ಶುಕ್ರವಾರ, ಡಿಸೆಂಬರ್ 13, 2019
19 °C

ಸಿರಿಯಾ ಮೇಲೆ ದಾಳಿ ಸಂಯಮ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿರಿಯಾ ಮೇಲೆ ದಾಳಿ ಸಂಯಮ ಅಗತ್ಯ

ಸಿರಿಯಾದ ಮೇಲೆ ಅಮೆರಿಕ ಮತ್ತು ಮಿತ್ರದೇಶಗಳು ಕಳೆದ ವಾರ ನಡೆಸಿದ ವೈಮಾನಿಕ ದಾಳಿ, ಮೂರನೆಯ ವಿಶ್ವ ಯುದ್ಧಕ್ಕೆ ದಾರಿ ಮಾಡಬಹುದು ಎನ್ನುವ ಅನುಮಾನಗಳು ಸದ್ಯಕ್ಕೆ ದೂರವಾಗಿವೆ. ಆದರೆ ಅಮೆರಿಕ ಮತ್ತು ರಷ್ಯಾದ ನಡುವಣ ಶೀತಲ ಸಮರ ಭುಗಿಲೆದ್ದು, ಸಿರಿಯಾದ ಅಂತರ್ಯುದ್ಧ ಇನ್ನಷ್ಟು ತೀವ್ರಗೊಳ್ಳುವ ಅಪಾಯ ಕಾಣಿಸಿದೆ. ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್‌ ಅವರೂ, ಈ ದಾಳಿಯಿಂದ ಜಾಗತಿಕ ಶಕ್ತಿಬಣಗಳ ಮಧ್ಯೆ ಶೀತಲ ಸಮರ ಭುಗಿಲೇಳುವ ಭಯವನ್ನು ವ್ಯಕ್ತಪಡಿಸಿದ್ದಾರೆ. ಸಿರಿಯಾ ರಾಜಧಾನಿ ಡಮಾಸ್ಕಸ್‌ನ ಹೊರವಲಯದ ಸಂಶೋಧನೆ ಮತ್ತು ವೈಜ್ಞಾನಿಕ ಕೇಂದ್ರ ಹಾಗೂ ದಾಸ್ತಾನು ಮಳಿಗೆಗಳನ್ನು ನಿರ್ದಿಷ್ಟ ಗುರಿಯಾಗಿಸಿ ಅಮೆರಿಕವು ಕ್ಷಿಪಣಿ ದಾಳಿ ನಡೆಸಿದೆ. 71ರಿಂದ 103ರಷ್ಟು ಕ್ಷಿಪಣಿಗಳನ್ನು ಅಮೆರಿಕವು ಹಾರಿಸಿದ್ದು ಇವುಗಳನ್ನು ಅರ್ಧದಲ್ಲೇ ಹೊಡೆದುರುಳಿಸಲಾಗಿದೆ ಎಂದು ಸಿರಿಯಾ ಸೇನೆ ಹೇಳಿಕೊಂಡಿದೆ. ಸಿರಿಯಾ ಈ ಪ್ರದೇಶದಲ್ಲಿ ರಾಸಾಯನಿಕ ಅಸ್ತ್ರಗಳನ್ನು ಸಂಗ್ರಹಿಸಿಟ್ಟಿದ್ದು ಅವುಗಳನ್ನು ಬಳಸದಂತೆ ತಡೆಯುವುದೇ ತನ್ನ ಗುರಿಯಾಗಿದ್ದು ಆ ಗುರಿ ಈಡೇರಿದೆ ಎಂದು ಅಮೆರಿಕ ಹೇಳಿದೆ.

ಸಿರಿಯಾದಲ್ಲಿ ಏಳು ವರ್ಷಗಳಿಂದ ಅಧಿಕಾರಕ್ಕಾಗಿ ನಡೆದಿರುವ ಅಂತಃಕಲಹ ನಿಲ್ಲುವ ಲಕ್ಷಣ ಸದ್ಯಕ್ಕಂತೂ ಕಾಣುತ್ತಿಲ್ಲ. ಸಿರಿಯಾದ ಅಧ್ಯಕ್ಷ ಬಷರ್‌ ಅಲ್‌ ಅಸದ್‌ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಸುನ್ನಿ ಮುಸ್ಲಿಂ ಗುಂಪುಗಳ ಪ್ರಯತ್ನಕ್ಕೆ ಇರಾನ್‌ ಮತ್ತು ರಷ್ಯಾಗಳು ಅಡ್ಡಗಾಲು ಹಾಕಿವೆ. ಐಎಸ್‌ ಮತ್ತು ಅಲ್‌ ಕೈದಾ ಪಡೆಗಳನ್ನು ಗುರಿಯಾಗಿಸಿ ಅಮೆರಿಕ ನಡೆಸಿದ ದಾಳಿ 2014ರಲ್ಲೇ ಕೊನೆಯಾಗಿ, ಆ ಬಳಿಕ ಬಷರ್‌ ಅಲ್‌ ಅಸದ್‌ ಅವರು ಪದಚ್ಯುತಗೊಳ್ಳುವ ಹಂತದಲ್ಲಿ ರಷ್ಯಾ ಮಧ್ಯಪ್ರವೇಶಿಸಿ ಅಸದ್‌ ಆಡಳಿತಕ್ಕೆ ರಕ್ಷಣೆ ನೀಡಿದೆ. ಆದರೆ ಇದು ಈಗ ಕೇವಲ ಸಿರಿಯಾದ ಅಂತಃಕಲಹವಾಗಿಯಷ್ಟೇ ಉಳಿದಿಲ್ಲ ಎನ್ನುವುದು ಆತಂಕದ ವಿಷಯ. ಏಕಕಾಲದಲ್ಲಿ ಹಲವು ಸಶಸ್ತ್ರ ಗುಂಪುಗಳು ಸಿರಿಯಾದಲ್ಲಿ ತಮ್ಮದೇ ಆದ ಕಾರ್ಯಸೂಚಿಗಳನ್ನು ಹೊಂದಿ ಕಾರ್ಯಾಚರಿಸುತ್ತಿವೆ. ಕೆಲವು ಹಿಂಸಾಕೃತ್ಯಗಳಿಗೂ ಸಿರಿಯಾದ ಅಧಿಕಾರ ಕೇಂದ್ರದ ಜಗಳಕ್ಕೂ ಸಂಬಂಧವೇ ಇಲ್ಲ ಎನ್ನುವಂತಹ ವಾತಾವರಣವೂ ಇದೆ.

ಈ ಸಂಘರ್ಷವು ಒಂದೆಡೆ ಕುರ್ದಿಸ್ತಾನ್‌– ಟರ್ಕಿ ಮತ್ತು ಅಮೆರಿಕ ನಡುವಣ ತಿಕ್ಕಾಟ ಮತ್ತು ಇನ್ನೊಂದೆಡೆ ಇರಾನ್‌–ಸಿರಿಯಾ– ಇಸ್ರೇಲ್‌ ನಡುವಣ ಸಂಘರ್ಷದ ಆಯಾಮಗಳನ್ನೂ ಹೊಂದಿದೆ. ಅದೇನೇ ಇದ್ದರೂ ಜಾಗತಿಕ ಶಕ್ತಿ ಬಣಗಳಾದ ಅಮೆರಿಕ ಮತ್ತು ರಷ್ಯಾ ಈ ವಿಷಯದಲ್ಲಿ ಹೆಚ್ಚು ಸಂಯಮದಿಂದ ವರ್ತಿಸುವ ಅಗತ್ಯವಿದೆ. ಸಿರಿಯಾದ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿದರೆ, ತನ್ನ ಸೇನೆ ಅಮೆರಿಕದ ದಾಳಿಯನ್ನು ಎದುರಿಸುವುದಾಗಿ ರಷ್ಯಾ ಹೇಳಿದ್ದರೂ, ಕೊನೆಕ್ಷಣದಲ್ಲಿ ಅಂತಹದ್ದೇನನ್ನೂ ಮಾಡದೆ ಸುಮ್ಮನೆ ಉಳಿದದ್ದು, ಸದ್ಯದ ಘರ್ಷಣೆ ಮೂರನೇ ವಿಶ್ವಯುದ್ಧದ ರೂಪ ತಾಳದಂತೆ ಮಾಡಿದೆ. ಈ ವಿಷಯದಲ್ಲಿ ಸಂಬಂಧಿಸಿದ ರಾಷ್ಟ್ರಗಳು ಸಾಧ್ಯವಾದಷ್ಟೂ ರಾಜತಾಂತ್ರಿಕ ಪರಿಹಾರಗಳತ್ತ ಒಲವು ತೋರಿಸುವಂತೆ ವಿಶ್ವಸಂಸ್ಥೆಯು ಇನ್ನಷ್ಟು ಒತ್ತಡ ಹಾಕಬೇಕಾದ ಅಗತ್ಯವಿದೆ. ಮೂರನೇ ವಿಶ್ವಯುದ್ಧ ಜಗತ್ತಿನ ಯಾವ ದೇಶದ ಜನರಿಗೂ ಬೇಕಾಗಿಲ್ಲ ಎನ್ನುವುದನ್ನು ಅಮೆರಿಕ ಮತ್ತು ರಷ್ಯಾಗಳು ಅರಿತುಕೊಂಡು ಸಂಯಮದಿಂದ ವರ್ತಿಸಬೇಕಿದೆ.

ಪ್ರತಿಕ್ರಿಯಿಸಿ (+)