ಬುಧವಾರ, ಆಗಸ್ಟ್ 5, 2020
20 °C

ಕನಸಿನ ಹಕ್ಕಿ ಕೈಹಿಡಿಯಿತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಸಿನ ಹಕ್ಕಿ ಕೈಹಿಡಿಯಿತು

ಮಾಡೆಲಿಂಗ್ ಯುವಕ-ಯುವತಿಯರ ಆಕರ್ಷಣೆಯ ಕ್ಷೇತ್ರ. ನೋಡಲು ಚೆನ್ನಾಗಿದ್ದೀನಿ ಅನಿಸಿದ್ರೆ ಸಾಕು ಮಾಡೆಲಿಂಗ್ ಕನಸು ಮನಸಿನಲ್ಲಿ ಗೂಡುಕಟ್ಟುತ್ತೆ. ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ಎಲ್ಲರಿಗೂ ಇಲ್ಲಿ ಯಶಸ್ಸು ಸಿಕ್ಕೇ ಬಿಡುತ್ತೆ ಎನ್ನಲು ಆಗದು. ಅಂದ-ಅಭಿರುಚಿಯ ಜೊತೆಗೆ ಪರಿಶ್ರಮ, ಛಲ, ಜಾಣ್ಮೆಯೂ ಮುಖ್ಯ.

ಮಂಗಳೂರಿನಲ್ಲಿ ಈಚೆಗೆ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ‘ಮಿಸ್ಟರ್ ಇಂಡಿಯಾ’ ಆಗಿ ಆಯ್ಕೆಯಾದ ದೀಪಕ್ ಶೆಟ್ಟಿ ಮಾಡೆಲಿಂಗ್ ಲೋಕದಲ್ಲಿ ಭರವಸೆ ಮೂಡಿಸಿರುವ ಪ್ರತಿಭೆ. ಮೂಡುಬಿದಿರೆಯವರಾದ ಇವರು ಮಾಡೆಲಿಂಗ್ ಕ್ಷೇತ್ರದಲ್ಲಿ ಹೊಸ ಮಿಂಚು ಹರಿಸಿದ್ದಾರೆ. ದೇಶದ ವಿವಿಧೆಡೆಗಳಿಂದ 880 ಮಂದಿ ಆಕಾಂಕ್ಷಿಗಳಿದ್ದರು. ಅಂತಿಮ ಸುತ್ತಿಗೆ 25 ಮಂದಿ ಆಯ್ಕೆ ಯಾಗಿದ್ದರು. ಅವರೆಲ್ಲರನ್ನೂ ಹಿಂದಿಕ್ಕಿದ ದೀಪಕ್ ‘ಮಿ.ಇಂಡಿಯಾ’ ಪಟ್ಟದ ಜೊತೆಗೆ ‘ಬೆಸ್ಟ್ ರ‍್ಯಾಂಪ್ ವಾಕ್’ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು. ಇದೀಗ ಪ್ಯಾರಿಸ್‌ನಲ್ಲಿ ನಡೆಯಲಿರುವ ‘ಮಿ. ಗ್ಲೋರಿ ಆಫ್ ಯುನಿವರ್ಸ್’ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮೂಡುಬಿದಿರೆಯಲ್ಲೇ ಸಿವಿಲ್ ಇಂಜಿನಿಯರಿಂಗ್ ಓದಿರುವ ದೀಪಕ್ ಉದ್ಯೋಗ ಅರಸುತ್ತಾ ಹೊರಟಿದ್ದು ದೂರದ ದುಬೈಗೆ. ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದ ದೀಪಕ್, ಎಂದೂ ತಾನೂ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಡುವ ಬಗ್ಗೆ ಯೋಚಿಸಿದವರಲ್ಲ. ಇದೆಲ್ಲಾ ಆಕಸ್ಮಿಕ ಅನ್ನೋದು ಅವರ ಮಾತು.

ಅಬುದಾಬಿಯಲ್ಲಿ ಕೆಲಸ ಮಾಡುವಾಗ ಮಾಡೆಲಿಂಗ್ ಸಂಬಂಧಿಸಿದ ವಿಡಿಯೊಗಳನ್ನು ನೋಡುವ ಹವ್ಯಾಸ ಬೆಳೆಸಿಕೊಂಡರು. ಈ ಹವ್ಯಾಸವೇ ಅವರಿಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಬೆಳಗುವ ಆಸೆಯನ್ನು ಬೆಳೆಸಿತು. 2015ರಲ್ಲಿ ‘ಮಿಸ್ಟರ್ ಬಂಟ್ ಯುಎಇ’ನಲ್ಲಿ ಸ್ಪರ್ಧಿಸಿದ ದೀಪಕ್ ನಂತರ ಗೆಲುವಿನ ನಗೆ ಬೀರಿದರು. ಮಿಸ್ಟರ್ ದುಬೈ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ದೀಪಕ್, 2017ರಲ್ಲಿ ‘ಮಿಸ್ಟರ್ ಬೆಂಗಳೂರು’ ಆಗಿ ಹೊರಹೊಮ್ಮಿದರು. ‘ಪಾಪ್ಯುಲರ್ ಫೇಸ್ ಇನ್ ಬೆಂಗಳೂರು’ ಅವರ ಆತ್ಮವಿಶ್ವಾಸ ಹೆಚ್ಚಿಸಿತು.

‘ಬೆಸ್ಟ್ ಫಿಸಿಕ್’ ಸೇರಿದಂತೆ ಹಲವು ಪುರಸ್ಕಾರ ಪಡೆದಿರುವ ದೀಪಕ್ ಅವರಿಗೆ ಒಳ್ಳೆಯ ನಟನಾಗಿ ಗುರುತಿಸಿಕೊಳ್ಳಬೇಕು ಅನ್ನುವ ಕನಸು ಸಹ ಇದೆ.‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.