ಭಾನುವಾರ, ಡಿಸೆಂಬರ್ 15, 2019
25 °C
ದೇಹಕ್ಕೆ ತಂಪು, ಆರೋಗ್ಯಕ್ಕೆ ಸಹಕಾರಿ; ಕಡಿಮೆ ಖರ್ಚಿನಲ್ಲಿ ರುಚಿಯಾದ ಉತ್ತಮ ಗುಣಮಟ್ಟದ ಪಾನೀಯ

ಬಿಸಿಲಿಗೆ ಬಾದಾಮ್‌ ಗೋಂದ್‌ ಶರಬತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಸಿಲಿಗೆ ಬಾದಾಮ್‌ ಗೋಂದ್‌ ಶರಬತ್‌

ಶಿಡ್ಲಘಟ್ಟ: ಬೇಸಿಗೆಯ ಬಿಸಿಲಿನ ತಾಪ ಏರುತ್ತಿದೆ. ಅದಕ್ಕೆ ತಕ್ಕಂತೆ ದೇಹದ ಉಷ್ಣಾಂಶ ಜಾಸ್ತಿಯಾಗಿ ದಾಹ ತಣಿಸಲು ತಂಪು ನೀರಿಗೆ ಮೊರೆ ಹೋಗುವುದು ಸಹಜ. ಜೊತೆಗೆ ಹಣ್ಣು, ಸೌತೆಕಾಯಿ, ಬಾರ್ಲಿ ಗಂಜಿ ಮೊದಲಾದವುಗಳಿಗೆ ಜನರು ಮೊರೆಹೋಗುತ್ತಿದ್ದಾರೆ.

ಇವುಗಳ ಹೊರತಾಗಿ ಶಿಡ್ಲಘಟ್ಟದಲ್ಲಿ ಜನರು ಬಾದಾಮ್‌ ಗೋಂದ್‌ ಶರಬತ್‌ನ ಮೊರೆ ಹೋಗುತ್ತಿದ್ದಾರೆ. ಇಡೀ ಜಿಲ್ಲೆಯಲ್ಲಿ ಎಲ್ಲೂ ಸಿಗದ ಈ ವಿಶಿಷ್ಟ ಶರಬತ್‌ ಅನ್ನು ಅಬ್ದುಲ್‌ ರಹೀಮ್‌ ತಯಾರಿಸುತ್ತಿದ್ದಾರೆ. ಬಿಸಿಲು ಏರಿದಂತೆ ಶರಬತ್‌ಗೆ ಬೇಡಿಕೆಯೂ ಹೆಚ್ಚಿದೆ.

ತುಳಸಿ ಬೀಜ, ಬುನ್ಸಿ, ಕೆಂಪು ಕಲ್ಲುಸಕ್ಕರೆಯ ನೀರು, ರೂಹಬ್ಜಾ, ನನ್ನಾರಿ, ಬಾದಾಮ್‌ ಗೋಂದು ಇವನ್ನೆಲ್ಲ ರಾತ್ರಿ ನೆನೆಸಿಡುವರು. ಮರುದಿನ ಇವುಗಳಿಗೆ ಹದವಾದ ಪ್ರಮಾಣದಲ್ಲಿ ನೀರನ್ನು ಮಿಶ್ರಣ ಮಾಡಿ ತಯಾರಾಗುವುದೇ ಬಾದಾಮ್‌ ಗೋಂದ್‌ ಶರಬತ್‌.

‘ಈ ಶರಬತ್‌ ತಯಾರಿಸುವ ಕಲೆಯನ್ನು ಕಲಿತದ್ದು ಕೋಲಾರದ ಮಹಬೂಬ್‌ ಪಾಷಾ ಅವರಿಂದ. ಸುಮಾರು ಎಂಟು ವರ್ಷಗಳಿಂದ ಈ ಶರಬತ್‌ ತಯಾರಿಸುತ್ತಿದ್ದೇನೆ. ಬೇಸಿಗೆಯಲ್ಲಿ ಮಾತ್ರ ಇದಕ್ಕೆ ಬೇಡಿಕೆ. ಉಳಿದ ಕಾಲದಲ್ಲಿ ಕಡ್ಲೇಕಾಯಿ, ಹಣ್ಣು ಮಾರುತ್ತೇನೆ’ ಎಂದು ಅಬ್ದುಲ್‌ ರಹೀಮ್‌ ಹೇಳುವರು.

‘ಬಿಸಿಲಿನ ತಾಪಕ್ಕೆ ತಂಪು, ಸುಸ್ತಾದಾಗ ಟಾನಿಕ್‌ನಂತೆ ಕೆಲಸ ಮಾಡುತ್ತದೆ. ಹೊಟ್ಟೆ ಉರಿ, ಕಣ್ಣುರಿ, ಭೇದಿಗೆ ಔಷಧಿಯಾಗಿ ಶರಬತ್‌ ಕೆಲಸ ಮಾಡುತ್ತದೆ. ರೈಲ್ವೆ ನಿಲ್ದಾಣದ ಬಳಿ ತಳ್ಳುವ ಗಾಡಿ ಇಟ್ಟುಕೊಂಡು ಶರಬತ್‌ ತಯಾರಿಸುತ್ತೇನೆ. ಒಂದು ಲೋಟಕ್ಕೆ ₹ 10. ದಿನಕ್ಕೆ 200ರಿಂದ 250 ಲೋಟ ಮಾರಾಟ ಮಾಡುತ್ತೇನೆ’ ಎಂದು ಹೇಳುವರು.

‘ಚಿಕ್ಕಬಳ್ಳಾಪುರದಲ್ಲಿ ಈ ಶರಬತ್‌ ತಯಾರಿಸುವವರು ಯಾರೂ ಇಲ್ಲ. ಅಲ್ಲಿ ಅಂಗಡಿಯಿಟ್ಟರೆ ವ್ಯಾಪಾರ ಚೆನ್ನಾಗಿ ಆಗುತ್ತದೆ ಎಂದು ಬಹಳಷ್ಟು ಮಂದಿ ಹೇಳುತ್ತಾರೆ. ಆದರೆ ನಾನು ವಾಸಿಸುವ ಇಲ್ಲಿಯ ಸಿದ್ದಾರ್ಥನಗರವನ್ನು ಬಿಟ್ಟು ದೂರದ ಊರಿಗೆ ಹೋಗಲಾಗದೆ ಇಲ್ಲೇ ಇದ್ದೇನೆ’ ಎಂದು ಹೇಳುವರು.

‘ಬಾದಾಮ್‌ ಗೋಂದ್‌ ಶರಬತ್‌ ತಯಾರಿಕೆಗೆ ಬೇಕಾದ ಕಚ್ಚಾ ಸಾಮಗ್ರಿಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಹಾಗಾಗಿ ಸಾಮಗ್ರಿಗಳನ್ನು ಬೆಂಗಳೂರಿನಿಂದ ತರುತ್ತೇನೆ. ಗುಣಮಟ್ಟ ಕಾಯ್ದುಕೊಂಡರೆ ಮಾತ್ರ ಗ್ರಾಹಕರು ಮೆಚ್ಚುತ್ತಾರೆ, ಕುಡೀತಾರೆ. ನನಗೂ ವ್ಯಾಪಾರ ಆಗುತ್ತದೆ. ಲಾಭಕ್ಕಾಗಿ ಹೆಸರು ಕೆಡಿಸಿಕೊಳ್ಳಲು ಇಷ್ಟವಿಲ್ಲ ’ ಎಂದು ಅವರು ವಿವರಿಸುವರು.

‘ಬೇಸಿಗೆಯಲ್ಲಿ ದೇಹದ ಉಷ್ಣತೆ ಹೆಚ್ಚಾಗಿ ಬಾಯಲ್ಲಿ ಹುಣ್ಣಾಗುತ್ವೆ. ಬಾದಾಮ್‌ ಗೋಂದ್‌ ಶರಬತ್‌ ಕುಡಿಯುವುದರಿಂದ ದಣಿವು ಆರುವುದಲ್ಲದೆ, ಹುಣ್ಣು ಕಡಿಮೆಯಾ ಗುತ್ತವೆ. ನಮ್ಮೂರಿನಲ್ಲಷ್ಟೇ ಸಿಗುವುದ ರಿಂದ ಪ್ರತಿದಿನ ಕುಡಿಯುತ್ತೇನೆ. ಬೆಲೆಯೂ ಹೆಚ್ಚಿಲ್ಲ. ಗುಣಮಟ್ಟದ ಈ ಶರಬತ್‌ ನಮಗೆಲ್ಲಾ ಇಷ್ಟ’ ಎನ್ನುವರು ಮಹಬೂಬ್‌ ಪಾಷಾ.

**

ದುಡಿಮೆಗೆ ತಕ್ಕಷ್ಟು ಫಲ ಬೇಕು. ವ್ಯಾಪಾರ ಮಾಡೋದು ಲಾಭಕ್ಕಾಗಿ. ಹೆಸರು ಹಾಳು ಮಾಡಿಕೊಂಡು ಗುಣಮಟ್ಟ ಕೆಡಿಸಿಕೊಂಡರೆ ಗಟ್ಟಿಯಾಗಿ ಉಳಿಯಲ್ಲ – ಅಬ್ದುಲ್‌ ರಹೀಮ್‌, ಶರಬತ್‌ ವ್ಯಾಪಾರಿ.

**

ಡಿ.ಜಿ. ಮಲ್ಲಿಕಾರ್ಜುನ

ಪ್ರತಿಕ್ರಿಯಿಸಿ (+)