ಬುಧವಾರ, ಡಿಸೆಂಬರ್ 11, 2019
25 °C
ಹಿಂದಕ್ಕೆ ಪಡೆಯಲು ಇದೇ 27 ಕೊನೆ ದಿನ, ಮತದಾನ ಮೇ 12ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ

ಇಂದಿನಿಂದ ನಾಮಪತ್ರ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದಿನಿಂದ ನಾಮಪತ್ರ ಸಲ್ಲಿಕೆ

ದಾವಣಗೆರೆ: ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ಇದೇ 17ರಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಿ.ಎಸ್‌. ರಮೇಶ್‌ ಹೇಳಿದರು.

ನಾಮಪತ್ರ ಸಲ್ಲಿಕೆಗೆ ಸಂಬಂಧಿಸಿದಂತೆ ಸೂಚನೆಗಳ ಬಗ್ಗೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮಾಹಿತಿ ನೀಡಲಾಗಿದೆ. ನಾಮ

ಪತ್ರಗಳನ್ನು ಹಿಂತೆಗೆದುಕೊಳ್ಳಲು ಇದೇ 27ರಂದು ಕೊನೆ ದಿನ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮತದಾರರ ಸೇರ್ಪಡೆಗೆ ಇದೇ 8ರಂದು ಮಿಂಚಿನ ನೋಂದಣಿ ಹಮ್ಮಿಕೊಳ್ಳಲಾಗಿತ್ತು. ಒಟ್ಟಾರೆ ಇದುವರೆಗೂ ಈ ಚುನಾವಣೆಗೆ ಹೊಸದಾಗಿ 28,773 ಮತದಾರರು ಸೇರ್ಪಡೆಗೊಳ್ಳಲಿದ್ದಾರೆ ಎಂದರು.

ವೆಚ್ಚದ ದೃಷ್ಟಿಯಿಂದ ಜಿಲ್ಲೆಯ ದಾವಣಗೆರೆ ದಕ್ಷಿಣ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ, ಹೊನ್ನಾಳಿ ಹಾಗೂ ಹರಪನಹಳ್ಳಿ ವಿಧಾನಸಭಾ ಕ್ಷೇತ್ರಗಳನ್ನು ಸೂಕ್ಷ್ಮ ಚುನಾವಣಾ ವೆಚ್ಚ ಕ್ಷೇತ್ರಗಳು ಎಂದು ಪರಿಗಣಿಸಲಾಗಿದೆ. ಆಯೋಗ ನೇಮಿಸಿದ ಚುನಾವಣಾ ವೆಚ್ಚ ವೀಕ್ಷಕರು ಈ ಕ್ಷೇತ್ರಗಳತ್ತ ಹದ್ದಿನಗಣ್ಣು ಇಡಲಿದ್ದಾರೆ ಎಂದು ಹೇಳಿದರು.

ಮತದಾನ ದಿನದಂದು ಎಸ್‌ಎಂಎಸ್‌ ಬೇಸಡ್‌ ರಿ‍ಪೋರ್ಟಿಂಗ್ ಸಿಸ್ಟಂ ಅನ್ನು ಅಳವಡಿಸಿಕೊಳ್ಳಲಾಗುವುದು. ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಅಂಗವಿಕಲ ಮತದಾರರಿಗೆ ಮತಗಟ್ಟೆವಾರು ಗಾಲಿ ಕುರ್ಚಿಗಳನ್ನು ಒದಗಿಸಲಾಗುವುದು. ಇವರಿಗೆ ಸಹಾಯ ಮಾಡಲು ಜಿಲ್ಲೆಯಲ್ಲಿ 456 ಸೇವಾ ಮತದಾರರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಎಲೆಕ್ಟ್ರಾನಿಕ್‌ ಮಿಡಿಯ ಮೂಲಕ ಬಳಸುವ ಜಾಹೀರಾತುಗಳನ್ನು ಎಂಸಿಎಂಸಿ ತಂಡ ಮುಖ್ಯಸ್ಥರಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಚುನಾವಣಾ ತಹಶೀಲ್ದಾರ್‌ ಸಂತೋಷಕುಮಾರ್ ಇದ್ದರು.

ವಿಶ್ವವಿದ್ಯಾಲಯದಲ್ಲೇ ಮತ ಎಣಿಕೆ

ದಾವಣಗೆರೆಯ ವಿಶ್ವವಿದ್ಯಾಲಯದ ಶಿವಗಂಗೋತ್ರಿ ಕ್ಯಾಂಪಸ್‌ನಲ್ಲಿ ಈ ಬಾರಿ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಡಿ.ಎಸ್‌. ರಮೇಶ್ ದೃಢಪಡಿಸಿದರು.

9,176 ಲೀಟರ್‌ ಮದ್ಯ ವಶ

ಜಿಲ್ಲೆಯಲ್ಲಿ ಇದುವರೆಗೂ 9,176 ಲೀಟರ್‌ ಮದ್ಯ ಹಾಗೂ 1,006 ಲೀಟರ್‌ ಬಿಯರ್‌ ವಶಪಡಿಸಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ 16 ವಾಹನಗಳನ್ನು ಜಪ್ತಿ ಮಾಡಿದ್ದು, 4 ಮೊಕದ್ದಮೆ ಹೂಡಲಾಗಿದೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದರು. ವ್ಯಕ್ತಿಯೊಬ್ಬ 2.3 ಲೀಟರ್‌ ಮದ್ಯವನ್ನು ತನ್ನ ಬಳಿ ಇಟ್ಟುಕೊಳ್ಳಬಹುದು. ಆದರೆ, ಇದನ್ನು ಮಾರಾಟಕ್ಕೆ ಬಳಸಿದರೆ ವಶಪಡಿಸಿಕೊಳ್ಳಲಾಗುತ್ತದೆ ಎಂದು ಅಬಕಾರಿ ಉಪ ಆಯುಕ್ತ ಮೋಹನ್‌ ಕುಮಾರ್ ಎಚ್ಚರಿಕೆ ನೀಡಿದರು.

29 ಅಧಿಕಾರಿಗಳ ವಿರುದ್ಧ ದೂರು

ಜಿಲ್ಲೆಯ 29 ಅಧಿಕಾರಿಗಳ ವಿರುದ್ಧ ದೂರುಗಳಿದ್ದವು. ಪರಿಶೀಲನೆಗೆ ಅವುಗಳನ್ನು ಆಯೋಗಗಕ್ಕೆ ಕಳುಹಿಸಲಾಗಿದೆ. ಮೂರು ವರ್ಷಗಳಿಂದ ಇದೇ ಜಿಲ್ಲೆಯಲ್ಲಿ ಇದ್ದಾರೆ ಎಂಬ ದೂರುಗಳೇ ಹೊರತು ಅವು ಚುನಾವಣಾ ಅಕ್ರಮಕ್ಕೆ ಸಂಬಂಧಿತ ದೂರುಗಳಲ್ಲ ಎಂದು ಚುನಾವಣಾಧಿಕಾರಿ ಸ್ಪಷ್ಟನೆ ನೀಡಿದರು.

 

ಪ್ರತಿಕ್ರಿಯಿಸಿ (+)