ಪಂಚ ಕ್ಷೇತ್ರಗಳಲ್ಲಿ ಒಂದು ಹೊಸಮುಖ

7
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಪಂಚ ಕ್ಷೇತ್ರಗಳಲ್ಲಿ ಒಂದು ಹೊಸಮುಖ

Published:
Updated:

ಕೊಪ್ಪಳ: ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕೊನೆಗೂ ಅಧಿಕೃತವಾಗಿ ಬಿಡುಗಡೆಯಾಗಿದೆ. ಹಾಗೆ ನೋಡಿದರೆ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಈಗಾಗಲೇ ಗೊತ್ತಾಗಿತ್ತು. ಕೊಪ್ಪಳ ಮತ್ತು ಗಂಗಾವತಿ ಕ್ಷೇತ್ರದ ಟಿಕೆಟ್‌ ಬಗ್ಗೆ ಮಾತ್ರ ಕುತೂಹಲ ಉಳಿದಿತ್ತು. ಅದಕ್ಕೆ ಭಾನುವಾರವೇ (ಏ.16) ತೆರೆಬಿದ್ದಿತ್ತು. ಈಗಾಗಲೇ ಕೇಳಿಬಂದ ಹೆಸರುಗಳೇ ಅಂತಿಮಗೊಂಡಿವೆ. 

ಕೊಪ್ಪಳದಿಂದ ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯ ಸಿ.ವಿ.ಚಂದ್ರಶೇಖರ್‌, ಯಲಬುರ್ಗಾದಿಂದ ವಿಧಾನ ಪರಿಷತ್‌ ಮಾಜಿ ಸದಸ್ಯ ಹಾಲಪ್ಪಾಚಾರ್‌, ಕುಷ್ಟಗಿಯಿಂದ ಹಾಲಿ ಶಾಸಕ ದೊಡ್ಡನಗೌಡ ಪಾಟೀಲ್‌ (ಇವರ ಹೆಸರು ಮೊದಲ ಪಟ್ಟಿಯಲ್ಲಿತ್ತು.), ಗಂಗಾವತಿಯಿಂದ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಕನಕಗಿರಿಯಿಂದ ಬಸವರಾಜ ದಡೇಸೂಗೂರು ಅಭ್ಯರ್ಥಿಗಳಾಗಿ ಘೋಷಿಸಲ್ಪಟ್ಟಿದ್ದಾರೆ.

ಸಿ.ವಿ.ಚಂದ್ರಶೇಖರ್‌ ಅವರು ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡವರು. ಅಂದಿನಿಂದಲೂ ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಕೊಳ್ಳುತ್ತಾ ಬಂದವರು. ತಮ್ಮದೇ ಆದ ಅಭಿಮಾನಿ ಬಳಗವನ್ನು ಕಟ್ಟಿಕೊಂಡವರು. ಐದು ಜನ ಟಿಕೆಟ್‌ ಆಕಾಂಕ್ಷಿಗಳ ಸ್ಪರ್ಧೆಯಲ್ಲಿ ಗೆದ್ದು ಎಲ್ಲ ನಾಯಕರನ್ನು ಒಲಿಸಿ ಅಭ್ಯರ್ಥಿಯಾಗಿದ್ದಾರೆ. ವಿಧಾನಸಭಾ ಚುನಾವಣೆ ಮಟ್ಟಿಗೆ ಸಿವಿಸಿ ಅವರದ್ದು ಹೊಸ ಮುಖ. ಸಿ.ವಿ.ಚಂದ್ರಶೇಖರ್‌ ಅವರು ರಾಘವೇಂದ್ರ ಹಿಟ್ನಾಳ್‌ ಅವರ ಪ್ರವಾಹರೂಪದ ಸ್ಪರ್ಧೆಯನ್ನು ಎದುರಿಸಬೇಕಿದೆ. ಏಕೆಂದರೆ ಇಲ್ಲಿ ಕಾಂಗ್ರೆಸ್‌ ಪ್ರಚಾರ, ಜನಸಂಘಟನೆ ವಿಚಾರದಲ್ಲಿ ಸಾಕಷ್ಟು ಮುಂದೆ ಸಾಗಿದೆ.

ಕನಕಗಿರಿ ಕ್ಷೇತ್ರದ ಬಸವರಾಜ ದಡೇಸೂಗೂರು ಅವರು ಕೆಜೆಪಿಯಿಂದ ಶಿವರಾಜ್‌ ತಂಗಡಗಿ ವಿರುದ್ಧ ಸ್ಪರ್ಧಿಸಿ 5,052 ಮತಗಳ ಅಂತರದಲ್ಲಿ ಸೋತವರು.

ಆದರೆ, ಕ್ಷೇತ್ರದಲ್ಲಿ ತಂಗಡಗಿ ವಿರುದ್ಧ ಪ್ರಬಲ ಸ್ಪರ್ಧೆ ಒಡ್ಡಿದ್ದೇ ಅವರಿಗೆ ಹೆಸರು ತಂದುಕೊಟ್ಟಿತು. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ಆಪ್ತ ಬಳಗದಲ್ಲೇ ಗುರುತಿಸಿಕೊಂಡವರು. ನಿರಂತರ ಪಕ್ಷ ಸಂಘಟನೆ ಮಾಡುತ್ತಿದ್ದವರು. ತಳಸಮುದಾಯದ ನಾಯಕನಾಗಿ ಬೆಳೆದವರು. ಕನಕಗಿರಿ ಕ್ಷೇತ್ರದಲ್ಲಿ ಅದೇ ಹಳೇ ಹುಲಿಗಳ ಸ್ಪರ್ಧೆ (ತಂಗಡಗಿ ವರ್ಸಸ್‌ ದಡೇಸೂಗೂರು) ಕುತೂಹಲ ಕೆರಳಿಸಲಿದೆ.

ಯಲಬುರ್ಗಾದಲ್ಲಿ ನಿರೀಕ್ಷಿತ ಅಭ್ಯರ್ಥಿ ಹಾಲಪ್ಪಾಚಾರ್‌ ಅವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಇದಕ್ಕೂ ಮುನ್ನ ಕುಕನೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಯಡಿಯೂರಪ್ಪ ಅವರು ಹಾಲಪ್ಪ ಆಚಾರ್‌ ಅವರ ಹೆಸರನ್ನು ಘೋಷಿಸಿದ್ದರು. ಇಲ್ಲಿ ಹಾಲಪ್ಪ ಆಚಾರ್‌ ಅವರು ಒಂದು ಕಾಲದ ತಮ್ಮ ಆಪ್ತ ಬಸವರಾಜ ರಾಯರಡ್ಡಿ ಅವರ ಸ್ಪರ್ಧೆ ಎದುರಿಸಬೇಕಿದೆ.

ಜೆಡಿಎಸ್‌ನಿಂದ ವೀರನಗೌಡ ಪೊಲೀಸ್‌ ಪಾಟೀಲ್‌ ಅವರು ಕಣದಲ್ಲಿರುವ ಕಾರಣ ಇಬ್ಬರ ಪಾಲಿಗೆ ಸಿಗಬಹುದಾದ ಮತಗಳು ವಿಭಜನೆಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ.

ಕುಷ್ಟಗಿಯದ್ದೂ ಈಗಾಗಲೇ ಘೋಷಿತ ಹೆಸರುಗಳು. ಹಾಲಿ ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ಟಿಕೆಟ್‌ ಘೋಷಣೆ ಆಗಿದೆ. ಈಗಾಗಲೇ ಅಲ್ಲಿ ಪ್ರಚಾರ, ಮತದಾರರ ಮನವೊಲಿಕೆಯ ಸಿದ್ಧತೆಗಳು ನಡೆದಿವೆ. ಕಾಂಗ್ರೆಸ್‌ನಿಂದ ಅಮರೇಗೌಡ ಬಯ್ಯಾಪುರ ಕಣದಲ್ಲಿದ್ದಾರೆ. ಇಬ್ಬರ ಸಮಬಲದ ಹೋರಾಟ ಮುಂದುವರಿದಿದೆ.

ಅಪ್ಪಟ ಕದನ ಕಣ ಗಂಗಾವತಿ. ಐದು ಜನ ಆಕಾಂಕ್ಷಿಗಳ ನಡುವೆ ಪರಣ್ಣ ಮುನವಳ್ಳಿ ಅವರು ಟಿಕೆಟ್‌ ಗಿಟ್ಟಿಸುವಲ್ಲಿ ಸಫಲರಾಗಿದ್ದಾರೆ.

ಬಣಜಿಗ ಸಮುದಾಯದ ಮುಖಂಡರೂ ಆಗಿರುವ ಪರಣ್ಣ ಅವರಿಗೆ ಮುಂದು ವರಿದ ಸಮುದಾಯದ ಬೆಂಬಲವೂ ಇದೆ. ಉಳಿದ ಸಮುದಾಯದವರನ್ನು ತಮ್ಮ ಮತಬ್ಯಾಂಕ್‌ಗೆ ಸೆಳೆಯುವ ಕಸರತ್ತು ಮಾಡಬೇಕಿದೆ. ಏಕೆಂದರೆ ಅವರು ಇಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿದಿರುವವರು ಇಕ್ಬಾಲ್‌ ಅನ್ಸಾರಿ. ಇವರಿಬ್ಬರೂ ಹಳೆಯ ಹುಲಿಗಳು. ಇಲ್ಲಿ ಮತವಿಭಜಕ ಶಕ್ತಿಯಾಗಿ ಜೆಡಿಎಸ್‌ ಕೆಲಸ ಮಾಡುವ ಸಾಧ್ಯತೆ ಇದೆ. ಆದರೆ, ಅಭ್ಯರ್ಥಿ ಖಚಿತವಾಗದ ಕಾರಣ ಇಬ್ಬರೂ ಸದ್ಯ ನೇರ ಸ್ಪರ್ಧಾಳುಗಳಾಗಿದ್ದಾರೆ.

ಬಹಳ ದಿನಗಳ ಅಸ್ಪಷ್ಟತೆಗೆ ಬಿಜೆಪಿ ಕೊನೆಗೂ ತೆರೆಯೆಳೆದಿದೆ. ಭಾನುವಾರದಿಂದ ಸಣ್ಣಮಟ್ಟಿಗೆ ಪ್ರಚಾರ ಆರಂಭವಾಗಿದೆ.ಪಂಚ ಕ್ಷೇತ್ರಗಳಲ್ಲಿ ಯಾರು ಎಷ್ಟು ಸ್ಥಾನ ಗೆಲ್ಲುತ್ತಾರೆ ಎಂಬುದನ್ನು ಮತದಾರ ಮಾತ್ರ ಗುಟ್ಟಾಗಿ ಇಟ್ಟಿದ್ದಾನೆ.

**

ಶೇ 100ರಷ್ಟು ಯೋಗ್ಯ ಅಭ್ಯರ್ಥಿಗಳನ್ನೇ ಬಿಜೆಪಿ ಆಯ್ಕೆ ಮಾಡಿದೆ. ಜನರ ಕಾಳಜಿ ಇರುವ ಅಭ್ಯರ್ಥಿಗಳೇ ಸ್ಪರ್ಧಿಸುತ್ತಿದ್ದಾರೆ. ಆಕಾಂಕ್ಷಿಗಳ ಬಗ್ಗೆ ಇದ್ದ ಗೊಂದಲಗಳು ಬಗೆಹರಿದಿವೆ - ಚಂದ್ರಶೇಖರಗೌಡ ಪಾಟೀಲ್‌ ಹಲಗೇರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry