ಚುನಾವಣಾ ವೆಚ್ಚ ₹ 24 ಲಕ್ಷ ಮೀರುವಂತಿಲ್ಲ

7
ಮಾಯಕೊಂಡದಲ್ಲಿ 1,86,717 ಮತದಾರರು; ತಹಶೀಲ್ದಾರ್ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಬಹುದು

ಚುನಾವಣಾ ವೆಚ್ಚ ₹ 24 ಲಕ್ಷ ಮೀರುವಂತಿಲ್ಲ

Published:
Updated:

ದಾವಣಗೆರೆ: ಮಾಯಕೊಂಡ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿದ್ದು ಏ.17ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಉಪ ವಿಭಾಗಾಧಿಕಾರಿ ಹಾಗೂ ಮಾಯಕೊಂಡ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಪಿ.ವಿ.ಪೂರ್ಣಿಮಾ ತಿಳಿಸಿದರು.‌

ತಾಲ್ಲೂಕು ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಮಾಯಕೊಂಡ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರವಾಗಿದ್ದು, 1,86,717 ಮತದಾರರಿದ್ದಾರೆ. ಈ ಪೈಕಿ 95,031 ಪುರುಷರು ಹಾಗೂ 91,683 ಮಹಿಳಾ ಮತದಾರರಿದ್ದಾರೆ. ಮೂವರು ಇತರರು, 100 ಸೇವಾ ಮತದಾರರಿದ್ದಾರೆ ಎಂದರು.

ಏ.17ರಿಂದ ಏ.24ರವರೆಗೆ (ರಜಾದಿನ ಹೊರತುಪಡಿಸಿ) ನಾಮಪತ್ರ ಸಲ್ಲಿಸಬಹುದು. ರೈತ ಭವನದಲ್ಲಿರುವ ತಾಲ್ಲೂಕು ತಹಶೀಲ್ದಾರ್ ಕಚೇರಿಯನ್ನೇ ಚುನಾವಣಾಧಿಕಾರಿ ಕಚೇರಿಯನ್ನಾಗಿ ಮಾರ್ಪಡಿಸಲಾಗಿದೆ. ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನಾಮಪತ್ರ ಸ್ವೀಕಾರ ಮಾಡಲಾಗುವುದು ಎಂದರು.

25ರಂದು ನಾಮಪತ್ರ ಪರಿಶೀಲನೆ ನಡೆಸಿ ಸಿಂಧುವಾದ ನಾಮಮತ್ರಗಳನ್ನು ಘೋಷಿಸಲಾಗುವುದು. ಉಮೇದು

ವಾರಿಕೆ ವಾಪಸ್‌ ಪಡೆಯುವವರು ಏ.27 ಮಧ್ಯಾಹ್ನ 3ರೊಳಗೆ ಹಿಂಪಡೆಯಬೇಕು ಎಂದರು.

ಒಂದುಗಂಟೆ ಹೆಚ್ಚುವರಿ ಮತದಾನ:

ಮತದಾನದ ಬಳಿಕ ಮತಯಂತ್ರಗಳನ್ನು ಸ್ಟ್ರಾಂಗ್‌ರೂಂನಲ್ಲಿ ಭದ್ರವಾಗಿಡಲಾಗುವುದು. ಮೇ 15ರಂದು ಮತ ಎಣಿಕೆ ನಡೆಯಲಿದ್ದು ಫಲಿತಾಂಶ ಪ್ರಕಟಿಸಲಾಗುವುದು ಎಂದರು.

‌₹ 28 ಲಕ್ಷ ನಿಗದಿ: ಅಭ್ಯರ್ಥಿ ಚುನಾವಣಾ ಪ್ರಚಾರಕ್ಕೆ ₹ 28 ಲಕ್ಷವನ್ನು ಮಾತ್ರ ವೆಚ್ಚ ಮಾಡಬಹುದು. ಇದರಲ್ಲಿ ಎಲ್ಲ ರೀತಿಯ ವೆಚ್ಚವೂ ಒಳಗೊಂಡಿರುತ್ತದೆ. ಖರ್ಚು ವೆಚ್ಚದ ಮಾಹಿತಿಯನ್ನು ಕಲೆಹಾಕಲು ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಹೇಳಿದರು.

ಚುನಾವಣಾ ಸಂಬಂಧಿ ಕಾರ್ಯಗಳಿಗೆ ಕಡ್ಡಾಯವಾಗಿ ಪರವಾನಗಿ ತೆಗೆದುಕೊಳ್ಳಬೇಕು. ಇದಕ್ಕಾಗಿ ಚುನಾವಣಾಧಿಕಾರಿ ಕಚೇರಿಯಲ್ಲಿ ‘ಸುವಿಧ’ (ಏಕಗವಾಕ್ಷಿ) ವ್ಯವಸ್ಥೆ ಮಾಡಲಾಗಿದ್ದು, ಪ್ರಚಾರ ಸಂಬಂಧಿ ಕಾರ್ಯಗಳಿಗೆ 48 ಗಂಟೆ ಮುಂಚಿತವಾಗಿ ಸುವಿಧದಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು.

‘ಸಮಾಧಾನ’ ಎಂಬ ಆನ್‌ಲೈನ್‌ ವ್ಯವಸ್ಥೆಯ ಮೂಲಕ ನೀತಿಸಂಹಿತೆ ಉಲ್ಲಂಘನೆ ದೂರುಗಳನ್ನು ಸ್ವೀಕರಿಸಲಾಗುವುದು. ದೂರು ನೀಡಿದರೆ ತ್ವರಿತವಾಗಿ ಕ್ರಮಕೈಗೊಳ್ಳಲಾಗುವುದು ಎಂದರು.

ಹಿಂದಿನ ಚುನಾವಣೆಗಳನ್ನು ಅವಲೋಕಿಸಿ, ಮತದಾನಕ್ಕೆ ಅಡ್ಡಿಪಡಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮಾಯಕೊಂಡದ ಹಾಲುವರ್ತಿ, ಲೋಕಿಕೆರೆ, ಅತ್ತಿಗೆರೆ, ಗುಡ್ಡದ ಕೋಮಾರನಹಳ್ಳಿಯ 10 ಮತಗಟ್ಟೆಗಳನ್ನು ವಲ್ನರಬಲ್‌ ಎಂದು ಗುರುತಿಸಲಾಗಿದೆ ಎಂದರು.

ಮಾಯಕೊಂಡ ವ್ಯಾಪ್ತಿಯಲ್ಲಿ ಇದುವರೆಗೂ ಒಂದು ನೀತಿಸಂಹಿತೆ ಉಲ್ಲಂಘನೆ ಪ್ರಕರಣ ಮಾತ್ರ ದಾಖಲಾಗಿದೆ. ಮತದಾನ ಬಹಿಷ್ಕಾರ ಮಾಡುವುದಾಗಿ ಹೇಳಿದ್ದ ಕರಿ ಲಕ್ಕೇನಹಳ್ಳಿ ಗ್ರಾಮಸ್ಥರ ಮನವೊಲಿಸಿ ಮತದಾನ ಮಾಡಲು ವಾಹನ ವ್ಯವಸ್ಥೆ ಮಾಡಲಾಗಿದೆ ಎಂದರು.

ಅಂಗವಿಕಲರು ಮತಕೇಂದ್ರದೊಳಗೆ ತೆರಳಲು ಅಗತ್ಯ ವೀಲ್‌ಚೇರ್‌ಗಳನ್ನು ವ್ಯವಸ್ಥೆ ಮಾಡಲಾಗುವುದು. ಮತದಾನಕ್ಕೆ ಕಡ್ಡಾಯವಾಗಿ ಮತಪಟ್ಟಿಯಲ್ಲಿ ಹೆಸರಿರಲೇಬೇಕು. ಹಾಗಾಗಿ, ಮತಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಕೂಡಲೇ ಸೇರಿಸಬೇಕು ಎಂದು ಮನವಿ ಮಾಡಿದರು.

ಮಾಯಕೊಂಡ ಕ್ಷೇತ್ರ

ಜನಸಂಖ್ಯೆ–2.30.770

ಮತದಾರರು–1,86,717

ಪುರುಷರು–1,17,643

ಮಹಿಳೆಯರು–1,13,127

ಒಟ್ಟು ಮತಗಟ್ಟೆಗಳು 239

**

ನಾಮಪತ್ರ ಸ್ವೀಕಾರ ಏ.17ರಿಂದ

ನಾಮಪತ್ರ ಸಲ್ಲಿಸಲು ಕೊನೆದಿನ: ಏ.24

ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಸ್ವೀಕಾರ

ನಾಮಪತ್ರ ಪರಿಶೀಲನೆ–ಏ.25

ನಾಮಪತ್ರ ಹಿಂಪಡೆಯಲು ಕೊನೆಯ ದಿನ–ಏ.27

ಮತದಾನ–ಮೇ.12

ಫಲಿತಾಂಶ– ಮೇ.15

**

ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು

ಕಸಬಾ ಹೋಬಳಿ: ಬಸವರಾಜ್–9480825623

ಹದಡಿ–ವಿಜಯಾನಂದ–9448841881

ಮಾಯಕೊಂಡ–ಕೋಂದಂಡರಾಮ–9448999338‌

ಬಸವಾಪಟ್ಟಣ–ಗಿರೀಶ್‌–9742019791

ಸಹಾಯವಾಣಿ–08192 235344

**

ನಾಮಪತ್ರ ಸಲ್ಲಿಕೆಗೆ ನಿಯಮಗಳು

ನಮೂನೆ 2 ‘ಬಿ’ನಲ್ಲಿ ನಾಮಪತ್ರ ಸಲ್ಲಿಸಬೇಕು

ನಾಮಪತ್ರಕ್ಕೆ ಸೂಚಕರು, ಅಭ್ಯರ್ಥಿಗಳ ಸಹಿ ಕಡ್ಡಾಯ

ಹೆಸರು, ವಿಳಾಸ ಸ್ಪಷ್ಟವಾಗಿರಬೇಕು

ನಮೂನೆ 26ರಲ್ಲಿ ಅಫಿಡವಿಟ್‌ (₹ 20 ಛಾಪಾ ಕಾಗದದಲ್ಲಿ ಸಲ್ಲಿಸಬೇಕು)

ಅಫಿಡವಿಟ್‌ನ ಎಲ್ಲ ಪುಟಗಳಲ್ಲಿ ಸಹಿ ಕಡ್ಡಾಯ

ನೋಟರಿ ದೃಢೀಕರಣ, ಅಭ್ಯರ್ಥಿಯ ಸಾಮಾಜಿಕ ಜಾಲತಾಣ ವಿವರ ಸಲ್ಲಿಕೆ

ಅಫಿಡವಿಟ್‌, ಹೆಚ್ಚುವರಿ ಅಫಿಡವಿಟ್‌ ಸಲ್ಲಿಸದಿದ್ದರೆ ನಾಮಪತ್ರ ಅನರ್ಹ

ಸರ್ಕಾರಕ್ಕೆ ಬರಬೇಕಾಗಿರುವ ಬಾಕಿ ಬಗ್ಗೆ ಹೆಚ್ಚುವರಿ ಅಫಿಡವಿಟ್‌

ಬೇ–ಬಾಕಿ ದೃಢೀಕರಣ ಸಲ್ಲಿಸಬೇಕು

ಅಭ್ಯರ್ಥಿಯ ವಯಸ್ಸು 25ಕ್ಕಿಂತ ಕಡಿಮೆ ಇರಬಾರದು

ಒಬ್ಬ ಅಭ್ಯರ್ಥಿ ಗರಿಷ್ಠ 4 ನಾಮಪತ್ರ ಸಲ್ಲಿಸಬಹುದು

ರಾಷ್ಟ್ರೀಯ/ರಾಜ್ಯ ಪಕ್ಷವಾಗಿದ್ದರೆ ಒಬ್ಬ ಸೂಚಕರ ಸಹಿ ಸಾಕು

ನೋಂದಾಯಿತ ಮಾನ್ಯತೆ ಪಡೆಯದ ಪಕ್ಷ/ ಪಕ್ಷೇತರರು 10 ಸೂಚಕರ ಸಹಿ ಮಾಡಿಸಬೇಕು

ಸೂಚಕರು ಕಡ್ಡಾಯವಾಗಿ ಅಭ್ಯರ್ಥಿ ಸ್ಪರ್ಧಿಸುವ ಕ್ಷೇತ್ರದವಾಗಿರಬೇಕು

ಸಾಮಾನ್ಯ ಕ್ಷೇತ್ರಕ್ಕೆ ₹ 10ಸಾವಿರ, ಮೀಸಲು ಕ್ಷೇತ್ರಕ್ಕೆ ₹ 5 ಸಾವಿರ ಠೇವಣಿ

ಚುನಾವಣಾಧಿಕಾರಿ ಕಚೇರಿಯ 100 ಮೀ ಅಂತರದಲ್ಲಿ 3 ವಾಹನಗಳಿಗೆ ಮಾತ್ರ ಪ್ರವೇಶ

ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಯ ಜತೆಗೆ ನಾಲ್ವರಿಗೆ ಮಾತ್ರ ಅವಕಾಶ

2 ಪಾಸ್‌ಪೋರ್ಟ್‌, 2 ಸ್ಟಾಂಪ್‌ ಸೈಜ್‌ ಸಲ್ಲಿಸಬೇಕು

ಚುನಾವಣಾ ಉದ್ದೇಶಕ್ಕಾಗಿ ತೆರೆದಿರುವ ಬ್ಯಾಂಕ್‌ ಖಾತೆ ಪಾಸ್‌ಬುಕ್‌ ನಕಲು

ನಾಮಪತ್ರ ಸಲ್ಲಿಕೆ ಹಿಂದಿನ ದಿನ ಅಥವಾ ಸಲ್ಲಿಸುವ ದಿನ ಬ್ಯಾಂಕ್‌ ಖಾತೆ ತೆರೆದಿರಬೇಕು

ಮತಪತ್ರದಲ್ಲಿ ಮುದ್ರಿತವಾಗಬೇಕಾದ ಹೆಸರು, ಮಾದರಿ ಸಹಿ

ಕರ್ತವ್ಯಕ್ಕೆ ಗೈರಾದರೆ ಶಿಸ್ತುಕ್ರಮ

ಚುನಾವಣಾ ಕರ್ತವ್ಯ ಎಂದಕೂಡಲೇ ಸರ್ಕಾರಿ ಅಧಿಕಾರಿಗಳಲ್ಲಿ ಭಯ ಆವರಿಸುತ್ತದೆ. ಕರ್ತವ್ಯಕ್ಕೆ ನಿಯೋಜಿತವಾಗಿರುವ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಲೇಬೇಕು. ಸಬೂಬುಗಳನ್ನು ಹೇಳಿ ಕರ್ತವ್ಯಕ್ಕೆ ಗೈರಾದರೆ ಪ್ರಜಾಪ್ರತಿನಿಧಿ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೂರ್ಣಿಮಾ ಎಚ್ಚರಿಕೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry