ಗಜೇಂದ್ರಗಡ: ಮಳೆ, ಗಾಳಿಗೆ ಅಪಾರ ಹಾನಿ

7
ಬಿರುಗಾಳಿ ಸಹಿತ ಸುರಿದ ಮಳೆಗೆ ಹಳ್ಳಿಗರ ಬದುಕು ಅಸ್ತವ್ಯಸ್ತ

ಗಜೇಂದ್ರಗಡ: ಮಳೆ, ಗಾಳಿಗೆ ಅಪಾರ ಹಾನಿ

Published:
Updated:

ಗಜೇಂದ್ರಗಡ: ನಜ್ಜು ಗುಜ್ಜಾಗಿ ಎಲ್ಲೆಂದರಲ್ಲಿ ಬಿದ್ದಿರುವ ತಗಡುಗಳನ್ನು ಒಂದೆಡೆ ಸೇರಿಸುತ್ತಿರುವ ಗ್ರಾಮಸ್ಥರು; ಬಿದ್ದ ವಿದ್ಯುತ್ ಕಂಬಗಳನ್ನು ದುರಸ್ತಿ ಮಾಡುತ್ತಿರುವ ಹೆಸ್ಕಾಂ ಸಿಬ್ಬಂದಿ; ಮತ್ತೊಂದೆಡೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮೇವನ್ನು ಒಂದೆಡೆ ಸೇರಿಸಿ ಹೊದಿಕೆ ಹೊದಿಸುತ್ತಿರುವ ರೈತರು.

ಭಾನುವಾರ ಸಂಜೆ ಬಿರುಗಾಳಿ ಸಹಿತ ಸುರಿದ ಬಾರಿ ಮಳೆಗೆ ಸಮೀಪದ ಚಿಲಝರಿ, ವೀರಾಪೂರ, ಪುರ್ತಗೇರಿ ಗ್ರಾಮಗಳಲ್ಲಿ ಕಂಡು ಬಂದ ದೃಶ್ಯಗಳಿವು.

ಬಿರುಗಾಳಿ ಸಹಿತ ಮಳೆ ಈ ಗ್ರಾಮಗಳ ಜನರನ್ನು ಬೆಚ್ಚಿ ಬೀಳಿಸಿದೆ. ಮಳೆಗೆ ಹಳ್ಳಗಳು ತುಂಬಿ ಹರಿದಿದ್ದು, ಹತ್ತಕ್ಕೂ ಹೆಚ್ಚು ಮನೆ ಮತ್ತು ಶೆಡ್ ಗಳಿಗೆ ಹಾಕಿದ್ದ ತಗಡಿನ ಶೀಟ್ ಗಳು ಹಾರಿ ಹೋಗಿವೆ. ಒಂದು ವಿದ್ಯುತ್ ಪರಿವರ್ತಕ ಸೇರಿದಂತೆ 25ಕ್ಕೂ ಅಧಿಕ ವಿದ್ಯುತ್ ಕಂಬಗಳು, 20ಕ್ಕೂ ಅಧಿಕ ಮರಗಳು ನೆಲಕ್ಕುರುಳಿವೆ.

ತೋಟಗಾರಿಕಾ ಬೆಳೆಗಳಾದ ಚಿಕ್ಕು, ಮಾವು, ಲಿಂಬೆ, ಎಲೆ ಬಳ್ಳಿ ತೋಟಗಳು ಹಾಳಾಗಿವೆ. ಅಪಾರ ಪ್ರಮಾಣದ ಹಾನಿಯಾಗಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ. ವೀರಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿದ್ದ ಬೃಹತ್ ಮರವೊಂದು ಉರುಳಿ ಶಾಲೆ ಮೇಲೆ ಬಿದ್ದಿದೆ.

ಈ ಗ್ರಾಮಗಳಿಗೆ ಗಜೇಂದ್ರಗಡ ತಹಶೀಲ್ದಾರ್ ಶಿವಕುಮಾರ ವಸ್ತ್ರದ, ಕಂದಾಯ ನಿರೀಕ್ಷಕ ವೀರಣ್ಣ ಅಡಗತ್ತಿ, ಗ್ರಾಮ ಲೆಕ್ಕಾಧಿಕಾರಿ ಎನ್.ಎಂ.ನಿಶಾಂದಾರ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ನಿನ್ನೆ ಗಾಳಿ ಮಳಿಗೆ ತಗಡುಗಳು ಹಾಳಿ ಹಾರಾಡಿದಂಗ ಹಾರಾಡಿದವರೀ, ಲೈಟಿನ ಕಂಬಗಳ ಮುರಕೊಂಡ ಬಿದ್ದವಂದ್ರ ಗಾಳಿ ಎಷ್ಟರಮಟ್ಟಿಗೆ ಇತ್ತು ಅಂತ ಗೊತ್ತಾಗುತ್ತ. ಪುಣ್ಯಕ್ ಮಕ್ಕಳು ಮರಿ ಯಾರೂ ಹೊರಗಿದ್ದಿಲ್ಲ’ ಎಂದು ವೀರಾಪುರದ ಮಲ್ಲಮ್ಮ ದುಗುಡದಿಂದ ಹೇಳಿದರು.

**

ನಾನು ನನ್ನ ಜೀವನದಲ್ಲಿಯೇ ಇಂತಹ ಗಾಳಿ– ಮಳೆ ನೋಡಿದ್ದಿಲ್ಲ ನಿನ್ನೆಯ ಗಾಳಿ ಮಳೆ ನೋಡಿ ಎಲ್ಲಿ ಏನು ಬಂದು ಬೀಳುತ್ತವೆನೋ ಎಂಬ ಭಯ ಇತ್ತು – ದಾವಲಸಾಬ ಸರ್ಕಾವಸ, ಚಿಲಝರಿ ಗ್ರಾಮಸ್ಥ.

**

ಶ್ರೀಶೈಲ ಎಂ. ಕುಂಬಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry