ಭಾನುವಾರ, ಡಿಸೆಂಬರ್ 15, 2019
25 °C
ಹಾಕಿ, ಫುಟ್‌ಬಾಲ್‌, ಅಥ್ಲೆಟಿಕ್ಸ್‌ಗೆ ಮೈದಾನದ ಕೊರತೆ, ಹೊರ ರಾಜ್ಯದ ಪಾಲಾಗುತ್ತಿರುವ ಜಿಲ್ಲೆಯ ಪ್ರತಿಭೆಗಳು

ರಾಜಕಾರಣಿಗಳ ‘ಆಟ’; ಕ್ರೀಡಾಪಟುಗಳ ಸಂಕಟ

ಪ್ರಮೋದ ಜಿ.ಕೆ. Updated:

ಅಕ್ಷರ ಗಾತ್ರ : | |

ರಾಜಕಾರಣಿಗಳ ‘ಆಟ’; ಕ್ರೀಡಾಪಟುಗಳ ಸಂಕಟ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಪ್ರತಿಭಾನ್ವಿತ ಅಥ್ಲೀಟ್‌ಗಳು ಇದ್ದಾರೆ. ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಫುಟ್‌ಬಾಲ್‌ ಹಾಗೂ ಹಾಕಿ ಆಟಗಾರರೂ ಇದ್ದಾರೆ. ಆದರೆ, ಅವರಿಗೆ ಅಭ್ಯಾಸ ಮಾಡಲು, ವೃತ್ತಿಪರ ಆಟಗಾರರಾಗಿ ಬೆಳೆಯಲು ಬೇಕಾದ ಮೂಲ ಸೌಕರ್ಯಗಳೇ ಇಲ್ಲ.

ಆದ್ದರಿಂದ ಇಲ್ಲಿನ ಆಟಗಾರರು ಬೇರೆ ಜಿಲ್ಲೆಗಳ ಮತ್ತು ಬೇರೆ ರಾಜ್ಯಗಳ ಪಾಲಾಗುತ್ತಿದ್ದಾರೆ. ಧಾರವಾಡದ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಇದೆ. ಅವಳಿ ನಗರದ ಅಥ್ಲೀಟ್‌ಗಳು ಅಭ್ಯಾಸಕ್ಕಾಗಿ ಇದೇ ಟ್ರ್ಯಾಕ್‌ ಅವಲಂಬಿಸಿದ್ದಾರೆ. ಹುಬ್ಬಳ್ಳಿಯ ಅಥ್ಲೀಟ್‌ಗಳು ಸಿಂಥೆಟಿಕ್‌ ಟ್ರ್ಯಾಕ್‌ ಬೇಕಾದರೆ ಧಾರವಾಡಕ್ಕೆ ಹೋಗಬೇಕು.

ಈ ಕ್ರೀಡಾಂಗಣದಲ್ಲಿ ಪ್ರತಿವರ್ಷ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನದ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಅಲ್ಲಿ ಅನೇಕ ಬಾರಿ ರಾಜಕೀಯ ಕಾರ್ಯಕ್ರಮಗಳಿಗೂ ಅವಕಾಶ ಕೊಡಲಾಗುತ್ತದೆ. ಇದರಿಂದ  ಸಿಂಥೆಟಿಕ್‌ ಟ್ರ್ಯಾಕ್‌ನ ಗುಣಮಟ್ಟ ಹಾಳಾಗುವ ಆತಂಕ ಕ್ರೀಡಾಪಟುಗಳಿಗೆ ಎದುರಾಗಿದೆ. ಕ್ರೀಡಾ ಚಟುವಟಿಕೆಗಳಿಗೆ ಮಾತ್ರ ಟ್ರ್ಯಾಕ್‌ ಬಳಕೆಯಾಗಬೇಕು ಎಂದು ಕ್ರೀಡಾಪಟುಗಳು ಮತ್ತು ವಿವಿಧ ಸಂಘ–ಸಂಸ್ಥೆಗಳು ಹಲವು ಬಾರಿ ಆಗ್ರಹಿಸಿದರೂ ಪ್ರಯೋಜನವಾಗಿಲ್ಲ.

ಸೌಲಭ್ಯಗಳ ಕೊರತೆಯಿಂದ ಬಳಲುತ್ತಿರುವ ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣದ್ದೂ ಇದೇ ಪರಿಸ್ಥಿತಿ. ಅಲ್ಲಿ ಒಂದಿಲ್ಲೊಂದು ರಾಜಕೀಯ ಕಾರ್ಯಕ್ರಮಗಳು ನಡೆಯುವುದರಿಂದ ಕ್ರೀಡೆಗಿಂತ ಬೇರೆ ಉದ್ದೇಶಗಳಿಗೆ ಹೆಚ್ಚು ಬಳಕೆಯಾಗುತ್ತಿದೆ ಎಂದು ಕ್ರೀಡಾಪಟುಗಳು ದೂರುತ್ತಾರೆ. ಜಿಲ್ಲೆಯಲ್ಲಿ ಟರ್ಫ್‌ ಸೌಲಭ್ಯ ಹೊಂದಿರುವ ಒಂದೂ ಹಾಕಿ ಮತ್ತು ಫುಟ್‌ಬಾಲ್‌ ಕ್ರೀಡಾಂಗಣ ಇಲ್ಲ!

ವಾಣಿಜ್ಯ ನಗರಿ ಎನಿಸಿಕೊಂಡಿರುವ ಹುಬ್ಬಳ್ಳಿಯಲ್ಲಿ ಒಂದೂ ಸಿಂಥೆಟಿಕ್‌ ಟ್ರ್ಯಾಕ್‌ ಇಲ್ಲ. ರಾಷ್ಟ್ರೀಯ ಮಟ್ಟದ ಟೂರ್ನಿಗಳಿಗೆ ಅಥ್ಲೀಟ್‌ಗಳು ನಿತ್ಯ ಬೆಳಿಗ್ಗೆ ಬಿ.ವಿ.ಬಿ. ಕಾಲೇಜಿನ ಮೈದಾನದಲ್ಲಿ ಮಣ್ಣಿನ ಮೇಲೆ ಅಭ್ಯಾಸ ಮಾಡುತ್ತಾರೆ.

ರಾಜ್ಯಮಟ್ಟದ ಟೂರ್ನಿಗಳಲ್ಲಿ ಟರ್ಫ್‌ ಮೇಲೆಯೇ ಆಡಬೇಕಾಗುತ್ತದೆ. ಆ ಅನುಭವ ಪಡೆಯಲು ಅವಳಿ ನಗರದಲ್ಲಿ ಮೂಲ ಸೌಲಭ್ಯಗಳೇ ಇಲ್ಲದ ಕಾರಣ ಜಿಲ್ಲೆ ಬಿಟ್ಟು ಹೋಗುವ ಕ್ರೀಡಾಪಟುಗಳು ಹೆಚ್ಚಾಗುತ್ತಿದ್ದಾರೆ. ಸೆಟ್ಲಮೆಂಟ್‌ನಲ್ಲಿರುವ ಯಂಗ್‌ಸ್ಟರ್ಸ್‌ ಹಾಕಿ ಕ್ಲಬ್‌ನಲ್ಲಿ ತರಬೇತಿ ಪಡೆದಿರುವ ರಾಘವೇಂದ್ರ ಕೊರವರ, ರಾಕೇಶ ಗೋಕಾಕ, ಮಣಿಕಂಠ ಭಜಂತ್ರಿ, ವಿಜಾಯಕ ಬಿಜವಾಡ, ಪವನ ಗೋಕಾಕ, ಸಹದೇವ್‌ ಯರಕಲ್‌ ಹೀಗೆ ಅನೇಕ ಆಟಗಾರರು ಬೆಂಗಳೂರಿಗೆ ಹೋಗಿ ಅಲ್ಲಿ ವೃತ್ತಿ ಬದುಕು ಕಟ್ಟಿಕೊಂಡಿದ್ದಾರೆ. ಹುಬ್ಬಳ್ಳಿಯವರಾದ ಚಿಂತಾ ಚಂದ್ರಶೇಖರರಾವ್‌ ಮುಂಬೈ ಫುಟ್‌ಬಾಲ್‌ ಕ್ಲಬ್‌ ತಂಡದಲ್ಲಿ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ.

ಗದಗ ರಸ್ತೆಯಲ್ಲಿರುವ ಮಕ್ಕಳ ಉದ್ಯಾನದಲ್ಲಿ ನಿತ್ಯ ನೂರಾರು ಮಕ್ಕಳು ಫುಟ್‌ಬಾಲ್‌ ಅಭ್ಯಾಸ ನಡೆಸುತ್ತಾರೆ. ಆಗಾಗ ಫೈವ್ ಎ ಸೈಡ್ ಫುಟ್‌ಬಾಲ್‌ ಟೂರ್ನಿಗಳನ್ನು ಆಯೋಜಿಸಿ ಅಭ್ಯಾಸ ಮಾಡುತ್ತಾರೆ. ಎಳೆಯ ವಯಸ್ಸಿನಿಂದ ಅಲ್ಲಿ ತರಬೇತಿ ಪಡೆದ ಚಿಂತಾ ಚಂದ್ರಶೇಖರ ರಾವ್‌, ಚಿಂಟು, ಎಡ್ವಿನ್, ರಾಜಶೇಖರ ಹೀಗೆ ಹಲವಾರು ಫುಟ್‌ಬಾಲ್‌ ಕ್ರೀಡಾಪಟುಗಳು ರಾಜ್ಯ ತಂಡದಲ್ಲಿ ಹೆಸರು ಮಾಡಿದ್ದಾರೆ.

ಇದ್ದೂ ಇಲ್ಲದಂತಾದ ಜಾಗ: ಸಿಂಥೆಟಿಕ್‌ ಅಥ್ಲೆಟಿಕ್‌ ಟ್ರ್ಯಾಕ್‌, ಬ್ಯಾಸ್ಕೆಟ್‌ಬಾಲ್‌, ಬ್ಯಾಡ್ಮಿಂಟನ್‌, ವಾಲಿಬಾಲ್‌, ಪ್ರೇಕ್ಷಕರ ಗ್ಯಾಲರಿ ಹೀಗೆ ಹಲವು ಸೌಲಭ್ಯಗಳು ಒಂದೇ ಕಡೆ ಸಿಗುವಂತೆ ಮಾಡಲು ಪಾಲಿಕೆಯು ಹಳೇಹುಬ್ಬಳ್ಳಿಯ ಹೆಗ್ಗೇರಿ ಬಳಿ ಐದು ಏಕರೆ ಒಂದು ಗುಂಟೆ ಜಾಗದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಕ್ರೀಡಾಂಗಣ ನಿರ್ಮಾಣಕ್ಕೆ 2008ರಲ್ಲಿ ಒಪ್ಪಿಗೆ ನೀಡಿತ್ತು.

ಆಗಿನ ಲೆಕ್ಕಾಚಾರದ ಪ್ರಕಾರ ಅಂದಾಜು ₹ 8 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗಬೇಕಿತ್ತು. ಆದರೆ, ಹತ್ತು ವರ್ಷವಾದರೂ ಕ್ರೀಡಾಂಗಣ ನಿರ್ಮಾಣದ ಕಾರ್ಯ ಮುಗಿದಿಲ್ಲ. ಇರುವ ಜಾಗ ಕೂಡ ಕ್ರೀಡಾ ಚಟುವಟಿಕೆಗಳಿಗೆ ಬಳಕೆಯಾಗುತ್ತಿಲ್ಲ. ಆದ್ದರಿಂದ ಜಾಗ ಇದ್ದೂ ಇಲ್ಲದಂತಾಗಿದೆ.

‘ಹುಬ್ಬಳ್ಳಿಯಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ನ ಅಗತ್ಯವಿದೆ. ಟ್ರ್ಯಾಕ್‌ ನಿರ್ಮಾಣವಾದರೆ, ಅಥ್ಲೀಟ್‌ಗಳಲ್ಲಿ ಹೆಚ್ಚು ವೃತ್ತಿಪರತೆ ಬೆಳೆಯುತ್ತದೆ. ಚೆನ್ನಾಗಿ ಅಭ್ಯಾಸ ಮಾಡಲು ಸಾಧ್ಯವಾಗುತ್ತದೆ. ಟ್ರ್ಯಾಕ್‌ ನಿರ್ಮಿಸಲು ನಾವೂ ಪ್ರಯತ್ನಿಸುತ್ತಿದ್ದೇವೆ’ ಎಂದು ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆ ಅಧ್ಯಕ್ಷ ಕೆ.ಎಸ್‌. ಭೀಮಣ್ಣನವರ ಹೇಳಿದರು.

ಟರ್ಫ್‌ ಇಲ್ಲದಿದ್ದರೆ ಕಷ್ಟ: ‘ಈಗ ಸ್ಪರ್ಧೆ ಹೆಚ್ಚಿದೆ. ಅಂತರರಾಷ್ಟ್ರೀಯ ಗುಣಮಟ್ಟದ ತರಬೇತಿ ನೀಡುವುದು, ಟರ್ಫ್‌ ವಿಕೆಟ್‌ ಮೇಲೆ ಕ್ರಿಕೆಟ್‌ ಆಡಿಸುವುದನ್ನು ಕಲಿಸುವುದು ಅನಿವಾರ್ಯ’ ಎಂದು ಹಿರಿಯ ಕ್ರಿಕೆಟ್‌ ಕೋಚ್‌ ವಿಜಯ ಕಾಮತ್‌ ಹೇಳುತ್ತಾರೆ.

‘ಕ್ರೀಡಾಂಗಣಗಳನ್ನು ನಿರ್ಮಿಸುವುದಕ್ಕಿಂತ ಅದನ್ನು ನಿರ್ವಹಣೆ ಮಾಡುವುದೇ ದೊಡ್ಡ ಸವಾಲು. ಆದ್ದರಿಂದ, ಜಿಲ್ಲೆಯ ಯುವ ಕ್ರಿಕೆಟಿಗರು ಉನ್ನತ ತರಬೇತಿಗಾಗಿ ಬೆಂಗಳೂರಿಗೆ ಹೋಗುತ್ತಿದ್ದಾರೆ. ನಮ್ಮೂರಿನ ಪ್ರತಿಭೆಗಳು ಬೇರೆ ಜಿಲ್ಲೆಗಳಲ್ಲಿ ಸಾಧನೆ ಮಾಡುವುದನ್ನು ನೋಡಬೇಕಾದ ಅನಿವಾರ್ಯತೆಯಿದೆ. ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಿ ಅವರನ್ನು ಇಲ್ಲಿಯೇ ಉಳಿಸಿಕೊಳ್ಳಬೇಕಾದ ಸವಾಲು ನಮ್ಮ ಮುಂದಿದೆ’ ಎಂದರು.

‘ಧಾರವಾಡದಲ್ಲಿರುವ ಆರ್‌.ಎನ್‌. ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ಉತ್ತಮ ಬೆಳಕಿನ ಸೌಲಭ್ಯವಿಲ್ಲ. ಹುಬ್ಬಳ್ಳಿಯಲ್ಲಿ ನಾಲ್ಕು ಟೇಬಲ್‌ ಹಾಕಿ ಟೇಬಲ್ ಟೆನಿಸ್‌ ಟೂರ್ನಿ ಆಯೋಜಿಸಲು ಸರಿಯಾದ ಸ್ಥಳವಿಲ್ಲ. ಈ ಭಾಗದಲ್ಲಿ ಕ್ರೀಡೆ ಮತ್ತು ಕ್ರೀಡಾಪಟುಗಳು ಬೆಳೆಯಬೇಕಾದರೆ ಉತ್ತಮ ಕ್ರೀಡಾ ಸಂಕೀರ್ಣದ ಅಗತ್ಯವಿದೆ’ ಎಂದು ಅಂತರರಾಷ್ಟ್ರೀಯ ರೆಫರಿ ಟಿ.ಜಿ. ಉಪಾಧ್ಯ ಅಭಿಪ್ರಾಯಪಟ್ಟರು.

‘ಭಯದಲ್ಲಿಯೇ ಅಭ್ಯಾಸ...’

ಹುಬ್ಬಳ್ಳಿಯಲ್ಲಿ ಸಾಕಷ್ಟು ಪ್ರತಿಭಾನ್ವಿತ ಅಥ್ಲೀಟ್‌ಗಳು ಇದ್ದಾರೆ. ಸಿಂಥೆಟಿಕ್ ಟ್ರ್ಯಾಕ್‌ ಇಲ್ಲದ ಕಾರಣ ಬಹುತೇಕರು ಬಿ.ವಿ.ಬಿ. ಕಾಲೇಜಿನ ಮಣ್ಣಿನ ಮೈದಾನದಲ್ಲಿ ನಿತ್ಯ ಅಭ್ಯಾಸ ಮಾಡುತ್ತಾರೆ. ಅದೇ ಮೈದಾನದಲ್ಲಿ ಅನೇಕರು ಕ್ರಿಕೆಟ್‌ , ಬ್ಯಾಸ್ಕೆಟ್‌ಬಾಲ್‌ ಆಡುತ್ತಾರೆ. ಅಭ್ಯಾಸ ಮಾಡುವಾಗ ಎಲ್ಲಿ ಚೆಂಡು ಬಡೆಯುತ್ತದೆಯೋ ಎನ್ನುವ ಭಯ ಯಾವಾಗಲೂ ಕಾಡುತ್ತದೆ. ವಿಶೇಷ ಅನುಮತಿ ಪಡೆದು ರೈಲ್ವೆ ಮೈದಾನದಲ್ಲಿ ಅಭ್ಯಾಸ ಮಾಡಬೇಕಾಗುತ್ತದೆ. ಧಾರವಾಡ ಜಿಲ್ಲೆ ಹೊರತು ಪಡಿಸಿದರೆ ವಿಜಯಪುರ ಜಿಲ್ಲೆಯಲ್ಲಿ ಹಲವು ತಾಲ್ಲೂಕುಗಳಲ್ಲಿ ಅಥ್ಲೀಟ್‌ಗಳಿಗೆ ಉತ್ತಮ ಮೈದಾನಗಳಿವೆ. ಆದರೆ, ಅಥ್ಲೀಟ್‌ಗಳು ಹೆಚ್ಚಿರುವ ಹುಬ್ಬಳ್ಳಿಯಲ್ಲಿ ಒಂದೂ ಮೈದಾನ ಇಲ್ಲ. ಇನ್ನು ಸಿಂಥೆಟಿಕ್‌ ಟ್ರ್ಯಾಕ್‌ ನಿರೀಕ್ಷೆ ಮಾಡುವುದಾದರೂ ಹೇಗೆ? – ವೀಣಾ ಅಡಗಿಮನಿ, ಅಥ್ಲೀಟ್‌, ಹುಬ್ಬಳ್ಳಿ.

‘ಪಾಲಿಕೆಯಿಂದಷ್ಟೇ ಅಭಿವೃದ್ಧಿ ಕಷ್ಟ’

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೆಹರೂ ಮೈದಾನ ಮತ್ತು ಉದ್ದೇಶಿತ ಅಂಬೇಡ್ಕರ್‌ ಕ್ರೀಡಾಂಗಣಗಳು ಇವೆ. ನೆಹರೂ ಮೈದಾನ ಸ್ಮಾರ್ಟ್‌ ಸಿಟಿ ವ್ಯಾಪ್ತಿಗೆ ಬರುವುದರಿಂದ ಮುಂದಿನ ದಿನಗಳಲ್ಲಿ ಅಭಿವೃದ್ಧಿಯಾಗುತ್ತದೆ. ಜಗದೀಶ ಶೆಟ್ಟರ್‌ ಅವರ ಪ್ರಯತ್ನದಿಂದ ರಾಜನಗರದಲ್ಲಿ ಕೆ.ಎಸ್‌.ಸಿ.ಎ. ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣವಾಗಿದೆ. ಆದರೆ, ಪಾಲಿಕೆಯ ಅನುದಾನದಿಂದ ಒಂದೇ ಹಂತದಲ್ಲಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಕ್ರೀಡಾಂಗಣ ನಿರ್ಮಿಸುವುದು, ಅದನ್ನು ನಿರ್ವಹಿಸುವುದು ಕಷ್ಟ. ಅಂಬೇಡ್ಕರ್‌ ಕ್ರೀಡಾಂಗಣದ ಕಾಮಗಾರಿ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಜಿಲ್ಲೆಯಲ್ಲಿ ಹೆಚ್ಚು ಕ್ರೀಡಾ ಚಟುವಟಿಕೆಗಳು ನಡೆಯಬೇಕು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ  ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದರೆ, ಸರ್ಕಾರದ ವತಿಯಿಂದಲೇ ವಿಶೇಷ ಪ್ಯಾಕೇಜ್‌ ತಂದು ಕ್ರೀಡಾಂಗಣ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ - ವೀರಣ್ಣ ಸವಡಿ, ಬಿಜೆಪಿ ಮುಖಂಡ.

‘ಕ್ರೀಡಾ ಚಟುವಟಿಕೆ ಸ್ತಬ್ಧಗೊಂಡಿವೆ’

ರಾಜಕೀಯ ನಾಯಕರ ನಡುವಿನ ಇಚ್ಛಾಶಕ್ತಿಯ ಕೊರತೆಯಿಂದ ಧಾರವಾಡ ಜಿಲ್ಲೆಯಲ್ಲಿ ಪ್ರಮುಖ ಕ್ರೀಡಾ ಚಟುವಟಿಕೆಗಳು ಸ್ಥಬ್ದಗೊಂಡಿವೆ. ಮೈದಾನವೇ ಇಲ್ಲದಿದ್ದರೆ, ಕ್ರೀಡಾಪಟುಗಳು ಹೇಗೆ ಅಭ್ಯಾಸ ಮಾಡಬೇಕು. ನೆಹರೂ ಮೈದಾನವನ್ನು ಕ್ರೀಡಾ ಚಟುವಟಿಕೆಗಳಿಗೆ ಹೊರತುಪಡಿಸಿ ಬೇರೆ ಯಾವ ಕಾರ್ಯಕ್ರಮಗಳಿಗೂ ನೀಡುವುದಿಲ್ಲ ಎಂದು ಪಾಲಿಕೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ಬೇರೆ ಸಮಾರಂಭಗಳಿಗೂ ಮೈದಾನ ನೀಡುವುದರಿಂದ ಗುಣಮಟ್ಟ ಹಾಳಾಗುತ್ತಿದೆ. ಕಾರ್ಯಕ್ರಮ ಮುಗಿದ ಬಳಿಕ ಮೈದಾನ ಕಸದ ತೊಟ್ಟೆಯಾಗುತ್ತದೆ. ಆದ್ದರಿಂದ ಕ್ರೀಡಾಪಟುಗಳಿಗೆ ವಿಶೇಷ ಸೌಲಭ್ಯ ಒದಗಿಸುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಜೆಡಿಎಸ್‌ ಘೋಷಿಸಿದೆ – ಅಲ್ತಾಫ್‌ ನವಾಜ್‌ ಕಿತ್ತೂರ, ಜೆಡಿಎಸ್‌ ಮುಖಂಡ.

‘ಕ್ರೀಡಾ ಕ್ಷೇತ್ರದಲ್ಲಿ ರಾಜಕಾರಣ ಬೇಡ’

ಬೇರೆ ರಾಜ್ಯಗಳಲ್ಲಿ ಚುನಾವಣೆ ಮುಗಿಯುವ ತನಕ ಮಾತ್ರ ಎಲ್ಲರೂ ರಾಜಕೀಯ ಎನ್ನುತ್ತಾರೆ. ಬಳಿಕ ಎಲ್ಲ ಪಕ್ಷದವರು ಒಂದಾಗಿ ಅಭಿವೃದ್ಧಿ ಕೆಲಸಕ್ಕೆ ಮುಂದಾಗುತ್ತಾರೆ. ಅದೇ ರೀತಿಯ ಮನೋಭಾವ ಎಲ್ಲರಲ್ಲಿಯೂ ಬರಬೇಕು. ಹುಬ್ಬಳ್ಳಿಯಲ್ಲಿ ತುರ್ತಾಗಿ ಉತ್ತಮ ಕ್ರೀಡಾಂಗಣ ನಿರ್ಮಿಸುವ ಅಗತ್ಯವಿದೆ. ಕ್ರೀಡಾಪಟುಗಳು ಸಾಧನೆ ಮಾಡಬೇಕು ಎಂದರೆ ಅವರಿಗೆ ಅಗತ್ಯ ಸೌಲಭ್ಯಗಳನ್ನು ದೊರಕಿಸಿಕೊಡಬೇಕು. ಸೌಲಭ್ಯಗಳನ್ನು ಕೊಡದೇ ಅವರಿಂದ ಉತ್ತಮ ಸಾಧನೆ ನಿರೀಕ್ಷೆ ಮಾಡುವುದಾದರೂ ಹೇಗೆ ಎಂಬುದನ್ನು ಎಲ್ಲ ರಾಜಕೀಯ ನಾಯಕರು ಅರ್ಥಮಾಡಿಕೊಳ್ಳಬೇಕು.ನೆಹರೂ ಕ್ರೀಡಾಂಗಣದಲ್ಲಿ ರಾಜಕೀಯ ಕಾರ್ಯಕ್ರಮ ನಡೆಸಲು ಅವಕಾಶ ಕೊಡದಂತೆ ಮೊದಲು ಪಾಲಿಕೆಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕು – ಗಣೇಶ ಟಗರಗುಂಟಿ, ಕಾಂಗ್ರೆಸ್‌ ಮುಖಂಡ.

‘ವಲಸೆ ಅನಿವಾರ್ಯ’

ಹಾಕಿ ಆಟಗಾರರಿಗೆ ಇಲ್ಲಿ ಪ್ರಾಥಮಿಕ ತರಬೇತಿ ಕೊಟ್ಟು ಬೆಂಗಳೂರಿಗೆ ಕಳುಹಿಸುತ್ತೇವೆ. ಇಲ್ಲಿ ಟರ್ಫ್‌ ಸೌಲಭ್ಯ ಇಲ್ಲದ ಕಾರಣ ಪರಿಣಾಮಕಾರಿಯಾಗಿ ಮತ್ತು ವೃತ್ತಿಪರವಾಗಿ ಪಳಗಲು ಕಷ್ಟ. ಉತ್ತರ ಕರ್ನಾಟಕದಲ್ಲಿ ಟೂರ್ನಿಗಳು ಹೆಚ್ಚು ನಡೆಯದ ಕಾರಣ ಅವಕಾಶಗಳ ಕೊರತೆಯಿದೆ. ಆದ್ದರಿಂದ, ಬೇರೆ ಊರುಗಳಿಗೆ ಹೋಗುವುದು ಅನಿವಾರ್ಯ – ಚಂದ್ರಶೇಖರ ಗೋಕಾಕ,ಯಂಗ್‌ಸ್ಟರ್ಸ್‌ ಹಾಕಿ ಕ್ಲಬ್‌ ಅಧ್ಯಕ್ಷ.

 

ಪ್ರತಿಕ್ರಿಯಿಸಿ (+)