ಬುಧವಾರ, ಜುಲೈ 15, 2020
22 °C
ದಾಳಿಯ ಹಿಂದೆ ಬಿಜೆಪಿ ಕೈವಾಡ: ಕಾಂಗ್ರೆಸ್ ಆರೋಪ– ಪ್ರತಿಭಟನೆಗೆ ಮುಂದಾದ ಕಾರ್ಯಕರ್ತರು

ಕಾಂಗ್ರೆಸ್ ಮುಖಂಡರ ಮನೆಗಳಿಗೆ ಐಟಿ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್ ಮುಖಂಡರ ಮನೆಗಳಿಗೆ ಐಟಿ ದಾಳಿ

ಕೊಪ್ಪ: ಕೇಂದ್ರೀಯ ಆದಾಯ ತೆರಿಗೆ ಅಧಿಕಾರಿಗಳ ತಂಡ ಸೋಮವಾರ ಬೆಳಿಗ್ಗೆ ಸ್ಥಳೀಯ ಕಾಂಗ್ರೆಸ್ ಮುಖಂಡರ ಮನೆಗಳಿಗೆ ಏಕ ಕಾಲಕ್ಕೆ ದಾಳಿ ನಡೆಸಿದ್ದಾರೆ.

ಬೆಳಿಗ್ಗೆ 6 ಗಂಟೆಗೆ ಕೊಪ್ಪದ ತಿಲಕ್ ರಸ್ತೆಯಲ್ಲಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ಮನೆ ಹಾಗೂ ಬಾಳಗಡಿಯ ಚಿಟ್ಟೆಮಕ್ಕಿ ರಸ್ತೆಯಲ್ಲಿರುವ ಕಸಬಾ ಹೋಬಳಿ ಅಧ್ಯಕ್ಷ ಕೆ.ಎಸ್. ಸುಬ್ರಹ್ಮಣ್ಯ ಶೆಟ್ಟಿ ಮನೆಗಳಿಗೆ 15ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿ ಕಾರ್ಯಾಚರಣೆಗೆ ಮುಂದಾಯಿತು. ಬಳಿಕ ಸುಬ್ರಹ್ಮಣ್ಯ ಶೆಟ್ಟಿ ಅವರ ಸೆಲೆಕ್ಟ್ ವೈನ್ಸ್, ಸಹೋದರ ಗಣೇಶ್ ಶೆಟ್ಟಿ ಅವರ ಎಸ್.ವಿ.ಎಸ್. ಟೈಲ್ಸ್ ಅಂಗಡಿಗಳಿಗೂ ದಾಳಿ ನಡೆಸಿ ತಪಾಸಣೆ ನಡೆಸಲಾಯಿತು. ಇದೇ ವೇಳೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನುಗ್ಗಿ ಮಂಜುನಾಥ್ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ಡಿವೈಎಸ್‌ಪಿ ರವಿ ನಾಯಕ್ ಮಧ್ಯೆ ಪ್ರವೇಶಿಸಿ, ‘ಸುಧೀರ್ ಮೇಲೆ ಹಲ್ಲೆ ನಡೆದಿಲ್ಲ. ಇನ್ನು 20 ನಿಮಿಷದಲ್ಲಿ ಕಾರ್ಯಾಚರಣೆ ಮುಗಿಯಲಿದೆ’ ಎಂದು ಸ್ಪಷ್ಟಪಡಿಸಿದರು. ಕೆಲ ಹೊತ್ತಿನಲ್ಲಿ ಐಟಿ ಅಧಿಕಾರಿಗಳು ಕಾರ್ಯಾಚರಣೆ ಮುಗಿಸಿ ತಾವು ಬಂದಿದ್ದ ಕಾರಲ್ಲಿ ಹಿಂತಿರುಗಿದರು. ಸುಬ್ರಹ್ಮಣ್ಯ ಶೆಟ್ಟಿ ಮನೆಯಲ್ಲಿ ರಾತ್ರಿ 8ರವರೆಗೂ ಕಾರ್ಯಾಚರಣೆ ಪೂರ್ಣಗೊಂಡಿಲ್ಲ.

ಮೂರು ಕಡೆ ದಾಳಿ

ಜಯಪುರ/ಬಾಳೆಹೊನ್ನೂರು: ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಂ.ಸತೀಶ್ ಸೇರಿದಂತೆ ಜಯಪುರ ಹಾಗೂ ಹೇರೂರು ಗ್ರಾಮದ ಕುಕ್ಕೊಡಿಗೆಯ ಕಾಂಗ್ರೆಸ್ ಮುಖಂಡರ ಮನೆಗೆ ಸೋಮವಾರ ಬೆಳಿಗ್ಗೆ ಆದಾಯ ತೆರಿಗೆ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು.

8 ಮಂದಿ ತಂಡ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕುಕ್ಕೊಡಿಗೆ ರವೀಂದ್ರ ಮನೆಗೆ ದಾಳಿ ನಡೆಸಿದ್ದು,  ಈ ವೇಳೆ ರವೀಂದ್ರ ತಪಾಸಣೆಗೆ ಸಹಕರಿಸಿದರು. ದಾಖಲೆ ಪತ್ರಗಳನ್ನು ಪರಿಶೀಲಿಸಿದ ಅಧಿಕಾರಿಗಳು ಬ್ಯಾಂಕ್‌ನ ಹಣಕಾಸು ವಿವರಗಳನ್ನು ಕೇಳಿ ಪಡೆದರು. ರವೀಂದ್ರ ಅವರ ಸೋದರ ಸಂಬಂಧಿ ನಾಗರಾಜಗೌಡ ಅವರ ನಿವಾಸದ ಮೇಲೂ ದಾಳಿ ನಡೆಯಿತು.

ಬೆಳಿಗ್ಗೆ 7ಕ್ಕೆ ಆರಂಭಗೊಂಡ ತನಿಖೆ ಸಂಜೆ ಆರು ಗಂಟೆಯವರೆಗೂ ಮುಂದುವರೆಯಿತು. ಕುಕ್ಕೊಡಿಗೆ ರವೀಂದ್ರ ಮಾತನಾಡಿ ‘ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಅವರಿಗೆ ಎಲ್ಲ ಸಹಕಾರ ನೀಡಿದ್ದೇನೆ. ಹಣಕಾಸಿನ ಯಾವುದೇ ಅವ್ಯವಹಾರ ನಡೆಸಿಲ್ಲ. ಈ ಬಗ್ಗೆ ಮುಂದಿನ ಒಂದೆರಡು ದಿನಗಳಲ್ಲಿ ಮಾಹಿತಿ ನೀಡುವುದಾಗಿ’ ತಿಳಿಸಿದರು.

ಜಯಪುರ ವರದಿ: ಕೊಪ್ಪ ತಾಲ್ಲೂಕಿನ ಜಯಪುರದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಂ.ಸತೀಶ್ ಮನೆ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ಬೆಳಿಗ್ಗೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ಪರಿಶೀಲಿಸಿದರು. ಇದಕ್ಕೂ ಮುನ್ನ  ಸೀಗೋಡಿನಲ್ಲಿರುವ ಮನೆಗೂ ತೆರಳಿ ತನಿಖೆ ನಡೆಸಿತು. ಜಯಪುರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಕರೆತಂದು ಅಲ್ಲಿ ಅವರು ನಡೆಸಿರುವ ಹಣಕಾಸಿನ ವ್ಯವಹಾರಗಳ ಕುರಿತು ಮಾಹಿತಿ ಪಡೆಯಿತು.

ತೆಂಗಿನ ಮನೆಯಲ್ಲಿರುವ ಅವರ ಫಾರ್ಮ್‌ಗೆ ಹೌಸ್‌ಗೆ ಕರೆದೊಯ್ದು ಅಧಿಕಾರಿಗಳು ದಾಖಲೆ ಪತ್ರ ಹಾಗೂ ಕಾಫಿ ವ್ಯವಹಾರಗಳ ದಾಖಲೆಗಳನ್ನು ಪರಿಶೀಲಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ತನಿಖೆ ವೇಳೆ ಯಾರನ್ನೂ ಮನೆಯ ಬಳಿ ತೆರಳಲು ಅಧಿಕಾರಿಗಳು ಹಾಗೂ ಪೊಲೀಸರು ಅವಕಾಶ ನೀಡಲಿಲ್ಲ. ಮೊಬೈಲ್ ಫೋನ್‌ ಬಳಸಲೂ ಅವಕಾಶ ನೀಡಲಿಲ್ಲ.

ಸಂಜೆ ವೇಳೆ ಸುಧೀರ್ ಕುಮಾರ್ ಮನೆ ಎದುರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರಿಗಳು ಸುಧೀರ್ ಮೇಲೆ ಹಲ್ಲೆ ನಡೆಸಿದರೆಂದು ಉದ್ರಿಕ್ತರಾಗಿ ಶಾಸಕ ಜೀವರಾಜ್, ಪ್ರಧಾನಿ ಮೋದಿ ಹಾಗೂ ಐಟಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆಗೆ ಮುಂದಾದರು. ಅವರನ್ನು ನಿಯಂತ್ರಿಸಲು ಪೊಲೀಸ್ ಹಾಗೂ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯನ್ನು ಬಳಸಲಾಯಿತು. ‘ಸುಧೀರ್ ಅವರನ್ನು ನಮಗೆ ತೋರಿಸಿ, ಹಲ್ಲೆ ನಡೆದಿಲ್ಲವೆಂದು ಅವರೇ ಸ್ಪಷ್ಟಪಡಿಸಲಿ’ ಎಂದು ಕಾರ್ಯಕರ್ತರು ಪಟ್ಟುಹಿಡಿದರು.

ಸುಧೀರ್ ಕುಮಾರ್ ಮಾತನಾಡಿ ‘ಬಿಜೆಪಿಯವರು ಸೋಲಿನ ಹತಾಶೆಯಿಂದ ಐಟಿ ದಾಳಿ ನಡೆಸಿದ್ದಾರೆ. ಇಂತಹ ದಾಳಿಗಳಿಂದ ನನ್ನ ಆತ್ಮಸ್ಥೈರ್ಯ ಕುಂದಿಸಲಾಗದು. ನನ್ನ ಬಳಿ ₹5 ಸಾವಿರ ಹಣವೂ ಇರಲಿಲ್ಲ. ಇತ್ತೀಚೆಗೆ ಗಂಡನನ್ನು ಕಳೆದುಕೊಂಡ ಅಕ್ಕ ಮನೆ ಖರೀದಿಗೆಂದು ತೆಗೆದಿಟ್ಟಿದ್ದ ₹1 ಲಕ್ಷ ಮುಂಗಡ ಹಣ ಮತ್ತು ಕರಾರು ಪತ್ರ ಸಿಕ್ಕಿದೆ. ಅಮ್ಮನ ತಾಳಿಸರವನ್ನು ತೂಕ ಮಾಡಬೇಕೆಂದು ಅಧಿಕಾರಿಗಳು ಕೇಳಿದಾಗ ಸಿಟ್ಟಿನಿಂದ ಪ್ರತಿಭಟಿಸಿದ್ದೇನೆ’ ಎಂದರು.

ನೀವು ಕಾಂಗ್ರೆಸ್ಸಿನಲ್ಲಿ ಯಾಕೆ ಕೆಲಸ ಮಾಡುತ್ತೀರಿ, ಸುಮ್ಮನಿರಲು ಆಗುವುದಿಲ್ಲವಾ ಎಂದು ಕೇಳಿದ್ದಾರೆ. ಕಪಾಟಿನಲ್ಲಿದ್ದ ₹5 ಲಕ್ಷದ ಮೌಲ್ಯದ ಪುಸ್ತಕಗಳನ್ನು ಅಧಿಕಾರಿಗಳು ಜಾಲಾಡಿ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಕೊನೆಗೆ ಅವರಿಗೆ ಕುವೆಂಪು ಹಾಗೂ ಶಾರದಾಂಬೆಯ 2 ಪುಸ್ತಕಗಳನ್ನು ಕೊಟ್ಟು ಕಳಿಸಿದ್ದೇನೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.