ಶುಕ್ರವಾರ, ಡಿಸೆಂಬರ್ 13, 2019
19 °C
ತಾಪಮಾನದ ಜತೆಗೆ ಏರಿಕೆಯಾದ ಬೆಲೆ: ಒಂದು ಎಳನೀರಿಗೆ ₹35, ಹೆಚ್ಚಿದ ಬೇಡಿಕೆ

ಎಳನೀರು ವ್ಯಾಪಾರಿಗಳಿಗೆ ವರವಾದ ಬಿಸಿಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಳನೀರು ವ್ಯಾಪಾರಿಗಳಿಗೆ ವರವಾದ ಬಿಸಿಲು

ಕಲಬುರ್ಗಿ: ಆರೋಗ್ಯಯುತ ನೈಸರ್ಗಿಕ ಪೇಯ ಎಳನೀರಿಗೆ ಈಗ ಭಾರಿ ಬೇಡಿಕೆ. ಆದರೆ, ಅವುಗಳ ಬೆಲೆ ಏರಿಕೆಯಿಂದ ಗ್ರಾಹಕರಿಗೆ ‘ಬಿಸಿ’ ಅನುಭವ ಆಗುತ್ತಿದೆ.

ನಗರದಲ್ಲಿ ಪ್ರತಿನಿತ್ಯ 10 ಸಾವಿರ ಎಳನೀರು ಮಾರಾಟವಾಗುವ ಅಂದಾಜಿದೆ. ಜಿಲ್ಲೆಯಲ್ಲಿ ತೆಂಗಿನಮರಗಳು ವಿರಳ. ಹೊರ ಜಿಲ್ಲೆಗಳಿಂದ  ಪೂರೈಕೆ ಆಗುತ್ತಿವೆ. ಹೀಗಾಗಿ ಅವುಗಳ ಬೆಲೆ ಹೆಚ್ಚಾಗಿಯೇ ಇದೆ.

ಬೇಸಿಗೆಯಲ್ಲಿ ಎಳನೀರಿನಗೆ ಹೆಚ್ಚಿನ ಮಹತ್ವ ಇರುತ್ತದೆ. ಬೇರೆ ಪಾನೀಯಗಳಿಗಿಂತ ಇದರಲ್ಲಿ ಆರೋಗ್ಯಕರ ಅಂಶಗಳು ಹೆಚ್ಚಾಗಿವೆ. ಹೀಗಾಗಿ, ಜನ ಬೇಸಿಗೆಯಲ್ಲಿ ಹೆಚ್ಚು ಹೆಚ್ಚು ಎಳನೀರು ಕುಡಿಯುತ್ತಾರೆ.

ನಗರ ಕಾದ ಕಾವಲಿಯಾಗಿದೆ. ಸಂಜೆ 7ಗಂಟೆ ವರೆಗೂ ಬಿಸಿ ವಾತಾವರಣ ಇರುತ್ತದೆ. ರಾತ್ರಿಯೂ ಮನೆಯಲ್ಲಿ ಇರಲಾಗದ, ಹೊರಗೂ ಹೋಗಲಾರದ ಸ್ಥಿತಿ. ಎಷ್ಟೇ ನೀರು ಕುಡಿದರೂ ಮತ್ತೆ ಮತ್ತೆ ದಾಹವಾಗುತ್ತದೆ. ಹೀಗಾಗಿ, ಜೀವಜಲದ ಜತೆಗೆ ಎಳನೀರು ಅನಿವಾರ್ಯವಾಗಿದೆ. ಗ್ರಾಹಕರ ಈ ‘ದಾಹ’ ಎಳನೀರು ವ್ಯಾಪಾರಿಗಳಿಗೆ ‘ಬಂಡವಾಳ’.

ಮಂಡ್ಯ ಜಿಲ್ಲೆಯ ಮದ್ದೂರಿನಿಂದ ಇಲ್ಲಿಗೆ ಎಳನೀರುಗಳು ಬರುತ್ತವೆ. ಪ್ರತಿನಿತ್ಯ ಎಳನೀರು ತುಂಬಿಕೊಂಡ ಒಂದು ಅಥವಾ ಎರಡು ಲಾರಿಗಳು ಇಲ್ಲಿನ ಮಾರುಕಟ್ಟೆಗೆ ಬರುತ್ತವೆ. ಯಾತ್ರಿ ನಿವಾಸ ಸಮೀಪ ಅವುಗಳನ್ನು ಇಳಿಸಲಾಗುತ್ತದೆ. ಅಲ್ಲಿಂದ ಚಿಲ್ಲರೆ ವ್ಯಾಪಾರಿಗಳು ಖರೀದಿಸಿ ನಗರದ ವಿವಿಧ ಕಡೆ ಮಾರಾಟ ಮಾಡುತ್ತಾರೆ.

‘ಬೇಸಿಗೆ ಆರಂಭದಲ್ಲಿ ಬೆಲೆ ಕಡಿಮೆ ಇತ್ತು. ಬಿಸಿಲು ಹೆಚ್ಚಾಗುತ್ತಿರುವಂತೆಯೇ ಭಾರಿ ಬೇಡಿಕೆ ಇದೆ. ಪ್ರತಿನಿತ್ಯ 300 ರಿಂದ 400 ಎಳನೀರು ಮಾರಾಟ ಮಾಡುತ್ತೇನೆ. ಸಗಟು ವ್ಯಾಪಾರಿಗಳು ನಮಗೆ ಪೂರೈಕೆ ಮಾಡುತ್ತಾರೆ’ ಎನ್ನುತ್ತಾರೆ ಸಗಟು ವ್ಯಾಪಾರಿ ಬಾಬು.

‘ದಿನಕ್ಕೆ ಎರಡು, ಮೂರು ಬಾರಿ ತಂಪು ಪಾನೀಯ ಸೇವಿಸಿದರೂ ದೇಹ ತಂಪಾಗುವುದಿಲ್ಲ. ಬಾಯಿ ಒಣಗುತ್ತದೆ. ಹೀಗಾಗಿ ನಿತ್ಯವೂ ಎರಡು ಎಳನೀರು ಕುಡಿಯುತ್ತೇನೆ. ದುಬಾರಿಯಾದರೂ ಕುಡಿಯಲೇಬೇಕಾಗಿದೆ’ ಎಂದು ಗ್ರಾಹಕ ಶಿವಪ್ಪ ಪಾಟೀಲ ಹೇಳಿದರು.

‘ಜಿಲ್ಲೆಯಲ್ಲಿ ತೆಂಗಿನತೋಟಗಳು ಇಲ್ಲ. ಅಲ್ಲೊಂದು, ಇಲ್ಲೊಂದು ಇವೆ. ಮದ್ದೂರಿನಿಂದ ಎಳನೀರು ತಂದು ಮಾರಾಟ ಮಾಡಲಾಗುತ್ತದೆ. ಸಾಗಾಣಿಕೆ ವೆಚ್ಚ ಹೆಚ್ಚಿಗೆ ಭರಿಸಬೇಕಾಗುತ್ತದೆ.  ಹೀಗಾಗಿ ಬೆಲೆ ಹೆಚ್ಚು’ ಎನ್ನುತ್ತಾರೆ ವ್ಯಾಪಾರಿ ನಾಗಭೂಷಣ.

20 ಲೋಡ್‌ ಮಾರಾಟ

ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ತಲಾ 20 ಲಾರಿ ಎಳನೀರು ಮಾರಾಟ ಆಗುತ್ತದೆ. ಒಂದು ಲಾರಿಗೆ ₹8,500ರಿಂದ 9,500ರ ವರೆಗೆ ದರ ಇರುತ್ತದೆ. ಮದ್ದೂರಿನಿಂದ ಬರುವ ಕಾರಣ ಸಾಗಣೆ ವೆಚ್ಚವೂ ಗ್ರಾಹಕರ ಮೇಲೆ ಬೀಳಲಿದೆ. ನಗರ ಮಾತ್ರವಲ್ಲ ಆಳಂದ, ಚಿತ್ತಾಪುರ, ಅಫಜಲಪುರ, ಸೇಡಂ, ಚೌಡಾಪುರಗೆ ಇಲ್ಲಿಂದ ಎಳನೀರು ರವಾನೆ ಆಗುತ್ತದೆ.

‘ಆರೋಗ್ಯ ವೃದ್ಧಿಸುವ ಔಷಧ’

ಎಳನೀರು ಕೇವಲ ಬಾಯಾರಿಕೆ ತಣಿಸುವ ಪಾನೀಯವಲ್ಲ, ಇದು ಆರೋಗ್ಯ ವೃದ್ಧಿಸುವ ಔಷಧ. ಇದರಲ್ಲಿ ವಿಟಮಿನ್‌ ಸಿ, ಮೆಗ್ನಿಶಿಯಂ ಪ್ರಮಾಣ ಸಹ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ದೇಹದ ನಿರ್ಜಲೀಕರಣ ನಿವಾರಣೆ ಆಗುತ್ತದೆ. ದೇಹ ಸುಸ್ಥಿತಿಯಲ್ಲಿ ಇಡಲು ಉಪಯೋಗಕಾರಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರು ಸೇವಿಸುವುದರಿಂದ ಆರೋಗ್ಯ ಸುಧಾರಿಸುತ್ತದೆ. ಜೀರ್ಣಕ್ರಿಯೆ ಸರಿಯಾಗಿರುತ್ತದೆ. ಆಯಾಸವೂ ನಿವಾರಣೆ ಆಗುತ್ತದೆ.

**

ಎಲ್ಲ ಕಾಲದಲ್ಲೂ ಎಳನೀರಿಗೆ ಬೇಡಿಕೆ ಇರುತ್ತದೆ. ಆದರೆ, ಬೇಸಿಗೆಯಲ್ಲಿ ಎಂದಿನ ದಿನಕ್ಕಿಂತ ಎರಡು ಪಟ್ಟು ಹೆಚ್ಚಿನ ಬೇಡಿಕೆ ಇರುತ್ತದೆ – ಶಿವ ಬಿರಾದಾರ, ಎಳನೀರು ವ್ಯಾಪಾರಿ

**

ಪ್ರಕಾಶ್‌ ಸಿ.ಆರ್‌.

ಪ್ರತಿಕ್ರಿಯಿಸಿ (+)