ಅಭ್ಯರ್ಥಿ ಬದಲಾವಣೆಗೆ ಮುಖಂಡರ ಪಟ್ಟು

7
ಒಗ್ಗಟ್ಟಿನ ಮಂತ್ರ ಜಪಿಸಿದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು

ಅಭ್ಯರ್ಥಿ ಬದಲಾವಣೆಗೆ ಮುಖಂಡರ ಪಟ್ಟು

Published:
Updated:

ಕೋಲಾರ: ಕಾಂಗ್ರೆಸ್‌ನಲ್ಲಿ ಕ್ಷೇತ್ರದ ಅಭ್ಯರ್ಥಿ ಘೋಷಣೆಯಾದ ಬೆನ್ನಲ್ಲೇ ಭಿನ್ನಮತ ತಾರಕಕ್ಕೇರಿದ್ದು, ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಪಕ್ಷದ ಸ್ಥಳೀಯ ಮುಖಂಡರೆಲ್ಲಾ ಒಗ್ಗಟ್ಟಿನ ಮಂತ್ರ ಜಪಿಸಿ ಅಭ್ಯರ್ಥಿ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ.

ನಗರದಲ್ಲಿ ಸೋಮವಾರ ಒಂದೇ ವೇದಿಕೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್‌.ಸುದರ್ಶನ್‌, ಪಕ್ಷದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಂ.ಎಲ್.ಅನಿಲ್‌ಕುಮಾರ್‌, ಮಾಜಿ ಸಚಿವ ನಿಸಾರ್‌ ಅಹಮ್ಮದ್‌, ‘ಸ್ಥಳೀಯರಿಗೆ ಟಿಕೆಟ್‌ ಕೈತಪ್ಪಲು ಸಂಸದ ಕೆ.ಎಚ್‌.ಮುನಿಯಪ್ಪರ ಕುತಂತ್ರವೇ ಕಾರಣ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈಗಲೂ ಕಾಲ ಮಿಂಚಿಲ್ಲ. ಪಕ್ಷದ ಸ್ಥಳೀಯ ಮುಖಂಡರಿಗೆ ಟಿಕೆಟ್‌ ಕೊಡಬೇಕೆಂಬ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ಪಕ್ಷದ ಕೇಂದ್ರ ಚುನಾವಣಾ ಸಮಿತಿಯು ಈಗಾಗಲೇ ಘೋಷಣೆಯಾಗಿರುವ ಅಭ್ಯರ್ಥಿಗಳ ಪಟ್ಟಿಯಿಂದ ಸೈಯದ್‌ ಜಮೀರ್ ಪಾಷಾ ಅವರ ಹೆಸರನ್ನು ಕೈ ಬಿಡಬೇಕು’ ಎಂದು ಸುದರ್ಶನ್‌ ಒತ್ತಾಯಿಸಿದರು.

‘ನಮ್ಮದು ವಿಷಯಾಧಾರಿತ ಹೋರಾಟ. ಸ್ಥಳೀಯರಿಗೆ ಟಿಕೆಟ್ ಕೊಡಬೇಕು ಎನ್ನುವುದೇ ನಮ್ಮ ವಾದ. ಕಾರ್ಯಕರ್ತರು ಸಹ ಇದೆ ಬೇಡಿಕೆ ಮುಂದಿಟ್ಟಿದ್ದು, ಅವರ ಮಾರ್ಗದರ್ಶನದಲ್ಲೇ ಮುಂದಿನ ನಿರ್ಧಾರ ಮಾಡುತ್ತೇವೆ. ಅಭ್ಯರ್ಥಿ ಘೋಷಣೆಯಾದ ನಂತರ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಪಕ್ಷದ ಹಿತಕ್ಕಾಗಿ ದುಡಿದವರಿಗೆ ಟಿಕೆಟ್ ಕೊಡಬೇಕು ಎನ್ನುವುದು ಕಾರ್ಯಕರ್ತರ ಹಕ್ಕೊತ್ತಾಯ. ಕಾಲಾವಕಾಶ ತೀರಾ ಕಡಿಮೆ ಇರುವುದರಿಂದ ವರಿಷ್ಠರು ಬೇಗನೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಹೇಳಿದರು.

‘ಕಾರ್ಯಕರ್ತರು ತಮ್ಮ ಬೇಡಿಕೆಯನ್ನು ಎಸ್‍ಎಂಎಸ್ ಅಥವಾ ಇ–ಮೇಲ್ ಮೂಲಕ ವರಿಷ್ಠರಿಗೆ ರವಾನಿಸಬೇಕು. ಎರಡು ದಿನದೊಳಗೆ ಕಾರ್ಯಕರ್ತರು ಮತ್ತು ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಡೆ ನಿರ್ಧರಿಸುತ್ತೇವೆ’ ಎಂದರು.

ಪಕ್ಷದ ಹಿತ: ‘ಮುಖ್ಯಮಂತ್ರಿ ಸಿದ್ಧರಾಮಯ್ಯ ಉತ್ತಮ ಆಡಳಿತ ನೀಡಿದ್ದಾರೆ. ಅನೇಕ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಾತಾವರಣ ಸೃಷ್ಟಿಸಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ ವಹಿಸಿಕೊಂಡಿರುವ ಕೆ.ಸಿ.ವೇಣುಗೋಪಾಲ್ ಹೆಚ್ಚು ಕ್ರಿಯಾಶೀಲರಾಗಿ ಪಕ್ಷವನ್ನು ಉನ್ನತ ಮಟ್ಟಕ್ಕೆ ಬೆಳೆಸಿದ್ದಾರೆ. ಇಂತಹ ಸ್ಥಿತಿಯಲ್ಲಿ ಕೋಲಾರ ಕ್ಷೇತ್ರದಲ್ಲಿ ಕಾರ್ಯಕರ್ತರ ನೆರವಿನೊಂದಿಗೆ ಗೆಲುವು ಸಾಧಿಸುವ ಬದಲು ಕೆಲವರ ಸ್ವಾರ್ಥಕ್ಕೆ ಪಕ್ಷದ ಹಿತ ಬಲಿ ಕೊಡುವುದು ಸರಿಯಲ್ಲ’ ಎಂದು ತಿಳಿಸಿದರು.

‘ಸಂಸದ ಕೆ.ಎಚ್‌.ಮುನಿಯಪ್ಪ ಹಟಮಾರಿ ಧೋರಣೆಯಿಂದ ಹೊರಗಿನವರಿಗೆ ಟಿಕೆಟ್ ಕೊಡಿಸಿ ಸ್ಥಳೀಯ ಕಾರ್ಯಕರ್ತರ ಆಕಾಂಕ್ಷೆಯನ್ನು ಬಲಿ ಕೊಡುತ್ತಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೊಂದಲ ಬೇಡ: ‘ಪಕ್ಷಕ್ಕೆ ನಿಷ್ಠರಾಗಿರುವವರನನ್ನು ಬಿಟ್ಟು ವಲಸಿಗ ಸೈಯದ್ ಜಮೀರ್ ಪಾಷಾ ಅವರಿಗೆ ಟಿಕೆಟ್ ಕೊಟ್ಟಿರುವುದು ಸರಿಯಲ್ಲ. 2008 ಮತ್ತು 2013ರ ವಿಧಾನಸಭಾ ಚುನಾವಣೆ ವೇಳೆ ಪಕ್ಷದಲ್ಲಿ ಆದ ಗೊಂದಲ ಮುಂದುವರಿಯುವುದು ಬೇಡ. ಒಂದು ದಶಕದಲ್ಲಿ ಸಾಕಷ್ಟು ನೋವು ಅನುಭವಿಸಿರುವ ಕಾರ್ಯಕರ್ತರು ಹಾಗೂ ಜನ ಬದಲಾವಣೆ ಬಯಸಿದ್ದಾರೆ’ ಎಂದು ಅನಿಲ್‌ಕುಮಾರ್‌ ಹೇಳಿದರು.

‘ಕಾಂಗ್ರೆಸ್ ಪಕ್ಷವನ್ನು ವರ್ತೂರು ಪ್ರಕಾಶ್ ಹಿತಕ್ಕಾಗಿ ಬಲಿ ಕೊಡುವುದು ಬೇಡ ಎಂಬುದು ಕಾರ್ಯಕರ್ತರ ಒತ್ತಾಯವಾಗಿದೆ. ವರ್ತೂರು ಪ್ರಕಾಶ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಜಮೀರ್ ಪಾಷ ಅವರನ್ನು ಕಣಕ್ಕಿಳಿಸಿ ವರ್ತೂರು ಪ್ರಕಾಶ್‌ರನ್ನು ಗೆಲ್ಲಿಸುವುದು ಬೇಡವೆಂಬ ಕಾರ್ಯಕರ್ತರ ಅಭಿಪ್ರಾಯಕ್ಕೆ ನಮ್ಮೆಲ್ಲರ ಸಮ್ಮತಿ ಇದೆ’ ಎಂದು ವಿವರಿಸಿದರು.

‘ಸ್ಥಳೀಯರ ಮುಖಂಡರ ಅಭಿಪ್ರಾಯಕ್ಕೆ ವಿರೋಧವಾಗಿ ಹೊರಗಿನವರಿಗೆ ಮಣೆ ಹಾಕಲಾಗಿದೆ. ಇದರ ಲಾಭ ವರ್ತೂರು ಪ್ರಕಾಶ್‌ಗೆ ಆಗುತ್ತದೆ. ಜಮೀರ್ ಪಾಷಾ ಅವರ ಹೆಸರು ಘೋಷಣೆ ಆಗುತ್ತಿದ್ದಂತೆ ಶಾಸಕರ ಮನೆ ಮುಂದೆ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಜಮೀರ್‌ ಪಾಷಾ ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುತ್ತಾರೆ. ಅವರಿಂದ ಪಕ್ಷಕ್ಕೆ ಒಳಿತಾಗುವುದಿಲ್ಲ’ ಎಂದರು.

‘ಜಮೀರ್ ಅವರನ್ನು ಕಣಕ್ಕಿಳಿಸುವುದರಿಂದ ಯಾರಿಗೆ ಲಾಭವಾಗುತ್ತದೆ ಎಂಬುದನ್ನು ಸಂಸದ ಮುನಿಯಪ್ಪ ಅವರಿಗೆ ವಿವರಿಸಿ ಹೇಳಿದ್ದೇವೆ. ಆದರೂ ಅವರು ಹಟಕ್ಕೆ ಬಿದ್ದು ಮಾಡಿ ಟಿಕೆಟ್ ಕೊಡಿಸಿದ್ದಾರೆ. ಇದರ ಹಿಂದಿನ ಲೆಕ್ಕಚಾರವೇನು?’ ಎಂದು ಪ್ರಶ್ನಿಸಿದರು.

ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ಜಯರಾಮ್‌ ಹಾಜರಿದ್ದರು.

**

ಎರಡೂವರೆ ದಶಕದಿಂದ ಕೆ.ಎಚ್.ಮುನಿಯಪ್ಪ ಅವರನ್ನು ನಂಬಿಕೊಂಡು ಹಾಳಾಗಿದ್ದು ಸಾಕು. ಇನ್ನು ಇದಕ್ಕೆ ಅಂತ್ಯ ಹಾಡಬೇಕು. ಅಲ್ಪಸಂಖ್ಯಾತ ಸಮುದಾಯದ ಸ್ಥಳೀಯ ಮುಖಂಡರು ಮುನಿಯಪ್ಪ ಅವರ ಕಣ್ಣಿಗೆ ಕಾಣಿಸದಿರುವುದು ದುರಾದೃಷ್ಟ – ನಿಸಾರ್‌ ಅಹಮ್ಮದ್‌, ಮಾಜಿ ಸಚಿವ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry