ಶನಿವಾರ, ಜೂನ್ 6, 2020
27 °C

ಎಲ್ಲ ತತ್ವದೆಲ್ಲೆ ಮೀರಿ...

ವಿಶಾಲಾಕ್ಷಿ ಅಕ್ಕಿ Updated:

ಅಕ್ಷರ ಗಾತ್ರ : | |

ಎಲ್ಲ ತತ್ವದೆಲ್ಲೆ ಮೀರಿ...

– ನಿಜಗುಣಾನಂದ ಸ್ವಾಮೀಜಿ, ತೋಂಟದಾರ್ಯ ಶಾಖಾ ಮಠ, ಮುಂಡರಗಿ

ಸಕಲ ಜೀವಗಳ ಲೇಸನ್ನೇ ಬಯಸುವ ಬಸವ ಧರ್ಮವು ಇಂದಷ್ಟೇ ಅಲ್ಲ; ಎಂದೆಂದಿಗೂ ಪ್ರಸ್ತುತ. ಆದರೆ, ಅದನ್ನು ಒಪ್ಪಿಕೊಂಡರೂ, ಅಪ್ಪಿಕೊಳ್ಳುವ ಧೈರ್ಯ ತೋರಿದವರು ಕಡಿಮೆ.

ಅದೇನೂ ಸಿರಿ ಬೇಡುವುದಿಲ್ಲ. ಬಣ್ಣದ ಮಾತು ಬೇಕಿಲ್ಲ. ಅದಕ್ಕಾಗಿ ವೇಷ ಹಾಕಬೇಕಿಲ್ಲ. ಬೇಕಿರುವುದು ವೇಷ ಕಳಚುವ ಮನೋಬಲ. ಆ ಮನೋಬಲ ಇದ್ದ ಆತ್ಮಗಳೆಲ್ಲ ಬಸವನೇ. ನಡೆ–ನುಡಿಯೆಲ್ಲ ಬಸವ ಧರ್ಮವೇ. ಅದಕ್ಕಾಗಿಯೇ ಹಿಂದೆಂದಿಗಿಂತಲೂ ಇಂದು ಹೆಚ್ಚೆಚ್ಚು ಬಸವಣ್ಣ ನವರು ಬೇಕಾಗಿದ್ದಾರೆ. ಬಸವ ತತ್ವ ಬೇಕಿದೆ.

ಭ್ರಷ್ಟಾಚಾರದ ವ್ಯಾಧಿ, ಅತ್ಯಾಚಾರವೆಂಬ ಅಸ್ವಸ್ಥತೆ, ಕೂಡಿಡುವ ಕೇಡುಬುದ್ಧಿ, ಧರ್ಮ–ಭಕ್ತಿಯ ಹೆಸರಿನಲ್ಲಿ ನಡೆಯುವ ಶೋಷಣೆ, ಬಡವ–ಬಲ್ಲಿದರೆಂಬ ತರತಮದ ಸಾಮಾಜಿಕ ವಿಕಾರಗಳಿಗೆ ಮದ್ದಾಗಿ; ಮಾನವನ ಮಿತಿಮೀರಿದ ಆಸೆಗೆ ಬರಿದಾಗುತ್ತಿರುವ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯ ಹೊಣೆಯನ್ನು ಎಚ್ಚರಿಸುವ ಗುರುವಾಗಿ ‘ಬಸವ ತತ್ವ’ ಎಂದೆಂದಿಗೂ ನಮ್ಮೊಡನೆ, ನಮ್ಮೊಳಗೆ ಇರಬೇಕಾದದ್ದು.

ಸಮಯಕ್ಕನುಸಾರವಾಗಿ ಶರಣರ ನಾಲ್ಕು ವಚನಗಳನ್ನು ಉಲ್ಲೇಖಿಸುವುದರಿಂದ ಯಾರೂ ಬಸವ ತತ್ವ ಪ್ರತಿಪಾದಕರಾಗುವುದಿಲ್ಲ. ಅವುಗಳನ್ನು ಅರ್ಥೈಸಿಕೊಂಡು, ಅಳವಡಿಸಿಕೊಂಡಾಗಲೇ ಅವುಗಳ ಮಹತ್ವದ ಅರಿವಾಗುತ್ತದೆ. ಇಲ್ಲದೇ ಹೋದಲ್ಲಿ ಸಮಾನತೆ, ವೈಚಾರಿಕತೆಯ ಪ್ರತಿಪಾದಕರು ಎನ್ನುವ ವೇಷ ತೊಟ್ಟು ಓಡಾಡಬಹುದಷ್ಟೆ. ಅಸಲಿಗೆ, ಇಂಥ ಡಾಂಭಿಕತೆಯ ವೇಷ ಕಳಚುವುದೇ ಬಸವ ತತ್ವದ ಧ್ಯೇಯ.

ಈ ತತ್ವ, ಪ್ರಕೃತಿಯ ಎಲ್ಲ ಜೀವಗಳ ಬದುಕುವ ಹಕ್ಕನ್ನು ಪ್ರತಿಪಾದಿಸುತ್ತದೆ. ಅಪಾರ ಜನರು 2ನೇ ಮಹಾಯುದ್ಧದಲ್ಲಿ ಜೀವತೆತ್ತ ಬಳಿಕ, ವಿಶ್ವಸಂಸ್ಥೆಯು ಮಾನವ ಹಕ್ಕುಗಳ ಬಗ್ಗೆ ಮಾತನಾಡಿತು. ಆದರೆ, 900 ವರ್ಷಗಳ ಹಿಂದೆಯೇ ಮಾನವ ಹಕ್ಕಿನ ಸಂವಿಧಾನಕ್ಕಾಗಿ ಹೋರಾಡಿದವರು, ಮನುಷ್ಯ ಘನತೆಯನ್ನು ಎತ್ತಿಹಿಡಿದವರು ಬಸವಣ್ಣ. ಮನುಷ್ಯ ಸಮಾಜದಲ್ಲಿ ಹುಟ್ಟಿರುವ ಎಲ್ಲರೂ ಸಮಾನರು ಎಂದು ಪ್ರತಿಪಾದಿಸಿದವರು. ಅವರ ಧರ್ಮದ ವ್ಯಾಖ್ಯಾನವೇ ಬೇರೆ. ಅವರೆಂದೂ ಮನುಷ್ಯ ನಿರ್ಮಿತವಾದ ಧರ್ಮ ಬೋಧನೆಗೆ ಮುಂದಾಗಲಿಲ್ಲ. ಅಂಥ ಆಚಾರ–ವಿಚಾರಗಳನ್ನು ಹೇರಲು ಇಚ್ಛಿಸಲಿಲ್ಲ. ಅವರು ನಿಸರ್ಗದಲ್ಲಿರುವ ಧರ್ಮವನ್ನೇ ಮನುಷ್ಯರ ಹತ್ತಿರಕ್ಕೆ ತಂದವರು. ಪಶು–ಪಕ್ಷಿ–ಪ್ರಾಣಿಗಳಲ್ಲಿರುವ ಬಂಧುತ್ವವನ್ನು ನಮಗೆ ಉದಾಹರಣೆಯಾಗಿ ನೀಡಿ, ಬದುಕಲಿಕ್ಕೆ ಕಲಿಸಿದವರು. ಬಸವಣ್ಣ ಹೇಳುತ್ತಾರೆ:

‘ಕಾಗೆಯೊಂದಗಳು ಕಂಡರೆ / ಕೂಗಿ ಕರೆಯದೇ ತನ್ನ ಕುಲವನೆಲ್ಲವನು / ಕೋಳಿಯೊಂದು ಗುಟುಕು ಕಂಡರೆ / ಕೂಗಿ ಕರೆಯದೇ ತನ್ನ ಕುಲವನೆಲ್ಲವನು / ಶಿವಭಕ್ತನಾಗಿದ್ದು ಭಕ್ತಿ ಪಕ್ಷವಿಲ್ಲದಿದ್ದರೆ / ಕಾಗೆ ಕೋಳಿಗಿಂತ ಕರಕಷ್ಟ’

ಪ್ರಾಣಿ-ಪಕ್ಷಿಗಳು ಹೇಗೆ ಕೂಡಿ ಬಾಳುತ್ತವೆಯೋ ಹಾಗೆಯೇ ಮನುಷ್ಯರೆಲ್ಲ ಕೂಡಿ ಬಾಳಬೇಕು ಎಂಬುದೇ ಬಸವಣ್ಣನವರ ಧರ್ಮ. ಅವರಿಗೆ ಗೋತ್ರದ ಧರ್ಮ ಬೇಕಾಗಿಲ್ಲ. ವಂಶಾವಳಿಯ ಧರ್ಮ ಬೇಕಾಗಿಲ್ಲ. ಜಾತಿ ವ್ಯವಸ್ಥೆಯ ಧರ್ಮ ಬೇಕಿಲ್ಲ. ಅಗ್ರಹಾರದ ಧರ್ಮ ಬೇಕಿಲ್ಲ. ಮನುಷ್ಯ ಕುಲದ ಉಳಿವಿಗಾಗಿ ಬಸವಣ್ಣನವರಿಗೆ ಬೇಕಾದುದು ಭಕ್ತಿಪಕ್ಷವಾದ ಧರ್ಮ.

ಹಾಗೆ ನೋಡಿದರೆ, ಅವರ ದೃಷ್ಟಿಯ ಭಕ್ತಿಯೂ ಭಿನ್ನವೇ. ಭಕ್ತಿ ಎಂಬುದು ಮೋಸವಾಗಿ, ಮೂಢನಂಬಿಕೆಯಾಗಿ, ಶೋಷಣೆಯಾದ ಹೊತ್ತಿನಲ್ಲಿ, ಮೇಲ್ವರ್ಗದವರೆನ್ನಿಸಿಕೊಂಡವರಿಗೆ ಸೀಮಿತವಾದುದು ಎನ್ನುವಂಥ ವ್ಯವಸ್ಥೆಯಲ್ಲಿ, ಬಸವಣ್ಣ ಭಕ್ತಿಗೆ ಹೊಸ ವ್ಯಾಖ್ಯಾನ ನೀಡುತ್ತಾರೆ. ‘ಭಕ್ತಿ ಇಲ್ಲದ ಬಡವ ನಾನಯ್ಯ / ಕಕ್ಕಯ್ಯನ ಮನೆಯಲು ಬೇಡಿದೆ / ದಾಸಯ್ಯನ ಮನೆಯಲು ಬೇಡಿದೆ / ಚನ್ನಯ್ಯನ ಮನೆಯಲು ಬೇಡಿದೆ / ಎಲ್ಲ ಪುರಾತರು ನೆರೆದು ಭಕ್ತಿ ಭಿಕ್ಷೆಯನಿಕ್ಕಿದರೆ ಎನ್ನ ಪಾತ್ರೆ ತುಂಬಿತ್ತು’ ಎನ್ನುತ್ತಾರೆ ಬಸವಣ್ಣ.

ಭಕ್ತಿ ಚಳವಳಿಯು ಆಡಂಬರದ, ಶೋಷಣೆಯ ಭಕ್ತಿಯ ವಿರುದ್ಧ ನಡೆದ ಹೋರಾಟ. ಕಾಯಕದ ಜೀವನದ ಪ್ರೀತಿಯ ಕಕ್ಕಯ್ಯ, ದಾಸಯ್ಯ ಅವರ ಭಕ್ತಿ ತನಗೆ ಬೇಕೆಂದು, ಅವರ ಮನೆಯಲ್ಲಿ ಬೇಡಿದ್ದಾಗಿ ಬಸವಣ್ಣ ಹೇಳುತ್ತಾರೆ.

ಪ್ರಕೃತಿ ರಕ್ಷಣೆಯ ಬೋಧೆ: ‘ನೀರ ಕಂಡಲ್ಲಿ ಮುಳುಗುವರಯ್ಯ... ಮರವ ಕಂಡರೆ ಸುತ್ತುವರಯ್ಯ’ ಎಂಬ ಅವರ ವಚನದ ಸಾಲುಗಳು ಮೂಢನಂಬಿಕೆ ಬಯಲು ಮಾಡುವುದರ ಜೊತೆಗೆ - ನೀರು ಗಲೀಜಾಗುವ, ಮರಕ್ಕೆ ಹಾನಿಯಾಗುವ ಎಚ್ಚರಿಕೆಯನ್ನೂ ನೀಡುತ್ತವೆ. ಕಲ್ಲನಾಗರನಿಗೆ ಹಾಲೆರೆದು ದಿಟದ ನಾಗರವ ಕೊಲ್ಲುವ ಮನಸ್ಥಿತಿಯ ಬಗ್ಗೆ ಹೇಳುವಾಗಲೂ ಮೂಢನಂಬಿಕೆಯನ್ನು ವಿರೋಧಿಸುವ, ಅದೇ ವೇಳೆಗೆ ಜೀವಪರವಾದ ದನಿಯೂ ಕೇಳುತ್ತದೆ. ಕೇಳಿಸಿಕೊಳ್ಳುವ ವ್ಯವಧಾನ ನಮಗಿದೆಯೇ? ಬದುಕಿನ ಸಂವಿಧಾನದಲ್ಲಿ, ದೈವ ಸೃಷ್ಟಿಯ ಪ್ರತಿಯೊಬ್ಬರೂ ನಿಸರ್ಗದಲ್ಲಿ ಬದುಕಬೇಕು; ಬದುಕಲು ಬಿಡಬೇಕು. ಇನ್ನು ಸಾಮಾಜಿಕ ಸಂವಿಧಾನದಲ್ಲಿ ಮೇಲು–ಕೀಳು, ಹೆಣ್ಣು–ಗಂಡೆಂಬ ಭೇದವಿಲ್ಲದೇ ಬಾಳಬೇಕು. ಜೀವವಿಕಾಸಕ್ಕಾಗಿನ ಅಂಗಾಂಗಗಳ ಭಿನ್ನತೆಯು ಶೋಷಣೆಗೆ ಕಾರಣವಾಗಬಾರದು ಎನ್ನುತ್ತಾರೆ ಬಸವಣ್ಣ. ಅದಕ್ಕಾಗಿಯೇ, ‘ಮೊಲೆ ಮೂಡಿ ಬಂದರೆ ಹೆಣ್ಣೆಂಬರು / ಗಡ್ಡ ಮೀಸೆ ಬಂದರೆ ಗಂಡೆಂಬರು / ನಡುವೆ ಸುಳಿವಾತ್ಮ ಗಂಡೂ ಅಲ್ಲ ಹೆಣ್ಣು ಅಲ್ಲ’ ಎನ್ನುತ್ತಾರೆ. ‘ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ? / ಊರೊಳಗೆ ಬ್ರಾಹ್ಮಣ ಬಯಲು, ಊರ ಹೊರಗೆ ಹೊಲೆ ಬಯಲೆಂದುಂಟೆ?’ - ಎಲ್ಲಿ ನೋಡಿದರೂ ಬಯಲೊಂದೇ ಎಂದು ಅಸಮಾನತೆಯ ನೆಲೆಗಳನ್ನು ಗುರುತಿಸುವ ಶರಣೆ ಬೊಂತಾತಾಯಿಯ ಮಾತಿನಲ್ಲಿ, ಮನುಷ್ಯ ಸಮಾನತೆಯ ಪ್ರತಿಪಾದನೆಯೊಂದೇ ಮೂಲಸೆಲೆಯಾಗಿದೆ. ‘ಮಾದಾರ ಚೆನ್ನಯ್ಯನ ಮನೆಯಲ್ಲಿ ಉಂಡ ಕಾರಣ ವೇದ ನಡುಗಿತ್ತು’ ಎಂಬುದನ್ನು ಇಂದು, ದಲಿತರ ಮನೆಯಲ್ಲಿನ ಊಟ ಮಾಡುವ ಪ್ರಹಸನಕ್ಕೆ ಹೋಲಿಸಲಾಗದು. ಭಕ್ತಿಗೆ ಬಡವ–ಬಲ್ಲಿದ, ಮೇಲು–ಕೀಳು, ಹೆಣ್ಣು–ಗಂಡೆಂಬ ಭೇದ ಇಲ್ಲ ಎಂದು ಸಾರಿದ್ದು ಬಸವ ಧರ್ಮ. ಅದರ ದೃಷ್ಟಿಯಲ್ಲಿ ಧರ್ಮ, ತತ್ವ ಎಂಬುದು ಮುಕ್ತಿಗೆ ಸಂಬಂಧಿಸಿದ್ದಲ್ಲ; ಅವೆರಡೂ ಇರುವುದು ಕೂಡಿ ಬಾಳುವುದಕ್ಕಾಗಿ. ಮುಕ್ತಿ ಎಂಬುದು ಕೂಡಿ ಬಾಳುವುದರಲ್ಲಿನ ಸಂತೋಷದ ಅನುಭಾವ. ಇದನ್ನು ಹೊರತುಪಡಿಸಿ, ಈ ಸೃಷ್ಟಿಯೊಳಗೆ ಬೇರೇನನ್ನೂ ಕಾಣಲು ಇಷ್ಟಪಡದ ಧರ್ಮ.ಪ್ರತಿಯೊಬ್ಬರೂ ದುಡಿದು ಉಣ್ಣಬೇಕು ಎಂಬುದು ಅವರ ತತ್ವ. ಇದು ಆಚರಣೆಗೆ ಬಂದರೆ ದೇಶದಲ್ಲಿ ಭ್ರಷ್ಟಾಚಾರ ಇರುವುದಿಲ್ಲ, ಅತ್ಯಾಚಾರಗಳು ನಿಲ್ಲುತ್ತವೆ.

ಬಸವಣ್ಣನವರ ದೃಷ್ಟಿಯಲ್ಲಿ ಶೇಖರಣೆ ವ್ಯವಸ್ಥೆ, ಕೂಡಿಡುವುದು ದೊಡ್ಡ ಅಪರಾಧ. ಇದರಿಂದಾಗಿಯೇ ಕಳ್ಳತನ, ಮೋಸ, ವಂಚನೆಗಳು ಆರಂಭವಾಗುತ್ತವೆ. ಬಡವ–ಬಲ್ಲಿದ ಭೇದಭಾವ ಶುರುವಾಗುತ್ತದೆ. ತರತಮದ ನಿವಾರಣೆಗಾಗಿ ಬಸವಣ್ಣ, ಅಂದಂದಿಗೆ ದುಡಿದು ಉಣ್ಣುವುದನ್ನು ಪ್ರತಿಪಾದಿಸಿದ್ದ. ಗಳಿಸಬೇಕು, ಗಳಿಸಿದ್ದನ್ನು ಬಳಸಬೇಕು, ಸತ್ಯಶುದ್ಧ ಕಾಯಕ ಮಾಡಬೇಕು. ಅದರಿಂದ ಬಂದುದರಿಂದ ಸತ್ಯಶುದ್ಧವಾದ ದಾಸೋಹ ಮಾಡಬೇಕು. ಅದನ್ನು ಅನುಸರಿಸಿಯೇ ನಡೆದ ಆಯ್ದಕ್ಕಿ ಲಕ್ಕಮ್ಮ, ‘ಈಸಕ್ಕಿಯಾಸೆ ನಮಗೇತಕಯ್ಯ?’ ಎಂದು ಪತಿಯನ್ನೇ ಪ್ರಶ್ನಿಸುವ ಆತ್ಮಬಲದವಳಾಗುತ್ತಾಳೆ. ಖಾಕಿ– ರಕ್ಷಣೆಯ ಕುರುಹು, ಖಾದಿ– ಸೇವೆಯ ಕುರುಹು, ಕಾವಿ– ತ್ಯಾಗದ ಕುರುಹಾಗಿರಬೇಕು. ಆದರೆ ಪರಿಸ್ಥಿತಿ ಹಾಗಿಲ್ಲ. ಎಲ್ಲೋ ಒಂದು ಕಡೆ ನಮ್ಮನ್ನು ನಾವು ಸಂಪೂರ್ಣವಾಗಿ ಕಳೆದುಕೊಂಡು, ಹುಡುಕುವಂಥ ಪರಿಸ್ಥಿತಿಗೆ ಬಂದಿದ್ದೇವೆ. ರಾಜಕಾರಣಿಗಳ ಕಡೆಗಷ್ಟೇ ಬೆರಳು ಮಾಡುವುದಕ್ಕಿಂತ ಮೂರೂ ವರ್ಗಗಳೂ ಬದಲಾಗಬೇಕು. ರಾಜಕಾರಣಿಗಳು ಬಸವಾದಿ ಶರಣರ ಹೆಸರು ಹೇಳುತ್ತಾರೆಂದರೆ ಅದು ತಾವು ಸಮಾನತೆಯ ಪ್ರತಿಪಾದಕರು ಎಂದು ತೋರಿಸಿಕೊಳ್ಳಲು ಮಾತ್ರ. ಕಾವಿಧಾರಿಗಳು ಹೇಳುತ್ತಾರೆಂದರೆ ಅದು ತಾವು ವೈಚಾರಿಕತೆಯ ಪರವಾಗಿರುವುದಾಗಿ ಹೇಳಿಕೊಳ್ಳಲು! ಹೀಗೆ ಮೇಲ್ನೋಟದಿಂದ ಬಸವಣ್ಣನ ಹೆಸರನ್ನು ಬಳಸಿಕೊಳ್ಳುವುದನ್ನು ಬಿಡಬೇಕು. ಸಾಸಿವೆಯಷ್ಟು ಸುಖಕ್ಕಾಗಿ ಬಸವ ತತ್ವಗಳ ಬಳಕೆ ಬೇಡ; ಸ್ವಸ್ಥ, ದೀರ್ಘ ಸಮಾಜದ ಬದುಕಿಗೆ ಬೇಕು. ಆಗ ಅವರೂ ಬದಲಾಗುತ್ತಾರೆ; ಸಮಾಜವೂ ಬದಲಾಗುತ್ತದೆ.

ಕರಣಿಕರು, ದಂಡನಾಯಕರು, ಪ್ರಧಾನಮಂತ್ರಿ, ಅನುಭಾವ ಮಂಟಪದ ನಿರ್ಮಾಪಕ ಆಗಿದ್ದ ಬಸವಣ್ಣನವರು, ಪ್ರಭು ಪರಂಪರೆಯಲ್ಲಿ ಪ್ರಜಾಪ್ರಭುತ್ವವನ್ನು ಸಾಕಾರವಾಗಿಸಿದವರು. ಈ ಕಾರಣಕ್ಕಾಗಿ ಅವರ ತತ್ವಗಳು ಬಹಳ ಮುಖ್ಯವಾಗುತ್ತವೆ. ಇನ್ನು ಬಸವಣ್ಣನವರ ರಾಜಕಾರಣವು ಧರ್ಮ ರಾಜಕಾರಣವಾಗಿ, ಪ್ರಜಾಕಾರಣವಾಗಿಯೂ ಪ್ರಸ್ತುತ.

ಬಸವ ತತ್ವ ಏಕೆ ಬೇಕು?

ಸತ್ಯ-ಧರ್ಮದ ಪ್ರತಿಪಾದನೆಗಾಗಿ, ರಾಜಕಾರಣದಲ್ಲಿ ಬದಲಾವಣೆಗಾಗಿ ಬಸವಣ್ಣನ ತತ್ವ ಬೇಕು. ರಾಜಕಾರಣಿ ಹೇಗಿರಬೇಕು ಎಂದು ಹೇಳುವುದಕ್ಕೆ ಬಸವಣ್ಣ ಬೇಕು. ಮಠಾಧಿಪತಿಗಳ ನಡವಳಿಕೆ ಹೇಗಿರಬೇಕು ಎನ್ನುವುದಕ್ಕೆ ಬೇಕು. ಮಠಾಧಿಪತಿಗಳು ವೈಭವದಿಂದ ಮೆರೆಯುತ್ತಿರುವ ಸಂದರ್ಭ ಇಂದಿನದು. ಮಠಾಧಿಪತಿಗಳು ಧರ್ಮ ಸುಧಾರಕರು, ಸಮಾಜದ ಸುಧಾರಕರು ಎನ್ನುವ ಅರಿವಿನ ಪ್ರಜ್ಞೆ ಮೂಡಿಸುವುದಕ್ಕಾಗಿ ಬಸವಣ್ಣ ಬೇಕು. ಧರ್ಮ ಗುರುಗಳೇನೂ ಪವಾಡ ಪುರುಷರಲ್ಲ. ಅವರೂ ಈ ಸೃಷ್ಟಿಯಲ್ಲಿ ನಮ್ಮಂತೆಯೇ ಒಬ್ಬರು, ಮನುಷ್ಯರು ಎಂಬ ತಿಳಿವಳಿಕೆಗಾಗಿ ಬಸವತತ್ವದ ಪ್ರಚಾರ ಆಗಬೇಕಿದೆ.

ನಿರೂಪಣೆ: ವಿಶಾಲಾಕ್ಷಿ ಅಕ್ಕಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.