ಭಾನುವಾರ, ಡಿಸೆಂಬರ್ 15, 2019
25 °C

ಪ್ರತಾಪ್‌ ವ್ಯಂಗ್ಯಕ್ಕೆ ಟಬು ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರತಾಪ್‌ ವ್ಯಂಗ್ಯಕ್ಕೆ ಟಬು ತಿರುಗೇಟು

ಬೆಂಗಳೂರು: ದಿನೇಶ್‌ ಗುಂಡೂರಾವ್‌ ಅವರನ್ನು ಟೀಕಿಸುವ ಭರದಲ್ಲಿ ‍ಸಂಸದ ಪ್ರತಾಪ್‌ ಸಿಂಹ ‘ಬೇಗಂ ಟಬು’ ಎಂದು ಉಲ್ಲೇಖಿಸಿರುವ ಬಗ್ಗೆ ಟಬು ರಾವ್‌ ಅವರು ಫೇಸ್‌ಬುಕ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್‌ 14ರಂದು ಪ್ರತಾಪ್‌ ಸಿಂಹ, ‘ಯೋಗಿ ಆದಿತ್ಯನಾಥರಿಗೆ ಚಪ್ಪಲಿಯಲ್ಲಿ ಹೊಡಿಬೇಕು ಅಂದಿದ್ದೀರಲ್ಲ ದಿನೇಶ್ ಗುಂಡೂರಾವ್, ಇದೇ ಮಾತನ್ನು ಯೋಗಿ ಬದಲು ಒಬ್ಬ ಮುಲ್ಲಾನೋ, ಮೌಲ್ವಿಯ ಬಗ್ಗೆನೋ ಆಡಿದ್ದಿದ್ದರೆ, ನಿಮ್ಮ ಹೆಂಡತಿ ಬೇಗಂ ಟಬು ಅವರೇ ನಿಮಗೆ ಆ ಕೆಲಸ ಮಾಡುತ್ತಿದ್ದರು. ನಾಲಗೆ ಮೇಲೆ ನಿಗಾ ಇರಲಿ' ಎಂದು ಹೇಳಿರುವ ವಿಡಿಯೊವನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದರು.

‘ಪ್ರತಾಪ್ ಸಿಂಹ ಅವರ ಮಾತುಗಳು ನನಗೆ ನೋವನ್ನುಂಟು ಮಾಡಿವೆ. ಮಿಸ್ಟರ್ ಸಿಂಹ ಅವರಿಗೆ ನನ್ನ ಪತಿ ದಿನೇಶ್ ಗುಂಡೂರಾವ್ ಅವರ ಹೇಳಿಕೆ ಬಗ್ಗೆ ವಿರೋಧವಿದ್ದರೆ, ಅದನ್ನು ಅವರೊಂದಿಗೆ ಇಟ್ಟುಕೊಳ್ಳಲಿ. ಅದು ಬಿಟ್ಟು ನನ್ನ ಬಗ್ಗೆ ಮಾತನಾಡಿ, ವಿವಾದ ಹುಟ್ಟಿಸುವುದು ಹೇಡಿತನ’ ಎಂದು ಟಬು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘ನನ್ನನ್ನು ಸಂಸದರು ಬೇಗಂ ಟಬು ಎಂದು ಉಲ್ಲೇಖಿಸಿದ್ದಾರೆ. ಇದು ಅವರಲ್ಲಿರುವ ಕೋಮುವಾದ ಮತ್ತು ಸಂಕುಚಿತ ಮನಸ್ಥಿತಿಯನ್ನು ತೋರಿಸುತ್ತದೆ. ಮುಸ್ಲಿಂ ಆಗಿರುವ ನಾನು ಬ್ರಾಹ್ಮಣನನ್ನು ಮದುವೆಯಾಗಿದ್ದೇನೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಎರಡು ದಶಕಗಳಿಂದ ದಾಂಪತ್ಯ ಜೀವನ ನಡೆಸುತ್ತಿದ್ದೇವೆ ಎಂದರೆ ಅದು ದೇಶದಲ್ಲಿನ ವಿವಿಧತೆಯಲ್ಲಿ ಏಕತೆಯ ಸಾರವನ್ನು ತೋರಿಸುತ್ತದೆ. ಮೈಸೂರಿನ ಆ ಸಂಸದರು ಸಮಾಜದಲ್ಲಿ ವಿಷ ಬೀಜ ಬಿತ್ತುವ ಬದಲು ಕುವೆಂಪು ಅವರ ವಿಶ್ವಮಾನವ ತತ್ವವನ್ನು ಅನುಸರಿಸಲಿ’ ಎಂದಿದ್ದಾರೆ.

ಟಬು ಅವರ ಪೋಸ್ಟ್‌ ಅನ್ನು ಬೆಂಬಲಿಸಿ ಸುಮಾರು 100 ಮಂದಿ ಕಮೆಂಟ್‌ ಮಾಡಿದ್ದಾರೆ. ಅವರ ಈ ಪೋಸ್ಟ್‌ ಅನ್ನು 187 ಮಂದಿ ಶೇರ್‌ ಮಾಡಿದ್ದಾರೆ.

ದಿನೇಶ್ ಹೇಳಿದ್ದೇನು?: ‘ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕರ್ನಾಟಕಕ್ಕೆ ಬಂದರೆ ಚಪ್ಪಲಿಯಿಂದ ಹೊಡೆಯಿರಿ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದರು.

ಜಮ್ಮು ಮತ್ತು ಕಾಶ್ಮೀರ ಹಾಗೂ ಉತ್ತರ ಪ್ರದೇಶದ ಅತ್ಯಾಚಾರ ಘಟನೆಗಳನ್ನು ಖಂಡಿಸಿ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ್ದ ಅವರು, ‘ಮೋಸಗಾರ, ಸುಳ್ಳುಗಾರ ಯೋಗಿ ಮತ್ತೊಮ್ಮೆ ರಾಜ್ಯಕ್ಕೆ ಬಂದರೆ ಬುದ್ಧಿ ಕಲಿಸುತ್ತೇವೆ’ ಎಂದಿದ್ದರು.

ದಿನೇಶ್ ಗುಂಡೂರಾವ್‌ ವಿರುದ್ಧ ಎಫ್ಐಆರ್

ಬೆಂಗಳೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪದಡಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರ ವಿರುದ್ಧ ಹೈಗ್ರೌಂಡ್ಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಹಾಗೂ ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಘಟನೆಗಳನ್ನು ಖಂಡಿಸಿ ಇದೇ 14ರಂದು ಮೌರ್ಯ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ದಿನೇಶ್, ‘ಆದಿತ್ಯನಾಥ ಕರ್ನಾಟಕಕ್ಕೆ ಬಂದರೆ ಚಪ್ಪಲಿಯಿಂದ ಹೊಡೆಯಿರಿ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅವರ ವಿರುದ್ಧ ರಾಜಾಜಿನಗರದ ನಿವಾಸಿ ಡಾ. ರಾಮಾಚಾರಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

‘ದಿನೇಶ್ ಅವರು ಅಪರಾಧ ಕೃತ್ಯ ಎಸಗುವಂತೆ ತಮ್ಮ ಬೆಂಬಲಿಗರನ್ನು ಪ್ರಚೋದಿಸಿದ್ದಾರೆ. ಕೋಮು ಸೌಹಾರ್ದಕ್ಕೆ ಧಕ್ಕೆ ತರಲು ಯತ್ನಿಸಿದ್ದಾರೆ. ಆದಿತ್ಯನಾಥ ಅವರ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ರಾಮಾಚಾರಿ ದೂರಿನಲ್ಲಿ ಒತ್ತಾಯಿಸಿರುವುದಾಗಿ ಪೊಲೀಸರು ತಿಳಿಸಿದರು.

ಪ್ರತಿಕ್ರಿಯಿಸಿ (+)