ಕೊಡಗು ಕಾಂಗ್ರೆಸ್‌ನಲ್ಲಿ ಬಂಡಾಯ ಸ್ಫೋಟ

7
20ರಂದು ಪಕ್ಷೇತರ ಅಭ್ಯರ್ಥಿಯಾಗಿ ನಾಪಂಡ ಮುತ್ತಪ್ಪ ನಾಮಪತ್ರ ಸಲ್ಲಿಕೆಗೆ ನಿರ್ಧಾರ

ಕೊಡಗು ಕಾಂಗ್ರೆಸ್‌ನಲ್ಲಿ ಬಂಡಾಯ ಸ್ಫೋಟ

Published:
Updated:

ಮಡಿಕೇರಿ: ಕಾಂಗ್ರೆಸ್‌ ಟಿಕೆಟ್‌ ಘೋಷಣೆಯ ಬೆನ್ನಲ್ಲೇ ಕೊಡಗಿನಲ್ಲೂ ಬಂಡಾಯ ಸ್ಫೋಟಗೊಂಡಿದೆ. ಮಡಿಕೇರಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಮುತ್ತಪ್ಪಗೆ ಟಿಕೆಟ್‌ ತಪ್ಪಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಮುಂದಾಗಿದ್ದಾರೆ. ಇನ್ನು ಅದೇ ಕ್ಷೇತ್ರದಿಂದ ಟಿಕೆಟ್‌ ಬಯಸಿದ್ದ ಸೋಮವಾರಪೇಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಎಂ.ಲೋಕೇಶ್‌, ಸುಂಟಿಕೊಪ್ಪ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯೆ ಕೆ.ಪಿ.ಚಂದ್ರಕಲಾ ಅವರಿಗೂ ನಿರಾಸೆಯಾಗಿದೆ.

ನಾಪಂಡ ಮುತ್ತಪ್ಪ ಎರಡು ವರ್ಷ ಗಳಿಂದ ಕ್ಷೇತ್ರದಲ್ಲಿ ಸಂಚಾರ ಮಾಡಿ, ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ಜತೆಗೆ, ಕಾಂಗ್ರೆಸ್‌ನ ಭಾಗವಾದ ಇಂಡಿ ಯನ್‌ ನ್ಯಾಷನಲ್‌ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ನಲ್ಲೂ ಸಕ್ರಿಯವಾಗಿದ್ದರು.

‘ಈ ಬಾರಿ ನನಗೆ ಟಿಕೆಟ್‌ ಸಿಗಲಿದ್ದು ಬೆಂಬಲಿಸಿ’ ಎಂದು ಮಡಿಕೇರಿ ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲೂ ಪ್ರಚಾರ ನಡೆಸಿದ್ದರು. ಬೈಕ್‌ ರ್‍ಯಾಲಿ, ಸಭೆ ನಡೆಸಿ ಮತದಾರರ ಮನ ಗೆಲ್ಲುವ ಪ್ರಯತ್ನ ಮಾಡಿದ್ದರು. ಕೊನೆಯ ಗಳಿಗೆಯಲ್ಲಿ ಟಿಕೆಟ್‌ ತಪ್ಪಿರುವುದು ಬಂಡಾಯಕ್ಕೆ ಕಾರಣವಾಗಿದೆ.

‘ಐಎನ್‌ಟಿಯುಸಿಯಲ್ಲಿ 65 ಸಾವಿರ ಸದಸ್ಯರಿದ್ದಾರೆ. 15 ಸಾವಿರದಷ್ಟು ಬೂತ್‌ಮಟ್ಟದ ಸದಸ್ಯರಿದ್ದಾರೆ. ಅವರೆಲ್ಲರೂ ಮುತ್ತಪ್ಪಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಜತೆಗೆ, ಮಡಿಕೇರಿ ಕ್ಷೇತ್ರದ ಮತದಾರರ ಬೆಂಬಲವೂ ಇದೆ. ಸಮೀಕ್ಷೆಯಲ್ಲೂ ನಾಪಂಡ ಗೆಲ್ಲುವ ಅಭ್ಯರ್ಥಿ ಎಂಬುದು ಸಾಬೀತಾಗಿತ್ತು. ಬೇರೆಯವರಿಗೆ ಟಿಕೆಟ್‌ ನೀಡುವುದಾಗಿದ್ದರೆ ವೀಕ್ಷಕರು ಜಿಲ್ಲೆಗೆ ಬಂದು ಅಭಿಪ್ರಾಯ ಸಂಗ್ರಹಿಸುವ ಅಗತ್ಯವಾದರೂ ಏನಿತ್ತು’ ಎಂದು ಕಾಂಗ್ರೆಸ್‌ ವಲಯ ಅಧ್ಯಕ್ಷ, ಮುತ್ತಪ್ಪ ಬೆಂಬಲಿಗ ಟಿ.ಪಿ.ಅಮೀದ್ ಪ್ರಶ್ನಿಸುತ್ತಾರೆ.

ಪಕ್ಷದ ಮುಖಂಡರ ಕುತಂತ್ರ: ಬಿಜೆಪಿ ಅಭ್ಯರ್ಥಿಗೆ ಅನುಕೂಲ ಮಾಡಿಕೊಡಲು ನಾಪಂಡ ಮುತ್ತಪ್ಪಗೆ ಸ್ವಪಕ್ಷದ ಕೆಲವು ಮುಖಂಡರೇ ಟಿಕೆಟ್‌ ತಪ್ಪಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಸಕ್ರಿಯವಲ್ಲದ ವ್ಯಕ್ತಿಗೆ ಮಡಿಕೇರಿ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ ಎಂದು ಮುಖಂಡ ಅರವಿ ಅಜ್ಜಳ್ಳಿ ದೂರಿದರು.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ: ‘ಏ.20ರಂದು ಮಧ್ಯಾಹ್ನ 12ಕ್ಕೆ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದೇನೆ. ಬೆಂಬಲಿಗರು ಬೆಳಿಗ್ಗೆ 11ಕ್ಕೆ ಮಡಿಕೇರಿ ಕಚೇರಿಯಲ್ಲಿ ಹಾಜರಿರಬೇಕು’ ಎಂದು ಫೇಸ್‌ಬುಕ್‌ನಲ್ಲಿ ನಾಪಂಡ ಮುತ್ತಪ್ಪ ಅವರೇ ಅಧಿಕೃತವಾಗಿ ಬರೆದುಕೊಂಡಿದ್ದಾರೆ. ಅಲ್ಲದೇ ಚಂದ್ರಮೌಳಿ ವಿರುದ್ಧವೂ ಗುಡುಗಿದ್ದಾರೆ.

‘ಠೇವಣಿಯೇ ಉಳಿಯುವುದಿ ಲ್ಲವೆಂದು ಗೊತ್ತಿದ್ದರೂ ಚುನಾವಣೆಗೆ ಸ್ಪರ್ಧಿ ಸುತ್ತಿದ್ದೀರಾ? ಕೊಡಗಿನಲ್ಲಿ ಕಾಂಗ್ರೆಸ್‌ ಬಲಿ ಕೊಡುವುದರ ಹಿಂದಿನ ಹುನ್ನಾರ ವೇನು? ಕಮಲ ಕಾಂಗ್ರೆಸ್ಸಿಗರ ಕೈ ಮೇಲಾಗಿದೆ. ಕೆ.ಜೆ.ಜಾರ್ಜ್‌ ಕೊಡಗು ಕಾಂಗ್ರೆಸ್‌ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಕೊಡಗಿನಲ್ಲಿ ನಿಮ್ಮ ದುರಂಹಕಾರಕ್ಕೆ ತಕ್ಕಪಾಠ ಕಲಿಸುತ್ತಾರೆ. ಉಸ್ತುವಾರಿ ಸಚಿವರು ತಾವೇ ತೋಡಿದ ಹಳ್ಳಕ್ಕೆ ಬೀಳುತ್ತಾರೆ. ಟಿಕೆಟ್‌ಗಾಗಿ ಕೋಟಿ ಕೋಟಿ ಕೇಳಿದ ಗ್ರೇಟ್‌ ನಾಯಕರ ವಿಡಿಯೊ, ಆಡಿಯೊ ಸದ್ಯದಲ್ಲೇ ಬಿಡುಗಡೆ ಆಗಲಿದೆ’ ಎಂದು ಮತ್ತೊಂದು ಪೋಸ್ಟ್‌ ಹಾಕಿದ್ದಾರೆ.

ಇಲ್ಲೂ ಅದೇ ಹಾಡು: ಕಾಂಗ್ರೆಸ್‌ಗೆ ವಿರಾಜಪೇಟೆ ಕ್ಷೇತ್ರದಲ್ಲೂ ಅದೇ ಸಮಸ್ಯೆ. ಹಲವರು ಈ ಕ್ಷೇತ್ರದಿಂದ ಟಿಕೆಟ್‌ ನಿರೀಕ್ಷಿಸಿದ್ದರು. ಅದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌.ಸೀತಾರಾಂ ಅವರ ಆಪ್ತ ಹರೀಶ್ ಬೋಪಣ್ಣ, ಎಐಸಿಸಿ ವಕ್ತಾರ ಬ್ರಿಜೇಶ್‌ ಕಾಳಪ್ಪ ಅವರು ಮುಂಚೂಣಿಯಲ್ಲಿದ್ದರು. ಅಚ್ಚರಿಯ ಬೆಳವಣಿಗೆಯಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಸಿ.ಎಸ್‌.ಅರುಣ್‌ ಮಾಚಯ್ಯಗೆ ಟಿಕೆಟ್‌ ನೀಡಲಾಗಿದೆ. ಇದು ಬಂಡಾಯಕ್ಕೆ ಕಾರಣವಾಗಿದೆ.

ಬ್ರಿಜೇಶ್‌ ಅವರು ಆಪ್ತರೊಂದಿಗೆ ಟಿಕೆಟ್‌ ತಪ್ಪಿರುವ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹರೀಶ್‌ ಪರವಾಗಿ ಬ್ಯಾಟಿಂಗ್‌ ನಡೆಸಿದ್ದ ಸೀತಾರಾಂಗೂ ಟಿಕೆಟ್‌ ವಿಚಾರದಲ್ಲಿ ಹಿನ್ನಡೆಯಾಗಿದೆ. ಜಿಲ್ಲೆಯಲ್ಲಿ ನಡೆದ ಕೆಲವೊಂದು ವಿದ್ಯಮಾನಗಳಲ್ಲಿ ಅರುಣ್‌ ಮಾಚಯ್ಯ ಅವರೊಂದಿಗೆ ಸೀತಾರಾಂ ಮುನಿಸಿಕೊಂಡಿದ್ದರು. ಈಗ ಅವರಿಗೇ ಟಿಕೆಟ್‌ ಸಿಕ್ಕಿರುವುದು ಕುತೂಹಲಕ್ಕೆ ಕಾರಣವಾಗಿದೆ.

2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಿ.ಟಿ.ಪ್ರದೀಪ್‌ ಸೋಲಿಗೆ ಸ್ವಪಕ್ಷದ ಬಂಡಾಯವೇ ಕಾರಣವಾಗಿತ್ತು. ಅದು ಮತ್ತೆ ಪುನರಾವರ್ತನೆ ಆಗಿದ್ದು, ಚುನಾವಣೆಗೂ ಮೊದಲು ರಾಜ್ಯ ವರಿಷ್ಠರು ಅದನ್ನು ಹೇಗೆ ಶಮನ ಗೊಳಿಸಲಿದ್ದಾರೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ.

**

ನಾವೆಲ್ಲರೂ ಒಟ್ಟಾಗಿದ್ದೇವೆ; ಎರಡು ಬಾರಿ ಜಿಲ್ಲಾ ಸಮನ್ವಯ ಸಮಿತಿ ಸಭೆ ಕರೆದು ಚರ್ಚಿಸಲಾಗಿದೆ. ಭಿನ್ನಾಭಿಪ್ರಾಯ ಬಿಟ್ಟು ಕಾರ್ಯತಂತ್ರ ರೂಪಿಸಲು ತೀರ್ಮಾನಿಸಲಾಗಿದೆ – ಸಿ.ಎಸ್‌. ಅರುಣ್‌ ಮಾಚಯ್ಯ,ಕಾಂಗ್ರೆಸ್‌ ಅಭ್ಯರ್ಥಿ, ವಿರಾಜಪೇಟೆ.

**

ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಯಾವ ಪಕ್ಷಕ್ಕೂ ಸೇರುವುದಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತೇನೆ  – ನಾಪಂಡ ಮುತ್ತಪ್ಪ, ಮುಖಂಡ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry