ಇದು ಸಮೃದ್ಧಿಯ ಹಬ್ಬ

ಮಂಗಳವಾರ, ಮಾರ್ಚ್ 26, 2019
31 °C

ಇದು ಸಮೃದ್ಧಿಯ ಹಬ್ಬ

Published:
Updated:
ಇದು ಸಮೃದ್ಧಿಯ ಹಬ್ಬ

ಅಕ್ಷಯ ತೃತೀಯಕ್ಕೆ ಧಾರ್ಮಿಕ ಹಿನ್ನೆಲೆಯೂ ಇದೆ. ಈ ದಿನ ಮಾಡುವ ಶುಭಕಾರ್ಯಗಳು ಯಶಸ್ಸು ತಂದು ಕೊಡುತ್ತವೆ, ಖರೀದಿಸುವ ವಸ್ತುಗಳು ಅಕ್ಷಯವಾಗುತ್ತವೆ ಎಂಬುದು ಜನಪ್ರಿಯ ನಂಬಿಕೆ.

ವೈಶಾಖ ಶುಕ್ಲ ತೃತೀಯವನ್ನು ‘ಅಕ್ಷಯ ತೃತೀಯ’ ಎಂದು ಆಚರಿಸುವುದು ವಾಡಿಕೆ. ಲಕ್ಷ್ಮಿಯ ಪ್ರತಿರೂಪವೆಂದೇ ಪರಿಗಣಿಸುವ ಧನ-ಕನಕಗಳು, ಬೆಲೆಬಾಳುವ ವಸ್ತುಗಳನ್ನು ಅಕ್ಷಯ ತೃತೀಯದ ದಿನ ಖರೀದಿಸಿದರೆ, ವೃದ್ಧಿಯಾಗುತ್ತದೆ ಎನ್ನುವುದು ಜನರ ನಂಬಿಕೆ. ತ್ರೇತಾಯುಗದ ಆರಂಭವಾಗಿದ್ದು ಇದೇ ದಿನ ಎನ್ನುತ್ತಾರೆ ಆಸ್ತಿಕರು.

ಇದು ಗಂಗಾವತರಣವಾದ ದಿನವೂ ಹೌದು. ಭಗೀರಥನ ಅವಿರತ ಪ್ರಯತ್ನವನ್ನು ಮನ್ನಿಸಿ, ವಿಷ್ಣುವಿನ ಪಾದಾರವಿಂದದಿಂದ ಹರಿದಳು ಲೋಕಪಾವನಿ ಗಂಗೆ. ಶಿವನ ನಿಯಂತ್ರಣಕ್ಕೆ ಒಳಪಟ್ಟ ಗಂಗಾಮಾತೆ, ಮೂರು ಲೋಕಗಳಲ್ಲಿ ಸಂಚರಿಸಿ ಭೂಲೋಕದಲ್ಲಿ ನೆಲೆಸಿದ್ದು ಇದೇ ದಿನ ಎಂಬ ನಂಬಿಕೆ ಇದೆ.

ಕೃಷ್ಣ ಸುಧಾಮರ ಸ್ನೇಹ ಜನಜನಿತ. ಕೃಷ್ಣನನ್ನು ಭೇಟಿಯಾಗಲು ಬರುವ ಸುಧಾಮ ಒಂದು ಹಿಡಿ ಅವಲಕ್ಕಿಯನ್ನು ತರುತ್ತಾನೆ. ಅದನ್ನು ತನಗೆ ನೀಡಲು ಹಿಂಜರಿಯುವ ಗೆಳೆಯನಿಂದ ಅವಲಕ್ಕಿ ಪಡೆದು ತೃಪ್ತನಾದ ಕೃಷ್ಣ ಸಕಲ ಐಶ್ವರ್ಯವನ್ನು ಕರುಣಿಸಿದ್ದು ಸಹ ಇದೇ ದಿನ. ಹೀಗಾಗಿ ಅತಿಥಿ ಸತ್ಕಾರದ ಹಿನ್ನೆಲೆಯಲ್ಲಿಯೂ ಈ ದಿನ ಪ್ರಮುಖವಾದದ್ದು.

ಕೃಷ್ಣನ ಸಹೋದರ ಬಲರಾಮನ ಜನ್ಮದಿನವನ್ನಾಗಿಯೂ ಕೆಲವರು ಈ ದಿನವನ್ನು ಆಚರಿಸುತ್ತಾರೆ. ಕೆಲವೆಡೆ ರೈತರು ಬಲರಾಮನ ಆಯುಧವಾಗಿರುವ ನೇಗಿಲನ್ನು ಪೂಜಿಸುತ್ತಾರೆ. ಅಷ್ಟದಿಕ್ಪಾಲಕರಲ್ಲಿ ಒಬ್ಬನಾಗಿರುವ ಕುಬೇರ ಅಕ್ಷಯ ತೃತೀಯದ ಶುಭದಿನದಂದೇ ಮಹಾಲಕ್ಷ್ಮಿಳನ್ನು ಪೂಜಿಸಿ ಧನ್ಯನಾದ ಎಂಬ ಉಲ್ಲೇಖ ಪುರಾಣದಲ್ಲಿದೆ. ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ಪರಶುರಾಮನ ಅವತಾರವು ಅಕ್ಷಯ ತೃತೀಯದ ಪರ್ವದಿನದಂದೇ ಆರಂಭವಾಗುತ್ತದೆ.ಸಮುದ್ರ ಮಥನಕ್ಕೂ ಅಕ್ಷಯ ತೃತೀಯಕ್ಕೂ ಸಂಬಂಧವಿದೆ. ಸಮುದ್ರಮಥನ ನಡೆಯುವಾಗ ಲಕ್ಷ್ಮಿ ಪ್ರಾದುರ್ಭಾವಗೊಂಡಿದ್ದು ಇದೇ ದಿನ. ಧರ್ಮರಾಯ ಮತ್ತು ಕೌರವರ ನಡುವಣ ಜೂಜು ಹಾಗೂ ದ್ರೌಪದಿಯ ವಸ್ತ್ರಾಪರಣ ಪ್ರಸಂಗಗಳು ಸಹ ಅಕ್ಷಯ ತೃತೀಯದೊಂದಿಗೆ ಬೆಸೆದುಕೊಂಡಿವೆ. ರಾಜ್ಯ, ಧನಕನಕ, ಸಹೋದರರು ಕೊನೆಗೆ ಪತ್ನಿ ದ್ರೌಪದಿಯನ್ನು ಪಣವಾಗಿರಿಸಿ ಜೂಜಿನಲ್ಲಿ ಯುಧಿಷ್ಠಿರ ಸೋಲುತ್ತಾನೆ. ಆಗ ದುರ್ಯೋಧನ, ದುಶ್ಶಾಸನ, ಶಕುನಿಯಿಂದ ಅಪಮಾನಿತಳಾದ ಪಾಂಚಾಲಿಯ ಸೀರೆಯನ್ನು ದುಶ್ಶಾಸನ ಸೆಳೆಯಲು ಆರಂಭಿಸುತ್ತಾನೆ. ಆಗ ಆಕೆ ಕೃಷ್ಣನ ಮೊರೆಹೋಗುತ್ತಾಳೆ. ಕೃಷ್ಣ ಸೀರೆಯನ್ನು ಅಕ್ಷಯವಾಗಿಸಿ, ಆಕೆಯ ಮಾನ ರಕ್ಷಿಸಿದ್ದು ಈ ಶುಭದಿನದಂದೇ. ಪಾಂಡವರು ವನವಾಸದಲ್ಲಿರುವಾಗ ಅತಿಥಿ ಸತ್ಕಾರಕ್ಕಾಗಿ ಅಕ್ಷಯ ಪಾತ್ರೆ ನೀಡಿ ಹರಸಿದ ಪವಿತ್ರ ದಿನ ಇದು ಎಂಬ ನಂಬಿಕೆಯೂ ಇದೆ.

ಶಂಕರಾಚಾರ್ಯರ ಬದುಕಿನೊಂದಿಗೂ ಅಕ್ಷಯ ತೃತೀಯ ಬೆಸೆದುಕೊಂಡಿದೆ. ಭಿಕ್ಷೆ ಯಾಚಿಸುತ್ತಾ ದೇಶ ಪರ್ಯಟನೆ ಮಾಡುತ್ತಿದ್ದ ಶಂಕರಾಚಾರ್ಯರಿಗೆ ಓರ್ವ ಮಹಿಳೆ ಭಿಕ್ಷೆಯ ರೂಪದಲ್ಲಿ ನೆಲ್ಲಿಕಾಯಿ ನೀಡುತ್ತಾಳೆ. ಆಕೆಗೆ ಶಂಕರಾಚಾರ್ಯರು ತಮ್ಮ ಮಂತ್ರಶಕ್ತಿಯಿಂದ ಚಿನ್ನದ ನೆಲ್ಲಿಕಾಯಿ ಸಿಗುವಂತೆ ಮಾಡುತ್ತಾರೆ. ಈ ಪವಾಡ ನಡೆದದ್ದು ಅಕ್ಷಯ ತೃತೀಯದಂದು ಎಂಬ ನಂಬಿಕೆ ಜನಜನಿತ.

ಬದರಿ ನಾರಾಯಣ ದೇಗುಲದ ಬಾಗಿಲನ್ನು ಪ್ರತಿವರ್ಷ ದೀಪಾವಳಿ ಪಾಡ್ಯದಂದು ಹಾಕಲಾಗುತ್ತದೆ. ಅದನ್ನು ಅಕ್ಷಯ ತೃತೀಯದಂದು ತೆರೆಯಲಾಗುತ್ತದೆ. 6 ತಿಂಗಳು ಬಾಗಿಲು ಹಾಕಿದ್ದರೂ, ದೀಪ ಆರದೆ ಉರಿಯುತ್ತಿರುತ್ತದೆ ಎ‌ನ್ನುವುದು ಭಕ್ತರ ನಂಬಿಕೆ. ವ್ಯಾಸರು ಮಹಾಭಾರತ ಬರೆಯುವುದನ್ನು ಆರಂಭಿಸಿದ್ದು ಇದೇ ದಿನ ಎಂದು ಭಕ್ತರು ನಂಬುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry