ಶುಕ್ರವಾರ, ಡಿಸೆಂಬರ್ 13, 2019
17 °C

ಮ್ಯೂಚುವಲ್‌ ಫಂಡ್‌ ಹೂಡಿಕೆಯ ಲಾಭಗಳೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮ್ಯೂಚುವಲ್‌ ಫಂಡ್‌ ಹೂಡಿಕೆಯ ಲಾಭಗಳೇನು?

ವ್ಯವಸ್ಥಿತವಾಗಿ ಹೂಡಿಕೆ ಮಾಡುವ ಮತ್ತು ಆರ್ಥಿಕ ತಜ್ಞರ ಮೇಲ್ವಿಚಾರಣೆಯಲ್ಲೇ ನಿರ್ವಹಿಸಲಾಗುವ ‘ಮ್ಯೂಚುವಲ್‌ ಫಂಡ್‌’ಗಳು  ಹೂಡಿಕೆದಾರರಿಗೆ ಹೆಚ್ಚು ಆದಾಯ ತಂದುಕೊಡಬಲ್ಲ ಸುರಕ್ಷಿತ ಹಣಕಾಸು ಉತ್ಪನ್ನಗಳಾಗಿವೆ.

ಮ್ಯೂಚುವಲ್‌ ಫಂಡ್‌ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ಸಂಕ್ಷಿಪ್ತ ಮಾಹಿತಿ ಪಡೆದರೆ ಈ ಹೂಡಿಕೆಯು ಯಾಕೆ ‘ಸುರಕ್ಷಿತ ಮತ್ತು ಉತ್ತಮ’ ಎಂಬುದು ಅರ್ಥವಾಗುತ್ತದೆ.

ಸಂಪತ್ತು ನಿರ್ವಹಣಾ ಸಂಸ್ಥೆಯು ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿ, ಅದನ್ನು ಷೇರುಗಳು, ಬಾಂಡ್‌ಗಳು ಮತ್ತಿತರ ಹಣ ಹೂಡಿಕೆಯ ಉತ್ಪನ್ನಗಳಲ್ಲಿ ತೊಡಗಿಸುತ್ತದೆ. ಎಲ್ಲಿ, ಯಾವಾಗ ಮತ್ತು ಎಷ್ಟು ಹೂಡಿಕೆ ಮಾಡಬೇಕು ಎಂಬುದನ್ನು ಹೂಡಿಕೆ ಹಾಗೂ ಹಣ ನಿರ್ವಹಣಾ ತಜ್ಞರಾದ ‘ಫಂಡ್‌ ಮ್ಯಾನೇಜರ್‌’ಗಳು ನಿರ್ಧರಿಸುತ್ತಾರೆ. ಇದು ಮ್ಯೂಚುವಲ್‌ ಫಂಡ್‌ನ ವ್ಯವಸ್ಥೆ.

ಹೆಚ್ಚಿನ ಗಳಿಕೆ, ಸುಲಭ ಹೂಡಿಕೆ ಅಥವಾ ತೆರಿಗೆ ಉಳಿತಾಯ... ಉದ್ದೇಶ ಯಾವುದೇ ಇರಲಿ, ಮ್ಯೂಚುವಲ್‌ ಫಂಡ್‌ಗಳು ಹೂಡಿಕೆದಾರರಿಗೆ ಅನೇಕ ಅನುಕೂಲಗಳನ್ನು ಕಲ್ಪಿಸುತ್ತವೆ.

ವೈವಿಧ್ಯ

ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದಂತೆಯೇ ಸರಿ. ಹೂಡಿಕೆದಾರರ ಹಣವನ್ನು ಫಂಡ್‌ ಮ್ಯಾನೇಜರ್‌ಗಳು ಬೇರೆ ಬೇರೆ ಉತ್ಪನ್ನಗಳಲ್ಲಿ ತೊಡಗಿಸುತ್ತಾರೆ. ಕಡಿಮೆ ಅಪಾಯದ ಷೇರುಗಳಿಂದ ಆರಂಭಿಸಿ, ಹೆಚ್ಚು ಏರಿಳಿತ ದಾಖಲಿಸುವ ಷೇರುಗಳವರೆಗೆ, ಬಾಂಡ್‌ಗಳು, ಅಂತರರಾಷ್ಟ್ರೀಯ ಷೇರುಗಳು ಮುಂತಾದ ಹಲವು ಕ್ಷೇತ್ರಗಳಲ್ಲಿ ಹಣ ಹೂಡಿಕೆ ಮಾಡಲಾಗುತ್ತದೆ. ಇಲ್ಲಿ ಒಂದು ಕ್ಷೇತ್ರಕ್ಕೆ ಆರ್ಥಿಕವಾಗಿ ಸ್ವಲ್ಪ ಹಿನ್ನಡೆ ಆದರೂ ಇನ್ಯಾವುದೋ ಕ್ಷೇತ್ರ ಏರಿಕೆ ಕಂಡು, ಹೂಡಿಕೆದಾರರಿಗೆ ಆಗಬಹುದಾದ ನಷ್ಟವನ್ನು ತಪ್ಪಿಸುತ್ತದೆ.

ಸರಳ ನಗದೀಕರಣ

‘ಯಾವಾಗ ಬೇಕಾದರೂ ನಗದೀಕರಿಸಬಹುದು’ ಎಂಬುದು ಮ್ಯೂಚುವಲ್‌ ಫಂಡ್‌ ಹೂಡಿಕೆಯ ಬಹುಮುಖ್ಯವಾದ ಅಂಶವಾಗಿದೆ. ತುರ್ತು ಸಂದರ್ಭ ಎದುರಾದರೆ, ನಿವ್ವಳ ಸಂಪತ್ತು ಮೌಲ್ಯ (ನೆಟ್‌ ಅಸೆಟ್‌ ವ್ಯಾಲ್ಯೂ–ಎನ್‌ಎವಿ) ಆಧರಿಸಿ, ಕೆಲವೇ ನಿಮಿಷಗಳಲ್ಲಿ ಹಣವನ್ನು ಪಡೆಯುವ ಅವಕಾಶ ಹೆಚ್ಚಿನ ಮ್ಯೂಚುವಲ್‌ ಫಂಡ್‌ಗಳಲ್ಲಿ ಇರುತ್ತದೆ. ಬಾಂಡ್‌ ಅಥವಾ ಷೇರುಗಳಲ್ಲಿನ ಹೂಡಿಕೆಗೆ ಈ ಸಾಧ್ಯತೆ ಇರುವುದಿಲ್ಲ. ಆದರೆ, ನಿಮ್ಮ ಫಂಡ್ ನಿರೀಕ್ಷಿತ ವೃದ್ಧಿ ದಾಖಲಿಸದಿರುವ ಅಥವಾ ನಿಮ್ಮ ಉದ್ದೇಶಿತ ಆರ್ಥಿಕ ಗುರಿಯನ್ನು ತಲುಪದ ಹೊರತಾಗಿ ಹಣ ವಾಪಸ್‌ ಪಡೆಯದಿರುವುದೇ ಉತ್ತಮ.

ಹೆಚ್ಚಿನ ಮ್ಯೂಚುವಲ್‌ ಫಂಡ್‌ಗಳಿಗೆ ಅತಿ ಕನಿಷ್ಠ ಅಥವಾ ಶೂನ್ಯ ಲಾಕ್‌ಇನ್‌ ಅವಧಿ ಇರುತ್ತದೆ. ತೆರಿಗೆ ಉಳಿತಾಯದ ಫಂಡ್‌ಗಳಾದರೆ ಮೂರು ವರ್ಷಗಳ ಲಾಕ್‌ ಇನ್‌ ಅವಧಿ ಇರುತ್ತದೆ. ನಿಶ್ಚಿತ ಠೇವಣಿ ಸೇರಿದಂತೆ ಇತರ ಹೂಡಿಕೆಗಳಿಗೆ ಹೋಲಿಸಿದರೆ ಇದು ಕಡಿಮೆಯೇ. ‘ಲಾಕ್‌ ಇನ್‌’ ಅವಧಿಯಲ್ಲಿ ಹೂಡಿದ ಹಣವನ್ನು ಮರಳಿ ಪಡೆಯಲು ಸಾಧ್ಯವಿರುವುದಿಲ್ಲ.

ಮ್ಯೂಚುವಲ್‌ ಫಂಡ್‌ ಹೂಡಿಕೆಗೆ ಇತರ ಹೂಡಿಕೆಗಳಿಗಿಂತ ಹೆಚ್ಚಿನ ಆದಾಯ ತಂದುಕೊಡುವ ಶಕ್ತಿ ಇದೆ. ಅಪಾಯ ತಾಳಿಕೆಯ ಶಕ್ತಿ ಹೊಂದಿರುವವರು ಷೇರು ಪೇಟೆ ಆಧರಿತ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಕಳೆದ ಹತ್ತು ವರ್ಷಗಳ ಅಂಕಿ ಅಂಶ ನೋಡಿದರೆ ಇಂತಹ ಫಂಡ್‌ಗಳು ಹೂಡಿಕೆದಾರರಿಗೆ ಸರಾಸರಿ ಶೇ 11 ರಿಂದ

ಶೇ 15ರಷ್ಟು ಆದಾಯ ತಂದುಕೊಟ್ಟಿವೆ. ಅಪಾಯ ತಾಳಿಕೆಯ ಶಕ್ತಿ ಕಡಿಮೆ ಇರುವವರು ಹೆಚ್ಚು ಸುರಕ್ಷಿತವಾದ ಇತರ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಸರಿಯಾದ ಫಂಡ್‌ ಆಯ್ಕೆಯ ವಿಚಾರದಲ್ಲಿ ಆರ್ಥಿಕ ತಜ್ಞರಿಂದ ಸಲಹೆ ಪಡೆದು ಮುಂದುವರಿಯುವುದು ಉತ್ತಮ.

ಮ್ಯೂಚುವಲ್‌ ಫಂಡ್‌ಗಳನ್ನು ನಿರ್ವಹಿಸುವ ಅನುಭವಿ ಆರ್ಥಿಕ ತಜ್ಞರು ಷೇರು ಪೇಟೆಯ ಮೇಲೆ ಸದಾ ಕಣ್ಣಿಟ್ಟು, ಉತ್ತಮ ಮತ್ತು ಸುರಕ್ಷಿತ ಷೇರುಗಳನ್ನು ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡುತ್ತಾರೆ. ಭಾರತೀಯ ಷೇರು ನಿಯಂತ್ರಣ ಮಂಡಳಿ (ಸೆಬಿ) ಕೂಡ ಮ್ಯೂಚುವಲ್‌ ಫಂಡ್‌ಗಳ ವಹಿವಾಟಿನ ಮೇಲೆ ಕಣ್ಣಿಟ್ಟಿರುತ್ತದೆ. ಇದಕ್ಕಿಂತ ಭದ್ರತೆ ಇನ್ನೇನು ಬೇಕು.

ನಿಯಂತ್ರಣಕ್ಕೆ ಒಳಪಟ್ಟಿರುವ, ಪಾರದರ್ಶಕ ವ್ಯವಸ್ಥೆ ಇದಾಗಿರುವುದರಿಂದ ಮ್ಯೂಚುವಲ್‌ ಫಂಡ್‌ಗಳು ಹೂಡಿಕೆಗೆ ಅತಿ ಸುರಕ್ಷಿತವಾಗಿವೆ. ಆದ್ದರಿಂದ ಈಗಲೇ ಹೂಡಿಕೆ ಆರಂಭಿಸಿ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯಿರಿ.

ಫಂಡ್ಸ್‌ ಇಂಡಿಯಾ

ಪ್ರತಿಕ್ರಿಯಿಸಿ (+)