3
ಇಂಡಿ ಮತಕ್ಷೇತ್ರದಿಂದ ಪಕ್ಷೇತರನಾಗಿ ಕಣಕ್ಕೆ; ಮಾಜಿ ಶಾಸಕ ರವಿಕಾಂತ ಪಾಟೀಲ ಘೋಷಣೆ

ಬಿಜೆಪಿ 2ನೇ ಪಟ್ಟಿ; ಜಿಗಜಿಣಗಿ ಮೇಲುಗೈ

Published:
Updated:

ವಿಜಯಪುರ: ರಾಜ್ಯ ವಿಧಾನಸಭಾ ಚುನಾವಣೆಗೆ ಸೋಮವಾರ ಬಿಜೆಪಿ ಬಿಡುಗಡೆ ಮಾಡಿದ ಎರಡನೇ ಪಟ್ಟಿ ಯಲ್ಲಿ ಜಿಲ್ಲೆಯ ಇಂಡಿ, ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಘೋಷಣೆ ಯಾಗಿದ್ದು, ಕೇಂದ್ರ ಸಚಿವ ರಮೇಶ ಜಿಗಜಿಣಗಿ ಮೇಲುಗೈ ಸಾಧಿಸಿದ್ದಾರೆ.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ಯುವ ಮುಖಂಡ, ಉದ್ಯಮಿ, ಗಾಣಿಗ ಸಮಾಜದ ಅಥರ್ಗಾ ಗ್ರಾಮದ ದಯಾಸಾಗರ ಪಾಟೀಲ ಇಂಡಿ ವಿಧಾನಸಭಾ ಕ್ಷೇತ್ರದಿಂದ, ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸೋಮನಗೌಡ ಪಾಟೀಲ ಸಾಸನೂರ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದಲೇ ಈ ಬಾರಿಯೂ ಹುರಿಯಾಳಾಗಿದ್ದಾರೆ. ಈ ಇಬ್ಬರೂ ಜಿಗಜಿಣಗಿ ಜತೆ ಮೊದಲಿನಿಂದಲೂ ನಿಕಟ ಬಾಂಧವ್ಯ ಹೊಂದಿದವರು.

ಇಂಡಿ ವಿಧಾನಸಭಾ ಕ್ಷೇತ್ರದಿಂದ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ರವಿಕಾಂತ ಪಾಟೀಲಗೆ ಬಿಜೆಪಿ ಅವಕಾಶ ನೀಡಿಲ್ಲ. ಬಸನಗೌಡ ಪಾಟೀಲ ಯತ್ನಾಳ ಸಹ ರವಿಕಾಂತ ಪರ ಬ್ಯಾಟ್‌ ಬೀಸಿದ್ದರೂ ಟಿಕೆಟ್‌ ತಪ್ಪಿದೆ. ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರುವುದು ಖಚಿತವಾಗಿದ್ದು, ರವಿಕಾಂತ ಪಕ್ಷೇತರರಾಗಿ ಕಣಕ್ಕಿಳಿಯಲಿದ್ದಾರೆ. ಯಾರ ಮನವೊಲಿಕೆಗೆ ಮಣಿಯುವುದು ಕಷ್ಟಸಾಧ್ಯವಿರುವುದು ಬಿಜೆಪಿಗೆ ತಲೆನೋವಿನ ಸಂಗತಿಯಾಗಿದೆ.

ಮೊದಲ ಪಟ್ಟಿಯಲ್ಲಿ ಪ್ರಕಟವಾದ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಪೈಕಿ ಮೂವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಜತೆ ನಿಕಟ ಬಾಂಧವ್ಯ ಹೊಂದಿದ್ದವರು. ಸಿಂದಗಿ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಹಾಲಿ ಶಾಸಕರಿಗೆ ದೊರೆತಿತ್ತು.

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಬಸನಗೌಡ ಪಾಟೀಲ ಯತ್ನಾಳ ಪಾಲಾಗುವ ಮೂಲಕ ಬಂಡಾಯ ಭುಗಿಲೆದ್ದಿತ್ತು. ಕೇಂದ್ರ ಸಚಿವ ರಮೇಶ ಜಿಗಜಿಣಗಿ ಸಹ ಮಾಜಿ ಸಚಿವ, ತಮ್ಮ ಖಾಸಾ ಮನುಷ್ಯ ಅಪ್ಪಾಸಾಹೇಬ ಪಟ್ಟಣಶೆಟ್ಟಿಗೆ ಟಿಕೆಟ್‌ ತಪ್ಪಿಸಿದ್ದಕ್ಕೆ, ಬಿಎಸ್‌ವೈ ಸೇರಿದಂತೆ ವರಿಷ್ಠರ ಬಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನ ಲಾಗಿದೆ.

ಇದಕ್ಕೆ ಪ್ರತಿಯಾಗಿ ವರಿಷ್ಠರು, ಬಿಎಸ್‌ವೈ ಇಂಡಿ, ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಟಿಕೆಟ್‌ನ್ನು ಜಿಗಜಿಣಗಿ ಶಿಷ್ಯ ಪಡೆಗೆ ನೀಡಿದ್ದಾರೆ. ನಾಗಠಾಣ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಸಹ ಜಿಗಜಿಣಗಿ–ಗೋವಿಂದ ಕಾರಜೋಳ ಸೂಚಿಸುವ ವ್ಯಕ್ತಿಗೆ ದೊರಕಲಿದೆ ಎಂದು ಬಿಜೆಪಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಎರಡು ವರ್ಷದ ಹಿಂದೆ ನಡೆದ ಜಿಲ್ಲಾ ಪಂಚಾಯ್ತಿ ಚುನಾವಣೆಗೆ ತಮ್ಮ ಬೆಂಬಲಿಗರಿಗೆ ಟಿಕೆಟ್‌ ಕೊಡಿಸುವಲ್ಲಿ ವಿಫಲರಾಗಿದ್ದ ವಿಠ್ಠಲ ಕಟಕದೊಂಡ, ಅಚ್ಚರಿಯ ಬೆಳವಣಿಗೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಬಳಿಕ ಆರಂಭದಿಂದಲೂ ಬಸನಗೌಡ ಪಾಟೀಲ ಯತ್ನಾಳ ಪರ ಬಿಎಸ್‌ವೈ ಬಳಿ ಲಾಬಿ ನಡೆಸಿದ್ದರು. ಇದು ಜಿಲ್ಲೆಯ ಪ್ರಮುಖ ಮುಖಂಡರಲ್ಲಿ ತೀವ್ರ ಅಸಮಾಧಾನ ಸೃಷ್ಟಿಸಿತ್ತು. ನಗರ ಕ್ಷೇತ್ರದ ಟಿಕೆಟ್‌ ಯತ್ನಾಳಗೆ ಖಚಿತಗೊಂಡ ಬಳಿಕ ಆಕ್ರೋಶ ದುಪ್ಪಟ್ಟಾಯಿತು.

ಇದಕ್ಕೆ ಪ್ರತೀಕಾರವಾಗಿ ಕಟಕ ದೊಂಡ ಅವರಿಗೆ ನಾಗಠಾಣ ವಿಧಾನ ಸಭಾ ಕ್ಷೇತ್ರದ ಟಿಕೆಟ್ ತಪ್ಪಿಸಲೇಬೇಕು ಎಂದು ಜಿಲ್ಲೆಯ ಪ್ರಭಾವಿಗಳು ಹಠಕ್ಕೆ ಬಿದ್ದಿದ್ದಾರೆ. ಯಡಿಯೂರಪ್ಪ ವಿರುದ್ಧ ಸೆಡ್ಡು ಹೊಡೆದಿದ್ದಾರೆ. ಕೊನೆ ಕ್ಷಣದಲ್ಲಿ ಯಾರ ಕೈ ಮೇಲುಗೈ ಆಗಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ’ ಎಂದು ಬಿಜೆಪಿಯ ಮುಖಂಡರೊಬ್ಬರು ತಿಳಿಸಿದರು.

ಗಾಣಿಗ ಸಮಾಜಕ್ಕೆ ಬಂಪರ್‌

ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಸಿಂದಗಿ, ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರಗಳಿಂದ ಬಿಜೆಪಿ ಗಾಣಿಗ ಸಮಾಜದ ಅಭ್ಯರ್ಥಿಗಳಿಗೆ ಈ ಹಿಂದಿನ ಚುನಾವಣೆಗಳಲ್ಲಿ ಮಣೆ ಹಾಕಿತ್ತು. ಈ ಬಾರಿ ಇದಕ್ಕೆ ಪೂರಕವಾಗಿ ಇಂಡಿ ವಿಧಾನಸಭಾ ಕ್ಷೇತ್ರದಿಂದ ಗಾಣಿಗ ಸಮಾಜದ ಅಭ್ಯರ್ಥಿ ಕಣಕ್ಕಿಳಿಸಿರುವುದರ ಹಿಂದೆ ಸಮಾಜದ ಮುಖಂಡ, ನೆರೆಯ ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಕೊಡುಗೆಯೂ ಅಪಾರವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ದಯಾಸಾಗರ ಪಾಟೀಲ ಒಂದೆಡೆ ರಮೇಶ ಜಿಗಜಿಣಗಿ ಮೂಲಕ ಟಿಕೆಟ್‌ ಯತ್ನ ನಡೆಸಿದ್ದರೆ, ಇನ್ನೊಂದೆಡೆ ಸಮಾಜದ ಪ್ರಮುಖರ ಮೂಲಕ ಲಕ್ಷ್ಮಣ ಸವದಿ ಮೇಲೆಯೂ ಒತ್ತಡ ಹಾಕಿದ್ದರು. ಸವದಿ ಬಿಎಸ್‌ವೈ ಆಪ್ತ ವಲಯದಲ್ಲಿದ್ದು, ತಮ್ಮ ಸಮಾಜಕ್ಕೆ ವಿಜಯಪುರ ಜಿಲ್ಲೆಯಿಂದ ಮೂರನೇ ಟಿಕೆಟ್‌ ನೀಡಬೇಕು ಎಂದು ಪ್ರಬಲ ಹಕ್ಕೊತ್ತಾಯ ಮಂಡಿಸಿದ್ದರು. ಅದಕ್ಕೆ ಇದೀಗ ತಕ್ಕ ಪ್ರತಿಫಲ ದೊರೆತಿದೆ ಎನ್ನಲಾಗಿದೆ.

ಜನರ ಮೇಲೆ ವಿಶ್ವಾಸವಿದೆ

‘ನನ್ನ ಮೇಲೆ ಯಾವುದೇ ಪ್ರಕರಣಗಳಿಲ್ಲ. ಉಸುಕು ಲೂಟಿ ತಡೆಯಲು ಮುಂದಾಗಿದ್ದಕ್ಕೆ ಪೊಲೀಸರು ಪ್ರಕರಣವೊಂದನ್ನು ದಾಖಲಿಸಿದ್ದರು. ಇದನ್ನೇ ಇಟ್ಟುಕೊಂಡು ಟಿಕೆಟ್‌ ತಪ್ಪಿಸಲಾಗಿದೆ. ಬಿಜೆಪಿ ಟಿಕೆಟ್‌ ಸಿಗದಿದ್ದರೇನಂತೆ. ಪಕ್ಷೇತರನಾಗಿ ಸ್ಪರ್ಧಿಸುವೆ’ ಎಂದು ಮಾಜಿ ಶಾಸಕ ರವಿಕಾಂರ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೂರು ಬಾರಿ ಶಾಸಕನಿದ್ದ ಅವಧಿ ಕ್ಷೇತ್ರದ ಜನರ ಸೇವೆ ಮಾಡಿರುವೆ. ಜನರು–ದೇವರ ಮೇಲೆ ನನಗೆ ಅಪಾರ ನಂಬಿಕೆಯಿದೆ. ನನ್ನ ಹೆಸರು ಕೆಡಿಸಿ ಟಿಕೆಟ್‌ ತಪ್ಪಿಸಿದ್ದಾರೆ. ಕ್ಷೇತ್ರದ ಜನರೇ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಹೇಳಿದರು.

**

ರಮೇಶ ಜಿಗಜಿಣಗಿ, ಗೋವಿಂದ ಕಾರಜೋಳ, ಯಶವಂತರಾಯಗೌಡ ಪಾಟೀಲ ಮೂವರು ಸೇರಿ ನನಗೆ ಟಿಕೆಟ್‌ ತಪ್ಪಿಸಿದ್ದಾರೆ – ರವಿಕಾಂತ ಪಾಟೀಲ, ಮಾಜಿ ಶಾಸಕ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry