ಸಮಾನತೆಯ ಸಮಾಜಕ್ಕಾಗಿ ಕಲೆ ಅಗತ್ಯ

7
ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ ಅಭಿಮತ

ಸಮಾನತೆಯ ಸಮಾಜಕ್ಕಾಗಿ ಕಲೆ ಅಗತ್ಯ

Published:
Updated:

ಕಲಬುರ್ಗಿ: ‘ರವಿ ಕಾಣದನ್ನ ಕವಿ ಕಂಡ, ಕವಿ ಕಾಣದನ್ನ ವಿಮರ್ಶಕ ಕಂಡ, ವಿಮರ್ಶಕರಿಗೆ ಮೀರಿದ್ದನ್ನ ಚಿತ್ರಕಲಾವಿದ ತನ್ನ ಕಲೆಯಲ್ಲಿ ಹಿಡಿದಿಡುತ್ತಾನೆ. ಕಲೆ, ಕಲೆಗಾಗಿ ಅಲ್ಲ, ಸಮಾನತೆಯ ಸಮಾಜಕ್ಕಾಗಿ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ ಹೇಳಿದರು.

ಇಲ್ಲಿನ ಕನ್ನಡ ಭವನದಲ್ಲಿ ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಲಿಯೊನಾರ್ಡ ಡಾವಿಂಚಿ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಿಶ್ವ ದೃಶ್ಯಕಲಾ ದಿನಾಚರಣೆ ಮತ್ತು ಐದನೇ ವಾರ್ಷಿಕ ಚಿತ್ರಕಲಾ, ಶಿಲ್ಪಕಲಾ ಪ್ರದರ್ಶನದಲ್ಲಿ ಮಾತನಾಡಿದರು.

‘ಮಾತಿಗಿಂತ ಬಹುದೊಡ್ಡ ಅರ್ಥವನ್ನು ಕಲೆ ಪರಿಚಯಿಸುತ್ತದೆ. ಸಾಹಿತ್ಯ, ಕಲೆ, ಸಂಗೀತವನ್ನು ಜತನದಿಂದ ಕಾಪಾಡಿಕೊಳ್ಳಬೇಕಿದೆ. ಸಾಂಸ್ಕೃತಿಕ ಜಾತ್ರೆಗಳನ್ನು ಮರೆತ ಪರಿಣಾಮವೇ ಇಂದಿನ ದೌರ್ಜನ್ಯ, ಕೊಲೆ, ಅಸಹಿಷ್ಣುತೆಯ ಅಟ್ಟಹಾಸಗಳು ವಿಜೃಂಭಿಸುತ್ತಿವೆ’ ಎಂದು ಹೇಳಿದರು.

‘ಸೂಕ್ಷ್ಮ ಪ್ರಜ್ಞೆ ಇಲ್ಲದವನು ಕವಿ, ಕಲಾವಿದ ಆಗಲಾರ, ನಾಗರಿಕನಾಗಲೂ ಸಾಧ್ಯವಿಲ್ಲ. ಮನುಷ್ಯನನ್ನು ಚಿಕ್ಕದಾಗಿ ಟಿ.ವಿಯಲ್ಲಿ ನೋಡುತ್ತೇವೆ, ಸಿನಿಮಾ ಮಂದಿರದಲ್ಲಿ ದೊಡ್ಡದಾಗಿ ತೋರಿಸುತ್ತೇವೆ, ಮನುಷ್ಯನನ್ನು ಮನುಷ್ಯನ್ನಾಗಿ ತೋರಿಸುವುದು ರಂಗಭೂಮಿ ಒಂದೇ. ಕ್ರೀಯಾಶೀಲತೆ, ಸೃಜನಶೀಲತೆಯನ್ನು ದ್ವಿಗುಣಗೊಳಿಸುವ ಕೆಲಸ ಕಲೆಯಲ್ಲಿದೆ. ಸುಂದರ, ಭಾವನಾತ್ಮಕ, ಜಾತಿ–ಧರ್ಮದ ಎಲ್ಲೆ ಮೀರಿದ ಸಂಬಂಧವನ್ನು ಇಲ್ಲಿ ಕಾಣಬಹುದು ಹಾಗೂ ಕಟ್ಟಿಕೊಳ್ಳಬಹುದು’

ಎಂದರು.

‘ನಾವು ಸ್ವಾತಂತ್ರ್ಯವನ್ನು ಪ್ರತಿಮೆಗಳಾಗಿ ನಿಲ್ಲಿಸಿಬಿಟ್ಟಿದ್ದೇವೆ. ಇಂತಹ ಪ್ರತಿಮೆಗಳು ಭಾರತದಲ್ಲಿಯೂ ಕಡಿಮೆ ಇಲ್ಲ. ಮಹಾನ್ ವ್ಯಕ್ತಿಗಳನ್ನು ದಿನಾಚರಣೆಗೆ ಸೀಮಿತಗೊಳಿಸದೆ ವರ್ತಮಾನದ ಸಮಸ್ಯೆಗಳನ್ನು ಎದುರಿಸಲು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು. ಹಸಿವಿನ ಜನರು ಒಂದು ಕಡೆ, ನಮ್ಮನ್ನು ತುಳಿಯುತ್ತಿರುವ ಬಂಡವಾಳಶಾಹಿ ವರ್ಗ ಇನ್ನೊಂದೆಡೆ. ಈ ಸತ್ಯವನ್ನು ಜನರಿಗೆ ಮುಟ್ಟಿಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಹೇಳಿದರು.

‘ಚಾರ್ಲಿ ಚಾಪ್ಲಿನ್‌ ತನ್ನ ಹಾಸ್ಯ ಹಾಗೂ ಮೌನದ ಮೂಲಕವೇ ಸರ್ವಾಧಿಕಾರಿ ಹಿಟ್ಲರ್‌ನ ಕ್ರೂರತೆಯನ್ನು, ಯಾಂತ್ರಿಕ ಬದುಕನ್ನು ಚಿತ್ರಿಸಿದ್ದಾರೆ. ಅಂತಹ ಸರ್ವಾಧಿಕಾರಿ ನಡೆ ಎಲ್ಲೆಲ್ಲೂ ರಾರಾಜಿಸುತ್ತಿರುವುದನ್ನು ಇನ್ನೂ ಕಾಣದವರಿಗೆ ತೋರಿಸುವ, ಕೇಳದವರಿಗೆ ಕೇಳಿಸುವ ಕೆಲಸವನ್ನು ಕಲೆಯ ಮೂಲಕ ಮಾಡಬೇಕಿದೆ’ ಎಂದು ಹೇಳಿದರು.

ರೇಖಾ ಚಿತ್ರ ಬಿಡಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದ ಎಸ್‌.ಬಿ.ಆರ್ಟ್ಸ್ ಕಾಲೇಜಿನ ಚಿತ್ರಕಲಾ ವಿಭಾಗದ ಮುಖ್ಯಸ್ಥ ವಿ.ಬಿ.ಬಿರಾದಾರ ಮಾತನಾಡಿ, ‘ಕತ್ತಲೆ, ಬೆಳಕಲ್ಲಿ ಇಂದ್ರಿಯಗಳ ಗ್ರಹಿಕೆಗೆ ಬರುವ ಆನಂದವೇ ಕಲೆಯ ಮೂರ್ತರೂಪವಾಗಿದೆ. ಸತ್ಯ, ಸೌಂದರ್ಯಗಳು ವಿಭಿನ್ನವಾಗಿ ಕಾಣುತ್ತವೆ. ಸುಂದರವಾಗಿರುವುದಷ್ಟೆ ಚಿತ್ರಕಲೆ ಅಲ್ಲ’ ಎಂದು ಹೇಳಿದರು.

ಸಂಸ್ಥೆ ಅಧ್ಯಕ್ಷ ಪರಶುರಾಮ ಪಿ. ಮಾತನಾಡಿದರು. ನಯನ.ಬಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry