ನಾಮಪತ್ರ ಸಲ್ಲಿಕೆ ಇಂದಿನಿಂದ

7
ವಾಪಸ್ ಪಡೆಯಲು 27 ಕಡೆಯ ದಿನಾಂಕ

ನಾಮಪತ್ರ ಸಲ್ಲಿಕೆ ಇಂದಿನಿಂದ

Published:
Updated:

ಚಿಕ್ಕಮಗಳೂರು: ವಿಧಾನಸಭಾ ಚುನಾವಣೆಗೆ ಇದೇ 17ರಿಂದ ನಾಮಪತ್ರ ಸಲ್ಲಿಕೆ ಶುರುವಾಗಲಿದ್ದು, ಇದೇ 24ರವರೆಗೆ ಸಲ್ಲಿಸಲು ಅವಕಾಶ ಇದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಇಲ್ಲಿ ಸೋಮವಾರ ತಿಳಿಸಿದರು.

ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ತರೀಕೆರೆ, ಕಡೂರು, ಚಿಕ್ಕಮಗಳೂರು ಮತ್ತು ಮೂಡಿಗೆರೆ ಕ್ಷೇತ್ರದವರು ಆಯಾ ತಾಲ್ಲೂಕು ಕಚೇರಿಗಳಲ್ಲಿ ಹಾಗೂ ಶೃಂಗೇರಿ ಕ್ಷೇತ್ರದವರು ಕೊಪ್ಪ ತಾಲ್ಲೂಕು ಕಚೇರಿಯಲ್ಲಿ ಸಲ್ಲಿಸಬೇಕು. ಸರ್ಕಾರಿ ರಜಾ ದಿನಗಳಂದು ನಾಮಪತ್ರ ಸಲ್ಲಿಸಲು ಅವಕಾಶ ಇಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

25ರಂದು ಬೆಳಿಗ್ಗೆ 11 ಗಂಟೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್‌ ಪಡೆಯಲು 27ರಂದು ಮಧ್ಯಾಹ್ನ 3 ಗಂಟೆವರೆಗೆ ಅವಕಾಶ ಇದೆ. ಈ ಎಲ್ಲ ಪ್ರಕ್ರಿಯೆ ಮುಗಿದ ನಂತರ ಅಂತಿಮವಾಗಿ ಕಣದಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಲಿದೆ. ಮೇ 12ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ ಎಂದು ತಿಳಿಸಿದರು.

15ರಂದು ಮತ ಎಣಿಕೆ ನಡೆಯಲಿದೆ. ನಗರದ ಎಸ್‌ಟಿಜೆ ಕಾಲೇಜಿನಲ್ಲಿ ಈ ಪ್ರಕ್ರಿಯೆ ನಡೆಯಲಿದೆ, ಐದೂ ಕ್ಷೇತ್ರಗಳ ಏಣಿಕೆ ಇಲ್ಲಿ ನಡೆಯಲಿದೆ ಎಂದು ಹೇಳಿದರು.

ಮತದಾರರ ಪಟ್ಟಿಗೆ ಹೆಸರು ಸೇರಿಸಲು ವಿಶೇಷ ಆಂದೋಲನವಾಗಿ ಇದೇ 8ರಂದು ಮಿಂಚಿನ ನೋಂದಣಿ ನಡೆಸಲಾಯಿತು. ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ ಒಟ್ಟಾರೆ ಜಿಲ್ಲೆಯಲ್ಲಿ 10,636 ಅರ್ಜಿಗಳನ್ನು ಸ್ವೀಕರಿಸಲಾಗಿದೆ. 14ರವರೆಗೆ ಮತದಾರರ ಪಟ್ಟಿಗೆ ನೋಂದಣಿಗೆ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಹೇಳಿದರು.

ಕ್ಷಿಪ್ರ ಕಾರ್ಯಾಚರಣೆ ತಂಡ, ಅಬಕಾರಿ ತಂಡ, ಪೊಲೀಸ್‌ ತಂಡದವರು ಒಟ್ಟು 835 ಲೀಟರ್‌ (₹ 4.46 ಲಕ್ಷ) ಮದ್ಯ ವಶಪಡಿಸಿಕೊಂಡಿದ್ದಾರೆ. ಅಬಕಾರಿ ಕಾಯ್ದೆಯಡಿ 119 ಪ್ರಕರಣಗಳು ದಾಖಲಾಗಿವೆ. ನಿಯಮ ಉಲ್ಲಂಘನೆಯಡಿ ಕಡೂರಿನಲ್ಲಿ ಬಾರ್‌ ಅಂಡ್‌ ರೆಸ್ಟೊರೆಂಟ್‌ವೊಂದರ ಪರವಾನಗಿಯನ್ನು ಅಮಾನತು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 9,121 ಮಂದಿ ಬಂದೂಕು ಪರವಾನಗಿ ಹೊಂದಿದ್ದಾರೆ. ಈ ಪೈಕಿ 165 ಮಂದಿಗೆ ಬಂದೂಕನ್ನು ಠಾಣೆ ಸುಪರ್ದಿಗೆ ನೀಡುವುದಿರಂದ ವಿನಾಯಿತಿ ನೀಡಿದ್ದೇವೆ. ಒಂದಕ್ಕಿಂತ ಹೆಚ್ಚು ಬಂದೂಕು ಹೊಂದಿರುವವರಿಗೆ ಒಂದನ್ನು ಮಾತ್ರ ಇಟ್ಟುಕೊಳ್ಳಲು, ಅರಣ್ಯ ಸಮೀಪದ ಒಂಟಿ ಮನೆಯವರು, ನಕ್ಷಲ್‌ ಪ್ರದೇಶದವರಿಗೆ, ವರ್ತಕರಿಗೆ ವಿನಾಯಿತಿ ನೀಡಲಾಗಿದೆ. 8,651 ಬಂದೂಕುಗಳನ್ನು ಸುಪರ್ದಿಗೆ ನೀಡಿದ್ದಾರೆ ಎಂದರು.

ಕ್ರಿಮಿನಲ್‌ ಚಟುವಟಿಕೆ ಹಿನ್ನೆಲೆ ಇರುವವರು ಚುನಾವಣೆ ಸಂದರ್ಭದಲ್ಲಿ ತೊಂದರೆ ಮಾಡಬಹುದು ಎಂದು ಗುರುತಿಸಿ, 935 ಮಂದಿ ವಿರುದ್ಧ ಶಾಂತಿಭಂಗ (ಐಪಿಸಿ 107) ಮತ್ತು ಅಪರಾಧಕ್ಕೆ ಕುಮ್ಮಕ್ಕು (109) ಪ್ರಕರಣ ದಾಖಲಿಸಿ ಅವರಿಂದ ಬಾಂಡ್‌ ಪಡೆಯಲು ವ್ಯವಸ್ಥೆ ಮಾಡಲಾಗಿದೆ. 300 ಮಂದಿಯಿಂದ ಬಾಂಡ್‌ ಪಡೆಯಲಾಗಿದೆ ಎಂದು ತಿಳಿಸಿದರು.

ಚುನಾವಣಾ ಆಯೋಗವು ಆನ್‌ಲೈನ್‌ ವ್ಯವಸ್ಥೆಯಡಿ ‘ಸುವಿಧಾ’, ‘ಸುಗಮ’,‘ಸಮಾಧಾನ’, ‘ಕಂಪ್ಲೆಂಟ್‌ ಮಾನಿಟರಿಂಗ್’ ಕಲ್ಪಿಸಿದೆ. ‘ಸುವಿಧಾ’ದಲ್ಲಿ ವಾಹನ ಅನುಮತಿ ಪಡೆಯಬಹುದಾಗಿದೆ. ಇದರಲ್ಲಿ 36 ಅರ್ಜಿಗಳು ಬಂದಿದ್ದು, 34 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ‘ಸಮಾಧಾನ’ದಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ದೂರುಗಳಿದ್ದರೆ ದಾಖಲಿಸಬಹುದಾಗಿದೆ. ಇದರಲ್ಲಿ ದಾಖಲಾಗಿದ್ದ ನಾಲ್ಕೂ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ‘ಕಂಪ್ಲೆಂಟ್‌ ಮಾನಿಟರಿಂಗ್’ನಲ್ಲಿ ಜಿಲ್ಲೆಯ ಅಧಿಕಾರಿಗಳ ವಿರುದ್ಧ ದೂರುಗಳಿದ್ದರೆ ದಾಖಲಿಸಬಹುದು. ಇದರಲ್ಲಿ ದಾಖಲಾಗಿದ್ದ 14 ಅರ್ಜಿಗಳಲ್ಲಿ 11 ವಿಲೇವಾರಿಯಾಗಿವೆ ಎಂದರು.

ಜಿಲ್ಲೆಯ ಐದೂ ಕ್ಷೇತ್ರಗಳಿಗೆ ಐದು ಸಾಮಾನ್ಯ ವೀಕ್ಷಕರು, ಮೂವರು ವೆಚ್ಚ ವೀಕ್ಷಕರು, ಒಬ್ಬರು ಪೊಲೀಸ್‌ ವೀಕ್ಷಕರನ್ನು ಆಯೋಗ ನೇಮಕ ಮಾಡಿದೆ. ಚುನಾವಣಾ ವೆಚ್ಚ ವೀಕ್ಷಕರಾಗಿ ಶೃಂಗೇರಿ ಮತ್ತು ಮೂಡಿಗೆರೆ ಕ್ಷೇತ್ರಕ್ಕೆ ಐಆರ್‌ಎಸ್‌ ಅಧಿಕಾರಿ ನಿತಿನ್‌ ಕುಮಾರ್‌ ಜೈಮನ್‌, ಚಿಕ್ಕಮಗಳೂರು ಕ್ಷೇತ್ರಕ್ಕೆ ಐಆರ್‌ಎಸ್‌ ಅಧಿಕಾರಿ ಪ್ರಶಾಂತ್‌ ಶುಕ್ಲಾ, ತರೀಕೆರೆ ಹಾಗೂ ಕಡೂರು ಕ್ಷೇತ್ರಕ್ಕೆ ಅತುಲ್‌ ಕುಮಾರ್ ಪಾಂಡೆ ಅವರನ್ನು ನೇಮಕ ಮಾಡಿದೆ ಎಂದು ತಿಳಿಸಿದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಒಟ್ಟು ಐದು ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಈ ಬಾರಿ ಪಿಂಕ್‌ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಮಹಿಳಾ ಮತದಾರರ ಸಂಖ್ಯೆ ಹೆಚ್ಚು ಇರುವ ಕಡೆ ಈ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಈ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿ, ಅಧಿಕಾರಿಗಳೇ ಕಾರ್ಯನಿರ್ವಹಿಸುತ್ತಾರೆ. ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿ 10, ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಎರಡು ಪಿಂಕ್‌ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ವೆಬ್‌ ಕಾಸ್ಟಿಂಗ್ ವ್ಯವಸ್ಥೆ ಅಳವಡಿಕೆಗೆ ಕ್ಷೇತ್ರವಾರು ಚಿಕ್ಕಮಗಳೂರು, ಶೃಂಗೇರಿಯಲ್ಲಿ ತಲಾ 25, ಮೂಡಿಗೆರೆ, ತರೀಕೆರೆಯಲ್ಲಿ ತಲಾ 23 ಹಾಗೂ ಕಡೂರಿನಲ್ಲಿ 24 ಒಟ್ಟು 120 ಮತಗಟ್ಟೆ ಗುರುತಿಸಲಾಗಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ ಇದ್ದರು.

29,606 ಅರ್ಜಿ

ಮಿಂಚಿನ ನೋಂದಣಿಯಲ್ಲಿ ಸ್ವೀಕಾರ

119 ಪ್ರಕರಣ

ಅಬಕಾರಿ ಕಾಯ್ದೆಯಡಿ ದಾಖಲು

120ಮತಗಟ್ಟೆ

ವೆಬ್ ಕಾಸ್ಟಿಂಗ್ ಅಳವಡಿಕೆ

ಕುಡಿಯುವ ನೀರಿನ ನಿರ್ವಹಣೆಗೆ ಹಣ ಬಿಡುಗಡೆ

‘ಕುಡಿಯುವ ನೀರಿನ ನಿರ್ವಹಣೆ ನಿಟ್ಟಿನಲ್ಲಿ ಎಲ್ಲ ತಾಲ್ಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆ ನಡೆಸಲಾಗಿದೆ. ಸಮಸ್ಯೆ ತಲೆದೋರದಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ಕಡೂರು ತಾಲ್ಲೂಕಿಗೆ ₹ 75 ಲಕ್ಷ, ತರೀಕೆರೆ ತಾಲ್ಲೂಕಿಗೆ ₹ 40 ಲಕ್ಷ ಹಾಗೂ ಚಿಕ್ಕಮಗಳೂರು ತಾಲ್ಲೂಕಿಗೆ ₹ 20 ಲಕ್ಷ ಬಿಡುಗಡೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಶ್ರೀರಂಗಯ್ಯ ಉತ್ತರಿಸಿದರು.

2 ಕಡೆ ನೋಂದಣಿ; ಚುನಾವಣಾಧಿಕಾರಿಗೆ ಪತ್ರ

‘ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಡಿ.ಎಲ್‌.ವಿಜಯಕುಮಾರ್ ಅವರ ಹೆಸರು ಎರಡು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವುದಕ್ಕೆ ಸಂಬಂಧಿಸಿದಂತೆ ದೂರು ಬಂದಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ತಾಲ್ಲೂಕಿನ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದೇವೆ. ಕ್ರಮ ಜರುಗಿಸಲು ಅವರಿಗೆ ಅವಕಾಶ ಇದೆ’ ಎಂದು ಪ್ರತಿಕ್ರಿಯಿಸಿದರು.

₹22.21 ಲಕ್ಷ ಜಪ್ತಿ

ನೀತಿ ಸಂಹಿತೆ ಉಲ್ಲಂಘನೆಯಡಿ ಐದೂ ಕ್ಷೇತ್ರಗಳಲ್ಲಿ ಈವರೆಗೆ ₹ 22.21 ಲಕ್ಷ ಜಪ್ತಿ ಮಾಡಲಾಗಿದೆ. ಚಿಕ್ಕಮಗಳೂರು ಕ್ಷೇತ್ರದ ಕೆ.ಬಿ.ಹಾಳ್‌ ಚೆಕ್‌ಪೋಸ್ಟ್‌ನಲ್ಲಿ ₹ 1.30 ಲಕ್ಷ, ಚಿಕ್ಕಮಗಳೂರು ನಗರದಲ್ಲಿ ₹ 3.80 ಲಕ್ಷ, ಕಡೂರು ಕ್ಷೇತ್ರದ ಮರವಂಜಿ ಚೆಕ್‌ಪೋಸ್ಟ್‌ನಲ್ಲಿ ₹ 5.87 ಲಕ್ಷ, ಚೌಳಹಿರಿಯೂರು ಚೆಕ್‌ಪೋಸ್ಟ್‌ನಲ್ಲಿ ₹ 3.77 ಲಕ್ಷ, ಮೂಡಿಗೆರೆ ಕ್ಷೇತ್ರದ ಕಿರಗುಂದ ಚೆಕ್‌ಪೋಸ್ಟ್‌ನಲ್ಲಿ ₹ 5.5 ಲಕ್ಷ, ತರೀಕೆರೆ ಕ್ಷೇತ್ರದ ಭಕ್ತನಕಟ್ಟೆ ಚೆಕ್‌ಪೋಸ್ಟ್‌ನಲ್ಲಿ ₹ 1.96 ಲಕ್ಷ ಜಪ್ತಿ ಮಾಡಲಾಗಿದೆ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry