ಹಗ್ಗಜಗ್ಗಾಟಕ್ಕೆ ತೆರೆ: ಕುಮಾರಸ್ವಾಮಿಗೆ ಬಿಜೆಪಿ ಟಿಕೆಟ್

7
ಬಣಗಳ ರಾಜಕೀಯದ ಹಗ್ಗ ಜಗ್ಗಾಟ ಅಂತ್ಯ

ಹಗ್ಗಜಗ್ಗಾಟಕ್ಕೆ ತೆರೆ: ಕುಮಾರಸ್ವಾಮಿಗೆ ಬಿಜೆಪಿ ಟಿಕೆಟ್

Published:
Updated:

ಚಳ್ಳಕೆರೆ: ಬಣ ರಾಜಕೀಯದ ಹಗ್ಗ ಜಗ್ಗಾಟದ ನಡುವೆಯೂ ಚಳ್ಳಕೆರೆ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಪಡೆಯುವಲ್ಲಿ ಮಾಜಿ ಸಚಿವ ತಿಪ್ಪೇಸ್ವಾಮಿ ಅವರ ಪುತ್ರ ಕೆ.ಟಿ. ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ.

ಚುನಾವಣಾ ದಿನಾಂಕ ಘೋಷಣೆಗೂ ಮುನ್ನವೇ ಬಿಜೆಪಿಯಿಂದ ಕೆ.ಟಿ.ಕುಮಾರಸ್ವಾಮಿ ಹೆಸರು ಕೇಳಿಬಂದಿತ್ತು. ಆದರೆ, ಪಕ್ಷದಲ್ಲಿ ಬದಲಾದ ವಿದ್ಯಮಾನಗಳಿಂದಾಗಿ ಆರ್‌ಎಸ್‌ಎಸ್ ಮುಖಂಡ ಬಾಳೆಮಂಡಿ ರಾಂದಾಸ್ ಕೂಡ ಪ್ರಬಲ ಆಕಾಂಕ್ಷಿಯಾದರು. ಈ ಇಬ್ಬರು ಮುಖಂಡರಿಗೆ ಟಿಕೆಟ್ ಕೊಡಿಸುವ ಸಂಬಂಧ ಚಳ್ಳಕೆರೆ ಬಿಜೆಪಿ ಕ್ಷೇತ್ರದಲ್ಲಿ 'ಬಣ' ರಾಜಕೀಯ ಆರಂಭವಾಯಿತು. ಅಂತಿಮವಾಗಿ ಬಿಜೆಪಿ ವರಿಷ್ಠರು ಕುಮಾರಸ್ವಾಮಿಗೆ ಟಿಕೆಟ್ ನೀಡಿದ್ದಾರೆ.

2013ರ →ಚುನಾವಣೆಯಲ್ಲಿ →ಕೆ.ಟಿ.→ಕುಮಾರಸ್ವಾಮಿ →ಚಳ್ಳಕೆರೆ ಕ್ಷೇತ್ರದಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ 37 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದರು. ನಂತರ ಯಡಿಯೂರಪ್ಪ ಬಿಜೆಪಿಗೆ ಹಿಂದಿರುಗಿದ ವೇಳೆ ಬಿಜೆಪಿಗೆ ಸೇರ್ಪಡೆಯಾದರು. ಪಕ್ಷದ ಸಂಘಟನೆಯಲ್ಲಿ ತೊಡಗಿದ್ದರು.

1999ರಲ್ಲಿ ಚಳ್ಳಕೆರೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಬಸವರಾಜ ಮಂಡಿಮಠ, ಆ ಚುನಾವಣೆಯಲ್ಲಿ ಜಯಗಳಿಸುವ ಮೂಲಕ, ಬಿಜೆಪಿ ಖಾತೆ ತೆರೆಯಲು ನೆರವಾದರು. ಪಕ್ಷಕ್ಕೆ ನೆಲೆ ಒದಗಿಸಿದ್ದರು. ಅಂದಿನಿಂದಲೂ ಪಕ್ಷದ ಪ್ರಮುಖ ನಾಯಕರಾಗಿ ಹೊರಹೊಮ್ಮಿದ್ದರು. 2008ರ ಚುನಾವಣೆಯಲ್ಲಿ ಚಳ್ಳಕೆರೆ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಮೇಲೆ ಮಾಜಿ ಸಚಿವ ತಿಪ್ಪೇಸ್ವಾಮಿಯರನ್ನು ಬೆಂಬಲಿಸಿ, ಅವರ ಗೆಲುವಿಗೆ ಕಾರಣರಾಗಿದ್ದರು.

ಪಕ್ಷದ ಹಿರಿಯ ಮುಖಂಡರಾದ ಬಸವರಾಜ ಮಂಡಿಮಠ ಅವರು ತಮ್ಮ ಆಪ್ತ ಆರ್‌ಎಸ್‌ಎಸ್‌ನ ರಾಂದಾಸ್ ಅವರಿಗೆ ಈ ಬಾರಿ ಟಿಕೆಟ್ ಕೊಡಿಸಲು ಮುಂದಾಗಿದ್ದರು. ಒಂದು ಕಡೆ ಕುಮಾರಸ್ವಾಮಿ ಟಿಕೆಟ್ ಕೊಡಿಸಬೇಕೆಂದು ಬಿಜೆಪಿಯ ಕೆಲವು ಮುಖಂಡರು ಮುಂದಾಗಿದ್ದರು. ಹೀಗಾಗಿ ಎರಡು ಬಣಗಳು ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದರು. ಈ ವಿಷಯವಾಗಿ ರಾಜ್ಯ ಮತ್ತು ರಾಷ್ಟ್ರ ಬಿಜೆಪಿ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆಗಳೂ ನಡೆದಿದ್ದವು. ಈ ನಡುವೆ ಮೊಳಕಾಲ್ಮುರು ಶಾಸಕ ಎಸ್. ತಿಪ್ಪೇಸ್ವಾಮಿ ಸಹೋದರ ಎಸ್. ಮುತ್ತಯ್ಯ ಅವರ ಹೆಸರೂ ಕೇಳಿಬಂದಿತ್ತು.

ಈ ಗೊಂದಲಗಳ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ರಾಜ್ಯ ನಾಯಕರನ್ನು ಕರೆಸಿ ಚಳ್ಳಕೆರೆಯಲ್ಲಿ ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯಮಟ್ಟದ ಸಮಾವೇಶ ನಡೆಸಲಾಯಿತು. ಆದರೂ ಯಾರಿಗೆ ಟಿಕೆಟ್ ಎಂದು ಅಂತಿಮಗೊಳ್ಳಲಿಲ್ಲ.

ಬಣ ರಾಜಕೀಯ, ಮುಖಂಡರ ಹೇಳಿಕೆಗಳು ಬಿಜೆಪಿ ಅಭ್ಯರ್ಥಿ ಘೋಷಣೆಯನ್ನು ಮತ್ತಷ್ಟು ಗೊಂದಲವಾಗುವಂತೆ ಮಾಡಿದವು. ಈ ನಡುವೆ ಜೆಡಿಎಸ್ ಪಕ್ಷದಿಂದ ರವೀಶ್ ಹಾಗೂ ಕಾಂಗ್ರೆಸ್ ಪಕ್ಷದಿಂದ ಹಾಲಿ ಶಾಸಕ ಟಿ. ರಘುಮೂರ್ತಿ ಕಣಕ್ಕಿಳಿಯುವುದು ಖಚಿತವಾಯಿತು. ಈಗ ಬಿಜೆಪಿ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡುವ ಮೂಲಕ ಪಕ್ಷವು ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry