ಎತ್ತಿನಹೊಳೆ ವಿರುದ್ಧದ ಹೋರಾಟ

7
ಸರ್ವಪಕ್ಷಗಳ ಜಾಣ ಮೌನ, ಪರಿಣಾಮ ಬೀರುವುದೇ ‘ನೋಟಾ’ ?

ಎತ್ತಿನಹೊಳೆ ವಿರುದ್ಧದ ಹೋರಾಟ

Published:
Updated:

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೊಮ್ಮೆ ತೀವ್ರಗೊಂಡಿದ್ದ ಎತ್ತಿನಹೊಳೆ ಯೋಜನೆ ವಿರುದ್ಧದ ಹೋರಾಟ ಇದೀಗ ಚುನಾವಣಾ ಸಂದರ್ಭದಲ್ಲಿ ಯಾವುದೇ ಸದ್ದು ಮಾಡದೇ ಮೌನವಾಗಿದೆ.

ಹೋರಾಟವನ್ನು ಬೆಂಬಲಿಸಿದ್ದ ಸ್ಥಳೀಯ ಬಿಜೆಪಿ ಘಟಕ ‘ಹಿಂದುತ್ವ’ವೇ ಚುನಾವಣೆಯ ಮುಖ್ಯವಿಷಯ ಎಂಬ ನಿರ್ಧಾರ ತೆಗೆದುಕೊಂಡಿದ್ದರೆ, ಯೋಜನೆಯನ್ನು ಬೆಂಬಲಿಸಿದ ಕಾಂಗ್ರೆಸ್‌ ಪಕ್ಷ, ಬಿಜೆಪಿಯನ್ನು ವಿರೋಧಿಸುವ ಭರದಲ್ಲಿಯೇ ಚುನಾವಣೆಯ ಅಖಾಡಕ್ಕೆ ಇಳಿದಿದೆ. ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬಯಲು ಸೀಮೆಯ ಐದು ಜಿಲ್ಲೆಗಳಿಗೆ ನೀರು ಕೊಡುವ ಉದ್ದೇಶದಿಂದ ಯೋಜನೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವುದರಿಂದ ಸಿಪಿಎಂ ಕೂಡ ಯೋಜನೆಯನ್ನು ಬೆಂಬಲಿಸಿದೆ.

ಹಲವಾರು ನದಿಗಳು ಸಮುದ್ರ ಸೇರುವ ಧಾವಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮೃದ್ಧವಾಗಿ ಹರಿದರೂ ನೀರಿನ ನಿರ್ವಹಣೆಯ ವ್ಯವಸ್ಥೆ ಸಮರ್ಥವಾಗಿಲ್ಲ ಎಂಬ ಆರೋಪ ಬಹಳ ಹಿಂದಿನದು. 'ಆದರೆ ಎತ್ತಿನಹೊಳೆ ಯೋಜನೆಯ ವಿರುದ್ಧದ ಹೋರಾಟವು ಕೇವಲ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಹೋರಾಟವಲ್ಲ. ಬದಲಾಗಿ ಪರಿಸರವನ್ನು ಪ್ರೀತಿಸುವವರ ಹೋರಾಟ. ಯೋಜನೆಗಾಗಿ ಪಶ್ಚಿಮ ಘಟ್ಟಕ್ಕೆ ಹಾನಿ ಮಾಡುವುದರಿಂದ ನದಿಮೂಲಗಳಿಗೆ ಸಂಚಕಾರ ಉಂಟಾಗುತ್ತದೆ ಎಂಬ ಆತಂಕದಿಂದ ಈ ಹೋರಾಟವನ್ನು ಚಿಕ್ಕಬಳ್ಳಾಪುರದ ಪರಿಸರ ಪ್ರೇಮಿಗಳು ಸೇರಿದಂತೆ ರಾಜ್ಯದ ವಿವಿಧೆಡೆಯ ಪರಿಸರ ಪ್ರಿಯರು ವಿರೋಧಿಸಿದ್ದಾರೆ. ಬದಲಾಗಿ ನೇತ್ರಾವತಿಯ ನದಿ ನೀರು ಕೊಡುವುದಿಲ್ಲ ಎಂಬ ಆಗ್ರಹವನ್ನು ದಕ್ಷಿಣ ಕನ್ನಡದ ಜನತೆ ಮಾಡಿಲ್ಲ' ಎಂದು ವಿಶ್ಲೇಷಿಸುತ್ತಾರೆ ಹೋರಾಟದ ರೂವಾರಿ ದಿನೇಶ್‌ ಹೊಳ್ಳ.

‘ಇದೇ ಆಶಯವನ್ನು ಇಟ್ಟುಕೊಂಡು ನಾವು ಹೋರಾಟವನ್ನು ಬೆಂಬಲಿಸಿದ್ದೆವು. ಆದರೆ ಹೋರಾಟವನ್ನು ಹೈಜಾಕ್‌ ಮಾಡಲಾಗಿದೆ ಎಂಬ ವೃಥಾ ಆರೋಪ ನಮ್ಮ ಮೇಲೆ ಬಂದಿತ್ತು’ ಸಮಜಾಯಿಷಿ ನೀಡುತ್ತಾರೆ ಬಿಜೆಪಿ ಮುಖಂಡರು.

‘ರಾಜ್ಯ ಬಿಜೆಪಿ ನಾಯಕರು ಎತ್ತಿನಹೊಳೆ ಯೋಜನೆಯನ್ನು ಬೆಂಬಲಿಸಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಆಶಯವನ್ನು ಗಮನಿಸಿ ಸ್ಥಳೀಯ ಘಟಕ ಈ ಯೋಜನೆಯನ್ನು ಗಟ್ಟಿ ಧ್ವನಿಯಿಂದ ವಿರೋಧಿಸಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದರೂ ಈ ವಿರೋಧ ಇದ್ದೇ ಇರುತ್ತದೆ. ಕರಾವಳಿಯ ಜನತೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಪರಿಸರಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂಬ ಆಗ್ರಹವನ್ನು ಬಿಜೆಪಿ ಸದಾ ವ್ಯಕ್ತಪಡಿಸಿದೆ. ಜಿಲ್ಲೆಯ ಜನತೆಗೆ ನೀರಿಗೆ ತೊಂದರೆ ಆಗಬಾರದು ಎಂಬ ಆಶಯ ನಮ್ಮದು. ಸದ್ಯಕ್ಕೆ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಮೌನವಾಗಿದ್ದೇವೆ’ ಎಂದು ಹೇಳುತ್ತಾರೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಮಠಂದೂರು.

‘ಒಕ್ಕೂಟ ವ್ಯವಸ್ಥೆಯಲ್ಲಿರುವಾಗ ನಮ್ಮ ನದಿ ನೀರನ್ನು ಪಕ್ಕದ ಊರಿಗೆ ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಅದೇ ವೇಳೆಗೆ ಜಿಲ್ಲೆಯ ಜನತೆಗೆ ಸಮಂಜಸವಾದ ವ್ಯವಸ್ಥೆಯನ್ನು ಕಲ್ಪಿಸಲು ಪಕ್ಷ ಆಗ್ರಹಿಸುತ್ತಲೇ ಬಂದಿದೆ. ಕಿಂಡಿ ಆಣೆಕಟ್ಟುಗಳು ಈ ಭಾಗದ ಅಂತರ್ಜಲ ವೃದ್ಧಿಗೆ, ಕೃಷಿಭೂಮಿಗೆ ಸಹಕಾರಿ ಆಗಬಲ್ಲವು. ಸರ್ಕಾರ ಈಗಾಗಲೇ ಕಿಂಡಿ ಆಣೆಕಟ್ಟುಗಳಿಗೆ ನೆರವು ನೀಡಲು ಒಪ್ಪಿದೆ ಎಂದು ಹೇಳುತ್ತಾರೆ’ ಸಿಪಿಎಂನ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ.

ಇದೇ ಮಾತನ್ನು ಕಾಂಗ್ರೆಸ್‌ನ ಜಿಲ್ಲಾ ಘಟಕದ ಆಧ್ಯಕ್ಷ ಹರೀಶ್ ಕುಮಾರ್‌ ಹೇಳುತ್ತಾರೆ. ‘ಎಲ್ಲರಿಗೂ ನೀರು ಕೊಡುವುದು ಸರ್ಕಾರದ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಲಾಗಿತ್ತು. ಈಗಾಗಲೇ ಯೋಜನೆಯ ಕಾಮಗಾರಿ ಬಿರುಸಿನಿಂದ ಸಾಗಿದೆ. ಬಯಲುಸೀಮೆ ಜಿಲ್ಲೆಗಳಿಗೆ ನೀರು ತಲುಪುವುದಿಲ್ಲ ಎನ್ನುವ ಆರೋಪ ಸರಿಯಲ್ಲ. ಯೋಜನೆ ಮುಕ್ತಾಯವಾಗುವವರೆಗೆ ತಾಳ್ಮೆಯಿಂದ ಇರಬೇಕು’ ಎಂಬುದು ಅವರ ನಿಲುವು.

25ರಿಂದ ಬಿರುಸುಗೊಳ್ಳಲಿದೆ ನೋಟಾ ಅಭಿಯಾನ

ಯೋಜನೆಯನ್ನು ವಿರೋಧಿಸುವವರ ಧ್ವನಿಯನ್ನೇ ಜಿಲ್ಲೆಯಲ್ಲಿ ನಿರ್ಲಕ್ಷಿಸಲಾಗಿದೆ. ಅಂತಹ ಅಭ್ಯರ್ಥಿಗಳನ್ನೇ ತಿರಸ್ಕರಿಸಬೇಕು ಎಂಬ ದೃಷ್ಟಿಯಿಂದ ನೋಟಾ ಅಭಿಯಾನವನ್ನು ಸಹ್ಯಾದ್ರಿ ಸಂಚಯ ಕೈಗೆತ್ತಿಕೊಂಡಿದೆ ಎಂದು ಹೇಳುತ್ತಾರೆ ಸಂಚಯದ ಸಂಚಾಲಕ ದಿನೇಶ್‌ ಹೊಳ್ಳ. ಕಳೆದ ಲೋಕಸಭಾ ಚುನಾವಣೆಯಲ್ಲಿ 7,800 ನೋಟಾ ಮತಗಳು ಚಲಾವಣೆ ಆಗಿವೆ. ಪಂಚಾಯಿತಿ ಚುನಾವಣೆಯಲ್ಲಿ 28,700 ನೋಟಾ ಚಲಾವಣೆ ಆಗಿದೆ. ಬಹುಶಃ ಭಾರತದಲ್ಲಿಯೇ ಇಷ್ಟೊಂದು ನೋಟಾ ಮತಗಳು ಚಲಾವಣೆ ಆಗಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಇರಬೇಕು. ನಿಜವಾಗಿಯೂ ಇಲ್ಲಿನ ಜನರ ಸಮಸ್ಯೆ ಏನು ಎಂಬುದನ್ನು ರಾಜಕಾರಣಿಗಳು ಅರಿಯುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂಬುದೇ ಈ ಅಭಿಯಾನದ ಆಶಯ ಎಂದು ಅವರು ವಿವರಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry