ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕು– ಬೇಡ ಎನ್ನದ ನಿರ್ಲಿಪ್ತ

Last Updated 17 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

– ಜಿ. ದಕ್ಷಿಣಾಮೂರ್ತಿ

ಸ್ವತಂತ್ರ ಮೈಸೂರು ಸಂಸ್ಥಾನದ ಪ್ರಥಮ ಪ್ರಜಾ ಸರ್ಕಾರ ಸೆರೆಮನೆಯಿಂದ ದಿವಾನರೊಂದಿಗೆ ರಹಸ್ಯ ಸಂಧಾನ ನಡೆಸಿದ ಸ್ವಾರ್ಥ ಸಾಧಕರ ಕೂಟವಾಯಿತು. ಸ್ವತಂತ್ರ ನಾಡಿನ ಪ್ರಜೆಗಳ ಆಶೋತ್ತರಗಳಿಗೂ ಪ್ರಥಮ ಗಣತಂತ್ರ ಸರ್ಕಾರದ ಸಾಧನೆಗೂ ಅಜಗಜಾಂತರ. ಆಡಳಿತದ ಚುಕ್ಕಾಣಿ ಹಿಡಿದವರು ದಿವಾನರ ಕೃಪಾಶ್ರಯವನ್ನವಲಂಬಿಸಿ ಸರ್ಕಾರವನ್ನು ನಡೆಸಹತ್ತಿದ್ದರು.

ಕಾಂಗ್ರೆಸಿನ ಅನೇಕರು ಈ ಆಡಳಿತ ವೈಖರಿಯನ್ನು ವಿರೋಧಿಸುತ್ತಿದ್ದರೂ ಮಂತ್ರಿ ಮಂಡಲವನ್ನು ಉರುಳಿಸುವ ಪ್ರಯತ್ನಕ್ಕೆ ಯಾರೂ ಕೈ ಹಾಕಲಿಲ್ಲ. ಕಾರಣ ಗಾಂಧೀಜಿಯವರು ಹೇಳಿದಂತೆ ‘ಪರಕೀಯರ ಸುರಾಜಕತೆಗಿಂತಲೂ ನಿಮ್ಮೊಳಗಿನ ಅರಾಜಕತೆಯೇ ಶ್ರೇಯಸ್ಕರ’ ಎಂದು ನಂಬಿದ್ದರು. ಜೊತೆಗೆ ಮೊದಲನೇ ಸರ್ಕಾರವೇ ದುರಂತಕ್ಕೆ ಸಿಗದಿರಲೆಂಬ ವಿಶಾಲ ಭಾವನೆ. ಟಿ. ಸಿದ್ದಲಿಂಗಯ್ಯನವರು ಪಂಡಿತ ನೆಹರೂರವರೊಂದಿಗೆ ಸಮಾಲೋಚಿಸಿ ಪರಿಸ್ಥಿತಿಯನ್ನು ವಿವರಿಸಿದರೂ ಸ್ಥಳೀಯ ಆಡಳಿತ ವೈಖರಿ ಬದಲಾಗಲಿಲ್ಲ. ಪ್ರಾಮಾಣಿಕರನ್ನು ಕಡೆಗಣಿಸಲಾಯಿತೆಂಬ ನಿಂದೆಯನ್ನು ದೂರ ಮಾಡುವುದಕ್ಕಾಗಿಯಷ್ಟೇ ಸಿದ್ದಲಿಂಗಯ್ಯನವರನ್ನು ಮಂತ್ರಿ ಮಂಡಲದಲ್ಲಿ ಉಪ ಮುಖ್ಯಮಂತ್ರಿಯಾಗಲು ಆಹ್ವಾನಿಸಲಾಯಿತು. ಸಿದ್ದಲಿಂಗಯ್ಯನವರು ಸ್ವಭಾವತಃ ತಾನಾಗಿ ಯಾವುದನ್ನೂ ಹುಡುಕಿಕೊಂಡು ಹೋಗುವವರಲ್ಲ. ತಾನಾಗಿ ಬಂದುದನ್ನು ದೂರ ಮಾಡುವವರೂ ಅಲ್ಲ. ಬೇಕು– ಬೇಡ ಎನ್ನದ ನಿರ್ಲಿಪ್ತ.

ಆದರೆ, ಸಿದ್ದಲಿಂಗಯ್ಯನವರಿಗಿಂತಲೂ ತಾವು ಹಿರಿಯರೆಂಬ ದುರಭಿಮಾನ ಹೊತ್ತ ಒಬ್ಬಿಬ್ಬರು, ಸಿದ್ದಲಿಂಗಯ್ಯನವರಿಗೆ ತಮಗಿಂತಲೂ ಉನ್ನತ ಸ್ಥಾನ ದೊರಕುವುದನ್ನು ಮೊಂಡುತನದಿಂದ ಪ್ರತಿಭಟಿಸಿದರು. ಪಟೇಲರ ಉಪದೇಶದಿಂದಲೂ ಪ್ರಯೋಜನವಾಗಲಿಲ್ಲ. ಈ ಪರಿಸ್ಥಿತಿಯಲ್ಲಿ ಸರ್ಕಾರ ರಾಜೀನಾಮೆ ನೀಡುವಷ್ಟು ಡೋಲಾಯಮಾನವಾಯಿತು. ಆಗ ಸಿದ್ದಲಿಂಗಯ್ಯನವರು ಸಹಾನುಭೂತಿಯಿಂದಲೂ, ಮೊದಲ ಮಂತ್ರಿ ಮಂಡಲವನ್ನು ಅವಧಿ ಪೂರ್ಣಗೊಳ್ಳುವವರೆಗೆ ಎತ್ತಿ ನಿಲ್ಲಿಸುವ ಆದರ್ಶದಿಂದಲೂ ಸ್ವಯಂಪ್ರೇರಿತರಾಗಿ ಇವರು ಉಪ ಮುಖ್ಯಮಂತ್ರಿಯಾಗುವುದನ್ನು ಪ್ರತಿಭಟಿಸಿದ ವ್ಯಕ್ತಿಗಳಿಗಿಂತ ಕೆಳಗಿನ ಸಚಿವ ಸ್ಥಾನದಲ್ಲಿರಲು, ಕೆಂಗಲ್‌ ಹನುಮಂತಯ್ಯನವರ ಎಚ್ಚರಿಕೆಯ ಮಾತುಗಳನ್ನೂ ಲೆಕ್ಕಿಸದೆ, ಕೆ.ಸಿ. ರೆಡ್ಡಿಯವರ ಕೋರಿಕೆಯನ್ನು ಮನ್ನಿಸಿ ಒಪ್ಪಿಕೊಂಡರು. ಹಾಗಾಗಿ, 6.2.1950ರಂದು ಅವರು ಮೊದಲ ಸಚಿವ ಸಂಪುಟದಲ್ಲಿ ಶಿಕ್ಷಣ ಮತ್ತು ಆರೋಗ್ಯ ಖಾತೆಯ ಸಚಿವರಾಗಿ ಸೇರಿದರು. ಇದರಿಂದ ಪ್ರಯೋಜನವಾಗಿದ್ದು ಪಟ್ಟಭದ್ರ ಹಿತಾಸಕ್ತಿಗಳಿಗೆ ಮಾತ್ರ. ಕೊನೆಗೆ ಕೇವಲ ಹತ್ತು ತಿಂಗಳ ಕಾಲ ಹೆಸರಿಗೆ ಮಾತ್ರ ಸಚಿವರಾಗಿದ್ದು ನಂತರ ರಾಜೀನಾಮೆ ನೀಡಿ ಸಂಪುಟದಿಂದ ಹೊರಬಿದ್ದರು.

ಇದರ ಕಾರಣವನ್ನು ವಿಧಾನಸಭೆಯಲ್ಲಿ ಅನೇಕ ಸದಸ್ಯರು ನಿರ್ದಿಷ್ಟವಾಗಿ ಪ್ರಶ್ನೆ ಎತ್ತಿದಾಗ್ಯೂ ಯಾವುದೇ ವಿವರಣೆ ನೀಡಲು ಅವರು ಇಚ್ಛಿಸಲಿಲ್ಲ. ತಮ್ಮ ನೆನಪುಗಳ ದಾಖಲೆಯಲ್ಲಿ ಮಾತ್ರ, ‘ನಾನು ರಾಜಕೀಯ ಚದುರಂಗದಲ್ಲಿ ಪಗಡೆಕಾಯಿ ಮಾತ್ರವಾಗಿದ್ದೆ. ಸಮಕಾಲೀನ ರಾಜಕೀಯ ಆಟದಲ್ಲಿ ಗೆಲ್ಲುವ ಸಾಮರ್ಥ್ಯ ನನಗಿರಲಿಲ್ಲ’ ಎಂದಷ್ಟೇ ಹೇಳಿಕೊಂಡಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷನಾಗಿ ಉತ್ತಮ ಆಡಳಿತವನ್ನು ಕೊಡುವ ಜವಾಬ್ದಾರಿ ಹೊತ್ತ ಸಿದ್ದಲಿಂಗಯ್ಯನವರಿಗೆ ಈ ಸರ್ಕಾರದ ಕಾರ್ಯವೈಖರಿಯಿಂದ ನಾಚುವಂತಾಗಿತ್ತು.

1952ರಲ್ಲಿ ಪ್ರಜಾತಂತ್ರದ ಮೊದಲ ಸಾರ್ವತ್ರಿಕ ಚುನಾವಣೆ ನಡೆಯಿತು. ಸಿದ್ದಲಿಂಗಯ್ಯನವರು ಬೇರೆಲ್ಲರಿಗಿಂತಲೂ ಹೆಚ್ಚಿನ ಮತ ಪ್ರಮಾಣದಿಂದ ಗೆದ್ದು ಬಂದರು. ಈ ಬಾರಿ ಕೆಂಗಲ್‌ ಹನುಮಂತಯ್ಯನವರ ನೇತೃತ್ವದಲ್ಲಿ ಗಣತಂತ್ರ ಸರ್ಕಾರದ ಪ್ರಥಮ ಸಚಿವ ಸಂಪುಟ ರಚನೆಯಾಯಿತು. ಅದರಲ್ಲಿ ಸಿದ್ದಲಿಂಗಯ್ಯನವರು ಕೈಗಾರಿಕೆ ಮತ್ತು ವಾಣಿಜ್ಯ ಖಾತೆಯ ಮಂತ್ರಿಯಾಗಿ ನೇಮಕಗೊಂಡರು. ಹನುಮಂತಯ್ಯನವರ ನಂತರ ಬಂದ ಸರ್ಕಾರಗಳು ಇವರ ಸಾಮರ್ಥ್ಯವನ್ನು ಗುರುತಿಸಲಿಲ್ಲ. ಇವರ ತ್ಯಾಗವನ್ನು ಸ್ಮರಿಸಲಿಲ್ಲ. ಸಿದ್ದಲಿಂಗಯ್ಯ ಮೊದಲಿನಿಂದಲೂ ತಾವಾಗಿ ಯಾವ ಸ್ಥಾನವನ್ನೂ ಬಯಸಿದವರಲ್ಲ. ಮುಂದೆ ಅಧಿಕಾರಕ್ಕೆ ಬಂದ ಯಾರೂ ಇವರಿಗೆ ವಿಧಾನಸಭೆಗೆ ಅಥವಾ ಲೋಕಸಭೆಗೆ ಟಿಕೆಟ್‌ ಕೊಡುವ ಬಗ್ಗೆ ಆಲೋಚಿಸಲಿಲ್ಲ. ಕೊನೆಗೆ, ವಿಧಾನ ಪರಿಷತ್ತು ಅಥವಾ ರಾಜ್ಯ ಸಭೆಗಳಿಗೆ ನಾಮನಿರ್ದೇಶನ ಮಾಡುವ ಸೌಜನ್ಯ ತೋರಲಿಲ್ಲ. ಅಧಿಕಾರಕ್ಕಾಗಿ ಪೈಪೋಟಿ ಮಾಡುವ ಸಹಸ್ರಾರು ಮಂದಿ ಇರುವಾಗ ಅಳದೇ ಇರುವ ಮಗುವಿಗೆ ಹಾಲು ಕೊಡುವವರಾರು?

– ಟಿ. ಸಿದ್ದಲಿಂಗಯ್ಯ (ಪ್ರತಿಭಾವಂತ ಸಂಸದೀಯ ಪಟುಗಳ ಬದುಕು ಬರಹ ಮಾಲಿಕೆ) ಪುಸ್ತಕದಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT