ಸೋಮವಾರ, ಜೂಲೈ 13, 2020
23 °C

ಫೋನ್‌ನಲ್ಲಿ ಒಳ್ಳೇ ಫೋಟೊ ತೆಗೆಯಲು ಹೀಗೆ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫೋನ್‌ನಲ್ಲಿ ಒಳ್ಳೇ ಫೋಟೊ ತೆಗೆಯಲು ಹೀಗೆ ಮಾಡಿ

‘ಸಾವಿರಾರು ರೂಪಾಯಿ ತೆತ್ತು ಸ್ಮಾರ್ಟ್‌ಫೋನ್ ಖರೀದಿಸಿದ್ದೇವೆ. ಆದರೆ ಫೋಟೊ ಮಾತ್ರ ಸರಿಯಾಗಿ ಬರುತ್ತಿಲ್ಲ...’ ಇದು ಅನೇಕ ಸ್ಮಾರ್ಟ್‌ಫೋನ್ ಬಳಕೆದಾರರ ದೂರು. ಕೆಲ ಸಾಮಾನ್ಯ ವಿಷಯಗಳತ್ತ ಗಮನಕೊಟ್ಟರೆ ಮತ್ತು ಕೆಲವು ಸುಲಭದ ತಂತ್ರಗಳನ್ನು ಅನುಸರಿಸಿದರೆ ಸಾಧಾರಣ ಫೋನ್‌ಗಳಿಂದಲೂ ಉತ್ತಮ ಚಿತ್ರಗಳನ್ನು ತೆಗೆಯಲು ಸಾಧ್ಯವಿದೆ. ಅಂಥ ಕೆಲ ತಂತ್ರಗಳ ಪರಿಚಯ ಇಲ್ಲಿದೆ. 

ಬೆಳಕು

ಆಬ್ಜೆಕ್ಟ್ ಮೇಲೆ ಬೆಳಕು ಚೆನ್ನಾಗಿ ಬೀಳಬೇಕು. ಆದರೆ ಬೆಳಕು ಹೆಚ್ಚಾಗಿ ಬಣ್ಣಗಳೆಲ್ಲಾ ಸುಟ್ಟುಹೋಗಬಾರದು (ಕಲರ್ ಬರ್ನ್). ಚಿತ್ರದ ಫ್ರೇಂನಲ್ಲಿ ತೋರಿಸಬೇಕಾದ ಜನರು, ವಸ್ತುಗಳ (ಆಬ್ಜೆಕ್ಟ್) ಮೇಲೆ ಬೆಳಕು ಇರಬೇಕು. ಆಗ ಮಾತ್ರ ಚಿತ್ರವು ಸ್ಪಷ್ಟವಾಗಿ ಮೂಡಲು ಸಾಧ್ಯ. ಬೆಳಕಿಗೆ ಎದುರಾಗಿ ಫೋಟೊ ತೆಗೆಯುವುದು ವಿಶಿಷ್ಟ ಸಾಹಸ. ಕೆಲವೊಮ್ಮೆ ಚಿತ್ರಗಳು ಕಪ್ಪಗಾಗಿ ಹಾಳಾಗಲೂ ಇದು ಮುಖ್ಯ ಕಾರಣ. ಫೋಟೊ ತೆಗೆಯುವವರು ಬೆಳಕಿನ ಮೂಲಕ್ಕೆ (ಉದಾಹರಣೆಗೆ ಸೂರ್ಯ) ಬೆನ್ನು ಹಾಕಿರಬೇಕು. ಆಗ ಚಿತ್ರಗಳು ಸ್ಫುಟವಾಗಿ ಮೂಡುತ್ತವೆ.

ನಿಸರ್ಗವೇ ಚಂದ

ಮಕ್ಕಳ ಚಿತ್ರಗಳು, ಅಪರೂಪದ ಸ್ಮರಣಿಕೆಯಂಥ ಚಿತ್ರಗಳನ್ನು ತೆಗೆಯುವಾಗ ಔಟ್‌ಡೋರ್‌ಗೆ ಪ್ರಾಮುಖ್ಯತೆ ಕೊಡಿ. ಸೂರ್ಯನ ಬೆಳಕಿನಲ್ಲಿ ಏಳೂ ಬಣ್ಣಗಳು ಸಮಪ್ರಮಾಣದಲ್ಲಿ ಮಿಳಿತಗೊಂಡಿರುತ್ತವೆ. ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಸಹ ಇಂಥ ಬೆಳಕನ್ನು ಸಮರ್ಪಕವಾಗಿ ಗುರುತಿಸಿಕೊಳ್ಳುತ್ತದೆ. ಆದರೆ ಕೃತಕ ಬೆಳಕಿನಲ್ಲಿ ಹೀಗಲ್ಲ. ಸೆಟ್ಟಿಂಗ್ಸ್ ಗಮನಿಸಿಕೊಳ್ಳದಿದ್ದರೆ ಚಿತ್ರಗಳು ಹಾಳಾಗುತ್ತವೆ. ಹೊರಾಂಗಣದಲ್ಲಿ ಫೋಟೊ ತೆಗೆಯುವುದಿದ್ದರೆ ಬೆಳಿಗ್ಗೆ 10 ಗಂಟೆಯವರೆಗೆ, ಸಂಜೆ 4ರ ನಂತರ ಫೋಟೊ ತೆಗೆಯಬೇಕು. ಈ ಅವಧಿಯಲ್ಲಿ ಸೂರ್ಯನ ಬೆಳಕು ಹಳದಿ ಛಾಯೆಯೊಂದಿಗೆ ಮಂದವಾಗಿರುತ್ತದೆ. ನೆರಳೂ ಆಬ್ಜೆಕ್ಟ್‌ನಿಂದ ದೂರು ಬೀಳುತ್ತದೆ. ಚಿತ್ರಗಳೂ ಚೆನ್ನಾಗಿ ಬರುತ್ತವೆ.

ಸೆಟ್ಟಿಂಗ್ಸ್ ಅರ್ಥ ಮಾಡಿಕೊಳ್ಳಿ

ಸ್ಮಾರ್ಟ್‌ಫೋನ್ ಖರೀದಿಸಿದಾಗ ಅದರ ಜೊತೆಗೆ ಬಳಕೆದಾರರ ಕೈಪಿಡಿಯನ್ನೂ (ಯೂಸರ್ ಮ್ಯಾನ್ಯುಯಲ್) ಕೊಟ್ಟಿರುತ್ತಾರೆ. ಅದರಲ್ಲಿ ಕ್ಯಾಮೆರಾ ಸೆಟ್ಟಿಂಗ್ಸ್‌ ಬಗ್ಗೆ ಪ್ರತ್ಯೇಕ ಅಧ್ಯಾಯವೂ ಇರುತ್ತದೆ. ಸ್ಮಾರ್ಟ್‌ಫೋನ್‌ ಖರೀದಿಸಿದವರು ಅದನ್ನು ಒಮ್ಮೆ ಸರಿಯಾಗಿ ಓದಿ, ಅದನ್ನು ಜೊತೆಯಲ್ಲಿಟ್ಟುಕೊಂಡು ಸ್ಮಾರ್ಟ್‌ಫೋನ್ ಕ್ಯಾಮೆರಾದ ಸೆಟ್ಟಿಂಗ್ಸ್ ಬದಲಿಸಿ, ಬಳಸಿ ಅರ್ಥ ಮಾಡಿಕೊಳ್ಳಬೇಕು. ಶಿಯಾಮಿ ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್‌ಗಳು ಅತ್ಯಂತ ಕಡಿಮೆ ಬೆಲೆಗೆ ಮ್ಯಾನ್ಯುಯಲ್ ಸೆಟ್ಟಿಂಗ್ಸ್ ಬಳಸುವ ಅವಕಾಶವನ್ನೂ ನೀಡುತ್ತಿವೆ.

ಕೃತಕ ಬೆಳಕು

ರಾತ್ರಿ ಹೊತ್ತು ಫೋಟೊ ತೆಗೆಯುವಾಗ ಬೆಳಕಿನ ರೀತಿಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಟ್ಯೂಬ್‌ಲೈಟ್‌, ಸಿಎಫ್‌ಎಲ್, ಎಲ್‌ಇಡಿಗಳಲ್ಲಿ ಸಾಮಾನ್ಯವಾಗಿ ನೀಲಿ (ಸಿಯಾನ್) ಇರುತ್ತದೆ. ಬುರುಡೆಬಲ್ಬ್‌, ನಿಯಾನ್‌ ಬಲ್ಬ್‌ಗಳಲ್ಲಿ ಹಳದಿ ಹೆಚ್ಚು. ಸ್ಮಾರ್ಟ್‌ಫೋನ್ ಕ್ಯಾಮೆರಾ ಸೆಟ್ಟಿಂಗ್ಸ್‌ಗಳಲ್ಲಿಯೂ ನಿರ್ದಿಷ್ಟವಾಗಿ ಇಂಥ ಬೆಳಕಿನ ಚಿತ್ರಕ್ಕೆ ಸೂಕ್ತ ಎಂಬ ಆಯ್ಕೆಗಳು ಇರುತ್ತವೆ. ರಾತ್ರಿ ಹೊತ್ತು ಫೋಟೊ ತೆಗೆಯುವಾಗ ಫ್ಲಾಷ್ ಬಳಸುವುದು ಕ್ಷೇಮ.

ನೆರಳು–ಬೆಳಕು

ಮರದ ನೆರಳು ಏಕರೂಪವಾಗಿರುವುದಿಲ್ಲ. ಬಿಳಿಬಟ್ಟೆಗೆ ಕಪ್ಪುಬಣ್ಣದ ತೇಪೆ ಹಾಕಿದಂತೆ ಚೆಲ್ಲಾಪಿಲ್ಲಿಯಾಗಿರುತ್ತದೆ. ಇಂಥ ಸಂದರ್ಭಗಳಲ್ಲಿ ಫೋಟೊ ತೆಗೆಯಬೇಕಾದ ವಸ್ತು ಅಥವಾ ಜನರ ಮೇಲೆ ಸ್ಫುಟವಾಗಿ ಬೆಳಕು ಬೀಳುವಂತೆ ಎಚ್ಚರವಹಿಸಬೇಕು. ಇಲ್ಲದಿದ್ದರೆ ಅತ್ತ ಕಪ್ಪೂ ಅಲ್ಲದ, ಇತ್ತ ಬಿಳಿಪೂ ಅಲ್ಲ ವಿಚಿತ್ರ ಫೋಟೊ ನಿಮಗೆ ಸಿಗುತ್ತದೆ. ಇಂಥ ಸಂದರ್ಭದಲ್ಲಿ ಫ್ಲಾಷ್ ಬಳಕೆ ಉಪಯುಕ್ತ.

ಚಿತ್ರದ ಗಾತ್ರ

ಕೆಲವರು ಫೋನ್ ಮೆಮೊರಿ ಉಳಿಸಬೇಕೆಂದು ಸೆಟ್ಟಿಂಗ್ಸ್‌ನಲ್ಲಿ ಚಿತ್ರದ ರೆಸಲ್ಯೂಶನ್ ಕಡಿಮೆ ಮಾಡಿರುತ್ತಾರೆ. ಇದು ತಪ್ಪು. ಸ್ಮಾರ್ಟ್‌ಫೋನ್‌ನ ಫೋಟೊ ತೆಗೆಯುವಾಗ ಇಮೇಜ್ ಗಾತ್ರವನ್ನು ದೊಡ್ಡದಾಗಿ ಇರಿಸಿಕೊಳ್ಳುವುದು ಕ್ಷೇಮ. ಫೋಟೊದಲ್ಲಿ ನಿರ್ದಿಷ್ಟ ಭಾಗವನ್ನು ಕ್ರಾಪ್ ಮಾಡುವ ಅನಿವಾರ್ಯತೆ ಬಂದಾಗ ಇದರಿಂದ ಅನುಕೂಲವಾಗುತ್ತದೆ. ಫೋಟೊ ತೆಗೆಯುವಾಗಲೇ ಚಿಕ್ಕ ಗಾತ್ರ ಇರಿಸಿಕೊಂಡಿದ್ದರೆ ದೊಡ್ಡದು ಮಾಡಿದಾಗ ಪಿಕ್ಸಲೈಟ್ ಒಡೆದುಕೊಳ್ಳುತ್ತದೆ.

ನೀವೇ ಹತ್ತಿರ ಹೋಗಿ

ನೀವು ಹತ್ತಿರ ಹೋಗಿ ಫೋಟೊ ತೆಗೆಯಲು ಸಾಧ್ಯವಿರುವ ಸಂದರ್ಭದಲ್ಲಿ ಕ್ಯಾಮೆರಾ ಜೂಂ ಮಾಡುವುದನ್ನು ಸಾಧ್ಯವಾದಷ್ಟೂ ತಪ್ಪಿಸಿ. ನೀವೇ ಹತ್ತಿರ ಹೋಗಿ ಬೇಕಾದ ಫ್ರೇಂ ಗುರುತಿಸಿ ಫೋಟೊ ತೆಗೆಯಿರಿ. ಜೂಂ ಮಾಡಿದಾಗ ಆಬ್ಜೆಕ್ಟ್ ಮಬ್ಬಾಗುವ, ಸ್ಮಾರ್ಟ್‌ಫೋನ್‌ನ ಫ್ಲಾಷ್ ಪರಿಣಾಮಕಾರಿಯಾಗಿ ಹರಡಿಕೊಳ್ಳದ ಅಪಾಯ ಇರುತ್ತದೆ. ಆದರೆ ನೀವೇ ಹತ್ತಿರ ಹೋಗಿ ಫೋಟೊ ತೆಗೆಯುವುದರಿಂದ ಈ ಅಪಾಯವನ್ನು ತಪ್ಪಿಸಿದಂತೆ ಆಗುತ್ತದೆ.

ಆ್ಯಪ್‌ಗಳ ಮಾಹಿತಿ

Camera+, Manual, ProCamera, Camera ZOOM FX, Camera 360 ಸೇರಿದಂತೆ ಹತ್ತಾರು ಥರ್ಡ್‌ಪಾರ್ಟಿ ಆ್ಯಪ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ನ ಫೋಟೊಗ್ರಫಿ ಸಾಧ್ಯತೆಯನ್ನು ವಿಸ್ತರಿಸಬಲ್ಲವು. snapseedನಂಥ ಆ್ಯಪ್‌ಗಳು ಸ್ಮಾರ್ಟ್‌ಫೋನ್‌ನಲ್ಲಿಯೇ ಮಾಡಬಹುದಾದ ಬೇಸಿಕ್ ಫೋಟೊ ಎಡಿಟಿಂಗ್‌ಗೆ ಅನುಕೂಲ ಕಲ್ಪಿಸುತ್ತವೆ. ಆ್ಯಪ್‌ಗಳನ್ನು ಬಳಸುವುದು ಅಷ್ಟು ಕಷ್ಟವೂ ಅಲ್ಲ. ಆದರೆ ರೂಢಿಯಾಗಬೇಕಷ್ಟೇ. 

**

ಫೋಕಸ್ ಮಾಡಿ

ಸ್ಮಾರ್ಟ್‌ಫೋನ್‌ಗಳು ಸಮರ್ಪಕವಾಗಿ ಫೋಕಸ್ ಆಗಲು ಸಾಮಾನ್ಯವಾಗಿ ಕೆಲ ಸೆಕೆಂಡ್ ತೆಗೆದುಕೊಳ್ಳುತ್ತವೆ. ಚಿತ್ರದಲ್ಲಿ ದಾಖಲಾಗಬೇಕಾದ ಫ್ರೇಂ ಗುರುತಿಸಿಕೊಂಡ ಮೇಲೆ ಸ್ಮಾರ್ಟ್‌ಫೋನ್ ಕೆಲಸಮಯ ಅಲುಗದಂತೆ ಹಿಡಿದುಕೊಳ್ಳಿ. ಆಗ ಅದು ಆಬ್ಜೆಕ್ಟ್ ಗುರುತಿಸಿಕೊಂಡು ಫೋಕಸ್ ಮಾಡಿಕೊಳ್ಳುತ್ತದೆ. ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಮುಖ ಗುರುತಿಸುವ (ಫೇಸ್‌ ಡಿಟೆಕ್ಷನ್) ಆಯ್ಕೆಯೂ ಇದೆ. ಕ್ಯಾಮೆರಾ ಡಿಸ್‌ಪ್ಲೇಯಲ್ಲಿ ಕಾಣಿಸುವ ಗೋಳಾಕಾರದ ಆಪ್ಷನ್ ಕ್ಲಿಕ್ಕಿಸುವ ಮೂಲಕ ಫ್ರೇಂನ ನಿರ್ದಿಷ್ಟ ಭಾಗ ಫೋಕಸ್ ಆಗುವಂತೆ ಮಾಡಬಹುದು. ಫೋಕಸ್ ಚೆನ್ನಾಗಿದ್ದರೆ ಚಿತ್ರದ ಗುಣಮಟ್ಟವೂ ಚೆನ್ನಾಗಿರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.