ಭಾನುವಾರ, ಡಿಸೆಂಬರ್ 8, 2019
25 °C
ಜಮ್ಮು ಕಾಶ್ಮೀರದಲ್ಲಿ ಅತ್ಯಾಚಾರ, ಕೊಲೆ ಪ್ರಕರಣ: ರಸ್ತೆ ತಡೆ

ಬಿಜೆಪಿ ಮುಖಂಡನ ಕೊಲೆಯತ್ನ, ಪೊಲೀಸ್‌ಗೆ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ಮುಖಂಡನ ಕೊಲೆಯತ್ನ, ಪೊಲೀಸ್‌ಗೆ ದಾಳಿ

ವಿಟ್ಲ: ಜಮ್ಮು ಕಾಶ್ಮೀರದಲ್ಲಿ ಬಾಲಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಬೇಡಗುಡ್ಡೆ ಸಮೀಪ ಸೋಮವಾರ ರಸ್ತೆ ತಡೆ ನಡೆಸುತ್ತಿದ್ದ ತಂಡವೊಂದು ಬೈಕ್‌ನಲ್ಲಿ ತೆರಳುತ್ತಿದ್ದ ಬಿಜೆಪಿ ಮುಖಂಡರ ಮೇಲೆ ಹಲ್ಲೆ ನಡೆಸಿದ್ದು, ಸ್ಥಳಕ್ಕೆ ಧಾವಿಸಿದ ವಿಟ್ಲ ಪೊಲೀಸರಿಗೆ ದಿಗ್ಭಂಧನ ವಿಧಿಸಿ, ಪೊಲೀಸ್ ವಾಹನಕ್ಕೆ ಕೆಸರು ಚೆಲ್ಲಿದ್ದಾರೆ. ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ಕೊಳ್ನಾಡು ಬಿಜೆಪಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಹರೀಶ್ ಬೇಡಗುಡ್ಡೆ (33) ರಸ್ತೆ ತಡೆ ಗುಂಪಿನ ದಾಳಿಯಿಂದ ಗಾಯಗೊಂಡಿದ್ದಾರೆ.

ಜಮ್ಮುವಿನ ಕಠುವಾದಲ್ಲಿ ಕೊಲೆಯಾದ ಬಾಲಕಿಗೆ ನ್ಯಾಯ ಒದಗಿಸಬೇಕೆಂದು ಕೇರಳದಲ್ಲಿ ಬಂದ್ ಆಚರಿಸಲಾಗುತ್ತಿತ್ತು. ಇದೇ ವೇಳೆ ವಿಟ್ಲ ವ್ಯಾಪ್ತಿಯ ಬೇಡಗುಡ್ಡೆಯಲ್ಲಿ ಕೆಲವು ಮಂದಿ ರಸ್ತೆ ತಡೆ ನಡೆಸಲು ಮುಂದಾಗಿದ್ದಾರೆ. ಈ ಸಂದರ್ಭ ಕೇರಳದ ಬಂದ್ ಅನ್ನು  ಇಲ್ಲಿಯೂ ಮಾಡುವುದು ಸರಿಯಲ್ಲ ಎಂದು ಹರೀಶ್‌ ಬುದ್ಧಿಮಾತನ್ನು  ಹೇಳಿದ್ದಾರೆನ್ನಲಾಗಿದೆ.

ಸುಂಕದಕಟ್ಟೆ  ಬೈಕ್‌ನಲ್ಲಿ ತೆರಳುತ್ತಿದ್ದ ಹರೀಶ್‌  ಅವರನ್ನು ಕಿಡಿಗೇಡಿಗಳ ತಂಡವೊಂದು ಅಡ್ಡಗಟ್ಟಿ ‘ಪ್ರತಿಭಟನೆಯನ್ನು ತಡೆಯಲು ಮುಂದಾಗಿರುವುದೇಕೆ?’ ಎಂಬ ರೀತಿಯಲ್ಲಿ ಮಾತು ಆರಂಭಿಸಿ, ತೀವ್ರವಾಗಿ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಇದರಿಂದ ಕಿವಿಗೆ ಗಂಭೀರ ಗಾಯಗೊಂಡ ಅವರು ಪುತ್ತೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹರೀಶ್ ಅವರನ್ನು ‘ನೌಫಲ್, ಅನ್ವರ್ ಮುಗುಳಿ, ಸಜಾದ್, ಖಲೀಲ್, ಸಫೀಕ್  ಸೇರಿದಂತೆ 30ಕ್ಕಿಂತಲೂ ಅಧಿಕ ಮಂದಿ ದೊಣ್ಣೆಯಿಂದ ಹಲ್ಲೆ ನಡೆಸಿ, ತಲವಾರ್‌ನಿಂದ ಕೊಲೆ ಮಾಡಲು ಯತ್ನಿಸಿದ್ದಾರೆ’ ಎಂದು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೋಲೀಸರಿಗೆ ಅಡ್ಡಿ: ‌ಬಿಜೆಪಿ ಮುಖಂಡನ ಮೇಲೆ ನಡೆದ ದಾಳಿ ಬಗ್ಗೆ ಮಾಹಿತಿ ತಿಳಿದ ಗಸ್ತಿನಲ್ಲಿದ್ದ ವಿಟ್ಲ ಪೊಲೀಸ್ ಠಾಣೆಯ ಎಸ್‌ಐ ಮತ್ತು ತಂಡ ಮಿತ್ತನಡ್ಕ ಮೂಲಕವಾಗಿ ಬೇಡಗುಡ್ಡೆಗೆ ಧಾವಿಸಿದ್ದರು. ಗಡಿ ಭಾಗದಲ್ಲಿ ರಸ್ತೆ ತಡೆ ನಡೆಸಿದ್ದು, ರಸ್ತೆಯಲ್ಲಿ ಇಟ್ಟ ವಸ್ತುಗಳನ್ನು ತೆಗೆಯಲು ಸೂಚನೆ ನೀಡಿದರೂ, ದುಷ್ಕರ್ಮಿಗಳು ಪೊಲೀಸರ ಮೇಲೆಯೇ ದಾಳಿಗೆ ಮುಂದಾಗಿದ್ದಾರೆ. ತಂಡವನ್ನು ಚದುರಿಸಿದ ವಿಟ್ಲ ಪೊಲೀಸರು ಆನೆಕಲ್ಲು ಭಾಗಕ್ಕೆ ಬಂದಿದ್ದರು. ವಿಟ್ಲ ಪೊಲೀಸರು ಕೇರಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಬಂದಿದ್ದರು. ಆನೆಕಲ್ಲು ಬೇಡಗುಡ್ಡೆಯಿಂದ ಉಪ್ಪಳ, ಕುರುಡಪದವು ಸಂಪರ್ಕ ಕಲ್ಪಿಸುವ ಸುಂಕದಕಟ್ಟೆಯಲ್ಲಿ ರಸ್ತೆಯಲ್ಲಿ ಇಡಲಾಗಿದ್ದ ವಸ್ತುಗಳನ್ನು ತೆರವು ಮಾಡಿ ಸಂಚಾರ ಸುವ್ಯವಸ್ಥೆಗೆ ಅನುವು ಮಾಡಿಕೊಟ್ಟರು.

ಭದ್ರತೆಯ ದೃಷ್ಟಿಯಿಂದ ಕೆಎಸ್ಆರ್‌ಪಿ ತುಕಡಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪೊಲೀಸರ ಮೇಲೆ ಆಕ್ರಮಣ: ಕಿಡಿಗೇಡಿಗಳು ಪೊಲೀಸ್ ವಾಹನಕ್ಕೆ ಕೆಸರು ಮಣ್ಣು ಎರಚಿ, ವಾಹನದ ಮೇಲೆ ಮುಗಿ ಬಿದ್ದು, ಪೊಲೀಸರ ಕೆಲವೊಂದು ದಾಖಲೆ ಪತ್ರಗಳನ್ನು ನಾಶ ಪಡಿಸಲು ಮುಂದಾಗಿದ್ದಾರೆ. ‘ ಕರ್ನಾಟಕದವರಿಗೆ ಕೇರಳದಲ್ಲಿ  ಏನು ಕೆಲಸ, ಅಲ್ಲೇ ಇರಿ’ ಎಂದು ಅವಹೇಳನ ಮಾಡಿದ್ದಾರೆ.  ಪ್ರಚೋದನಾತ್ಮಕ ಘೋಷಣೆಗಳನ್ನು ಕೂಗಿ, ಮುಸ್ಲಿಂ ಸಂಘಟನೆಗೆ ಸೇರಿದ ಧ್ವಜವನ್ನು ಹಾರಿಸುತ್ತಿದ್ದ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬಸ್ಸಿಗೆ ಕಲ್ಲು:  ಕನ್ಯಾನ ಕಡೆಯಿಂಡ ಬೈಕ್‌ನಲ್ಲಿ ಬಂದ ಮೂವರು ಕಿಡಿಗೇಡಿಗಳು ಕನ್ಯಾನ ಸಮೀಪದ ದೇಲಂತಬೆಟ್ಟು ಎಂಬಲ್ಲಿ ಮಂಜೇಶ್ವರಕ್ಕೆ ಸಾಗುತ್ತಿದ್ದ ಸರ್ಕಾರಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬೈರಿಕಟ್ಟೆ  ಖಾಸಗಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದೇ ಗುಂಪು ಕನ್ಯಾನ ಪೇಟೆಯಲ್ಲಿ ಕೆಲವರೊಂದಿಗೆ ಅಸಭ್ಯವಾಗಿ ವರ್ತಿಸಿ, ಶಾಂತಿ ಕದಡುವ ಯತ್ನವನ್ನು ನಡೆಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಖಂಡನೆ:  ಕೊಳ್ನಾಡು ಬಿಜೆಪಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಹರೀಶ್ ಬೇಡಗುಡ್ಡೆ ಅವರ ಮೇಲೆ ನಡೆದ ಹಲ್ಲೆಯನ್ನು ಬಿಜೆಪಿ ಮಂಡಲ ಅಧ್ಯಕ್ಷ ದೇವದಾಸ್ ಶೆಟ್ಟಿ, ಮಹಾಶಕ್ತಿ ಕೇಂದ್ರದ ಬಾಲಕೃಷ್ಣ ಸೆರ್ಕಳ, ಕರೋಪಾಡಿ ಬಿಜೆಪಿ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಸಾಲೆತ್ತೂರು ಬಿಜೆಪಿ ಅಧ್ಯಕ್ಷ ವಿದ್ಯೇಶ ರೈ, ಮಂಚಿ ಬಿಜೆಪಿ ಅಧ್ಯಕ್ಷ ರಮೇಶ್, ವಿಶ್ವನಾಥ ಪೂಜಾರಿ, ಕನ್ಯಾನ ಬಿಜೆಪಿ ಅಧ್ಯಕ್ಷ ರಘುರಾಮ ಶೆಟ್ಟಿ, ಖಂಡಿಸಿದ್ದಾರೆ. ಮತಾಂಧ ಶಕ್ತಿಗಳಿಂದ ಶಾಂತಿಯಿಂದ ಇರಲು ಸಾಧ್ಯವಿಲ್ಲ. ತಕ್ಷಣವೇ ಆರೋಪಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

 

ಪ್ರತಿಕ್ರಿಯಿಸಿ (+)