್ಚಿಗೆದ್ದ ಬೆಂಬಲಿಗರು ವರಿಷ್ಠರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಪೈಪೋಟಿ ಜೋರಾಗಿತ್ತು. ಕೆಲವೆಡೆ ತೆರೆಮರೆಯ ವೈಷಮ್ಯ ಬೀದಿಗೆ ಬಂದು ‘ಬಣ’ ರಾಜಕೀಯಕ್ಕೆ ಶುರುವಿಟ್ಟುಕೊಂಡಿತ್ತು. ಇದೀಗ ಅದಕ್ಕೆ ಹೈಕಮಾಂಡ್ ಮೊಹರಿನ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಮತ್ತಷ್ಟು ತುಪ್ಪ ಸುರಿದಿದೆ.

ಶಿಡ್ಲಘಟ್ಟ ಕ್ಷೇತ್ರದಲ್ಲಿ ವಿ. ಮುನಿ ಯಪ್ಪ, ಗೌರಿಬಿದನೂರಿನಲ್ಲಿ ಎನ್.ಎಚ್. ಶಿವಶಂಕರರೆಡ್ಡಿ, ಚಿಕ್ಕಬಳ್ಳಾ ಪುರದಲ್ಲಿ ಡಾ.ಕೆ. ಸುಧಾಕರ್, ಬಾಗೇಪಲ್ಲಿ ಯಲ್ಲಿ ಎಸ್‌.ಎನ್‌.ಸುಬ್ಬಾರೆಡ್ಡಿ ಮತ್ತು ಚಿಂತಾ ಮಣಿ ಕ್ಷೇತ್ರದಲ್ಲಿ ವಾಣಿ ಕೃಷ್ಣಾ ರೆಡ್ಡಿ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿದೆ. ಇದು ಇತರ ಆಕಾಂಕ್ಷಿಗಳಲ್ಲಿ ಮುನಿಸು ಉಂಟು ಮಾಡಿದೆ.

ಎಲ್ಲ ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯದವರಿಗೇ ಕಾಂಗ್ರೆಸ್‌ ಟಿಕೆಟ್ ನೀಡಿರುವುದು ವಿಶೇಷ. ಈ ಪೈಕಿ ಇಬ್ಬರು (ವಿ.ಮುನಿಯಪ್ಪ ಮತ್ತು ಶಿವಶಂಕರರೆಡ್ಡಿ) ಮಾತ್ರ ಮೂಲ ಕಾಂಗ್ರೆಸಿಗರಾಗಿದ್ದು, ಉಳಿದವರು ಬೇರೆ ಪಕ್ಷಗಳಿಂದ ವಲಸೆ ಬಂದವರು. ಇದು ಹಿಂದುಳಿದ ವರ್ಗಗಳ ಮುಖಂಡರು ಮತ್ತು ಮೂಲ ಕಾಂಗ್ರೆಸಿಗರ ಕಣ್ಣು ಕೆಂಪಗಾಗಿಸಿ ಸದ್ಯ ಸ್ಥಳೀಯ ರಾಜಕೀಯ ವಲಯದಲ್ಲಿ ಚರ್ಚೆ ಮತ್ತು ಅಸಮಾಧಾನಕ್ಕೆ ಎಡೆ ಮಾಡಿಕೊಟ್ಟಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಬಾಗೇಪಲ್ಲಿಯ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್‌ ಮುಖಂಡ ಎನ್.ಸಂಪಂಗಿ ಅವರು ಸೋಮವಾರ ನಗರದಲ್ಲಿ ವರಿಷ್ಠರು ಮತ್ತು ಸಂಸದ ವೀರಪ್ಪ ಮೊಯಿಲಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿರ್ಧಾರ ಬದಲಿಸುವಂತೆ ವರಿಷ್ಠರಿಗೆ ಗಡುವು ನೀಡಿದ್ದಾರೆ.

ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ, ಶಿಡ್ಲ ಘಟ್ಟ ಮತ್ತು ಬಾಗೇಪಲ್ಲಿಯಲ್ಲಿ ಕಾಂಗ್ರೆಸ್ ಟಿಕೆಟ್ ಆಕ್ಷಾಂಕಿಗಳು ಬಂಡಾಯ ಎದ್ದು ‘ಅಧಿಕೃತ’ ಅಭ್ಯರ್ಥಿಗಳಿಗೆ ಮಗ್ಗಲು ಮುಳ್ಳಾಗುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಯಾವೆಲ್ಲ ಕ್ಷೇತ್ರಗಳಲ್ಲಿ ಪರಿಸ್ಥಿತಿ ಹೇಗೆ ಎಂದು ನೋಡುವುದಾದರೆ..

ಹೊಸ ಬಾಟಲಿ; ಹಳೆ ಮದ್ಯ

ಚಿಂತಾಮಣಿ: ಚಿಂತಾಮಣಿ ಕ್ಷೇತ್ರದ ಚಿತ್ರಣವನ್ನು ‘ಹೊಸ ಬಾಟಲಿಯಲ್ಲಿ ಹಳೆ ಮದ್ಯ’ ಎಂದೇ ಬಣ್ಣಿಸಬಹುದು. ಏಕೆಂದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ತೊಡೆ ತಟ್ಟಿದವರೇ ಈ ಬಾರಿ ಕೂಡ ಕಣಕ್ಕೆ ಇಳಿಯಲು ಅಣಿಯಾಗಿದ್ದಾರೆ.

ಸಂಸದ ಕೆ.ಎಚ್‌. ಮುನಿಯಪ್ಪ ಮತ್ತು ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್‌ ಅವರ ನಡುವಿನ ‘ಹಾವು–ಮುಂಗಸಿ ಕಾದಾಟ’ ಈ ಬಾರಿ ಕೂಡ ಮುಂದುವರಿದಿದ್ದು, ಪರಿಣಾಮ ಎರಡನೇ ಬಾರಿ ಕೂಡ ಇಲ್ಲಿ ವಾಣಿ ಕೃಷ್ಣಾರೆಡ್ಡಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.

ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿರುವ ವಾಣಿ ಅವರಿಗೆ ಟಿಕೆಟ್ ಘೋಷಿಸಿದ್ದು, ಟಿಕೆಟ್ ಆಕಾಂಕ್ಷಿ ಗಳಲ್ಲಿ ಚಿಂತಾಮಣಿ ಮೂಲದ ಬೆಂಗಳೂರು ನಿವಾಸಿ ಡಾ. ಶ್ರೀನಿವಾಸ್ ಅವರಿಗೆ ಬೇಸರ ಮೂಡಿಸಿದೆ.

ಡಾ. ಶ್ರೀನಿವಾಸ್‌ ಅವರನ್ನು ಕೇಳಿದರೆ, ‘ನಾನು ಕೆ.ಎಚ್.ಮುನಿಯಪ್ಪ ಅವರ ಅನುಯಾಯಿ. 40 ವರ್ಷಗಳಿಂದ ಕಾಂಗ್ರೆಸ್‌ಗೆ ದುಡಿದಿರುವೆ. ಅವರೇ ಅರ್ಜಿ ಸಲ್ಲಿಸು ಟಿಕೆಟ್ ಕೊಡಿಸುತ್ತೇನೆ ಎಂದು ಕೂಡ ಹೇಳಿದ್ದರು. ಕೊನೆಯ ಗಳಿಗೆಯಲ್ಲಿ ಏನಾಯ್ತೋ ನನಗೆ ಟಿಕೆಟ್ ಕೊಡಲಿಲ್ಲ. ಹಾಗಂತ ನಾನು ಬಂಡಾಯ ಏಳುವುದಿಲ್ಲ. ಏಕೆಂದರೆ ನಾನು ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿ. ಪಕ್ಷಕ್ಕಾಗಿ ದುಡಿಯುವೆ’ ಎಂದು ಹೇಳಿದರು.

ಸ್ಪರ್ಧೆಗೆ ನಿರ್ಧಾರ

ಗೌರಿಬಿದನೂರು: ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಗೌರಿಬಿದನೂರು ವಿಧಾನಸಭೆ ಕ್ಷೇತ್ರದ ‘ಹ್ಯಾಟ್ರಿಕ್’ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಅವರಿಗೆ ಹೈಕಮಾಂಡ್ ಸತತ ನಾಲ್ಕನೆ ಬಾರಿ ಟಿಕೆಟ್ ನೀಡಿದೆ.

ಆದರೆ ಈ ಬಾರಿ ಟಿಕೆಟ್ ವಿಚಾರದಲ್ಲಿ ಶಿವಶಂಕರರೆಡ್ಡಿ ಅವರಿಗೆ ಸೆಡ್ಡು ಹೊಡೆದು ಅರ್ಜಿ ಸಲ್ಲಿಸಿದ್ದ ಮುಖಂಡ ಎಂ.ಎನ್. ರಾಧಾಕೃಷ್ಣ ಅವರು ‘ನಾನು ಕೂಡ ಶೀಘ್ರದಲ್ಲಿಯೇ ನಾಮಪತ್ರ ಸಲ್ಲಿಸಲಿದ್ದೇನೆ. ಆದರೆ ಸ್ಪರ್ಧೆಯ ವಿಚಾರ ನಮ್ಮ ಬೆಂಬಲಿಗರೊಂದಿಗೆ ಚರ್ಚಿಸಿ ತೀರ್ಮಾ ನಿಸುತ್ತೇನೆ. ಇನ್ನೆರಡು ದಿನಗಳಲ್ಲಿ ಇದಕ್ಕೆ ಉತ್ತರ ಸಿಗಲಿದೆ’ ಎಂದು ಅವರು ತಿಳಿಸಿದರು.

ರಾಧಾಕೃಷ್ಣ ಅವರು ಮುಖಂಡರ ಮನವೊಲಿಕೆಗೆ ಮನ್ನಣೆ ನೀಡಿ ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರಾ? ಅಥವಾ ಕಣಕ್ಕೆ ಇಳಿದು ಸ್ವಪಕ್ಷದ ಮುಖಂಡನ ವಿರುದ್ಧವೇ ಕಾದಾಟಕ್ಕೆ ಇಳಿಯಲಿದ್ದಾರಾ? ಎನ್ನುವುದು ಮುಂಬರುವ ದಿನಗಳಲ್ಲಿ ತಿಳಿದು ಬರಲಿದೆ.

ಮುನಿಯಪ್ಪಗೆ ಕಠಿಣ ಸವಾಲು?

ಶಿಡ್ಲಘಟ್ಟ: ಈ ಕ್ಷೇತ್ರದಲ್ಲಿ ‘ಗೆಲುವಿನ ಸರದಾರ’ ಎಂದೇ ಖ್ಯಾತರಾಗಿರುವ ಮಾಜಿ ಸಚಿವ ವಿ. ಮುನಿಯಪ್ಪ ಅವರು 9ನೇ ಚುನಾವಣೆ ಕಣಕ್ಕೆ ಧುಮುಕಲು ಈಗಾಗಲೇ ಪೂರ್ವಭಾವಿಯಾಗಿ ‘ಕಸರತ್ತು’ ನಡೆಸಿದ್ದಾರೆ. ಜೆಡಿಎಸ್ ಪಕ್ಷದೊಳಗಿನ ಭಿನ್ನಮತದ ‘ಲಾಭ’ ಪಡೆಯಲು ಹವಣಿಸುತ್ತಿರುವ ಈ ರಾಜಕೀಯ ‘ಮುತ್ಸದಿ’ ವಿರುದ್ಧ ಈ ಬಾರಿ ಸ್ವಪಕ್ಷದ ಮುಖಂಡರೊಬ್ಬರು ತೊಡೆ ತಟ್ಟಲು ಸಜ್ಜಾಗುತ್ತಿದ್ದಾರೆ.

ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಮುನಿಯಪ್ಪ ಅವರೊಂದಿಗೆ ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯದರ್ಶಿ ದೊಗರನಾಯಕನಹಳ್ಳಿ ಡಿ.ವಿ.ವೆಂಕಟೇಶಪ್ಪ ಮತ್ತು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಅವರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಇದೀಗ ಆಂಜಿನಪ್ಪ ಅವರು ಈ ಬಾರಿ ನಾನು ಚುನಾವಣೆಗೆ ಸ್ಪರ್ಧಿಸುವುದು ಖಚಿತ ಎಂದು ಹೇಳುತ್ತಿದ್ದಾರೆ.

‘ನಾನು ಮೊದಲಿನಿಂದಲೂ ಕಾಂಗ್ರೆಸ್‌ಗಾಗಿ ದುಡಿದಿರುವೆ. ಜತೆಗೆ ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಜನಸೇವೆ ಮಾಡಿರುವೆ. ನನ್ನ ಬಗ್ಗೆ ಜನಾಭಿಪ್ರಾಯ ಚೆನ್ನಾಗಿದೆ. ಈ ವೇಳೆ ನಾನು ಸ್ಪರ್ಧೆಯಿಂದ ಹಿಂದೆ ಸರಿದರೆ ಇಲ್ಲ ಸಲ್ಲದ ಅಭಿಪ್ರಾಯಗಳು ಸೃಷ್ಟಿಯಾಗುತ್ತವೆ. ಇವತ್ತು ಶಿಡ್ಲಘಟ್ಟಕ್ಕೆ ನಮ್ಮಂತಹ ಕೆಲಸ ಮಾಡುವವರ ಅವಶ್ಯಕತೆ ಬಹಳಷ್ಟಿದೆ’ ಎನ್ನುತ್ತಾರೆ ಆಂಜಿನಪ್ಪ.

‘ಮುನಿಯಪ್ಪ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೂ ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದ್ದಾರೆ. ಏನೂ ಕೆಲಸ ಮಾಡಿಲ್ಲ ಎನ್ನುವುದಕ್ಕೆ ಪೂರಕವಾಗಿ ಅವರಿಗೆ ಈ ಬಾರಿ ಎಷ್ಟು ಮತಗಳು ಬೀಳುತ್ತವೆ ಕಾಯ್ದು ನೋಡಿ. ನಾನು ಮೂಲ ಕಾಂಗ್ರೆಸಿಗ ಹೀಗಾಗಿ ಕಾಂಗ್ರೆಸ್ ಬಂಡಾಯ ಎಂತಾದರೂ ಎಂದುಕೊಳ್ಳಿ ಅಥವಾ ಪಕ್ಷೇತರನಾದರೂ ಎಂದುಕೊಳ್ಳಿ ಒಟ್ಟಿನಲ್ಲಿ ಸ್ಪರ್ಧೆ ಮಾಡುವುದು ಮಾತ್ರ ಖಚಿತ’ ಎಂದು ಹೇಳಿದರು.

ರಂಗೇರಿಸಲಿದೆ ‘ಬಂಡಾಯ’ ಕಣ

ಚಿಕ್ಕಬಳ್ಳಾಪುರ: ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಶಾಸಕ ಡಾ.ಕೆ.ಸುಧಾಕರ್ ಸೇರಿದಂತೆ ನಾಲ್ಕು ಆಕಾಂಕ್ಷಿಗಳು ವೀಕ್ಷಕರಿಗೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಸುಧಾಕರ್ ಅವರು ಟಿಕೆಟ್ ಗಿಟ್ಟಿಸಿಕೊಂಡಿದ್ದು ಉಳಿದವರಲ್ಲಿ ಅಸಮಾಧಾನ ಮೂಡಿಸಿದೆ.

ಉಳಿದ ಮೂರು ಆಕಾಂಕ್ಷಿಗಳ ಪೈಕಿ ಮುಖಂಡ ಕೆ.ವಿ.ನವೀನ್ ಕಿರಣ್ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಪಕ್ಷದ ಅಧಿಕೃತ ಹುರಿಯಾಳು ಸುಧಾಕರ್ ವಿರುದ್ಧವೇ ತೊಡೆ ತಟ್ಟಲು ಸಿದ್ಧರಾಗಿದ್ದಾರೆ. ಅದಕ್ಕಾಗಿಯೇ ಅವರು ಸುಮಾರು ಆರು ತಿಂಗಳಿಂದಲೇ ತಮ್ಮದೇ ರೀತಿಯಲ್ಲಿ ‘ತಾಲೀಮು’ ಕೂಡ ನಡೆಸಿದ್ದಾರೆ.

ಸ್ಪರ್ಧೆಯ ಕುರಿತು ನವೀನ್ ಕಿರಣ್ ಅವರನ್ನು ಕೇಳಿದರೆ, ‘ನಾನು ನೂರಕ್ಕೆ ನೂರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕೆ ಇಳಿಯುತ್ತೇನೆ. ಕ್ಷೇತ್ರದಲ್ಲಿ ಇವತ್ತು ಎಷ್ಟೊಂದು ಭ್ರಷ್ಟಾಚಾರ ನಡೆದಿದೆ ಎನ್ನುವುದು ಜಗಜ್ಜಾಹೀರಾದರೂ ಶಾಸಕರಿಗೇ ಟಿಕೆಟ್‌ ಕೊಡುತ್ತಾರೆ ಎಂದರೆ ಏನು ಇದರ ಅರ್ಥ’ ಎಂದು ಪ್ರಶ್ನಿಸಿದರು.

‘ಶಾಸಕರಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಜನರಿಗೆ ಯಾವ ಸಂದೇಶ ರವಾನೆ ಮಾಡುತ್ತಿದೆ? ಜನರು ಅವರ ವಿರೋಧವಾಗಿದ್ದರೂ ಅವರಿಗೇ ಟಿಕೆಟ್ ನೀಡಿರುವುದು ಯಾವ ಕಾರಣಕ್ಕೆ ಎನ್ನುವುದು ಅರ್ಥವಾಗುತ್ತಿಲ್ಲ. ನಾನು ಏ.21ಕ್ಕೆ ನಾಮಪತ್ರ ಸಲ್ಲಿಸುತ್ತೇನೆ’ ಎಂದು ಹೇಳಿದರು.

ರಾಜಕೀಯ ಕುಟುಂಬಕ್ಕೆ ಸೇರಿದ ನವೀನ್ ಕಿರಣ್ ಅವರು ಬಲಿಜಿಗ ಸಮುದಾಯದ ‘ಪ್ರಭಾವಿ’ ಮುಖಂಡ ಕೂಡ ಆಗಿದ್ದಾರೆ. ಇದು ಎರಡನೇ ಬಾರಿ ‘ಅದೃಷ್ಟ’ ಪರೀಕ್ಷೆಗೆ ಮುಂದಾಗುತ್ತಿರುವ ಸುಧಾಕರ್ ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಈ ‘ಬಂಡಾಯ’ ಸ್ಪರ್ಧೆಯಿಂದಾಗಿಯೇ ಈ ಬಾರಿಯ ಚುನಾವಣೆ ಹಿಂದೆಂದಿಗಿಂತಲೂ ರಂಗೇರಲಿದೆ ಎನ್ನುತ್ತಾರೆ ಸ್ಥಳೀಯ ರಾಜಕೀಯ ಬಲ್ಲವರು.

ಇನ್ನುಳಿದ ಆಕ್ಷಾಂಕಿಗಳಾದ ಗಂಗರೇಕಾಲುವೆ ನಾರಾಯಣಸ್ವಾಮಿ, ಅಡಗಲ್‌ ಶ್ರೀಧರ್ ಅವರು ಈವರೆಗೆ ತಮ್ಮ ನಿರ್ಧಾರ ಪ್ರಕಟಿಸಿಲ್ಲ. ನಾಮಪತ್ರ ಸಲ್ಲಿಕೆ ಕೊನೆಗೊಳ್ಳುವವರೆಗೂ ಇನ್ನೂ ಏನೆಲ್ಲ ಬೆಳವಣಿಗೆಗಳು ಸಂಭವಿಸಲಿವೆ ಕಾಯ್ದು ನೋಡಬೇಕು.

ರೊಚ್ಚಿಗೆದ್ದ ಸಂಪಂಗಿ ಬಣ

ಬಾಗೇಪಲ್ಲಿ: ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಈ ಬಾರಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ‘ಕೈ’ ಹಿಡಿದಿದೆ. ‘ಪ್ರಬಲ’ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಎನ್.ಸಂಪಂಗಿ ಅವರಿಗೆ ತೀವ್ರ ಆಕ್ರೋಶ ಮೂಡಿಸಿದೆ. ಅವರ ಬೆಂಬಲಿಗರಂತೂ ಚಿಕ್ಕಬಳ್ಳಾಪುರದಲ್ಲಿ ಸೋಮವಾರ ವೀರಪ್ಪ ಮೊಯಿಲಿ ಅವರ ವಿರುದ್ಧ ಬಹಿರಂಗವಾಗಿಯೇ ಧಿಕ್ಕಾರ ಕೂಗಿದರು.

ಈ ಬಾರಿ ನನಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂದು ‘ಆತ್ಮವಿಶ್ವಾಸ’ ವ್ಯಕ್ತಪಡಿಸುತ್ತಿದ್ದ ಸಂಪಂಗಿ ಅವರಿಗೆ ಪಕ್ಷದ ವರಿಷ್ಠರ ನಿರ್ಧಾರ ಭ್ರಮನಿರಸನ ಉಂಟು ಮಾಡಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಸಂಪಂಗಿ ಕೆಂಡವಾಗಿದ್ದಾರೆ.

ಇದೇ ವೇಳೆ ಅವರು ‘ಒಂದೊಮ್ಮೆ ನನಗೆ ಟಿಕೆಟ್ ಸಿಗದಿದ್ದರೆ ನನ್ನ ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ತಿಳಿಸುವ ಜತೆಗೆ ‘ಬಂಡಾಯ’ ಸ್ಪರ್ಧೆಯ ಸುಳಿವು ಕೂಡ ನೀಡಿದ್ದಾರೆ.

ಆದರೆ ಅವರು ಕೊನೆ ಕ್ಷಣದಲ್ಲಿ ವರಿಷ್ಠರ ‘ಸಮಾಧಾನ’ದ ಭರವಸೆಗೆ ಸಮ್ಮತಿ ಸೂಚಿಸಿ ಸುಮ್ಮನಾಗುತ್ತಾರಾ? ಅಥವಾ ಕಣಕ್ಕೆ ಧುಮಕುತ್ತಾರಾ ಶೀಘ್ರ ಸ್ಪಷ್ಟಪಡಿಸುವ ಭರವಸೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry