ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಲ್ಲಿ ಕಾವೇರಿದ ಬಂಡಾಯ

ಕುತೂಹಲ ಕೆರಳಿಸಿದ ಟಿಕೆಟ್ ವಂಚಿತ ಶಿವರಾಂ, ಅನುಪಮಾ ನಡೆ
Last Updated 17 ಏಪ್ರಿಲ್ 2018, 8:18 IST
ಅಕ್ಷರ ಗಾತ್ರ

ಹಾಸನ: ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡ ಬೆನ್ನಲ್ಲೇ ಟಿಕೆಟ್‌ ವಂಚಿತರ ಅಸಮಾಧಾನ ಸ್ಫೋಟಗೊಂಡಿದೆ. ಟಿಕೆಟ್‌ ಕೈ ತಪ್ಪಿದ ಪ್ರಬಲ ಆಕಾಂಕ್ಷಿಗಳು ಬಹಿರಂಗವಾಗಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಆಯ್ಕೆ ಪ್ರಕ್ರಿಯೆಯ ಮಾನದಂಡ ಪ್ರಶ್ನಿಸುವ ಮೂಲಕ ಹೈಕಮಾಂಡ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಬಂಡಾಯವಾಗಿ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.

ಪಕ್ಷದ ಸದಸ್ಯತ್ವವನ್ನು ಪಡೆಯದ ಸಿದ್ದಯ್ಯ ಮತ್ತು ಬಾಗೂರು ಮಂಜೇಗೌಡರಿಗೆ ಟಿಕೆಟ್‌ ನೀಡಿರುವುದಕ್ಕೆ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರವಾಗಿರುವ ಸಕಲೇಶಪುರ–ಆಲೂರು ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ನಿವೃತ್ತ ಐಎಎಸ್‌ ಅಧಿಕಾರಿ ಬಿ.ಸಿದ್ದಯ್ಯ ಅವರಿಗೆ ಟಿಕೆಟ್‌ ಕೊಡಿಸಿದ್ದಾರೆ. ಇದು ಸ್ಥಳೀಯ ಟಿಕೆಟ್‌ ಆಕಾಂಕ್ಷಿಗಳಿಗೆ ಅಸಮಾಧಾನ ಉಂಟು ಮಾಡಿದೆ. ಈ ಕ್ಷೇತ್ರಕ್ಕೆ ಸ್ಥಳೀಯರು, ವಲಸಿಗರು ಸೇರಿ 20 ಮಂದಿ ಟಿಕೆಟ್‌ಗಾಗಿ ಲಾಬಿ ನಡೆಸಿದ್ದರು.

‘ಯಾವ ಮಾನದಂಡದ ಮೇಲೆ ಸಿದ್ದಯ್ಯಗೆ ಟಿಕೆಟ್‌ ನೀಡಿದ್ದಾರೆ ಗೊತ್ತಿಲ್ಲ. ಅವರಿಗೂ ಸಕಲೇಶಪುರಕ್ಕೆ ಸಂಬಂಧವೇ ಇಲ್ಲ. ಖರ್ಗೆ ಅವರು ಸ್ಥಳೀಯರಿಗೆ ಟಿಕೆಟ್‌ ನೀಡುವಂತೆ ಪಟ್ಟು ಹಿಡಿದಿದ್ದರೂ ಕೆಲ ಮುಖಂಡರು ಆಮಿಷಕ್ಕೆ ಒಳಗಾಗಿ ಅವರಿಗೆ ಟಿಕೆಟ್‌ ಕೊಡಿಸಿದ್ದಾರೆ’ ಎಂದು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಸಣ್ಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

‘ಸ್ಥಳೀಯ ಅಭ್ಯರ್ಥಿ ಕಡೆಗಣಿಸಿ ಹೊರಗಿನವರಿಗೆ ಟಿಕೆಟ್‌ ನೀಡಿರುವುದನ್ನು ವಿರೋಧಿಸಿ ಕಾರ್ಯಕರ್ತರು ಹಾಗೂ ಮುಖಂಡರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಆಲೂರು ಕಾಂಗ್ರೆಸ್‌ ಎಸ್‌.ಸಿ–ಎಸ್‌.ಟಿ ಘಟಕದ ಅಧ್ಯಕ್ಷ ಹೊನ್ನಪ್ಪ ಎಚ್ಚರಿಸಿದ್ದಾರೆ.

‘ಸ್ಥಳೀಯ ಅಭ್ಯರ್ಥಿ ಸ್ಪರ್ಧೆ ಮಾಡಲು ಅವಕಾಶ ಮಾಡಿಕೊಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿದರೂ ಅದನ್ನು ಪರಿಗಣಿಸದೆ ಅವಮಾನ ಮಾಡಲಾಗಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯರ ಪ್ರತಿರೋಧ, ಪಕ್ಷದೊಳಗಿನ ಗುಂಪುಗಾರಿಕೆ ಸಿದ್ದಯ್ಯ ಅವರಿಗೆ ಸವಾಲಾಗಲಿದೆ. ನಾಮಪತ್ರ ಸಲ್ಲಿಕೆ ಮುಂಚಿತವಾಗಿ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯಬೇಕಿದೆ.

ಜೆಡಿಎಸ್ ಭದ್ರಕೋಟೆ ಹೊಳೆನರಸೀಪುರದಲ್ಲಿ ಎಚ್.ಡಿ.ರೇವಣ್ಣ ವಿರುದ್ಧ ನಿವೃತ್ತ ಹಿರಿಯ ಮೋಟಾರು ವಾಹನ ನಿರೀಕ್ಷಕ ಬಿ.ಪಿ.ಮಂಜೇಗೌಡರನ್ನು ಸಿದ್ದರಾಮಯ್ಯ ಕಣ್ಣಕ್ಕಿಳಿಸಿದ್ದಾರೆ.

ನೇರವಾಗಿ ಚುನಾವಣಾ ರಾಜಕೀಯದಲ್ಲಿ ಭಾಗಿಯಾಗದಿದ್ದರೂ ತೆರೆಮರೆಯಲ್ಲಿ ಹಲವು ಅಭ್ಯರ್ಥಿಗಳ ಚುನಾವಣೆ ನಿರ್ವಹಿಸಿದ, ಸಂಪನ್ಮೂಲ ಹಂಚಿಕೆ ಮಾಡಿದ ಅನುಭವ ಮಂಜೇಗೌಡರಿಗೆ ಇದೆ.

ಅವರಿಗೆ ಟಿಕೆಟ್‌ ನೀಡದಂತೆ ಎರಡು ಚುನಾವಣೆಗಳ ಪರಾಜಿತ ಅಭ್ಯರ್ಥಿ, ಮಾಜಿ ಸಚಿವ ಜಿ.ಪುಟ್ಟಸ್ವಾಮಿಗೌಡರ ಸೊಸೆ ಎಸ್‌.ಜಿ.ಅನುಪಮಾ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಟಿಕೆಟ್‌ ಕೈ ತಪ್ಪಿದ್ದರಿಂದ ಬೇಸರಗೊಂಡಿರುವ ಅನುಪಮಾ ಅವರು ಏ. 18ರಂದು ಕಾರ್ಯಕರ್ತರು ಹಾಗೂ ಮುಖಂಡರ ಸಭೆ ಕರೆಯಲು ನಿರ್ಧರಿಸಿದ್ದಾರೆ. ಅಂದು ಸಭೆಯಲ್ಲಿದ್ದವರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ.

ಮಂಜೇಗೌಡರು ಅನುಪಮಾ ಅವರ ಅಸಮಾಧಾನ ಶಮನಗೊಳಿಸಿ ಬೆಂಬಲ ಗಿಟ್ಟಿಸಿಕೊಳ್ಳುವ ಸವಾಲು ಮೊದಲು ನಿಭಾಯಿಸಬೇಕಾಗಿದೆ.

‘ಪುಟ್ಟಸ್ವಾಮಿಗೌಡರ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಲು ಸಾಧ್ಯವಾಗಿಲ್ಲ. ಹಾಗಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಾವುಟ ಹಾರಿಸಲು ಮುಖ್ಯಮಂತ್ರಿ ಅಣತಿಯಂತೆ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ ಸ್ಪರ್ಧಿಸುತ್ತಿದ್ದೇನೆ. ಆರನೇ ವೇತನ ಆಯೋಗ ಜಾರಿ ಮಾಡಿರುವ ಸಿ.ಎಂ ಮಾತಿಗೆ ಇಲ್ಲ ಎನ್ನುವುದಿಲ್ಲ. ಅನುಪಮಾ ಅವರ ಜತೆ ಮಾತನಾಡಿದ್ದೇನೆ. ಅವರು ಬೆಂಬಲ ಸೂಚಿಸಿದ್ದಾರೆ. ಮಂಜೇಗೌಡನಿಗೆ ಬೆಂಬಲ ನೀಡದಿದ್ದರೂ ಪರವಾಗಿಲ್ಲ, ಕಾಂಗ್ರೆಸ್‌ಗೆ ಬೆಂಬಲ ಸೂಚಿಸುತ್ತಾರೆ ಎಂಬ ನಂಬಿಕೆ ಇದೆ’ ಎಂದು ಮಂಜೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

‘ಅರಸೀಕೆರೆ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಅಶೋಕ್‌ ಅವರಿಗೆ ಟಿಕೆಟ್‌ ಕೈ ತಪ್ಪಿಸುವ ಮೂಲಕ ಕುರುಬ ಜನಾಂಗಕ್ಕೆ ಸಚಿವ ಎ.ಮಂಜು ದ್ರೋಹ ಬಗೆದಿದ್ದಾರೆ’ ಎಂದು ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಮೋಹನ್‌ ಕುಮಾರ್‌ ಆರೋಪಿಸಿದರು.

ಎರಡು ದಿನಗಳಲ್ಲಿ ಟಿಕೆಟ್‌ ಘೋಷಣೆ ಮಾಡದಿದ್ದರೆ ಅರಕಲಗೂಡು ಕ್ಷೇತ್ರಕ್ಕೆ ಕುರುಬ ಸಮುದಾಯದಿಂದ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಅವರು ಎಚ್ಚರಿಸಿದರು.

1983ರಲ್ಲಿ ಅರಸೀಕೆರೆ ಕ್ಷೇತ್ರದ ಶಾಸಕರಾಗಿದ್ದ ಜಿ.ಎಸ್‌.ಬಸವರಾಜು ಅವರ ಪುತ್ರ ಜಿ.ಬಿ.ಶಶಿಧರ್‌ ಗೆ ಟಿಕೆಟ್‌ ದೊರೆತಿದೆ. ಆದರೆ ಅವರು ಈವರೆಗೂ ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯವಾಗಿರಲಿಲ್ಲ.

ಕಾಂಗ್ರೆಸ್‌ ನಾಯಕರಿಂದ ವಿಧಾನಸಭೆ ಟಿಕೆಟ್‌ ಆಶ್ವಾಸನೆ ದೊರೆತ ಕಾರಣ ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ, ಜೆಡಿಎಸ್‌ ತೊರೆದು ಬಿ.ಎಸ್‌.ಅಶೋಕ್‌ ಕಾಂಗ್ರೆಸ್‌ ಸೇರಿದ್ದರು.

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಕಳೆದ ಬಾರಿಯ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ಎಚ್‌.ಕೆ.ಮಹೇಶ್‌ ಅವರಿಗೆ ಮತ್ತೊಂದು ಅವಕಾಶ ನೀಡಿದೆ. ಹಾಸನ ತಾಲ್ಲೂಕು ಶಾಂತಿಗ್ರಾಮ ಹೋಬಳಿ ಹಲಸನಹಳ್ಳಿ ಗ್ರಾಮದ ಮಹೇಶ್‌ ಪದವೀಧರರಾಗಿದ್ದು, 2013ರ ಚುನಾವಣೆಯಲ್ಲಿ 57110 ಮತ ಗಳಿಸಿ, 4196 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ವರಿಷ್ಠರು ಟಿಕೆಟ್ ಖಚಿತಪಡಿಸಿದ್ದರಿಂದ ಪ್ರಚಾರ ಆರಂಭಿಸಿದ್ದರು.

ಅರಕಲಗೂಡು ಕ್ಷೇತ್ರದಿಂದ ಹಾಲಿ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರು ಮತ್ತೊಮ್ಮೆ ಟಿಕೆಟ್‌ ಪಡೆದುಕೊಂಡಿದ್ದಾರೆ. ಮೂರು ತಿಂಗಳಿನಿಂದಲೇ ಕ್ಷೇತ್ರ ಪ್ರವಾಸದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು.

ಅರಕಲಗೂಡಿಗೆ ಯೋಗಾ ರಮೇಶ್‌

ಬಿಜೆಪಿ ಬಿಡುಗಡೆ ಮಾಡಿದ ಎರಡನೇ ಪಟ್ಟಿಯಲ್ಲಿ ಅರಕಲಗೂಡು ಕ್ಷೇತ್ರದಿಂದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯೋಗಾ ರಮೇಶ್‌ಗೆ ಟಿಕೆಟ್‌ ನೀಡಲಾಗಿದೆ. ನಿವೃತ್ತ ಐಎಎಸ್‌ ಅಧಿಕಾರಿ ರಾಮೇಗೌಡ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದರು.

ಎರಡು ದಿನದಲ್ಲಿ ತೀರ್ಮಾನ: ಶಿವರಾಂ

ಬೇಲೂರು ಕ್ಷೇತ್ರದಿಂದ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ಅವರು ಬಂಡಾಯವಾಗಿ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಟಿಕೆಟ್ ಕೈ ತಪ್ಪಿದ್ದರಿಂದ ನನಗಿಂತ ಕಾರ್ಯಕರ್ತರಿಗೆ ತುಂಬಾ ನೋವಾಗಿದೆ. ಕಾಂಗ್ರೆಸ್ ನ ಶಿಸ್ತಿನ ಸಿಪಾಯಿ. ಆದರೆ ಇಂಥ ಸಂದರ್ಭದಲ್ಲಿ ಒಂದು ತೀರ್ಮಾನಕ್ಕೆ ಬರುವುದು ಅನಿವಾರ್ಯ. ಅದಕ್ಕೂ ಮುನ್ನ ಬೇಲೂರಿನಲ್ಲಿ ತಮ್ಮ ಬೆಂಬಲಿಗರು ಮತ್ತು ಕಾರ್ಯಕರ್ತರ ಸಭೆ ಕರೆದು, ಅವರ ಅಭಿಪ್ರಾಯ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಪ್ರಕಟಿಸಿದರು.

‘ಟಿಕೆಟ್ ಕೈತಪ್ಪಲು ಉಸ್ತುವಾರಿ ಸಚಿವ ಎ.ಮಂಜು ಕಾರಣ ಎಂಬ ತಮ್ಮ ಬೆಂಬಲಿಗರ ಆರೋಪ ನಿಜ’ ಎನ್ನುವ ಮೂಲಕ, ಮಂಜು ವಿರುದ್ಧ ಅಸಮಾಧಾನ ಹೊರ ಹಾಕಿದರು. ‘ತಮ್ಮನ್ನು ಯಾವುದೇ ಬಿಜೆಪಿ ನಾಯಕರು ಸಂಪರ್ಕ ಮಾಡಿಲ್ಲ. ಪಕ್ಷ ಬಿಡುವ ಬಗ್ಗೆ ತೀರ್ಮಾನಿಸಿಲ್ಲ’ ಎಂದು ಶಿವರಾಂ ಸ್ಪಷ್ಟ ಪಡಿಸಿದರು.

ಕೆಲ ದಿನಗಳ ಹಿಂದೆ ಬೇಲೂರಿನಲ್ಲಿ ಸಭೆ ನಡೆಸಿದ್ದ ಶಿವರಾಂ ಬೆಂಬಲಿಗರು, ತಮ್ಮ ನಾಯಕರಿಗೆ ಟಿಕೆಟ್ ನೀಡದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಸ್ಥಳೀಯ ಜನಪ್ರತಿನಿಧಿಗಳು ಎಚ್ಚರಿಸಿದ್ದರು. ಹಾಗಾಗಿ ಇನ್ನೆರಡು ದಿನಗಳಲ್ಲಿ ಕಾರ್ಯಕರ್ತರ ಅಭಿಪ್ರಾಯ ಕೇಳಿ ಅವರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ.ಬೇಲೂರು ಕ್ಷೇತ್ರದಿಂದ ಮಾಜಿ ಶಾಸಕ ದಿ.ವೈ.ಎನ್‌.ರುದ್ರೇಶ್‌ಗೌಡರ ಪತ್ನಿ ಕೀರ್ತನಾ ರುದ್ರೇಶ್‌ಗೌಡರಿಗೆ ಟಿಕೆಟ್‌ ನೀಡಲಾಗಿದೆ.

ಅಣ್ಣಯ್ಯ ಕುಟುಂಬಕ್ಕೆ ಟಿಕೆಟ್‌ ಇಲ್ಲ

ಶ್ರವಣಬೆಳಗೊಳ ಕ್ಷೇತ್ರಕ್ಕೆ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಸಿ.ಎಸ್‌.ಪುಟ್ಟೇಗೌಡರಿಗೆ ಮತ್ತೊಂದು ಅವಕಾಶ ಕೊಡಿಸುವಲ್ಲಿ ಸಿ.ಎಂ ಯಶಸ್ವಿಯಾಗಿದ್ದಾರೆ. ಹಿರೀಸಾವೆ ಅಣ್ಣಯ್ಯ ಎಂದೇ ಪ್ರಸಿದ್ಧಿ ಪಡೆದಿದ್ದ ಮಾಜಿ ಸಚಿವ ದಿ.ಎಚ್‌.ಸಿ.ಶ್ರೀಕಂಠಯ್ಯ ಕುಟುಂಬದಿಂದ ಅವರ ಸೊಸೆ ರಾಜೇಶ್ವರಿ ಹಾಗೂ ಅವರ ಮೊಮ್ಮಗ ಲಲಿತ್ ರಾಘವ್‌ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಈ ಬಾರಿಯೂ ಹೈಕಮಾಂಡ್‌ ಕೃಪೆ ತೋರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT