ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಭುತ್ವ’ದ ಮೇಲೆ ಚೇತನ್ ಸವಾರಿ

Last Updated 17 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಶಿಕ್ಷಣದ ಬಗ್ಗೆ ಕಥೆಯೊಂದನ್ನು ಹೇಳುವ ‘ಅರಿವು’ ಎನ್ನುವ ಸಿನಿಮಾ ಮಾಡಿದ್ದ ನಿರ್ದೇಶಕ ಆರ್. ರಂಗನಾಥ ಅವರು ಈ ಇನ್ನೊಂದು ಸಿನಿಮಾ ಸಿದ್ಧಪಡಿಸುತ್ತಿದ್ದಾರೆ. ಇದು ರಾಜಕೀಯದ ಕಥೆ ಹೇಳುವ ಸಿನಿಮಾ ಆಗಿರುವ ಕಾರಣ ಇದಕ್ಕೆ ಅವರು ‘ಪ್ರಭುತ್ವ’ ಎಂಬ ಹೆಸರಿಟ್ಟಿದ್ದಾರೆ. ರಂಗನಾಥ ಅವರಿಗೆ ಇದು ಎರಡನೆಯ ಸಿನಿಮಾ. ಇದು ಸತ್ಯಕಥೆಯನ್ನು ಆಧರಿಸಿದೆಯಂತೆ.

ಸಿನಿಮಾ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ರಂಗನಾಥ ಅವರು ತಮ್ಮ ಇಡೀ ತಂಡದ ಜೊತೆಯಾಗಿ ಪತ್ರಿಕಾಗೋಷ್ಠಿ ಕರೆದಿದ್ದರು. ‘ಸಿನಿಮಾ ಕಥೆಯನ್ನು ಕೇಳಿದ ಐದು ಜನ ನಟರು ಇದನ್ನು ಸಿನಿಮಾ ಮಾಡಲು ಆಗದು ಎಂದು ಹೇಳಿದ್ದರು. ಆದರೆ ಕೊನೆಯಲ್ಲಿ, ನಟ ಚೇತನ್ ಚಂದ್ರ ಅಭಿನಯಿಸಲು ಒಪ್ಪಿದರು. ಅರವತ್ತೈದು ದಿನಗಳ ಚಿತ್ರೀಕರಣ ನಡೆದಿದ್ದು, ಇನ್ನೂ ಮೂವತ್ತು ದಿನಗಳ ಚಿತ್ರೀಕರಣ ಬಾಕಿ ಇದೆ’ ಎಂದರು ರಂಗನಾಥ. ಈ ಸಿನಿಮಾದಲ್ಲಿ ಹಿರಿಯ–ಕಿರಿಯ ಕಲಾವಿದರ ದೊಡ್ಡ ದಂಡು ಇದೆ ಎಂಬುದು ಅವರ ಅಂಬೋಣ.

ನಿರ್ಮಾಪಕರು ಯಾವ ವಿಷಯದಲ್ಲೂ ರಾಜಿ ಮಾಡಿಕೊಂಡಿಲ್ಲವಂತೆ. ‘ಹರೀಶ್ ರೈ ಅವರು ಸಿನಿಮಾದಲ್ಲಿ ಒಂದು ಪಾತ್ರ ನಿಭಾಯಿಸಿದ್ದಾರೆ. ಆದರೆ ಅವರ ಪಾತ್ರ ಏನು ಎಂಬುದನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ನೀನಾಸಂ ಅಶ್ವತ್ಥ್ ಅವರದ್ದು ಇದರಲ್ಲಿ ಒಬ್ಬ ಸಿಬಿಐ ಅಧಿಕಾರಿಯ ಪಾತ್ರ’ ಎಂಬ ವಿಷಯವನ್ನು ರಂಗನಾಥ ತಿಳಿಸಿದರು. ಹಣಕ್ಕಾಗಿ ಮತಗಳನ್ನು ಮಾರಿಕೊಳ್ಳಬಾರದು ಎನ್ನುವುದು ಈ ಸಿನಿಮಾ ನೀಡುವ ಸಂದೇಶವಂತೆ.

ರವಿರಾಜ್ ಎಸ್. ಕುಮಾರ್ ಮತ್ತು ಡಾ. ಮೇಘಡಹಳ್ಳಿ ಶಿವಕುಮಾರ್ ಅವರು ಈ ಸಿನಿಮಾ ನಿರ್ಮಾಪಕರು. ಎಮಿಲ್ ಮೊಹಮ್ದದ್ ಸಂಗೀತ ಈ ಚಿತ್ರಕ್ಕಿದೆ.

‘ಈ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನನಗೆ ಖುಷಿ ತಂದಿದೆ. ಇದರಲ್ಲಿ ನಾನು ನಟ ಆದಿಲೋಕೇಶ್ ಅವರ ಜೋಡಿಯಾಗಿ ನಟಿಸಿದ್ದೇನೆ’ ಎಂದರು ನಟಿ ಅನಿತಾ ಭಟ್. ‘ಇದು ರಾಜಕೀಯಕ್ಕೆ ಮಾತ್ರ ಸಂಬಂಧಿಸಿದ ಸಿನಿಮಾ ಅಲ್ಲ’ ಎನ್ನುವ ಮೂಲಕ ಸಿನಿಮಾ ಇನ್ನೇನನ್ನೋ ಹೇಳುತ್ತದೆ ಎಂಬ ಸೂಚನೆ ನೀಡಿದರು ನಟಿ ಪಾವನಾ. ಕೊನೆಯಲ್ಲಿ ಮಾತನಾಡಿದ ನಾಯಕ ನಟ ಚೇತನ್ ಚಂದ್ರ, ‘ನನ್ನದು ಎರಡು ಶೇಡ್‌ಗಳ ಪಾತ್ರ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT