ಮಂಗಳವಾರ, ಆಗಸ್ಟ್ 11, 2020
21 °C

ಇ–ವೇ ಬಿಲ್‌ ಬಳಕೆದಾರ ಸ್ನೇಹಿ

ವಿಶ್ವನಾಥ ಎಸ್‌. Updated:

ಅಕ್ಷರ ಗಾತ್ರ : | |

ಇ–ವೇ ಬಿಲ್‌ ಬಳಕೆದಾರ ಸ್ನೇಹಿ

‘ಸರಕು ಸಾಗಣೆ ಉದ್ಯಮದಲ್ಲಿ ಸುಗಮ ವಹಿವಾಟು ಮತ್ತು ತೆರಿಗೆ ವಂಚನೆ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಇ–ವೇ ಬಿಲ್‌ ವ್ಯವಸ್ಥೆ ಜಾರಿಗೊಳಿಸಿದೆ. ಇದಕ್ಕೆಂದೇ ಕೇಂದ್ರ ಸರ್ಕಾರದ ಒಂದು ಜಾಲತಾಣವೂ ಇದೆ. ಆದರೆ ‘ಕ್ಲಿಯರ್ ಟ್ಯಾಕ್ಸ್‌’ ಸಂಸ್ಥೆಯು ವರ್ತಕರ ಅನುಕೂಲಕ್ಕಾಗಿ ಸುಧಾರಿತ ಮತ್ತು ಅತ್ಯಂತ ಸರಳವಾದ ತಂತ್ರಾಂಶವನ್ನು ಸಿದ್ಧಪಡಿಸಿದೆ’ ಎನ್ನುತ್ತಾರೆ ಸ್ಥಾಪಕ ಅರ್ಚಿತ್‌ ಗುಪ್ತಾ.

‘ತೆರಿಗೆ ಲೆಕ್ಕಪತ್ರ ಸಲ್ಲಿಕೆ, ಉಳಿತಾಯ ಹಾಗೂ ನವೋದ್ಯಮ ಸ್ಥಾಪನೆಗೆ ಅಗತ್ಯವಾದ ಸೇವೆಗಳನ್ನು ಒದಗಿಸುವ ಕ್ಲಿಯರ್‌ ಟ್ಯಾಕ್ಸ್‌ ಸಂಸ್ಥೆಯು ಇದೀಗ ಸರಕು ಸಾಗಣೆದಾರರಿಗೆ ತನ್ನದೇ ಆದ ಇ–ವೇ ಬಿಲ್‌ ತಂತ್ರಾಂಶ ಸಿದ್ಧಪಡಿಸಿದೆ. ಇದು ಅತ್ಯಂತ ಸರಳ ಮತ್ತು ಸರ್ಕಾರ ಒದಗಿಸಿರುವ ತಂತ್ರಜ್ಞಾನಕ್ಕಿಂತ ಹೆಚ್ಚು ಸುಧಾರಿತ ತಂತ್ರಾಂಶವಾಗಿದೆ. ದೇಶದ ಸರಕು ಸಾಗಣೆ (ಲಾಜಿಸ್ಟಿಕ್‌) ಉದ್ಯಮದ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಈ ತಂತ್ರಜ್ಞಾನ ನೆರವಾಗಲಿದೆ.

‘ಯಾವುದೇ ಹಂತದಲ್ಲಿಯೂ ಗ್ರಾಹಕರಿಗೆ ಗೊಂದಲ ಮತ್ತು ಸಮಸ್ಯೆ ಎದುರಾಗುವುದಿಲ್ಲ. ಯಾವುದೇ ಅನುಮಾನಗಳು ಮೂಡಿದರೂ ಅದಕ್ಕೆ ತಕ್ಷಣದಲ್ಲಿಯೇ ಪರಿಹಾರ ಸಗಲಿದೆ ’ ಎಂದು ಅವರು ಭರವಸೆ ನೀಡುತ್ತಾರೆ.

ತೆರಿಗೆ ವಂಚನೆ ಮತ್ತು ಕಳ್ಳ ಸಾಗಣೆ ತಡೆಯುವ ಉದ್ದೇಶದಿಂದ ದೇಶದಾದ್ಯಂತ ಜಿಎಸ್‌ಟಿಯಡಿ, ಇ–ವೇ ಬಿಲ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಏಪ್ರಿಲ್‌ 1 ರಿಂದಲೇ ರಾಜ್ಯಗಳ ಮಧ್ಯೆ ಹಾಗೂ ಏಪ್ರಿಲ್‌ 15 ರಿಂದ ರಾಜ್ಯದೊಳಗೆ ಸರಕು ಸಾಗಣೆಗೆ ಬಿಲ್ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಕೇಂದ್ರ ಸರ್ಕಾರದ https://ewaybill.nic.in/ ಜಾಲತಾಣದಲ್ಲಿ ಲಾಗಿನ್‌ ಆಗುವ ಮೂಲಕ ಬಿಲ್ ಸಿದ್ಧಪಡಿಸಬಹುದು.

‘ಸಮರ್ಥ ತಂತ್ರಜ್ಞಾನದ ನೆರವಿಲ್ಲದೇ ಇ–ವೇ ಬಿಲ್ ನಿರ್ವಹಣೆ ಮಾಡುವುದು ಉದ್ಯಮಿಗಳಿಗೆ ದೊಡ್ಡ ತಲೆನೋವಾಗಲಿದೆ. ಉದ್ಯಮದ ಗಾತ್ರವನ್ನು ಪರಿಗಣಿಸದೇ ಸ್ವಯಂಚಾಲಿತ ಇ–ವೇ ಬಿಲ್ ವ್ಯವಸ್ಥೆ ಕಲ್ಪಿಸುವುದರಿಂದ ವಹಿವಾಟು ಇನ್ನಷ್ಟು ಸರಳ ಮತ್ತು ವೇಗವಾಗಿ ನಡೆಯುತ್ತದೆ. ಈ ವ್ಯವಸ್ಥೆಯಿಂದ ಉದ್ಯಮಿಗಳು ಯಾವುದೇ ಸಮಸ್ಯೆ ಇಲ್ಲದೇ ವಹಿವಾಟು ನಡೆಸಬಹುದು.

ಈ ತಂತ್ರಾಂಶದ ಸಹಾಯದಿಂದ ಬಳಕೆದಾರರು ಬೃಹತ್ ಪ್ರಮಾಣದ ಸರಕು ಪಟ್ಟಿ ಅಪ್‌ಲೋಡ್‌ ಮಾಡಬಹುದು ಜೊತೆಗೆ ಇ-ವೇ ಬಿಲ್‌ನ ಭಾಗ-ಬಿ (Part-B) ಅನ್ನು ಇದು ಸ್ವಯಂ ಭರ್ತಿ ಮಾಡುತ್ತದೆ. ಇದು ನಕಲಿ ನಮೂದನ್ನು ತಪ್ಪಿಸುತ್ತದೆ ಹಾಗೂ ಮಾನ್ಯತೆ ಅವಧಿ ಸರಿಯಾಗಿದೆ ಎಂಬುದನ್ನು ಖುದ್ದು ದೃಢಪಡಿಸಿಕೊಳ್ಳುತ್ತದೆ. ಮಾನ್ಯತೆ ಅವಧಿ ಮುಗಿದುಹೋಗಿದ್ದ ಪಕ್ಷದಲ್ಲಿ, ಬಳಕೆದಾರರೇ ಖುದ್ದು ಇ-ವೇ ಬಿಲ್ ಅನ್ನು ಸೃಷ್ಟಿಸಿಕೊಳ್ಳಬಹುದು ಅಥವಾ ಅವಧಿಯನ್ನು ವಿಸ್ತರಿಸಲುಬಹುದು.

ಒಂದು ವೇಳೆ ತಪ್ಪಿದಲ್ಲಿ ಈ ತಂತ್ರಾಂಶವು ತಕ್ಷಣವೇ ಬಳಕೆದಾರರಿಗೆ ಮಾಹಿತಿ ಒದಗಿಸುವುದರ ಜೊತೆಗೆ ಬಾಕಿ ಉಳಿದಿರುವ ಹಾಗೂ ತಪ್ಪಾದ ಇ-ವೇ ಬಿಲ್ ಬಗ್ಗೆ ಸಂಪೂರ್ಣ ವರದಿ ನೀಡುತ್ತದೆ. ಈ ತಂತ್ರಾಂಶವನ್ನು ಬಳಸಿ ಒಂದು ನಿಮಿಷಕ್ಕೆ ಸುಮಾರು 300 ಇ-ವೇ ಬಿಲ್ ಅನ್ನು ಸೃಷ್ಟಿಸಬಹುದು. ಅಷ್ಟೇ ಅಲ್ಲದೆ ಈ ತಂತ್ರಾಂಶವು ತಿಂಗಳ ಜಿಎಸ್‍ಟಿ ರಿಟರ್ನ್ ಅನ್ನು (GST Returns) ಸ್ವಯಂ ಸೃಷ್ಟಿಸುತ್ತದೆ. ಇದರಿಂದ ಜಿಎಸ್‍ಟಿ ಹಾಗೂ ಇ-ವೇ ಬಿಲ್‌ನಲ್ಲಿನ ಮಾಹಿತಿ ವ್ಯತ್ಯಾಸವನ್ನು ತಪ್ಪಿಸಬಹುದು.

‘ವಹಿವಾಟುದಾರರು ಹೆಚ್ಚಿನ ಸಂಖ್ಯೆಯಲ್ಲಿ ಬೆಲೆ‍ಪಟ್ಟಿ (ಇನ್‌ವೈಸ್‌) ಮತ್ತು ಪಾರ್ಟ್‌ ಬಿ ಅಪ್‌ಲೋಡ್‌ ಮಾಡಬಹುದು. ಸರಕು ಸಾಗಿಸುವ ವಾಹನದ ಮಾಹಿತಿಯನ್ನು ‘ಪಾರ್ಟ್‌–ಬಿ’ನಲ್ಲಿ ಸಲ್ಲಿಸಬೇಕು. ಆ ಬಳಿಕವಷ್ಟೇ ಬಿಲ್‌ ಸೃಷ್ಟಿಯಾಗುತ್ತದೆ. ಸೇವ್‌ ಮಾಡುವ ಆಯ್ಕೆ ಇರುವುದರಿಂದ ಕಾಪಿ ಪೇಸ್ಟ್‌ ಮಾಡುವ ರಗಳೆ ತಪ್ಪುತ್ತದೆ.

ಸಾಮಾನ್ಯವಾಗಿ, ವಿವಿಧ ರೀತಿಯ ಸರಕುಗಳನ್ನು ಒಂದೇ ವಾಹನಕ್ಕೆ ಹಾಕಲಾಗುತ್ತದೆ. ಆಟೊ ಅಪ್‌ಡೇಟ್‌ ಆಯ್ಕೆ ಇರುವುದರಿಂದ ಎಲ್ಲಾ ದಾಖಲೆಗಳನ್ನೂ ಏಕಕಾಲಕ್ಕೆ ಪಡೆದುಕೊಳ್ಳಬಹುದು. ಇಲ್ಲಿ ಸಮಯ ಉಳಿತಾಯ ಆಗುತ್ತದೆ. ಉದಾಹರಣೆಗೆ 300 ಇ–ವೇ ಬಿಲ್‌ ಸೃಷ್ಟಿಸಲು ಒಂದು ನಿಮಿಷ ಸಾಕು.

ಈ ತಂತ್ರಾಂಶದ ಸಹಾಯದಿಂದ ಕಂಪನಿಯು ಒಂದು ಕೇಂದ್ರಿಕೃತ ವ್ಯವಸ್ಥೆಯನ್ನು ಸೃಷ್ಟಿಸುವುದರ ಜೊತೆಗೆ ತನ್ನ ಶಾಖೆಗಳಿಗೆ ತೆರಿಗೆ ಅರ್ಜಿ ತುಂಬುವುದಕ್ಕೆ ಸೌಲಭ್ಯ ಒದಗಿಸಬಹುದು. ಗಡಿ ಭಾಗಗಳಿಂದ ದೇಶದ ಬೇರೆ ಬೇರೆ ಸ್ಥಳಗಳಲ್ಲಿರುವ ತನ್ನ ಗೋದಾಮುಗಳನ್ನು ನಿಯಂತ್ರಿಸುವ ಕಂಪನಿಗಳಿಗೆ ಈ ವಿಶೇಷ ಸೌಲಭ್ಯವು ವರದಾನವಾಗಿದೆ ಯಾಕೆಂದರೆ ಪ್ರತಿಯೊಂದು ರಾಜ್ಯಕ್ಕೆ ಇ-ವೇ ಬಿಲ್ ಸೃಷ್ಟಿಸಲು ಪ್ರತ್ಯೇಕ ಲಾಗಿನ್ ಇರುತ್ತದೆ.

ಇ–ವೇ ಬಿಲ್‌ನಲ್ಲಿ ಇಡಬ್ಲ್ಯುಬಿ–01 ಹಾಗೂ ಇಡಬ್ಲ್ಯುಬಿ–02 (ಸಮಗ್ರ) ಎಂದು ಎರಡು ಅರ್ಜಿ ನಮೂನೆಗಳಿವೆ. 

ಇಡಬ್ಲ್ಯುಬಿ–01 

ಇದರಲ್ಲಿ ಪಾರ್ಟ್‌–ಎ ಮತ್ತು ಪಾರ್ಟ್‌–ಬಿ ಎಂದು ಎರಡು ಭಾಗಗಳಿವೆ. ಪಾರ್ಟ್‌–ಎದಲ್ಲಿ ಜಿಎಸ್‌ಟಿಐಎನ್‌, ಸರಕು ಪೂರೈಕೆ ಸ್ಥಳ, ಸರಕು ಪಟ್ಟಿ ಅಥವಾ ಚಲನ್ ಸಂಖ್ಯೆ, ದಿನಾಂಕ, ಸರಕಿನ ಮೌಲ್ಯ, ಎಚ್‌ಎಸ್‌ಎನ್‌ ಕೋಡ್‌, ಸಾಗಣೆಯ ಉದ್ದೇಶ ಹಾಗೂ ಸಾರಿಗೆ ದಾಖಲೆ ಸಂಖ್ಯೆಯ ಮಾಹಿತಿ ಇರಬೇಕು. ಪಾರ್ಟ್‌–ಬಿದಲ್ಲಿ ವಾಹನದ ಸಂಖ್ಯೆ ನಮೂದಿಸಬೇಕು.

ರಾಜ್ಯದಿಂದ ರಾಜ್ಯಕ್ಕೆ ₹ 50 ಸಾವಿರಕ್ಕಿಂತ ಹೆಚ್ಚಿನ ಮೌಲ್ಯದ ಸರಕು ಸಾಗಿಸುವಾಗ ಇದನ್ನು ಹೊಂದುವುದು ಕಡ್ಡಾಯ. ಈ ಮೌಲ್ಯದ ಸರಕು ಮಾರಾಟ ಅಥವಾ ಪೂರೈಕೆಗೆ ಬಿಲ್‌ ಹೊಂದಿರಲೇಬೇಕು. ಬಿಲ್‌ ಸೃಷ್ಟಿಯಾದ ದಿನಾಂಕವೇ ಇ–ವೇ ಬಿಲ್‌ನ ದಿನಾಂಕವಾಗಿರುತ್ತದೆ. ಇದು ಇನ್‌ವೈಸ್‌ನಲ್ಲಿ ಇರುವ ದಿನಾಂಕಕ್ಕೆ ತಾಳೆ ಆಗದೆಯೂ ಇರಬಹುದು. ಸರಕು ಪೂರೈಕೆದಾರರು ಸ್ವಂತ ವಾಹನ ಹೊಂದಿದ್ದರೆ, ಅವರೇ ಬಿಲ್‌ ಸೃಷ್ಟಿಸಬೇಕು. ಒಂದೊಮ್ಮೆ ನೀವು ಸರಕು ಪಡೆಯುವವರಾಗಿದ್ದು, ನೋಂದಣಿ ಆಗಿರದ ಪೂರೈಕೆದಾರರ ಅಥವಾ ಮಾರಾಟಗಾರನಿಂದ ಸರಕು ಪಡೆಯುವುದಾದರೆ ಅಂತಹ ಸಂದರ್ಭದಲ್ಲಿ ಸರಕು ಪಡೆಯುವವರೇ ಬಿಲ್ ಸೃಷ್ಟಿಸಬಹುದು.

ಸರಕು ಸಾಗಣೆ ಉದ್ದೇಶಕ್ಕೆ ವಾಹನಗಳನ್ನು ಎಷ್ಟು ಬಾರಿ ಬೇಕಿದ್ದರೂ ಬದಲಿಸಬಹುದು. ಆದರೆ ಬಿಲ್‌ ಅವಧಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.

ಬಿಲ್‌ ಅವಧಿ ವಿಸ್ತರಣೆಗೆ ಅವಕಾಶ ಇದೆ. ಆದರೆ ಅವಧಿ ಮುಗಿಯುವ ನಾಲ್ಕು ಗಂಟೆಗೂ ಮುನ್ನ  ಆನ್‌ಲೈನ್‌ನಲ್ಲಿ ವಿಸ್ತರಣೆಗೆ ಅರ್ಜಿ ಸಲ್ಲಿಸಬೇಕು.

ಪೂರೈಕೆದಾರನಿಗೆ ಸರಕು ಸಾಗಿಸುವ ವಾಹನದ ಮಾಹಿತಿ ಗೊತ್ತಿಲ್ಲದೇ ಇದ್ದರೆ ಆಗ ಬಿಲ್‌ನ ‘ಪಾರ್ಟ್‌ ಎ’ನಲ್ಲಿ ಇನ್‌ವೈಸ್‌ ಮತ್ತು ಸಾಗಣೆದಾರನ ಗುರುತು ಸಂಖ್ಯೆಯನ್ನು ತುಂಬಬೇಕು. ಆ ಬಳಿಕ ಸಾಗಣೆದಾರ ‘ಪಾರ್ಟ್‌–ಬಿ’ಯಲ್ಲಿ ವಾಹನಕ್ಕೆ ಸಂಬಂಧಿಸಿದ ಮಾಹಿತಿ ತುಂಬಬಹುದು.

ಎರಡು ಬಿಲ್‌ ಸೃಷ್ಟಿಸುವ ಸಂದರ್ಭ

ಬಿಲ್ಲಿಂಗ್‌ ವಿಳಾಸ ಮತ್ತು ಸಾಗಣೆ ವಿಳಾಸವು ಎರಡು ಪ್ರತ್ಯೇಕ ತೆರಿಗೆ ಪಾವತಿದಾರರ ಅಥವಾ ಜಿಎಸ್‌ಟಿಐಎನ್‌ಗೆ ಸೇರಿದ್ದರೆ ಅಂತಹ ಸಂದರ್ಭದಲ್ಲಿ ಎರಡು ಬಿಲ್‌ ಸೃಷ್ಟಿಸಲು ಅವಕಾಶ ಇದೆ. ಇನ್‌ವೈಸ್‌ನಲ್ಲಿ Bill to ಮತ್ತು Ship to ಎಂದು ಎರಡು ವಿಳಾಸ ಇದ್ದರೆ, ಮೊದಲ ಬಿಲ್‌ ಮೊದಲ ಇನ್‌ವೈಸ್‌ಗೆ ಹಾಗೂ ಎರಡನೇ ಬಿಲ್‌ Bill to ಯಿಂದ Ship toಗೆ ನೀಡಬೇಕು.

ಬೆಲೆಪಟ್ಟಿಯಲ್ಲಿ ಬಿಲ್‌ ಟು ಮತ್ತು ಶಿಪ್‌ ಟು ಅಂದರೆ ಸರಕು ತಲುಪಬೇಕಾದ ವಿಳಾಸವು ಕ್ರಮವಾಗಿ ಪ್ರತ್ಯೇಕ ಹೆಸರು ಮತ್ತು ತೆರಿಗೆದಾರರಾಗಿದ್ದರೆ ಎರಡು ಇ–ವೇ ಬಿಲ್ ಸಿದ್ಧಪಡಿಸಬೇಕಾಗುತ್ತದೆ. ಮೊದಲ ಬಿಲ್‌, ಮೊದಲ ಸರಕು ಪಟ್ಟಿಗೆ ಸಂಬಂಧಿಸಿರುತ್ತದೆ. ಎರಡನೇ ಇ–ವೇ ಬಿಲ್‌, ಸರಕು ಪೂರೈಕೆದಾರ ಮತ್ತು ಸರಕನ್ನು ಪಡೆಯುವವರ ಹೆಸರಿನಲ್ಲಿ ಇರಲಿದೆ. ಬೆಲೆ ಪಟ್ಟಿಯ ‘ಬಿಲ್‌ ಟು’ ಮತ್ತು ‘ಶಿಪ್‌ ಟು’ಗಳಲ್ಲಿ ಉಲ್ಲೇಖಿಸಿರುವ ವಿಳಾಸವು ರಾಜ್ಯದ ಒಳಗಿನ ಜಿಎಸ್‌ಟಿಐಎನ್‌ ಅನ್ವಯ ತೆರಿಗೆದಾರರಾಗಿದ್ದರೆ ಒಂದು ಇ–ವೇ ಬಿಲ್‌ ಸೃಷ್ಟಿಯಾಗುತ್ತದೆ. ಒಂದು ವೇಳೆ ‘ಬಿಲ್‌ ಟು’ ನಿರ್ದಿಷ್ಟ ಪ್ರದೇಶವೊಂದರಲ್ಲಿನ ವಹಿವಾಟಿಗೆ ಮತ್ತು ಒಂದೇ ಜಿಎಸ್‌ಟಿಐಎನ್‌ನಲ್ಲಿನ ಹೆಚ್ಚುವರಿ ‘ಶಿಪ್‌ ಟು’ ವಿಳಾಸ ಇದ್ದರೆ ಸರಕುಗಳ ಸಾಗಾಣಿಕೆಗೆ ಒಂದೇ ಇ–ವೇ ಬಿಲ್‌ ಸಾಕಾಗಲಿದೆ. 

**

ದಿನಕ್ಕೆ 10 ಸಾವಿರ ಬಿಲ್‌ 

ಒಂದು ದಿನದಲ್ಲಿ 10 ಸಾವಿರ ಇ–ವೇ ಬಿಲ್‌ ಸೃಷ್ಟಿಸಬಹುದು. ಇದು ಉದ್ಯಮದಿಂದ ಉದ್ಯಮಕ್ಕೆ ಬದಲಾಗುವ ಸಾಧ್ಯತೆ ಇರುತ್ತದೆ. ಜಿಎಸ್‌ಟಿ, ಇ–ವೇ ಬಿಲ್‌ ತಂತ್ರಾಂಶ ಮತ್ತು ಸೇವೆಗಾಗಿ 250ಕ್ಕೂ ಅಧಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆ ಕ್ಲಿಯರ್‌ ಟ್ಯಾಕ್ಸ್ ಸಿಬ್ಬಂದಿ ಸಂಖ್ಯೆ 400ಕ್ಕಿಂತಲೂ ಹೆಚ್ಚಿದೆ.

**

ತಿಳಿದಿರಬೇಕಾದ ಅಂಶಗಳು 

* ಸರಕು ಸಾಗಣೆ ಮೌಲ್ಯ ₹ 50 ಸಾವಿರಕ್ಕಿಂತಲೂ ಹೆಚ್ಚಿದ್ದರೆ ಮಾತ್ರವೇ ಬಿಲ್‌ ಸೃಷ್ಟಿಸಬೇಕು.

* ₹ 50 ಸಾವಿರಕ್ಕಿಂತಲೂ ಕಡಿಮೆ ಇದ್ದಾಗ, ಈ ಮುಂದೆ ಸೂಚಿಸಿರುವ ಎರಡು ಸಂದರ್ಭಗಳಲ್ಲಿ ಬಿಲ್‌ ಸೃಷ್ಟಿಸಬೇಕು.

ಎ.  ಮುಖ್ಯ ಪೂರೈಕೆದಾರನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯದ ವಹಿವಾಟುದಾರನಿಗೆ ಸರಕು ರವಾನಿಸುವುದು

ಬಿ. ಕರಕುಶಲ ವಸ್ತುಗಳಿಗೆ: ಜಿಎಸ್‌ಟಿ ನೋಂದಣಿಯಿಂದ ವಿನಾಯ್ತಿ ಪಡೆದಿರುವ ವಿತರಕರು ರಾಜ್ಯದಿಂದ ರಾಜ್ಯಕ್ಕೆ ಕರಕುಶಲ ವಸ್ತುಗಳನ್ನು ಸಾಗಿಸುವಾಗಲೂ ಬಿಲ್‌ ಹೊಂದಿರಬೇಕು.

* ರಾಜ್ಯದೊಳಗೆ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಸರಕು ಸಾಗಣೆ ದೂರ 10 ಕಿ.ಮೀಗಿಂತಲೂ ಕಡಿಮೆ ಇದ್ದರೆ ವಾಹನದ ಸಂಖ್ಯೆಯನ್ನು ನಮೂದಿಸಬೇಕಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.